ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ 8- ಅಸೂಯೆ ತಂದ ಆಡಳಿತ

WD
ಕರಾವಳಿಯ ಅದ್ಭುತ ಕಲೆ ಯಕ್ಷಗಾನವು ಕಂಡ ಮೇರು ಕಲಾವಿದ ದಿವಂಗತ ಕುರಿಯ ವಿಠಲ ಶಾಸ್ತ್ರಿಯವರ ಜನ್ಮಶತಮಾನ ವರ್ಷ (ಜನನ: 08-09-1912) ಹಿನ್ನೆಲೆಯಲ್ಲಿ ಪ.ಗೋ. ನಿರೂಪಿಸಿದ ಶಾಸ್ತ್ರಿಗಳ ಆತ್ಮ ಕಥನ "ಬಣ್ಣದ ಬದುಕು" ಪ್ರತೀ ಗುರುವಾರ ವೆಬ್‌ದುನಿಯಾದಲ್ಲಿ ಸರಣಿ ರೂಪದಲ್ಲಿ ಪ್ರಕಟವಾಗುತ್ತಿದೆ.- ಸಂ]

[ಕಳೆದ ವಾರದಿಂದ ಮುಂದುವರಿದುದು]

ಮಾಡುತ್ತಲಿದ್ದ ಸುಧಾರಣಾ ಪ್ರಯೋಗಗಳನ್ನು ಮೇಳದ ಯಜಮಾನರಾದ ಶ್ರೀ ಕೊರಗಪ್ಪ ಶೆಟ್ಟಿಯವರು ಸ್ವಾಗತಿಸುತ್ತಿದ್ದರು. ಅಂತೆಯೇ, ಪ್ರೇಕ್ಷಕ ವರ್ಗದವರಿಂದಲೂ ಮೆಚ್ಚುಗೆ ಗಳಿಸುತ್ತಿದ್ದೆವು.

ಇತರ ಕೆಲವು ತಾಪತ್ರಯಗಳನ್ನು ಸಹಿಸಿಕೊಂಡಾದರೂ, ಕಲಾ ವ್ಯವಸಾಯವನ್ನು ಹುಲುಸಾಗಿ ಮಾಡುತ್ತೇನೆ, ಆಸೆಯ ಕೆಲವು ಬಳ್ಳಿಗಳಿಗಾದರೂ ನೀರೆರೆಯುತ್ತೇನೆ ಎನ್ನುತ್ತಲೇ ವರ್ಷದ ಮುಕ್ಕಾಲು ಭಾಗವನ್ನು ನೂಕಿದೆ.

ಮಾತ್ಸರ್ಯದ ಮೊಳಕೆ
ನಾನು ತಿಳಿದಿದ್ದಂತೆಯೇ, ಕೆಲವೊಂದು ಮಂದಿ ಇತರ ಕಲಾವಿದರ ಮಾತ್ಸರ್ಯ ಬೀಜದ ಮೊಳಕೆಯಾಗಿತ್ತು. ಆದರೆ, ನಾನು ಹೋಗುತ್ತಲಿರುವುದು ಸರಿಯಾದ ದಾರಿ ಎಂಬ ಆತ್ಮವಿಶ್ವಾಸ ನನಗಿತ್ತು. ಹೇಗಾದರೂ ನನ್ನ ಮೇಲೆ ಮತ್ಸರವಿದ್ದರೆ ಅದು ನನ್ನ ಮೇಲಷ್ಟೆ ಪ್ರಯೋಗವಾಗಬೇಕು-ಬೇರಾರನ್ನೂ ಮುಟ್ಟಲಾರದು ಎಂದುಕೊಂಡಿದ್ದೆ.

ಆದರೆ, ಪತ್ತನಾಜೆಗೆ ಇನ್ನು 15 ದಿನಗಳು ಮಾತ್ರವೆ ಇವೆ ಎನ್ನುವಾಗ-

ಆ ಮಾತ್ಸರ್ಯದ ಬಿಸಿ ಎಲ್ಲರನ್ನೂ ಮುಟ್ಟಿ ಒಮ್ಮೆಗೆ ಬೇಯಿಸಿತು.

