ದ್ವಾರಕೀಶ್ ಮತ್ತೆ ಫೀಲ್ಡಿಗೆ- ಪ್ರಿಯಾಮಣಿ ಹೀರೋಯಿನ್!

SUJENDRA
'ಆಪ್ತಮಿತ್ರ'ದ ಗೆಲುವಿನ ನಂತರ ಆರೇಳು ವರ್ಷ ಸುಮ್ಮನಿದ್ದ ಕುಳ್ಳ ದ್ವಾರಕೀಶ್ 'ಓನ್ಲಿ ವಿಷ್ಣುವರ್ಧನ' ಶತಕ ಬಾರಿಸುತ್ತಿದ್ದಂತೆ ಮತ್ತೆ ಫೀಲ್ಡಿಗಿಳಿದಿದ್ದಾರೆ. ಅಲ್ಲಿ ನಾಯಕಿಯಾಗಿದ್ದ ಪ್ರಿಯಾಮಣಿಯನ್ನೇ ಉಳಿಸಿಕೊಂಡಿರುವ ಅವರೀಗ 'ಚಾರುಲತ' ಎಂಬ ಹೊಸ ಚಿತ್ರಕ್ಕೆ ಕೈ ಹಾಕಿದ್ದಾರೆ.

ಇದೇನಪ್ಪ, ಇಷ್ಟು ಬೇಗ ಇನ್ನೊಂದು ಚಿತ್ರವನ್ನು ದ್ವಾರಕೀಶ್ ಕೈಗೆತ್ತಿಕೊಂಡಿದ್ದಾರೆ? ಒಂದಾನೊಂದು ಕಾಲದಲ್ಲಿ ಹಿಂದೆ ಮುಂದೆ ನೋಡದೆ ನಿರ್ಮಾಣಕ್ಕಿಳಿಯುತ್ತಿದ್ದರೂ, ಇತ್ತೀಚಿನ ವರ್ಷಗಳಲ್ಲಿ ಅವರು ಅಳೆದು-ತೂಗಿ ನೋಡುವುದು ಜಾಸ್ತಿಯಾಗಿತ್ತಲ್ಲ? ಈಗೇನು ಹೀಗಾಯ್ತು ಅನ್ನೋ ಪ್ರಶ್ನೆಗಳು ಮೂಡುವುದು ಸಹಜ. ಆದರೆ ಅವರು 'ವಿಷ್ಣುವರ್ಧನ'ದ ನಿರ್ದೇಶಕ ವಿ. ಕುಮಾರ್ ಮೇಲೆ ಅಪಾರ ಭರವಸೆ ಇಟ್ಟಂತಿದೆ. ಅವರ ನಿರ್ದೇಶನಕ್ಕೇ ಕುಳ್ಳ ಮತ್ತೆ ಜೈ ಎಂದಿದ್ದಾರೆ.

ಹೌದು, ವಿ. ಕುಮಾರ್ ನಿರ್ದೇಶನದ 'ಚಾರುಲತ' ಪಕ್ಕಾ ಮನರಂಜನೆಯ ಚಿತ್ರ. ಆದರೆ ನಾಯಕಿ ಪ್ರಧಾನ. ಇಲ್ಲಿ ನಾಯಕ ಇರುತ್ತಾನೋ ಇಲ್ಲವೋ ಎನ್ನುವುದು ಸದ್ಯಕ್ಕೆ ಸ್ಪಷ್ಟವಿಲ್ಲ. ಆದರೆ ಪ್ರಿಯಾಮಣಿ ಈ ಹಿಂದೆ ಯಾವ ಭಾಷೆಯಲ್ಲೂ ನಟಿಸಿರದ ರೀತಿಯ ಪಾತ್ರ ಎಂದು ಹೇಳಲಾಗುತ್ತಿದೆ.

ಹೆಸರಿಗೆ ದ್ವಾರಕೀಶ್ ನಿರ್ಮಾಪಕ. ಅವರ ಪುತ್ರ ಯೋಗೀಶ್ ಕಾರ್ಯಕಾರಿ ನಿರ್ಮಾಪಕ, ಅಂದರೆ ಎಲ್ಲವನ್ನೂ ನೋಡಿಕೊಳ್ಳುವುದು ಯೋಗೀಶ್. 'ನಾಡೋಡಿಗಳ್' ಚಿತ್ರಕ್ಕೆ ಸಂಗೀತ ನೀಡಿದ್ದ ಸುಂದರ್ ಸಿ. ಬಾಬು ಇಲ್ಲಿ ಸಂಗೀತ ನಿರ್ದೇಶಕ. ರಾಜರತ್ನಂ ಕ್ಯಾಮರಾ ಹಿಡಿಯಲಿದ್ದಾರೆ.

ಕಥೆ, ಚಿತ್ರಕಥೆಯ ಜತೆ ನಿರ್ದೇಶನದ ಹೊಣೆ ವಿ. ಕುಮಾರ್ ಅವರದ್ದು. ಇದೇ ಮಾರ್ಚ್ 23ರ ಯುಗಾದಿಯ ಶುಭ ದಿನದಂದು 'ಚಾರುಲತ' ಸೆಟ್ಟೇರುತ್ತಿದ್ದಾಳೆ. ಉಳಿದ ಪಾತ್ರಗಳ ಆಯ್ಕೆ ಸೇರಿದಂತೆ ಇನ್ನಿತರ ಸಂಗತಿಗಳನ್ನು ದ್ವಾರಕೀಶ್ ಶೀಘ್ರದಲ್ಲೇ ಬಹಿರಂಗಪಡಿಸುತ್ತಾರಂತೆ.

ವಿಷ್ಣುವರ್ಧನನಿಗೆ ಸೆಂಚುರಿ...
ಈ ನಡುವೆ ದ್ವಾರಕೀಶ್ ನಿರ್ಮಾಣದ ಕಿಚ್ಚ ಸುದೀಪ್ ನಾಯಕರಾಗಿದ್ದ 'ವಿಷ್ಣುವರ್ಧನ' ಕಳೆದ ಶುಕ್ರವಾರ ಶತಕ ಬಾರಿಸಿದೆ. ಬೆಂಗಳೂರಿನ ಕೆಂಪೇಗೌಡ ರಸ್ತೆಯಲ್ಲಿರುವ ಮೇನಕಾ ಚಿತ್ರಮಂದಿರದಲ್ಲಿ ಈಗಲೂ ಚಿತ್ರ ಚೆನ್ನಾಗಿ ಓಡುತ್ತಿದೆ. ಸಹಜವಾಗಿಯೇ ದ್ವಾರಕೀಶ್ ಖುಷಿಯಾಗಿದ್ದಾರೆ.

ಬೆಂಗಳೂರಿನಲ್ಲಿ ಮಾತ್ರವಲ್ಲ, ಕರ್ನಾಟಕದ ಸುಮಾರು ಎಂಟು ಕಡೆ ಇನ್ನೂ ವಿಷ್ಣುವರ್ಧನ ರೇಸ್‌ನಲ್ಲಿದ್ದಾನೆ. ಶೀರ್ಷಿಕೆ ವಿವಾದದಲ್ಲಿ ಸಿಲುಕಿದರೂ, ಅತ್ಯುತ್ತಮ ಕಥೆ ಮತ್ತು ನಿರ್ದೇಶನದಿಂದಾಗಿ ಚಿತ್ರ ಗೆದ್ದಿತ್ತು. ಟೀಕಾಕಾರರು ಕೂಡ ಬಾಯಿ ಮುಚ್ಚಿದ್ದರು.

ವೆಬ್ದುನಿಯಾವನ್ನು ಓದಿ