ಹೆಸ್ರು ಚೇಂಜ್ ಮಾಡಲ್ಲ, ಏನ್ಮಾಡ್ತೀರಾ?: 'ಪ್ರೇಮ್ ಅಡ್ಡ'

PR
ಸನ್ನಿ ಲಿಯೋನ್ ಕನ್ನಡಕ್ಕೆ ಬರ್ತಾರೆ ಸಾರ್, ನೋಡ್ತಿರಿ... ಅಂತ ಹೇಳಿ ಒಂದಷ್ಟು ಮೈಲೇಜ್ ಪಡೆದುಕೊಂಡ 'ಪ್ರೇಮ್ ಅಡ್ಡ' ಈಗ ತಣ್ಣಗಾಗಿದ್ದ ಇನ್ನೊಂದು ವಿವಾದಕ್ಕೆ ಕಿಡಿ ಹಚ್ಚಿದೆ. ಯಾವ ಕಾರಣಕ್ಕೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹೇಳಿದಂತೆ ನಾವು ಕೇಳೋದಿಲ್ಲ, ಬೇಕಾದ್ರೆ ಕೋರ್ಟಿಗೆ ಹೋಗ್ತೀವಿ ಅಂತ ಸವಾಲು ಬೇರೆ ಹಾಕಿದೆ!

ಪ್ರೇಮ್ ನಾಯಕರಾಗಿರುವ 'ಪ್ರೇಮ್ ಅಡ್ಡ' ಚಿತ್ರದ ಶೀರ್ಷಿಕೆ ನೀಡುವಾಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು (ಕೆಎಫ್‌ಸಿಸಿ) ವಿಧಿಸಿದ್ದ ಷರತ್ತಿನ ಪ್ರಕಾರ, ಶೀರ್ಷಿಕೆಯಲ್ಲಿ 'ಪ್ರೇಮ್ ಅಡ್ಡ' ಎನ್ನುವುದು ಒಂದೇ ಗಾತ್ರದಲ್ಲಿ, ಒಂದೇ ಶೈಲಿಯಲ್ಲಿ ಮುದ್ರಣಗೊಳ್ಳಬೇಕು. ಪ್ರೇಮ್ ಎನ್ನುವುದನ್ನು ಚಿಕ್ಕದಾಗಿ ಮತ್ತು ಅಡ್ಡ ಎನ್ನುವುದನ್ನು ದೊಡ್ಡದಾಗಿ ಮುದ್ರಿಸಬಾರದು. ಆಗ ಇದಕ್ಕೆ ಒಪ್ಪಿಕೊಂಡಿದ್ದ ಟೀಮ್, ಈಗ ಸವಾಲು ಹಾಕುತ್ತಿದೆ.

ಪತ್ರಿಕೆಗಳಿಗೆ ಪ್ರಕಟವಾಗುತ್ತಿರುವ ಜಾಹೀರಾತುಗಳಲ್ಲಿ 'ಪ್ರೇಮ್ ಅಡ್ಡ' ಎನ್ನುವುದು ಬೇರೆ ಬೇರೆಯಾಗಿಯೇ ಬರುತ್ತಿದೆ. ಎರಡೂ ಒಂದೇ ಗಾತ್ರದಲ್ಲಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೆಎಫ್‌ಸಿಸಿ, ಮಾಧ್ಯಮಗಳಿಗೆ ಸೂಚನೆ ರವಾನಿಸಿದೆ. ಪ್ರೇಮ್ ಅಡ್ಡ ಚಿತ್ರದ ಯಾವುದೇ ಜಾಹೀರಾತುಗಳನ್ನು ಪ್ರಕಟಿಸಬಾರದು ಎಂದು ಅದು ಪತ್ರಿಕೆಗಳಿಗೆ ಮನವಿ ಮಾಡಿಕೊಂಡಿದೆ.

ಇಷ್ಟಾಗುತ್ತಿದ್ದಂತೆ ಪತ್ರಿಕಾಗೋಷ್ಠಿ ನಡೆಸಿರುವ 'ಪ್ರೇಮ್ ಅಡ್ಡ' ಟೀಮ್, ನಾವು ಕೆಎಫ್‌ಸಿಸಿ ಫರ್ಮಾನುಗಳಿಗೆ ಬಗ್ಗೋದಿಲ್ಲ. ಶೀರ್ಷಿಕೆಯ ವಿನ್ಯಾಸದಲ್ಲಿ ಯಾವ ಬದಲಾವಣೆಯನ್ನೂ ಮಾಡುವುದಿಲ್ಲ. ಸದ್ಯ ನಾವು ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಮೊರೆ ಹೋಗಿದ್ದೇವೆ. ಅಲ್ಲಿ ನ್ಯಾಯ ಸಿಗುವ ಭರವಸೆಯಿದೆ ಸಿಗದೇ ಇದ್ದರೆ, ನ್ಯಾಯಾಲಯಕ್ಕೆ ಹೋಗುತ್ತೇವೆ ಎಂದಿದೆ.

ಶೀರ್ಷಿಕೆ ಹೀಗೆಯೇ ಇರಬೇಕೆನ್ನುವುದು ಜ್ಯೋತಿಷಿಗಳು ಮತ್ತು ವಾಸ್ತುತಜ್ಞರ ಸಲಹೆ. ಅವರನ್ನು ಸಂಪರ್ಕಿಸಿಯೇ ಈ ಹೆಸರು ಇಟ್ಟಿದ್ದೇವೆ ಎಂದು ಸಮರ್ಥಿಸಿಕೊಂಡರು ನಿರ್ಮಾಪಕ ಮೇಕಾ ಮುರಳಿಕೃಷ್ಣ. ಇದಕ್ಕೆ ದನಿಗೂಡಿಸಿದ ನಿರ್ದೇಶಕ ಮಹೇಶ್ ಬಾಬು, ಕ್ರಿಯಾಶೀಲತೆಗೆ ಇಂತಹ ಅಡ್ಡಿ-ಆತಂಕಗಳು ಇರಬಾರದು ಎಂದರು.

ಸದಾ ವಿವಾದಗಳಿಂದಲೇ ಪ್ರಚಾರದಲ್ಲಿರುವ ನಿರ್ದೇಶಕ ಪ್ರೇಮ್ ತಮಿಳಿನ 'ಸುಬ್ರಮಣ್ಯಪುರಂ' ಚಿತ್ರದ ಕನ್ನಡ ರಿಮೇಕ್ 'ಪ್ರೇಮ್ ಅಡ್ಡ'ದಲ್ಲಿ ನಾಯಕ, ಕೃತಿ ಕರಬಂದ ನಾಯಕಿ.

'ಅಡ್ಡ' ಎಂಬ ಶೀರ್ಷಿಕೆ ನಿರ್ಮಾಪಕ ಬಿ.ಕೆ. ಶ್ರೀನಿವಾಸ್ (ಬೆಂಕೋಶ್ರೀ) ವಶದಲ್ಲಿರುವುದರಿಂದ 'ಪ್ರೇಮ್ ಅಡ್ಡ' ಎಂಬ ಹೆಸರಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಷರತ್ತುಬದ್ಧ ಒಪ್ಪಿಗೆ ನೀಡಿತ್ತು.

ವೆಬ್ದುನಿಯಾವನ್ನು ಓದಿ