ಪ್ರಿಯಾಮಣಿ 'ಚಾರುಲತಾ' ಸಯಾಮಿ ಅವಳಿ ಹಾರರ್!

SUJENDRA
ಅವಳಿ ಜವಳಿಗಳ ಕುರಿತ ಸಿನಿಮಾಗಳಿಗೆ ಲೆಕ್ಕವಿಲ್ಲ, ಆದರೆ ಸಯಾಮಿ ಅವಳಿಗಳ ಚಿತ್ರ ಕನ್ನಡದಲ್ಲಿ ಬಂದೇ ಇಲ್ಲ ಎನ್ನಬಹುದು. ಈ ಕೊರತೆಯನ್ನು ಗಮನಿಸಿರುವ ಕುಳ್ಳ ದ್ವಾರಕೀಶ್ ನೀಗಿಸಲು ಹೊರಟಿದ್ದಾರೆ. ಹಾಲಿವುಡ್ ಚಿತ್ರವೊಂದರಿಂದ ಸ್ಫೂರ್ತಿ ಪಡೆದು ಸಯಾಮಿ ಅವಳಿಗಳ, ಅದರಲ್ಲೂ ಹಾರರ್ ಚಿತ್ರ ನಿರ್ಮಿಸಲು ಹೊರಟಿದ್ದಾರೆ.

ದ್ವಾರಕೀಶ್ ನಿರ್ಮಿಸುತ್ತಿರುವ ಈ ಚಿತ್ರ 'ಚಾರುಲತಾ' ಅನ್ನೋದು ಎರಡು ವಾರಗಳ ಹಿಂದೆ ಗೊತ್ತಾಗಿತ್ತು. ಆ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಸ್ವತಃ ದ್ವಾರಕೀಶ್ ಚಿತ್ರದ ಹೆಸರನ್ನು ಪ್ರಕಟಿಸಿದ್ದರು. ನಾಯಕಿಯಾಗಿ ಪ್ರಿಯಾಮಣಿ ಆಯ್ಕೆಯಾಗಿದ್ದೂ ಆಗಿತ್ತು. ಆದರೆ ಕಥೆ ಏನೆಂಬುದನ್ನು ಬಹಿರಂಗಪಡಿಸಿರಲಿಲ್ಲ. ಆದರೂ ಹಾಲಿವುಡ್ ಚಿತ್ರವೊಂದರ ಸ್ಫೂರ್ತಿ ಎಂಬ ಸುಳಿವು ಸಿಕ್ಕಿತ್ತು.

ಅದೀಗ ಯಾವುದೆಂದು ಗೊತ್ತಾಗಿದೆ. 2007ರಲ್ಲಿ ಬಿಡುಗಡೆಯಾಗಿದ್ದ ಥಾಯ್ ಸಿನಿಮಾ 'ಅಲೋನ್' ಚಿತ್ರವನ್ನೇ ದ್ವಾರಕೀಶ್ ಅಧಿಕೃತವಾಗಿ ರಿಮೇಕ್ ಮಾಡುತ್ತಿದ್ದಾರೆ.

ಸಯಾಮಿ ಅವಳಿಗಳು, ಅಂದರೆ ಒಂದೇ ದೇಹ, ಎರಡು ಹೆಣ್ಣುಗಳ ಕಥೆಯ ಚಿತ್ರವೇ 'ಅಲೋನ್'. ಇಲ್ಲಿ ಇಬ್ಬರು ಅಕ್ಕ-ತಂಗಿಯರು ಒಂದೇ ದೇಹವನ್ನು ಹೊಂದಿರುತ್ತಾರೆ. ಅವರಿಗೊಬ್ಬ ಪ್ರಿಯತಮ ಸಿಗುತ್ತಾನೆ. ಈ ನಡುವೆ ಆಪರೇಷನ್ ನಡೆದು ಒಬ್ಬಾಕೆ ಸಾಯುತ್ತಾಳೆ. ನಂತರ ಆರಂಭವಾಗುವುದೇ ಅತೃಪ್ತ ಆತ್ಮದ ಆರ್ಭಟ. ಇದೇ ಕಥೆಯನ್ನು ದ್ವಾರಕೀಶ್ ನಾಡಿನ ಸೊಗಡಿಗೆ ಹೊಂದಾಣಿಕೆಯಾಗುವಂತೆ ಹೇಳಲಿದ್ದಾರಂತೆ.

ದ್ವಾರಕೀಶ್ ನಿರ್ಮಾಣದ ಕಿಚ್ಚ ಸುದೀಪ್ 'ವಿಷ್ಣುವರ್ಧನ'ವನ್ನು ನಿರ್ದೇಶಿಸಿದ್ದ ಪಿ. ಕುಮಾರ್ ಇದನ್ನೂ ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ ಹೊಣೆಗಾರಿಕೆಯೂ ಅವರದ್ದೇ.

ಆಪ್ತಮಿತ್ರ, ವಿಷ್ಣುವರ್ಧನ ಚಿತ್ರದ ನಂತರ ದ್ವಾರಕೀಶ್ ನಿರ್ಮಿಸುತ್ತಿರುವ ಚಿತ್ರ 'ಚಾರುಲತಾ', ದ್ವಾರಕೀಶ್ ಬ್ಯಾನರಿನಲ್ಲಿ ಬರುತ್ತಿರುವ 48ನೇ ಸಿನಿಮಾ ಅನ್ನೋದು ವಿಶೇಷ. ಇದುವರೆಗೆ ನಾಯಕ ಪ್ರಧಾನ ಚಿತ್ರಗಳನ್ನು ನಿರ್ಮಿಸುತ್ತಿದ್ದ ಕುಳ್ಳ ಈ ಬಾರಿ ನಾಯಕಿ ಪ್ರಧಾನ ಚಿತ್ರಕ್ಕೆ ಕೈ ಹಾಕಿದ್ದಾರೆ.

ಅದರಲ್ಲಿ ಗೆಲ್ಲುವ ಭರವಸೆಯೂ ಇದೆ. ಕಾರಣ, ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಪ್ರಿಯಾಮಣಿ. ಅದ್ಭುತ ಪಾತ್ರಕ್ಕೆ ಆಕೆ ಜೀವ ತುಂಬಲಿದ್ದು, ಇನ್ನೊಂದು ರಾಷ್ಟ್ರಪ್ರಶಸ್ತಿ ಪಡೆದರೂ ಅಚ್ಚರಿಯಿಲ್ಲ ಎಂಬ ಭರವಸೆ 'ಚಾರುಲತಾ' ಟೀಮ್‌ನಲ್ಲಿದೆ.

ಅಂದ ಹಾಗೆ, ಸಯಾಮಿ ಅವಳಿಗಳ ಪಾತ್ರಗಳಲ್ಲಿ ನಟಿಸಲಿರುವ ಪ್ರಿಯಾಮಣಿ ಪ್ರಿಯಕರನಾಗಿ ಯಾರು ನಟಿಸಲಿದ್ದಾರೆ ಅನ್ನೋದು ಇನ್ನೂ ಗೊತ್ತಾಗಿಲ್ಲ.

ವೆಬ್ದುನಿಯಾವನ್ನು ಓದಿ