ಆ ವರ್ಷ ಶೆಟ್ಟರು ಮೇಳದ ವ್ಯವಹಾರವನ್ನು ಇನ್ನೊಬ್ಬರು ಪಾಲುದಾರರೊಡನೆ ಸೇರಿಕೊಂಡು ಮಾಡಿದ್ದರು. ಪಾಲುದಾರರಾದರೂ ಮೇಳದ ಆಡಳಿತದಲ್ಲಿ ನೇರವಾಗಿ ಅದುವರೆಗೆ ಹಸ್ತಕ್ಷೇಪ ಮಾಡುತ್ತಿರಲಿಲ್ಲ.

ಆದರೆ, ತಮಗಿದ್ದ ಪ್ರಾಮುಖ್ಯ ಅದೆಲ್ಲಿ ಕಳೆದುಹೋಗುವುದೋ ಎಂಬ ಭಯವಿದ್ದ ಕೆಲವರು ನಟರು, 'ಬುದ್ಧಿ ಕಲಿಸುವ' ಒಂದು ಉಪಾಯವನ್ನು ಆ ಪಾಲುದಾರರಿಂದ ಮಾಡಿಸಿದರು.

ಕಿವಿ ಚುಚ್ಚಿದವರ ಮಾತನ್ನು ಕೇಳಿಕೊಂಡು, ಪಾಲುದಾರರೂ ಉಪಾಯಕ್ಕೆ ಸೈ ಗುಟ್ಟಿದರು.

ಪೇಜಾವರದ ಬಳಿಯ ಒಂದು ಊರಿನಲ್ಲಿ ಆಟವಾಗಬೇಕಾಗಿದ್ದ ದಿನ ಭಾಗವತರು ಮತ್ತು ಮುಖ್ಯ ವೇಷಧಾರಿಗಳು ಮೇಳವನ್ನು ಬಿಟ್ಟು ಹೊರಟರು!

ಆಟ ನೋಡಲು ಜನರು ಸಿಗುತ್ತಾರೆ- ಆಡುವವರೇ ಸಿಗಲಾರರು ಎಂಬ ಹಾಗಾಯಿತು ಪರಿಸ್ಥಿತಿ.

ಬೇರೆಯವರನ್ನಾದರೂ ತಂದು ಆಟವಾಡೋಣ ಎಂದರೆ, ಪತ್ತನಾಜೆಗೆ ಸಮೀಪದ ದಿನಗಳಲ್ಲಿ ಆಳೆತ್ತರಕ್ಕೆ ಹಣ ಸುರಿಯುವೆನೆಂದರೂ ಸಿಗುವ ವೇಷಧಾರಿಗಳು ಇರಲಿಲ್ಲ.

ಪತ್ತನಾಜೆಯ ಸೇವೆ ಆಟಕ್ಕೆ ಮೊದಲು ಮೇಳವನ್ನು ವಿಸರ್ಜಿಸುವುದೆಂದರೆ- ಅದಕ್ಕಿಂತ ದೊಡ್ಡ ತೇಜೋವಧೆ ಬೇರಿಲ್ಲ.

ಶೆಟ್ಟರು ತಲೆಯ ಮೇಲೆ ಕೈ ಹೊತ್ತರು. ನಾನು ದಿಙ್ಮೂಢನಾದೆ.

WD
ಏನು ಮಾಡಲೂ ನನಗೆ ತೋಚಲಿಲ್ಲ. ಆದರೂ, ಸಮಾಧಾನ ತಳೆದುಕೊಂಡು, ಮೊದಲೇ ನಿಶ್ಚಯವಾಗಿದ್ದ ಆಟಕ್ಕಾಗಿ ಪೇಜಾವರ ಮುಟ್ಟಿದೆವು. ಅಲ್ಲಿ ಆ ರಾತ್ರಿ, ಯಾರೋ ಒಬ್ಬರು ಭಾಗವತರನ್ನು ಎರವಲು ಪಡೆದು, ಒಬ್ಬೊಬ್ಬರು 3-4 ವೇಷಗಳಂತೆ ಹಾಕಿ ಹೇಗಾದರೂ ಆಟ ಕಳೆಯಿತು ಎನಿಸಿದೆವು.

ಬೇರೆ ಜನರನ್ನು ತಾರದೆ ಗತ್ಯಂತರವಿಲ್ಲ. ಎಲ್ಲಿಂದ? ಶೆಟ್ಟರು ಏನನ್ನೂ ಹೇಳುವ ಸ್ಥಿತಿಗೆ ಬಂದಿರಲಿಲ್ಲ. ನಾನು?

