ನಯನತಾರಾ ಮತ್ತೆ ಕನ್ನಡಕ್ಕೆ; ಸುದೀಪ್ ಹೀರೋ?

SUJENDRA
ಪ್ರಭುದೇವ್‌ಗೆ ಸೋಡಾಚೀಟಿ ಕೊಟ್ಟ ನಯನತಾರಾ ಮತ್ತೆ ಕನ್ನಡಕ್ಕೆ ಬರುತ್ತಿದ್ದಾರೆಯೇ? ಸದ್ಯದ ಗಾಳಿ ಸುದ್ದಿಗಳನ್ನು ನಂಬುವುದಾದರೆ, ಹೌದು. ಅವರು ಕಿಚ್ಚ ಸುದೀಪ್‌ ಜತೆ ರೊಮ್ಯಾನ್ಸ್ ಮಾಡಲಿದ್ದಾರೆ. ಅದೂ ಶಶಾಂಕ್ ನಿರ್ದೇಶನದ ಚಿತ್ರದಲ್ಲಿ.

ರಿಯಲ್ ಸ್ಟಾರ್ ಉಪೇಂದ್ರ 'ಸೂಪರ್' ಚಿತ್ರದ ಇಂದಿರಾ ಪಾತ್ರದಲ್ಲಿ ಸಖತ್ ಮಿಂಚಿದ್ದ ನಯನತಾರಾ ಕನ್ನಡದಲ್ಲಿ ಮತ್ತೆ ನಟಿಸುತ್ತಿರುವುದು ಬಹುತೇಕ ಖಚಿತ. 'ಮೊಗ್ಗಿನ ಮನಸು' ಶಶಾಂಕ್ ನಿರ್ದೇಶನದ 'ಬಚ್ಚನ್' ಚಿತ್ರದ ಕಥೆ ಕೇಳಿರುವ ಅವರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಅವರ ಪಾತ್ರ ನಿರೂಪನೆ ಇಷ್ಟವಾಗಿದೆಯಂತೆ.

ಆದರೂ ಇದನ್ನು ನಿರ್ದೇಶಕ ಶಶಾಂಕ್ ಮಾತ್ರ ಖಚಿತಪಡಿಸುತ್ತಿಲ್ಲ. ಕನ್ನಡ, ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ಯಶಸ್ವಿಯಾಗಿರುವ ನಟಿಯೊಬ್ಬಳು ಈ ಚಿತ್ರದಲ್ಲಿರುತ್ತಾಳೆ ಎಂದಷ್ಟೇ ಹೇಳಿ ಮೇಲೆ-ಕೆಳಗೆ ನೋಡುತ್ತಾರೆ. ಅಂದರೆ, 'ಬಚ್ಚನ್' ಚತುರ್ಭಾಷಾ ಚಿತ್ರವೇ? ಹೌದು, ನಾಲ್ಕು ಭಾಷೆಗಳಲ್ಲಿ ಮೊದಲ ಬಾರಿಗೆ ಕನ್ನಡ ಚಿತ್ರವೊಂದು ಡಬ್ ಆಗಿ ಬಿಡುಗಡೆಯಾಗಲಿದೆ. ಸುದೀಪ್ ಈಗಾಗಲೇ ಈ ಎಲ್ಲಾ ಭಾಷೆಗಳಲ್ಲಿ ಪರಿಚಿತರಾಗಿರುವುದರಿಂದ ಲೀಡ್ ಲೇಡಿಯಾಗಿ ನಯನತಾರಾರನ್ನು ಆರಿಸಲಾಗಿದೆಯಂತೆ.

