ಅತ್ತ ಪೂಜಾ ಗಾಂಧಿ ಬೆನ್ನು, ಇತ್ತ ಕೇಸು ಟೆನ್ಶನ್ನು!

SUJENDRA
ಮಳೆ ಹುಡುಗಿ ಪೂಜಾ ಗಾಂಧಿ ನೆರೆಯಲ್ಲಿ ಕೊಚ್ಚಿ ಹೋದವರಂತೆ ಬಟ್ಟೆ ಬಿಟ್ಟು ಪೋಸ್ ಕೊಟ್ಟ ವಿವಾದ ಆಗಾಗ ಅಲ್ಲಲ್ಲಿ ಅಟ್ಟಿಸಿಕೊಂಡು ಬರುತ್ತಿರುವಂತೆ, ಇತ್ತ ಕೃತಿ ಚೌರ್ಯದ ಕೇಸು ಬಿಟ್ಟೆನೆಂದರೂ ಬಿಡದೆ ಕಾಡಲು ಶುರು ಮಾಡಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಗೆದ್ದರೂ ಹೈಕೋರ್ಟ್ ಮೆಟ್ಟಿಲೇರುವ ಅನಿವಾರ್ಯತೆ ಸೃಷ್ಟಿಯಾಗಿದೆ.

ಇದು ಶ್ರೀನಿವಾಸರಾಜು ನಿರ್ದೇಶನದ 'ದಂಡುಪಾಳ್ಯ' ಚಿತ್ರದ ಲೇಟೆಸ್ಟ್ ಸ್ಟೇಟಸ್ ರಿಪೋರ್ಟ್. ಪೂಜಾ ಗಾಂಧಿ ಅರೆಬೆತ್ತಲೆ ಪ್ರದರ್ಶನಕ್ಕೆ ಅಲ್ಲೊಂದು ಪ್ರತಿಭಟನೆ, ಇಲ್ಲೊಂದು ಪ್ರತಿಭಟನೆಗಳು ನಡೆಯುತ್ತಿರುವಂತೆ ಇತ್ತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಿರ್ಮಾಪಕರಿಗೆ ಜಯ ಸಿಕ್ಕಿದೆ. ಆದರೆ ಜಯಮಾಲೆ ಕತ್ತಿಗೆ ಇನ್ನೇನು ಬೀಳುತ್ತದೆ ಅನ್ನೋವಾಗ ಹೈಕೋರ್ಟ್ ಅಡ್ಡ ಬರೋ ಲಕ್ಷಣಗಳು ಕಾಣಿಸುತ್ತಿವೆ.

ದಂಡುಪಾಳ್ಯ ಚಿತ್ರಕ್ಕೆ ಆರಂಭದಿಂದಲೇ ವಿಘ್ನ. ನೈಜ ಘಟನೆಯನ್ನು ಆಧರಿಸಿದ ಚಿತ್ರವೆಂದ ಮೇಲೆ ಒಂದಿಷ್ಟು ವಿವಾದಗಳು ಇದ್ದದ್ದೇ. ಆದರೆ ಇಲ್ಲಿ ದಂಡುಪಾಳ್ಯ ಗ್ರಾಮಸ್ಥರಿಂದ ಹಿಡಿದು, ಮಹಿಳಾ ಸಂಘಟನೆಗಳು ಕೂಡ ಪ್ರತಿಭಟಿಸಿದವು. ಇದೇ ಹೊತ್ತಿಗೆ ಅತ್ತ ಮೈಸೂರಿ ಶ್ರೀನಾಥ್ ಎಂಬ ಪತ್ರಕರ್ತರೊಬ್ಬರು 'ದಂಡುಪಾಳ್ಯ' ನನ್ನದೇ ಕೃತಿಯ ನಕಲು ಎಂದು ವಾದಿಸಿದರು.

ಆದರೆ ಅದು ಸುಳ್ಳು ಎಂದಿದೆ ವಾಣಿಜ್ಯ ಮಂಡಳಿ. ನಿರ್ದೇಶಕ ಶ್ರೀನಿವಾಸರಾಜು ಸಲ್ಲಿಸಿದ್ದ ದಾಖಲೆಗಳನ್ನು ಪರಿಶೀಲಿಸಿದ ಮಂಡಳಿ, ಪುಸ್ತಕದಲ್ಲಿ ಇರುವುದಕ್ಕಿಂತ ಸಾಕಷ್ಟು ಹೆಚ್ಚಿನ ಮಾಹಿತಿಗಳನ್ನು ನಿರ್ದೇಶಕರು ಸಂಗ್ರಹಿಸಿದ್ದಾರೆ. ಅದಕ್ಕಾಗಿ ಅಧ್ಯಯನ ನಡೆಸಿರುವ ದಾಖಲೆಗಳಿವೆ. ಶ್ರೀನಾಥ್ ವಾದಕ್ಕೂ, ಶ್ರೀನಿವಾಸರಾಜು ದಾಖಲೆಗಳಿಗೂ ಯಾವುದೇ ಸಂಬಂಧವಿದ್ದಂತೆ ಕಾಣಿಸುತ್ತಿಲ್ಲ ಎಂದು 'ದಂಡುಪಾಳ್ಯ' ಟೀಮ್ ವಾದವನ್ನು ಎತ್ತಿ ಹಿಡಿದಿದೆ.

ವಾಣಿಜ್ಯ ಮಂಡಳಿ ಆರ್ಬಟ್ರರಿ ಕಮಿಟಿ ತೀರ್ಪಿನಿಂದ ಅಸಮಾಧನಗೊಂಡಿರುವ ಪತ್ರಕರ್ತ ಶ್ರೀನಾಥ್, ತಾನು ನ್ಯಾಯಕ್ಕಾಗಿ ಹೈಕೋರ್ಟ್ ಮೊರೆ ಹೋಗುವುದಾಗಿ ಹೇಳಿದ್ದಾರೆ.

ಇತ್ತ ವಾಣಿಜ್ಯ ಮಂಡಳಿ ತೀರ್ಪಿನಿಂದ ಖುಷಿಯಾಗಿ ಚಿತ್ರದ ಬಿಡುಗಡೆಯ ಸಿದ್ಧತೆಯಲ್ಲಿದ್ದ ನಿರ್ದೇಶಕ ಶ್ರೀನಿವಾಸರಾಜು ಮತ್ತೆ ಉಗುಳು ನುಂಗಲು ಹಿಂದೆ ಮುಂದೆ ನೋಡುವ ಪರಿಸ್ಥಿತಿ ಎದುರಾಗಿದೆ. ಬಿಡುಗಡೆಗಿಂತ ಹೈಕೋರ್ಟಿನಲ್ಲಿ ಕೇಸನ್ನು ಗೆಲ್ಲುವುದೇ ಗುರಿ ಎಂಬಂತಾಗಿದೆ.

ವೆಬ್ದುನಿಯಾವನ್ನು ಓದಿ