ಜನಸಂಗ್ರಹ
ಎಲ್ಲಿಂದಲಾದರೂ ಜನರನ್ನು ತರಲೇಬೇಕು ಎಂದುಕೊಂಡೇ ಮುಖದಿಂದ ಬಣ್ಣ ಅಳಿಸಿದೆ.

ಅರ್ಧ ತಿಳಿದವರಾದರೂ ಸರಿ, ಹೊಸಬರಾದರೂ ಸರಿ, ಇಂದು ರಾತ್ರೆಯ ಆಟಕ್ಕೆ ಜನರು ಬೇಕೇ ಬೇಕು. ಮನಸ್ಸಿನ ಕಣ್ಣನ್ನು ಎಲ್ಲ ಕಡೆಗಳಿಗೂ ಹರಿಸಿದೆ.

ಛೆ! ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕಾಗಿ ಊರೆಲ್ಲ ಅಲೆಯುವಿಯಾ ಎಂದಿತು ನೆನಪು.

ನಮ್ಮ ಮನೆಯ ಬಳಿಯಲ್ಲೇ -ನಮ್ಮ ಕುಟುಂಬದವರೇ ಇರುವಾಗ! "ಮನೆಗೆ ಹೋಗಿ ಬರುತ್ತೇನೆ" ಎಂದು ಶೆಟ್ಟರೊಡನೆ ಹೇಳಿ, ಅಲ್ಲಿಂದ ಮಂಗಳೂರಿಗೆ ಸೈಕಲ್ ತುಳಿದೆ.

ಮಂಗಳೂರಿನಿಂದ ಕುಂಬಳೆಯವರೆಗೆ ರೈಲು ಪ್ರಯಾಣ. ಕುಂಬಳೆಯಲ್ಲಿ- ಮೇಳಕ್ಕೆ ಹೋಗುವುದನ್ನು ಬಿಟ್ಟಿದ್ದ- ಇಬ್ಬರು ವೇಷಧಾರಿಗಳು ಸಿಕ್ಕಿದರು. ಅವರನ್ನು ಅಲ್ಲಿಂದ ಪೇಜಾವರಕ್ಕೆ ಕಳುಹಿಸಿಕೊಟ್ಟು ಕುಂಬಳೆಯಿಂದ ತಿರುಗಿ ಸೈಕಲ್ ಸವಾರನಾದೆ. ಮನೆಗೆ ಬಂದು, ನಮ್ಮ ದೊಡ್ಡಪ್ಪಂದಿರ ಮಕ್ಕಳನ್ನು ಕೂಡಿಹಾಕಿ, ಅನಂತರವೂ ಸೈಕಲ್ ತುಳಿದು ಬೇರೆಬೇರೆ ಕಡೆಗಳಿಗೆ ಹೋಗಿ ಇನ್ನೂ ಕೆಲವರನ್ನು ಒಟ್ಟು ಮಾಡಿದೆ.

(ಅದೊಂದು ದಿನ - ಕಡಿಮೆ ಎಂದರೆ-45 ಮೈಲುಗಳಷ್ಟು ಮಾರ್ಗವನ್ನು ಸೈಕಲ್ ಏರಿಯೇ ಸುತ್ತಿದ್ದೆ.)

ಅಂತೂ ರಾತ್ರೆಯ ಹೊತ್ತಿಗೆ ಎಲ್ಲರೂ ಪೇಜಾವರ ತಲುಪಿದರು. ಹೋದ ಸ್ವಲ್ಪ ಹೊತ್ತಿನಲ್ಲೇ ವೇಷಕ್ಕೂ ಕುಳಿತಿರಬೇಕಾಯಿತು.

ಆದರೆ, ಶೆಟ್ಟರ ಸ್ನೇಹದ ಸಾಲದ ಸ್ವಲ್ಪಾಂಶವನ್ನಾದರೂ ತೀರಿಸಿದ ತೃಪ್ತಿ ಮತ್ತು ಬಣ್ಣದ ಬದುಕಿಗಾಗಿ ಇದ್ದ ಉತ್ಸಾಹ, ಅಂದಿನ ವೇಷದಲ್ಲಿ ನನ್ನ ಅಯಾಸವನ್ನೇನೂ ತೋರಗೊಡಲಿಲ್ಲ.

