'ಚಾರುಲತಾ' ಬದಲಿಸುತ್ತಾಳಾ ಪ್ರಿಯಾಮಣಿ ಸಿನಿಬರಹ?

SUJENDRA
ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಇದುವರೆಗೆ ಸಯಾಮಿ ಅವಳಿಗಳ ಸಿನಿಮಾ ಯಾರೂ ಮಾಡಿಲ್ಲ. ಇದು ಹೆಮ್ಮೆ. ಇಂತಹ ಪಾತ್ರ ಮಾಡಿರುವ ರಾಷ್ಟ್ರಪ್ರಶಸ್ತಿ ವಿಜೇತೆ ಪ್ರಿಯಾಮಣಿಯಂತೂ ದೊಡ್ಡ ಭರವಸೆಯನ್ನೇ ಇಟ್ಟಿದ್ದಾರೆ. ಇನ್ನೊಂದು ರಾಷ್ಟ್ರಪ್ರಶಸ್ತಿ ಬಂದರೂ ಬರಬಹುದು ಎಂಬ ನಿರೀಕ್ಷೆ ಅವರದ್ದು.

'ಚಾರುಲತಾ'ದಲ್ಲಿ ನಾನು ಸಯಾಮಿ ಅವಳಿ ಪಾತ್ರದಲ್ಲಿ ನಟಿಸಿದ್ದೇನೆ. ಸಯಾಮಿ ಅವಳಿ ಸಿನಿಮಾವೆಂದರೆ ಸುಲಭವಲ್ಲ. ಇಲ್ಲಿ ಬಾಡಿ ಡಬಲ್ ಮಾಡಲಾಗಿದೆ. ಸಾಕಷ್ಟು ಗ್ರಾಫಿಕ್ಸ್ ಕೆಲಸಗಳಿವೆ. ನಟಿಸುವುದು ಕೂಡ ತುಂಬಾ ಸವಾಲಿನ ಕೆಲಸ. ಇಷ್ಟಾದ ಮೇಲೂ ನಾನು ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದೇನೆ ಎಂಬ ಭರವಸೆಯಲ್ಲಿದ್ದೇನೆ. ಚಿತ್ರ ನೋಡುತ್ತಿದ್ದಂತೆ ಪ್ರೇಕ್ಷಕರಿಗೆ ಭಿನ್ನ ಅನುಭವ ಸಿಗಲಿದೆ. ಖಂಡಿತಾ ನನಗೆ ಕೆಲವು ಪ್ರಶಸ್ತಿಗಳು ಬರಬಹುದು ಎನ್ನುತ್ತಾರವರು.

ದಕ್ಷಿಣ ಭಾರತದ ಚತುರ್ಭಾಷಾ ನಟಿ ಎಂದೊಮ್ಮೆ ಹೆಸರು ಮಾಡಿದ ಪ್ರಿಯಾಮಣಿ ಈಗ ಕನ್ನಡ ಬಿಟ್ಟರೆ ಬೇರೆಲ್ಲೂ ಕಾಣಿಸುತ್ತಿಲ್ಲ. ಈಗ 'ಚಾರುಲತಾ' ಕನ್ನಡ, ತಮಿಳು, ತೆಲುಗು, ಮಲಯಾಳಂಗಳಲ್ಲಿ ಬಿಡುಗಡೆಯಾಗುತ್ತಿರುವುದರಿಂದ ತನ್ನ ಸ್ಟಾರ್ ಕೆರಿಯರ್ ಮತ್ತೆ ಚಿಗಿತುಕೊಳ್ಳಬಹುದು ಎಂಬ ನಿರೀಕ್ಷೆಯೂ ಅವರಲ್ಲಿದೆ.

ಕೆಲ ದಿನಗಳ ಹಿಂದಷ್ಟೇ ಚಾರುಲತಾ ಟ್ರೇಲರುಗಳು ಬಿಡುಗಡೆಯಾಗಿದ್ದು, ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆಗಳು ಸಿಗುತ್ತಿವೆ.

