ದರ್ಶನ್ ಚಾಲೆಂಜಿಂಗ್ 'ಚಿಂಗಾರಿ' ರೆಡಿ, ನೀವು..?!

SUJENDRA
ಚಾಲೆಂಜಿಂಗ್ ಸ್ಟಾರ್ ದರ್ಶನ್ ಇದುವರೆಗೆ ಕಾಣಿಸಿಕೊಳ್ಳದ ರೀತಿಯ ಪಾತ್ರ... ಇದುವರೆಗೆ ಮಾಡದೇ ಇರುವ ಫೈಟುಗಳು... ಕನ್ನಡ ಚಿತ್ರರಂಗದಲ್ಲಿನ ಅತಿ ಸ್ಟೈಲಿಷ್ ಚಿತ್ರವೆಂಬ ಹೆಗ್ಗಳಿಕೆ... ಅತೀ ಹೆಚ್ಚು ಅಂದರೆ 140ಕ್ಕೂ ಮೀರಿ ಚಿತ್ರಮಂದಿರಗಳಲ್ಲಿ ಬಿಡುಗಡೆ... ಹಿಂದೆಂದೂ ಕಾಣದ ನಿರೀಕ್ಷೆಗಳು... ಇದು ಈ ವಾರ (ಫೆಬ್ರವರಿ 3, ಶುಕ್ರವಾರ) ಬಿಡುಗಡೆಯಾಗಲಿರುವ 'ಚಿಂಗಾರಿ' ಮಹಾತ್ಮೆ.

ಒಟ್ಟಾರೆ ಕಡಿಮೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಬೇಕೆಂಬ ಇರಾದೆ ಇತ್ತಾದರೂ, ಥಿಯೇಟರುಗಳ ಮಾಲೀಕರು ಬಿಡುತ್ತಿಲ್ಲವಂತೆ. ನಮಗೂ ಬೇಕು, ನಮಗೂ ಬೇಕು ಅಂತ ದುಂಬಾಲು ಬೀಳುತ್ತಿದ್ದಾರಂತೆ. ನಮ್ಮ ಸಿನಿಮಾಕ್ಕೆ ಸಿಕ್ಕಾಪಟ್ಟೆ ಬೇಡಿಕೆ ಅನ್ನುತ್ತಿದೆ ಚಿತ್ರವನ್ನು ಖರೀದಿಸಿರುವ ಸಮರ್ಥ್ ವೆಂಚರ್ಸ್. ಇವರ ಪಾಲಿಗೆ ಗೆದ್ದರೆ ಬಣ್ಣ, ಸೋತರೆ ಸುಣ್ಣ ಎಂಬಂತಹ ಪರಿಸ್ಥಿತಿ. ಅದೇ ಕಾರಣದಿಂದ ಭಾರೀ ಆತಂಕದಲ್ಲಿದೆ ಸಂಸ್ಥೆ.

ದೀಪಿಕಾ ಕಾಮಯ್ಯ ನಾಯಕಿಯಾಗಿರುವ ಚಿಂಗಾರಿ ಚಿತ್ರವನ್ನು ನಿರ್ದೇಶಿಸಿರುವುದು ನೃತ್ಯ ನಿರ್ದೇಶಕ ಹರ್ಷ. ಹರಿಕೃಷ್ಣ ಸಂಗೀತ, ರವಿವರ್ಮ ಸಾಹಸ ನಿರ್ದೇಶನ ಮಾಡಿದ್ದಾರೆ.

ಅಭಿಮಾನಿಗಳು, ಪ್ರೇಕ್ಷಕರು 'ಸಾರಥಿ' ಗುಂಗಿನಲ್ಲಿ ಚಿತ್ರಮಂದಿರಕ್ಕೆ ಬರಬಾರದು. ಬದಲಿಗೆ ನಿರೀಕ್ಷೆಗಳನ್ನೇ ಇಟ್ಟುಕೊಳ್ಳದೆ ಬರಬೇಕು. ಪ್ರೇಕ್ಷಕರ ಉದ್ದೇಶ ಮನರಂಜನೆಯಷ್ಟೇ ಇರಬೇಕು. ಆಗ ಚಿತ್ರವನ್ನು ಸಂತೋಷದಿಂದ ನೋಡಬಹುದು ಎಂದು ಹೇಳಿರುವುದು ದರ್ಶನ್.

ಅವರ ಪ್ರಕಾರ, ಇಂತಹ ಸ್ಟೈಲಿಷ್ ಚಿತ್ರವನ್ನು ಅವರು ಯಾವತ್ತೂ ಮಾಡೇ ಇಲ್ಲ. ಈ ಚಿತ್ರದಲ್ಲಿ ದರ್ಶನ್ ಮಾಡಿರುವುದು ಪೊಲೀಸ್ ಅಧಿಕಾರಿ ಪಾತ್ರ. ಆದರೆ ಸಿಕ್ಕಾಪಟ್ಟೆ ಸ್ಟೈಲಿಷ್ ಆಗಿದೆಯಂತೆ. 'ಸೂಪರ್' ಚಿತ್ರದಲ್ಲಿ ಉಪೇಂದ್ರ ಪರಿಚಯಿಸಿದ ಕಾರ್ಪೊರೇಟ್ ರೌಡಿಸಂ ಟಚ್ ಕೂಡ ಇಲ್ಲಿದೆಯಂತೆ. ಈ ಜಗತ್ತಿನಲ್ಲಿ ಹೇಗೆ ರೌಡಿಸಂ ನಿಯಂತ್ರಿಸಲ್ಪಡುತ್ತಿದೆ ಅನ್ನೋದು ಚಿತ್ರದ ಪ್ರಮುಖ ಅಂಶವಂತೆ.

ಹರಿಕೃಷ್ಣ ಸಂಗೀತದ ಹಾಡುಗಳು ಈಗಾಗಲೇ ಹಿಟ್ ಆಗಿವೆ. ದೀಪಿಕಾ ಕಾಮಯ್ಯ ಜತೆ ಭಾವನಾ ಕೂಡ ಇದ್ದಾರೆ. ಆಕೆ ಇಲ್ಲಿ ಎರಡನೇ ನಾಯಕಿ. ಎಲ್ಲಾ ಪಾತ್ರಗಳೂ ಭಿನ್ನವಾಗಿವೆ. ಅವುಗಳನ್ನು ಚಿತ್ರೀಕರಿಸಿರುವ ರೀತಿಯೂ ನವನವೀನ. ನಿರೂಪನೆಯ ಬಗ್ಗೆ ಕೇಳುವಂತೆಯೇ ಇಲ್ಲ. ಎಲ್ಲದಕ್ಕೂ ಕಾದು ನೋಡಿ ಅಂತಿದೆ ಚಿತ್ರತಂಡ.

ಇಷ್ಟೆಲ್ಲ ಹೇಳುವ ಚಿಂಗಾರಿಯೇನೋ ರೆಡಿಯಾಗಿದೆ, ನೀವು....?!

ವೆಬ್ದುನಿಯಾವನ್ನು ಓದಿ