ಪತ್ತನಾಜೆಯವರೆಗೂ ನಮ್ಮ ತಿರುಗಾಟ ಯಶಸ್ವಿಯಾಗಿಯೇ ಆಯಿತು.

'ಸೇವೆ'ಯಲ್ಲಿ ಗೆಜ್ಜೆ ಬಿಚ್ಚಿ ಮನೆಗೆ ಬಂದೆ. ಅಂತೆಯೇ ಒಂದು ಸಿದ್ಧಾಂತದ ತಡಿಗೂ ಬಂದೆ.

ಯಕ್ಷಗಾನ ಪ್ರಪಂಚವೆಂದರೆ ಒಂದು ಮಹಾಸಾಗರ. ದೂರದಿಂದ ನೋಡುವವನಿಗೆ ಅದು ಬಹು ಆಕರ್ಷಣೀಯ. ಬದಿಯಲ್ಲಿ ನಿಂತವನಿಗೆ, ಅಲ್ಲಿ ಕಾಣುವ ಕಲಾ ವೈಭವದ ತೆರೆಗಳ ಸೊಬಗು ಅವರ್ಣನೀಯ. ಆರಂಭದ ದಿನಗಳಲ್ಲಿ ಅದರಲ್ಲಿ ಈಸುವವನ ಆನಂದ ಅರ್ಷೇಯ. ಆದರೆ, ಒಂದೆರಡು ಬಾರಿ ಮುಳುಗಿ ಎದ್ದಾಗ, ತೆರೆಗಳ ಹೊಡೆತ ಬಲಗುಂದಿಸುತ್ತದೆ. ನೀರೊಳಗೆ ಇರುವ ಕ್ರೂರ ಜೀವಿಗಳ ಪರಿಚಯವಾಗುತ್ತದೆ. ಅವುಗಳ ವಂಚನೆ- ಮತ್ಸರಗಳ ಹಿಡಿತ ಧೃತಿಗೆಡಿಸುತ್ತದೆ. ಒಳ ಜಗಳ- ಮಾತ್ಸರ್ಯಗಳ ಜಂಜಾಟ, ಮೇಳದ ತಿರುಗಾಟಕ್ಕೆ ಹೋಗಬೇಕು ಎನ್ನುವ ನನ್ನ ಆಸೆಯನ್ನು ದಿಕ್ಕಾಪಾಲು ಮಾಡಿತ್ತು.

ಈ ದೀಪಾವಳಿಗೆ, ನಾನಾಗಿ ಎಲ್ಲೂ ಹೋಗುವುದಿಲ್ಲ. ನನ್ನ ವೇಷಗಳಿಗೆ ಬೆಲೆ ಇದೆ ಎಂದಾದರೆ, ಯಾರಾದರೂ ಕರೆಸಿಕೊಳ್ಳುತ್ತಾರೆ. ಒಂದೇ ಮೇಳಕ್ಕೆ ಅಂಟಿಕೊಂಡು ಒದ್ದಾಡುವ ಬದಲು, ಬರಹೇಳಿದ ಕಡೆಗಳಿಗೆ ಹೋಗುವುದೇ ವಾಸಿ. ಬೇಕಾದಾಗ ವಿರಾಮವೂ ಸಿಗುತ್ತದೆ ಎಂದು ಧೈರ್ಯವಾಗಿ ಮನೆಯಲ್ಲೇ ಕುಳಿತೆ.

ಕುಳಿತಿದ್ದುದು ದೀಪಾವಳಿಯವರೆಗೆ ಮಾತ್ರ. ಮನೆಯಲ್ಲಿದ್ದಾಗ ಓದುವ ಒಂದು ಅಭ್ಯಾಸವಿತ್ತು. ವಿರಾಮದಲ್ಲಿ ಕೆಲವೊಂದು ಪುಸ್ತಕಗಳನ್ನು ಓದಿದ್ದೆ. ಒಂದು ಪುಸ್ತಕ ಮಾತ್ರ ದೀಪಾವಳಿಯ ಮೊದಲು ಅರ್ಧ ಓದಿದ್ದು, ಅನಂತರ ಓದಲು ಸಾಧ್ಯವಾಗದೆ ಹೋಯಿತು.

