ಸಿದ್ಲಿಂಗು ಚಿತ್ರವಿಮರ್ಶೆ; ಹೆಚ್ಚಾದ ಉಪ್ಪು, ಹುಳಿ, ಖಾರ

PR


ಚಿತ್ರ: ಸಿದ್ಲಿಂಗು
ತಾರಾಗಣ: ಯೋಗೀಶ್, ರಮ್ಯಾ, ಸುಮನ್ ರಂಗನಾಥ್, ಅಚ್ಚುತ ರಾವ್
ನಿರ್ದೇಶನ: ವಿಜಯ ಪ್ರಸಾದ್
ಸಂಗೀತ: ಅನೂಪ್ ಸೀಳಿನ್

ಕಾರಿನ ಮೋಹ ಬದುಕಿನ ದಿಕ್ಕನ್ನೇ ತಪ್ಪಿಸಿದ ಕತೆಯಿದು ಎಂದು ಹೇಳಬಹುದೇನೋ ಅಂತ ಹೊರಟರೆ, ಈ ಕತೆಯ ನಾಯಕ ಸಿದ್ಲಿಂಗು ಬದುಕಿಗೆ ದಿಕ್ಕೆಂಬುದೇ ಇರುವುದಿಲ್ಲ. ಆತನೋ ಬೆಂಗಾಡು ಜೀವಿ. ಯಾಕಾದರೂ ಹುಟ್ಟಿದೆನೋ ಎಂಬಂತಿದ್ದವನು. ಬೇಕೋ ಬೇಡವೋ ಎಂಬಂತಹ ಜೀವನ.

ನೇರ ಮಾತೇ ಸಿದ್ಲಿಂಗು ಬಂಡವಾಳ. ನಿಮ್ಮ ಎದೆ ಇಷ್ಟ ಅಂತ ಒಂದೇ ಏಟಿಗೆ ಲೆಕ್ಚರರ್ ಮುಂದೆ ಹೇಳಿ ಬಿಡುತ್ತಾನೆ. ನನ್ನನ್ನು ಮದುವೆಯಾಗ್ತೀಯಾ ಅಂತ ಟೀಚರನ್ನ ಕೇಳುತ್ತಾನೆ. ಆತನ ಮಾತೇ ಹಾಗೆ. ಏನನ್ನೂ ಇಟ್ಟುಕೊಳ್ಳುವ ಸ್ವಭಾವ ಅವನದಲ್ಲ. ಹಿಂದೆ ಮುಂದೆ ನೋಡದೆ ಮಾತಿಗಿಳಿಯುತ್ತಾನೆ. ಅದ್ಯಾವುದೂ ಅಸಹಜ ಅಂತ ಸಿದ್ಲಿಂಗುವಿಗೆ ಗೊತ್ತೇ ಆಗುವುದಿಲ್ಲ. ತಾನಿರೋದೇ ಹಾಗೆ ಅಂದುಕೊಳ್ಳುತ್ತಾನೆ.

ಹೀಗಿದ್ದವನಿಗೆ ಕಾಲೇಜಿನ ಲೆಕ್ಚರ್ ಅಂದಾಲಮ್ಮ (ಸುಮನ್ ರಂಗನಾಥ್) ಗಂಟು ಬೀಳುತ್ತಾಳೆ. ಜನರಾಡಿಕೊಳ್ಳುತ್ತಿದ್ದಂತೆ ಇತ್ತ ಸಿದ್ಲಿಂಗು-ಅಂದಾಲಮ್ಮನ ನಡುವೆ ನಡೆಯಬಾರದ್ದು ನಡೆದು ಹೋಗುತ್ತದೆ. ಆದರೆ ಇದು ಸಿದ್ಲಿಂಗು ಕನಸಲ್ಲ. ಆತನ ಗುರಿಯೇನಿದ್ದರೂ ಹಳೆ ಕಾರೊಂದನ್ನು ಖರೀದಿಸಿ, ತನ್ನದಾಗಿಸಿಕೊಳ್ಳುವುದು. ಅದಕ್ಕಾಗಿ ಏನು ಮಾಡಲೂ ಸಿದ್ಧನಿರುತ್ತಾನೆ.

ಇದ್ದವರನ್ನು ಕಳೆದುಕೊಂಡವನು ಕಾರಿನ ಜಾಡು ಹಿಡಿದು ನಗರಕ್ಕೆ ಹೋಗುತ್ತಾನೆ. ಹಾಗೆ ಹೋದವನು ಸ್ವಂತ ಕಾರನ್ನು ಪಡೆಯಲು ಸಾಲ ಮಾಡುತ್ತಾನೆ. ಆಗ ಪರಿಚಯವಾದವಳು ಮಂಗಳಾ ಟೀಚರ್. ಆಕೆಯ ಹಿಂದೆ ಮುಂದೆ ಸುತ್ತುತ್ತಿದ್ದವನಿಗೆ, ಆಕೆಯನ್ನೇ ಮದುವೆಯಾಗುವ ಮನಸ್ಸಾಗುತ್ತದೆ. ಇದ್ದಕ್ಕಿದ್ದಂತೆ ಮದುವೆಯಾಗುತ್ತೀಯಾ ಎಂದು ಕೇಳಿ ಬಿಡುತ್ತಾನೆ.