ಯಾರೆಲ್ಲ ಇದ್ದಾರೆ?
ದ್ವಾರಕೀಶ್ ನಿರ್ಮಾಣದ 'ಚಾರುಲತಾ'ವನ್ನು ನಿರ್ದೇಶಿಸಿರುವುದು ಈ ಹಿಂದೆ 'ವಿಷ್ಣುವರ್ಧನ'ಕ್ಕೆ ಆಕ್ಷನ್-ಕಟ್ ಹೇಳಿದ್ದ ಪೊನ್ ಕುಮಾರನ್. ಸಯಾಮಿ ಅವಳಿಗಳ ಪಾತ್ರದಲ್ಲಿ ಪ್ರಿಯಾಮಣಿಯೇ ನಟಿಸಿದ್ದಾರೆ. ಆದರೆ ಬಾಡಿ ಡಬಲ್‌ಗೆ ಬೇರೊಬ್ಬ ನಟಿಯನ್ನು ಬಳಸಲಾಗಿದೆ. ಉಳಿದಂತೆ ಸ್ಕಂದ, ಸೀತಾ ಮುಂತಾದವರ ಬಳಗವಿದೆ.

ಚಿತ್ರೀಕರಣ ಮಾಡುವಾಗಲೇ ಪ್ರತ್ಯೇಕವಾಗಿ ಕನ್ನಡ ಮತ್ತು ತಮಿಳಿಗಾಗಿ ಶೂಟಿಂಗ್ ಮಾಡಲಾಗಿದೆ. ಕನ್ನಡದ ಮೂಲ ಪ್ರತಿಯಿಂದ ಮಲಯಾಳಂಗೆ ಹಾಗೂ ತಮಿಳಿನ ಪ್ರತಿಯಿಂದ ತೆಲುಗಿಗೆ ಈಗ ಡಬ್ ಮಾಡಲಾಗಿದೆ. ಮಲಯಾಳಂ ಹೊರತುಪಡಿಸಿ ಉಳಿದೆಲ್ಲಾ ಭಾಷೆಗಳಲ್ಲಿ 'ಚಾರುಲತಾ' ಹೆಸರಿನಲ್ಲೇ ಚಿತ್ರ ಬಿಡುಗಡೆ.

ಅಂದ ಹಾಗೆ, ಇದು ಥಾಯ್ ಭಾಷೆಯ 'ಅಲೋನ್' ಚಿತ್ರದ ಅಧಿಕೃತ ರಿಮೇಕ್. ಭಾರತೀಯ ಸಂಸ್ಕೃತಿಗೆ ಹೊಂದುವಂತೆ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ, ಹಾಗಾಗಿ ಪಕ್ಕಾ ರಿಮೇಕ್ ಅಲ್ಲ ಎಂದು ಹೇಳುತ್ತಿದೆ ಚಿತ್ರತಂಡ.

ಮಾತ್ರಾನ್ ಭೀತಿ?
ಪ್ರಿಯಾಮಣಿ ಎಷ್ಟೇ ನಿರೀಕ್ಷೆಗಳನ್ನಿಟ್ಟುಕೊಂಡಿದ್ದರೂ, ಆಕೆಯಲ್ಲಿ ಸಾಕಷ್ಟು ಭೀತಿಗಳಿವೆ. ಅದಕ್ಕೆ ಕಾರಣ, ಸೂರ್ಯ-ಕಾಜಲ್ ಅಗರವಾಲ್ ನಟಿಸಿರುವ 'ಮಾತ್ರಾನ್'. ಅದು ಕೂಡ ಸಯಾಮಿ ಅವಳಿಗಳ ಕಥೆ. ಅಷ್ಟೇ ಆಗಿದ್ದರೆ ಹೆದರುವ ಅಗತ್ಯವಿರಲಿಲ್ಲ, ಅದು 'ಚಾರುಲತಾ' ಜತೆಜತೆಗೇ ಬಿಡುಗಡೆಯಾಗುತ್ತಿದೆ!

ಹೌದು, ಸದ್ಯ ಬಂದಿರುವ ಮಾಹಿತಿಗಳ ಪ್ರಕಾರ, 'ಚಾರುಲತಾ' ಸೆಪ್ಟೆಂಬರ್ 6ರಂದು ಬಿಡುಗಡೆಯಾಗುತ್ತಿದೆ. 'ಮಾತ್ರಾನ್' ಸೆಪ್ಟೆಂಬರ್ 12ರಂದು ಬಿಡುಗಡೆ. ಅಂದರೆ ಎರಡು ಚಿತ್ರಗಳ ನಡುವೆ ಇರುವ ಅಂತರ ಕೇವಲ ಒಂದೇ ವಾರ. ಎರಡೂ ಚಿತ್ರಗಳ ಕಲ್ಪನೆ ಒಂದೇ ಆಗಿರುವುದರಿಂದ ಹೊಡೆತ ಬೀಳಬಹುದು ಎಂಬ ಭೀತಿ ಮನೆ ಮಾಡಿದೆ.

ವೆಬ್ದುನಿಯಾವನ್ನು ಓದಿ