ಮೇಳಕ್ಕೆ ಹೋಗುವುದಿಲ್ಲವಂತೆ ಎಂಬ ಸುದ್ದಿ ಹಬ್ಬಿತ್ತು. ಆದುದರಿಂದ ಕರೆಗಳು ಬರಲಾರಂಭಿಸಿದವು.

ಬಾಲಲೀಲೆಯ ಕೃಷ್ಣ, ಪಾರಿಜಾತದ ಕೃಷ್ಣ, ಚೂಡಾಮಣಿಯ ಹನುಮಂತ ಇತ್ಯಾದಿ ವೇಷಗಳ ಹೆಸರಿಗೆ, ಕೆಲವು ಕಡೆಗಳಿಂದ ಹೇಳಿಕೆಗಳು ಒಂದರ ಹಿಂದೊಂದು ಬರತೊಡಗಿದವು. ಯಾವ ಮೇಳದ ಕಟ್ಟುನಿಟ್ಟಿಗೂ ಸಿಗದೆ ವೇಷ ಹಾಕಬಹುದಿತ್ತಾದರೂ, ಕೆಲವೊಮ್ಮೆ ಆಪ್ತರೆನಿಸಿದವರು ಇಬ್ಬರು ಒಂದೇ ದಿನ ಕರೆದು ಇಕ್ಕಟ್ಟಿನಲ್ಲಿ ಸಿಲುಕಿಸಿದುದೂ ಇತ್ತು.

ಏಳೆಂಟು ಮೈಲುಗಳ ಅಂತರದಲ್ಲಾದರೆ ಒಂದೇ ದಿನ (ರಾತ್ರಿ) ಎರಡೆರಡು ಮೇಳಗಳ ಆಟಗಳಲ್ಲಿ ವೇಷ ಹಾಕಿದ ಘಟನೆಗಳೂ ನಡೆದುವು.

ಕೆಲವೆಡೆಗಳಲ್ಲಿ "ವಿಠಲ ಶಾಸ್ತ್ರಿಯವರ ವೇಷ ಮಾಡಿಸುತ್ತೀರಾ? ಹಾಗಿದ್ದರೆ ಮಾತ್ರ ವೀಳ್ಯ" ಎನ್ನುವ ಪರಿಸ್ಥಿತಿಯೂ ಬಂದಿತ್ತೆಂದು ಕೇಳಿದ್ದೆ.

ಇದರಿಂದಾಗಿ, ಬೇಸಿಗೆಯಿಡೀ ಸ್ವಲ್ಪವೂ ಬಿಡುವಿಲ್ಲದೆ ತಿರುಗಾಡಬೇಕಾಯಿತು.

WD
ಆರ್ಥಿಕ ದೃಷ್ಟಿಯಲ್ಲೂ ಅನುಕೂಲವಾಯಿತು. ಐದಾರು ಮೇಳಗಳು- ತೆಂಕುತಿಟ್ಟಿನ-ಕಲಾವಿದರು ಹೆಚ್ಚಿನವರ ಪರಿಚಯವಾಯಿತು. ಅವರಲ್ಲಿ ಹಲವರ ವೈಶಿಷ್ಟ್ಯಗಳನ್ನು ತಿಳಿದುಕೊಳ್ಳಲು ಅವಕಾಶವಾಯಿತು. ನನ್ನ ವೇಷಗಳಲ್ಲಿದ್ದ ನ್ಯೂನತೆಗಳನ್ನು ತಿದ್ದಿಕೊಳ್ಳಲು ಸಾಧ್ಯವಾಯಿತು.

ವರ್ಷಾಕಾಲದಲ್ಲೂ ನನ್ನ ಪರಿಭ್ರಮಣ ನಿಲ್ಲಲಿಲ್ಲ.

ಹಲವೆಡೆಗಳಿಂದ ತಾಳಮದ್ದಳೆಗಳಲ್ಲಿ ಭಾಗವಹಿಸಬೇಕೆಂದು ಒತ್ತಾಯದ ಆಮಂತ್ರಣಗಳು ಬರುತ್ತಿದ್ದವು. ಪ್ರಸಿದ್ಧರ ಯಾವುದೇ ಕೂಟಗಳನ್ನಾದರೂ ಬಿಡುವ ಮನಸ್ಸು ನನಗೂ ಇರಲಿಲ್ಲ.

