ಅಂದು ನಾನು ಕುಡಿದಿರಲಿಲ್ಲ, ಪ್ಲೀಸ್ ನಂಬಿ: ದಿಗಂತ್

PR
ಅಪಘಾತ ನಡೆದಿದ್ದು ಹೌದು, ಆದರೆ ಆತ ಹೇಳುತ್ತಿರುವಂತೆ ನಾನು ಅಂದು ಕುಡಿದಿರಲಿಲ್ಲ; ಆತ ನನ್ನನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದಾನೆ. 25,000 ರೂಪಾಯಿ ಹಣ ಕೇಳುತ್ತಿದ್ದಾನೆ. ನಾನು ತಪ್ಪೇ ಮಾಡಿಲ್ಲ, ಮತ್ಯಾಕೆ ಬಗ್ಗಬೇಕು. ಇನ್ನು ಬಿಡೋದಿಲ್ಲ -- ಹೀಗೆಂದು ಆಕ್ಸಿಡೆಂಟ್ ಕುರಿತು ವಿವರಣೆ ನೀಡೋದು ದೂದ್ ಪೇಡಾ ದಿಗಂತ್.

ಕಳೆದ ವಾರ ಶಿವಾಜಿನಗರದಲ್ಲಿ ದಿಗಂತ್ ಕಾರು ಬೈಕೊಂದಕ್ಕೆ ಡಿಕ್ಕಿ ಹೊಡೆದಿತ್ತು. ಪ್ರಕರಣವೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ದಿಗಂತ್ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ.

ನಡೆದಿದ್ದೇನು?
ಜೂನ್ 16ರಂದು ರಾತ್ರಿ 10 ಗಂಟೆ ಹೊತ್ತಿಗೆ ದಿಗಂತ್ ಊಟಕ್ಕೆಂದು ಶಿವಾಜಿನಗರಕ್ಕೆ ಹೋಗಿದ್ದರು. ಅಲ್ಲಿಂದ ವಾಪಸ್ ಬರುವಾಗ, ಅವರ ಚಾಲಕ ಡ್ರೈವಿಂಗ್ ಮಾಡುತ್ತಿದ್ದ ಕಾರು, ಬೈಕ್ ಒಂದಕ್ಕೆ ಡಿಕ್ಕಿ ಹೊಡೆದಿತ್ತು. ಬೈಕ್‌ಗಾದ ಹಾನಿಯನ್ನು ನಾನೇ ಭರಿಸುತ್ತೇನೆ ಎಂದ ದಿಗಂತ್, ಬೈಕ್ ಚಲಾಯಿಸುತ್ತಿದ್ದ ಸಯ್ಯದ್ ಝೈನ್ ಎಂಬಾತನಿಗೆ ತನ್ನ ಆಪ್ತ ಕಾರ್ಯದರ್ಶಿ ಮುತ್ತು ಮತ್ತು ತನ್ನ ನಂಬರ್ ಕೊಟ್ಟರು.

ಇಷ್ಟಾದ ನಂತರ ಏನಾಯಿತು? ದಿಗಂತ್ ಮಾತುಗಳಲ್ಲೇ ಓದಿ: ಅಪಘಾತ ನಡೆದ ಕೆಲವೇ ಹೊತ್ತಿನಲ್ಲಿ ಸಯ್ಯದ್ ಝೈನ್‌ನಿಂದ ಎಸ್ಎಂಎಸ್ ಮೆಸೇಜುಗಳು ಬರತೊಡಗಿದವು. ನನಗೆ 25,000 ರೂಪಾಯಿ ಹಣ ಕೊಡಬೇಕು, ಇಲ್ಲದೇ ಇದ್ದರೆ ಕಂಪ್ಲೇಂಟು ಕೊಡುತ್ತೇನೆ ಎಂದು ಆತ ಬೆದರಿಕೆ ಹಾಕಲಾರಂಭಿಸಿದ. ನನಗೂ ಕಿರಿಕಿರಿಯಾಯಿತು. ಒಂದು ಸಾವಿರ ರೂಪಾಯಿಯಲ್ಲಿ ಮುಗಿಯುವ ರಿಪೇರಿಗೆ ಇಷ್ಟೊಂದು ಕೇಳುತ್ತಿದ್ದಾನಲ್ಲ, ಆತನದ್ದು ಪಕ್ಕಾ ಬ್ಲ್ಯಾಕ್‌ಮೇಲ್ ಆಗಿತ್ತು. ಹಾಗಾಗಿ, "ಹೋಗು, ಏನು ಬೇಕಾದರೂ ಮಾಡಿಕೋ" ಎಂದು ಹೇಳಿದೆ.

ಅದರಂತೆ ಆತ ಶಿವಾಜಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಈಗ ನನ್ನ ವಿರುದ್ಧ ಎಫ್ಐಆರ್ ದಾಖಲಾಗಿದೆ. ಆತ ಈಗಲೂ ಸಂಧಾನಕ್ಕೆ ಯತ್ನಿಸುತ್ತಿದ್ದಾನೆ. ಆದರೆ ನಾನು ತಪ್ಪೇ ಮಾಡಿಲ್ಲ. ಆತ ಪೊಲೀಸರಿಗೆ ದೂರು ಬೇರೆ ಕೊಟ್ಟಿದ್ದಾನೆ. ಹಾಗಾಗಿ ರಾಜಿಗೆ ಸಿದ್ಧನಿಲ್ಲ. ಏನು ಬೇಕಾದರೂ ಆಗಲಿ, ನೋಡಿಕೊಳ್ಳುತ್ತೇನೆ. ಸೆಲೆಬ್ರಿಟಿ ಎಂಬ ಕಾರಣಕ್ಕೆ ಹೀಗೆಲ್ಲ ಮಾಡೋದು ಎಷ್ಟು ಸರಿ?

ಆತ ಹೇಳಿದಂತೆ ಅಂದು ಅಪಘಾತ ನಡೆಯುವಾಗ ನಾನು ಕಾರನ್ನು ಡ್ರೈವಿಂಗ್ ಮಾಡುತ್ತಿರಲಿಲ್ಲ. ಅಷ್ಟಕ್ಕೂ ನಾನು ಕುಡಿದಿದ್ದೇನೆ ಎಂದು ಹೇಳಲು ಆತ ಟ್ರಾಫಿಕ್ ಪೊಲೀಸೋ? ಅಂದು ಕಾರನ್ನು ಡ್ರೈವಿಂಗ್ ಮಾಡುತ್ತಿದ್ದುದು ನನ್ನ ಡ್ರೈವರ್. ಸುಮ್ಮನೆ ಸುಳ್ಳು ಹೇಳಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾನೆ. ಇದಕ್ಕೆಲ್ಲ ನಾನು ಬಗ್ಗೋದಿಲ್ಲ.

ಇದು ದಿಗಂತ್ ವಾದ. ಅತ್ತ ಸಯ್ಯದ್ ಝೈನ್ ಕೂಡ ಸುಮ್ಮನೆ ಕುಳಿತಿಲ್ಲ. ಮಾಧ್ಯಮಗಳ ಕ್ಯಾಮರಾ ಮುಂದೆ ಆರೋಪಗಳನ್ನು ಮಾಡುತ್ತಿದ್ದಾನೆ.

ವೆಬ್ದುನಿಯಾವನ್ನು ಓದಿ