ಹೀಗೆ ಬಿಡಿ ಬಿಡಿಯಾಗಿ ಸಿದ್ಲಿಂಗು ಬದುಕನ್ನು ಬಿಡಿಸುತ್ತಾ ಹೋಗುವ ಕತೆ ದುರಂತ ಕಥನವಾಗುತ್ತದೆ. ಕಾರಿನಲ್ಲೇ 'ಸುಖ' ಕಂಡವನು ಕೊನೆಗೆ ತನ್ನ ಕನಸಿನ ಕಾರಿನಿಂದಾಗಿ ಬದುಕನ್ನೇ ಕಳೆದುಕೊಳ್ಳುತ್ತಾನೆ. ಒಂದು ಕನಸನ್ನು ಈಡೇರಿಸಿಕೊಂಡವನ ಕನಸುಗಳೇ ಖಾಲಿಯಾಗಿ ಹೋಗುತ್ತವೆ. ಇದು ಮುಂದಿನ ಕತೆ.

ಸಿಲ್ಲಿಲಲ್ಲಿ ಖ್ಯಾತಿಯ ವಿಜಯ ಪ್ರಸಾದ್ ಇದರ ನಿರ್ದೇಶಕರು. ಅವರು ಹೆಣೆದಿರುವ ಕತೆ ಅದ್ಭುತವೆಂಬುದರಲ್ಲಿ ಎರಡನೇ ಮಾತೇ ಇಲ್ಲ. ಸಿದ್ಲಿಂಗುವಿನ ಬದುಕಿನ ಕತೆ ಅನ್ನೋ ಕಾರಣಕ್ಕೆ ಸಹಿಸಿಕೊಳ್ಳಬಹುದಾದರೂ, ಪ್ರೇಕ್ಷಕರಿಗೆ ಗೊಂದಲ ಜಾಸ್ತಿ.

ಅದಕ್ಕಿಂತಲೂ ಹೆಚ್ಚಾಗಿ ಸಂಭಾಷಣೆಗಳನ್ನು ಸಹಿಸಿಕೊಳ್ಳುವುದು ಕಷ್ಟವಾಗುತ್ತದೆ. ಚೆನ್ನಾಗಿಲ್ಲ ಎಂದಲ್ಲ. ಒಂದು ವರ್ಗದ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಬಹುದು. ಆದರೆ ಕುಟುಂಬ ಸಮೇತರಾಗಿ ನೋಡುವುದಿದ್ದರೆ, ಬಾಯಿ ಬಿಟ್ಟು ನಗುವುದು ಕಷ್ಟ. ಸಿದ್ಲಿಂಗುವಿನ ನೇರ ಮಾತುಗಳೆಲ್ಲವನ್ನು ಕೇಳಲು ಸೆನ್ಸಾರ್ ಬಿಟ್ಟಿಲ್ಲವಾದರೂ, ಇದ್ದುದನ್ನು ಕೇಳುವುದು ಕೂಡ ಮುಜುಗರ ಸೃಷ್ಟಿಸುತ್ತದೆ.

ಒಂದು ವೇಳೆ ಇಂತಹ ಸಂಭಾಷಣೆಗಳು ಚಿತ್ರದಲ್ಲಿರದೇ ಹೋಗಿದ್ದಿದ್ದರೆ? ಇದು ಪ್ರಶ್ನೆ. ಹಾಗಿದ್ದಿದ್ದರೆ ಸಿದ್ಲಿಂಗು ನೋಡುವಂತಿರುತ್ತಿರಲಿಲ್ಲ. ಸತ್ವ ಮಾಯವಾಗುತ್ತಿತ್ತು. ಹೀಗೆ ತೆಗಳುತ್ತಲೇ, ಯೋಗಿ ಸಂಭಾಷಣೆ ಹೇಳುವ ಶೈಲಿಯನ್ನು ಮೆಚ್ಚಿಕೊಳ್ಳಲೇ ಬೇಕಾಗುತ್ತದೆ. ತುಂಬಾ ಸಹಜವಾಗಿ ಅವರು ಡೈಲಾಗುಗಳನ್ನು ಉಗಿದು ಬಿಡುತ್ತಾರೆ. ಪಾತ್ರವಂತೂ ಅವರಿಗಂತಲೇ ಮಾಡಿಸಿದ್ದು.

ರಮ್ಯಾಗೆ ಕನ್ನಡಕ ಭಾರ ಅನ್ನಿಸಿದರೂ, ಟೀಚರ್ ಪಾತ್ರದಲ್ಲವರು ಪ್ರೇಕ್ಷಕರನ್ನು ಮೋಡಿ ಮಾಡುತ್ತಾರೆ. ಸುಮನ್ ರಂಗನಾಥ್ ಬಿಡಿ ಕತೆಯ ಒಂದು ಭಾಗದಲ್ಲಿದ್ದಾರೆ. ಮುಸ್ಲಿಂ ಪಾತ್ರದಲ್ಲಿ ಶ್ರೀಧರ್ ಗಮನ ಸೆಳೆಯುತ್ತಾರೆ.

ಸುಜ್ಞಾನ್ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ ಬೋನಸ್. ಸಂಭಾಷಣೆಯನ್ನು ಇನ್ನಷ್ಟು ಸಹ್ಯವಾಗಿಸುತ್ತಿದ್ದರೆ, ಕ್ಲೈಮಾಕ್ಸಲ್ಲಿ ಆತುರ ಪಡದೇ ಇರುತ್ತಿದ್ದರೆ ಮಜಬೂತಾದ ಸಿನಿಮಾ ಇದಾಗುತ್ತಿತ್ತೇನೋ?!

ವೆಬ್ದುನಿಯಾವನ್ನು ಓದಿ