ಕನ್ನಡ ಚಿತ್ರರಂಗಕ್ಕೆ ಶ್ರೀಮತಿ ಜಯಲಲಿತಾ ಬರುತ್ತಿದ್ದಾರಂತೆ...

ಬುಧವಾರ, 24 ಜುಲೈ 2013 (15:16 IST)
PTI
ಕನ್ಫ್ಯೂಸ್ ಆಗಬೇಡಿ...ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಬರುತ್ತಿದ್ದಾರಾ ಎಂದು ಹುಬ್ಬೇರಿಸಬೇಡಿ. ಚಿತ್ರ ನೋಡಿ ಮತ್ತೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಇವರು ಕನ್ನಡದ ಜಯಲಲಿತಾ!

ತಮಿಳುನಾಡಿನ ಮುಖ್ಯಮಂತ್ರಿಗೂ ಇವರಿಗೂ ಅಜಗಜಾಂತರ ವ್ಯತ್ಯಾಸವಿದೆ. ಈ ಚಿತ್ರದಲ್ಲಿರುವುದು ಕನ್ನಡದ ಕಾಮಿಡಿ ಕಿಂಗ್ ಶರಣ್. ಹೌದು, ಈಗಷ್ಟೇ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು ಗಾಂಧಿನಗರದಲ್ಲಿ ಭಾರೀ ಸುದ್ದಿ ಮಾಡುತ್ತಿದೆ. ಮಲೆಯಾಳಂನ ಹಿಟ್ ಚಿತ್ರ ಮಾಯಾ ಮೋಹಿನಿಯ ಸ್ಪೂರ್ತಿಯಿಂದ ಈ ಚಿತ್ರವನ್ನು ತೆರೆಗೆ ತರಲಾಗುತ್ತಿದೆ. ಚಿತ್ರದ ಹೀರೋ ಮಹಿಳೆಯ ಗೆಟಪ್ನಲ್ಲಿರುವುದನ್ನು ಬಿಟ್ಟರೆ ಚಿತ್ರದ ಕಥೆಯನ್ನು ಕದ್ದಿಲ್ಲ ಎನ್ನುತ್ತಾರೆ ಶರಣ್. ಶ್ರೀಮತಿ ಜಯಲಲಿತಾ ಚಿತ್ರ ಸಂಪೂರ್ಣ ಭಿನ್ನವಾಗಿದ್ದು. 100 ಶೇಕಡಾ ಮನರಂಜನೆ ನೀಡಲಿದೆ ಎಂಬುದಂತೂ ಸ್ಪಷ್ಟ.

ವಿಷ್ಣುವರ್ಧನ ಹಾಗೂ ಚಾರುಲತಾ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದ ಪಿ ಕುಮಾರ್ ನಿರ್ದೇಶಿಸುತ್ತಿರುವ ಚಿತ್ರ ಇದಾಗಿದ್ದು, ಶ್ರೀಧರ್ ಸಂಭ್ರಮ್ ಅವರ ಸಂಗೀತ, ಕರುಣಾಕರ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಈ ಚಿತ್ರಕ್ಕೆ ಮೊದಲು ಜೈ ಲಲಿತಾ ಎಂದು ಹೆಸರಿಡಲು ನಿರ್ಧರಿಸಲಾಗಿತ್ತು. ಆದರೆ ಶೀರ್ಷಿಕೆ ಸಿಗುವುದು ಕಷ್ಟ ಎಂಬ ಕಾರಣಕ್ಕೆ ಶ್ರೀಮತಿ ಜಯಲಲಿತಾ ಎಂದಿಡಲಾಗಿದೆ.

ವೆಬ್ದುನಿಯಾವನ್ನು ಓದಿ