ಅಂದ ಹಾಗೆ, ಈ ಚಿತ್ರದಲ್ಲಿ ನಯನತಾರಾ ಒಬ್ಬರೇ ನಾಯಕಿಯಲ್ಲ. ಜತೆಗೆ ಇನ್ನೊಬ್ಬ ನಾಯಕಿಯಾಗಿ ಸಾರಥಿ, ಪರಮಾತ್ಮ ಖ್ಯಾತಿಯ ದೀಪಾ ಸನ್ನಿಧಿ ಕೂಡ ಇದ್ದಾರೆ. ಇಬ್ಬರದ್ದೂ ಮಹತ್ವದ ಪಾತ್ರಗಳಂತೆ. ದೀಪಾ ಸನ್ನಿಧಿಯದ್ದು ಬಚ್ಚನ್ ಆಫೀಸ್ ಅಸಿಸ್ಟೆಂಟ್ ಪಾತ್ರ. ಆದರೆ ಇನ್ನೊಬ್ಬ ನಾಯಕಿಯ ಪಾತ್ರ ಏನೆಂಬುದನ್ನು ಶಶಾಂಕ್ ಹೇಳುತ್ತಿಲ್ಲ.

ಬಿಡಿ, ಈ ಚಿತ್ರಕ್ಕೆ 'ಬಚ್ಚನ್' ಎಂದು ಹೆಸರಿಟ್ಟಿರುವುದು ಯಾಕೆ? ಈ ಬಚ್ಚನ್ ಯಾರು? ಈ ಪ್ರಶ್ನೆಗೂ ಶಶಾಂಕ್ ಉತ್ತರ ಸಸ್ಪೆನ್ಸ್. ಕಾರಣ, ಇದು ಆಕ್ಷನ್ ಥ್ರಿಲ್ಲರ್ ಚಿತ್ರ. ಕಥೆ ಹೇಳಿದರೆ ಎಲ್ಲವೂ ಮುಗಿದಂತೆ. ಅಡಿಬರಹ 'ದಿ ಆಂಗ್ರಿ ಯಂಗ್ ಮ್ಯಾನ್' ಎಂದಷ್ಟೇ ಹೇಳಿ, ಸುದೀಪ್ ಮೂರು ವಿಭಿನ್ನ ಶೇಡ್‌ಗಳಿರುವ ಪಾತ್ರ ಮಾಡುತ್ತಿದ್ದಾರೆ ಎಂದರು.

ಎಲ್ಲವೂ ಅಂದುಕೊಂಡಂತೆ ನಡೆದರೆ ಮೇ 31ರಂದು 'ಬಚ್ಚನ್' ಮುಹೂರ್ತ. ನಂತರ ಚಿತ್ರೀಕರಣ. ಅದಕ್ಕೂ ಮೊದಲು ಸುದೀಪ್ ಈಗ ಒಪ್ಪಿಕೊಂಡಿರುವ ಸಿನಿಮಾಗಳನ್ನು ಮುಗಿಸಲಿದ್ದಾರೆ. ಗೆಟಪ್ ಕೂಡ ಬದಲಾಯಿಸಿಕೊಳ್ಳಲಿದ್ದಾರೆ. ಪೂರ್ತಿ ಭಿನ್ನವಾಗಿರುವ ಸುದೀಪ್‌ರನ್ನು ಇಲ್ಲಿ ಶಶಾಂಕ್ ಪರಿಚಯಿಸುತ್ತಾರಂತೆ.

ಚಿತ್ರೀಕರಣಕ್ಕೂ ಮೊದಲು ಟ್ರೈಲರ್ ಬಿಡುಗಡೆ ಮಾಡುತ್ತೇನೆ ಎಂದೂ ಶಶಾಂಕ್ ಹೇಳಿದ್ದಾರೆ. 'ಕೃಷ್ಣನ್ ಲವ್ ಸ್ಟೋರಿ' ನಿರ್ಮಿಸಿದ್ದ ಉದಯ್ ಮೆಹ್ತಾ ನಿರ್ಮಾಣ, ಹರಿಕೃಷ್ಣ ಸಂಗೀತ, ಎಂ.ಎಲ್. ಪ್ರಸನ್ನ ಸಂಭಾಷಣೆ ಚಿತ್ರಕ್ಕಿದೆ.

ವೆಬ್ದುನಿಯಾವನ್ನು ಓದಿ