ನನ್ನ ಜಾತಿಗೆ ರಾಜಕೀಯ ಹಿಡಿಸೋದಿಲ್ಲ: ರವಿಚಂದ್ರನ್

SUJENDRA
ನಾನೇ ಬೇರೆ, ನನ್ನ ಸ್ಟೈಲೇ ಬೇರೆ ಎಂಬಂತೆ ನಡೆದು ಬಂದವರು ಕ್ರೇಜಿ ಸ್ಟಾರ್ ರವಿಚಂದ್ರನ್. ನನಗೆ ಗೊತ್ತಿರೋದು ಸಿನಿಮಾ, ಸಿನಿಮಾ ಮತ್ತು ಸಿನಿಮಾ ಮಾತ್ರ ಅಂತ ಸದಾ ಹೇಳುತ್ತಲೇ ಇರುತ್ತಾರೆ. ಇಂತಹ ಕನಸುಗಾರ ರಾಜಕೀಯ ಸೇರುವುದುಂಟೇ? ಕೇಳಿದ ಪ್ರಶ್ನೆಗಳಿಗೂ ಅದೇ ಉತ್ತರ ಬಂದಿದೆ. ನನ್ನ ಜಾತಿಗೂ ರಾಜಕೀಯಕ್ಕೂ ಹಿಡಿಸೋದೇ ಇಲ್ಲ ಎಂದಿದ್ದಾರೆ!

ಲೆಕ್ಕಕ್ಕೇ ಇಲ್ಲದ ಸ್ಟಾರುಗಳೂ ಇಂದು ರಾಜಕೀಯ ಸೇರಿ ಸುದ್ದಿ ಮಾಡುತ್ತಿದ್ದಾರೆ. ಹಾಗಿರುವಾಗ ರವಿಚಂದ್ರನ್ ಯಾಕೆ ಸೇರಬಾರದು? ಇಂತಹ ಪ್ರಶ್ನೆ ಮುಂದಿಟ್ಟಾಗ ಅವರು ಹೀಗೆಂದು ಉತ್ತರಿಸಿದರು.

"ನನಗೂ ರಾಜಕೀಯಕ್ಕೂ ಆಗಿ ಬರೋದಿಲ್ಲ. ನನ್ನ ಸ್ವಭಾವದ ಜಾತಿಯವರಿಗೆ ರಾಜಕೀಯಕ್ಕೆ ಒಗ್ಗೋದಿಲ್ಲ. ಖಂಡಿತಾ ರಾಜಕೀಯ ಸೇರೋದಿಲ್ಲ.

ನಾನು ಇನ್ನೊಬ್ಬರು ಹೇಳಿಕೊಟ್ಟಿದ್ದನ್ನು ಹೇಳೋದಿಲ್ಲ. ನನ್ನಿಂದ ಹಾಗೆ ಮಾಡಿಸಲು ಇದುವರೆಗೆ ಯಾರಿಂದಲೂ ಸಾಧ್ಯವಾಗಿಲ್ಲ. ನಾನು ಅಂತಹ ಮನುಷ್ಯ ಅಲ್ಲ. ನನಗೆ ಏನು ಹೇಳಬೇಕೆಂದು ಅನ್ನಿಸುತ್ತದೆಯೋ, ಅದನ್ನೇ ಹೇಳುತ್ತೇನೆ. ಆದರೆ ಇದು ರಾಜಕೀಯಕ್ಕೆ ಸೆಟ್ಟಾಗಲ್ಲ.

ನನಗೆ ಹೆಸರು, ಜನಪ್ರಿಯತೆ ಕೊಟ್ಟಿರುವುದು ಕ್ಷೇತ್ರ ಚಿತ್ರರಂಗ. ಇಲ್ಲೇ ಇನ್ನೂ ಏನಾದರೂ ಮಾಡಬೇಕು ಅನ್ನೋದು ಆಸೆ. ಅದನ್ನು ಮಾಡುತ್ತೇನೆ. ಆದರೆ ರಾಜಕೀಯದಲ್ಲಿ ನನಗೆ ಸಾಧ್ಯವಿಲ್ಲ. ವ್ಯವಸ್ಥೆಯನ್ನು ಬದಲಿಸುವುದು ಸುಲಭವಲ್ಲ. ಸುಮ್ಮನೆ ಆರೋಪ ಪ್ರತ್ಯಾರೋಪದಲ್ಲೇ ಕಾಲ ಕಳೆಯಬೇಕಾಗುತ್ತದೆ. ನನಗೆ ನನ್ನದೇ ಕೆಲಸಗಳಿವೆ. ರಾಜಕೀಯದ ಸಹವಾಸವೇ ಬೇಡ"

ಹೀಗಂತ ಖಡಾಖಂಡಿತವಾಗಿ ಹೇಳಿಬಿಟ್ಟರು ಕ್ರೇಜಿ ಸ್ಟಾರ್. ಸುಮ್ಮನೆ ಪ್ರಚಾರಕ್ಕಾಗಿ ಅಥವಾ ಸ್ವಂತ ಲಾಭಕ್ಕಾಗಿ ತಾನು ರಾಜಕೀಯ ಸೇರುವುದಿಲ್ಲ. ಹೋದ ಮೇಲೆ ಏನಾದರೂ ಬದಲಾವಣೆ ಮಾಡಬೇಕು ಅನ್ನೋದು ಅವರ ನಿಲುವು.

ಬಿಡಿ, ರವಿಚಂದ್ರನ್ ರಾಜಕೀಯಕ್ಕೆ ಅನಿವಾರ್ಯರಲ್ಲ. ಈಗೀಗ ಚಿತ್ರರಂಗದಲ್ಲೂ ಅನಿವಾರ್ಯರಲ್ಲ ಎಂಬ ಪರಿಸ್ಥಿತಿ ಸೃಷ್ಟಿಯಾಗಿದೆ. ಅದಕ್ಕೆ ಕಾರಣ, ಸ್ವತಃ ರವಿಚಂದ್ರನ್. ಗುಣಮಟ್ಟದ ಚಿತ್ರಗಳ ಬದಲು ಯಾರದೋ ನಿರ್ದೇಶನದ ಚಿತ್ರಗಳಲ್ಲಿ ಭಾರ ಮೈಯನ್ನು ಕುಲುಕಿಸುತ್ತಾರೆ.

ವೆಬ್ದುನಿಯಾವನ್ನು ಓದಿ