ಶ್ರೀಮಾನ್ ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳು, ಶ್ರೀಮಾನ್ ಎನ್.ಎಸ್. ಕಿಲ್ಲೆಯವರು, ಶ್ರೀಮಾನ್ ಕೆ.ಪಿ. ವೆಂಕಪ್ಪ ಶೆಟ್ಟರೇ ಮೊದಲಾದ ಕಲಾವಿದರ ಕೂಡುವಿಕೆ ಎಂದಾದರೆ, ಇತರ ಯಾವ ಕಾರ್ಯಕ್ರಮವನ್ನಾದರೂ ಬದಿಗಿರಿಸಿ ಹೋಗುತ್ತಿದ್ದೆ.

ಹಣೆ- ಭಾರ
ಅವರಾದರೂ, ನನ್ನ ಒಟ್ಟಿಗೆ ತೋರಿದ್ದ ಆದರ ಇನ್ನೂ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.

ಅವರೆಡೆಯಲ್ಲಿ ನಾನು ಅಪ್ರಬುದ್ಧ. ಆದರೂ ಅವರು ನನ್ನನ್ನು ಸಮಾನಸ್ಕಂಧನಂತೆ ನಡೆಸಿಕೊಳ್ಳುತ್ತಿದ್ದರು. ವಿದ್ವತ್‌ಪೂರ್ಣ ವಿಮರ್ಶೆಯಿಂದ ನನ್ನ ಪಾತ್ರ ನಿರೂಪಣೆಗೆ ಸಾಣೆ ಹಿಡಿಯುತ್ತಿದ್ದರು. ಪುರಾಣ ಪಾತ್ರಗಳಲ್ಲಿರುವ ವೈಶಿಷ್ಟ್ಯಗಳನ್ನು ತೋರುತ್ತಿದ್ದರು. ಪುರಾಣಗಳಲ್ಲಿ ಇರುವ ಅನೇಕ ಕ್ಲಿಷ್ಟ ಸಮಸ್ಯೆಗಳನ್ನು ಪ್ರಶ್ನೆ ಹಾಕಿ- ಬಿಡಿಸುವುದರಲ್ಲಿ ನೆರವಾಗುತ್ತಿದ್ದರು.

ಅಂತೂ, ಮಳೆಗಾಲದಲ್ಲಿ ತಾಳಮದ್ದಳೆ ಕೂಟ, ಬೇಸಿಗೆಯಲ್ಲಿ ಆಟಗಳಿಗೆ ಓಡಾಟ - 1943-44 ಎರಡು ವರ್ಷಗಳನ್ನು 'ಮನೆ ಸೇರುವುದು ಅಪರೂಪ' ಎಂದು ಹೇಳಿಸಿಕೊಂಡೇ ಕಳೆದೆ.

ಅಪೂರ್ವವೆನಿಸಿ ಸಿಗುತ್ತಿದ್ದ ಬಿಡುವು. ಅದು ಮೈ-ಕೈಗಳಿಗೆ ಮಾತ್ರ. ಮನಸ್ಸಿಗಲ್ಲ.

ಯಕ್ಷಗಾನದ "ಹಣೆಬರಹ"ವೇ (ಕೆಲವು ವೇಷಧಾರಿಗಳು ಅದನ್ನೇ ಅನ್ವರ್ಥವಾಗಿ 'ಹಣೆಭಾರ'ವೆನ್ನುವುದೂ ಇದೆ) ನನ್ನ ತಲೆ ತಿನ್ನುತ್ತಿತ್ತು.

ಒಂದು ದಿನವಿಡೀ ಹಾಸಿಗೆಯ ಮೇಲೆ ನಿದ್ದೆಗಾಗಿ ಮಲಗಿದ್ದರೂ- ನಿದ್ರಿಸದೆ ಯೋಚನೆಯಲ್ಲೇ ಕಳೆದಿದ್ದೆ.

ಎರಡನೇ ವರ್ಷದ ಮೇಳದ ತಿರುಗಾಟದಲ್ಲೇ ನನಗಾದುದು ಮೇಳಗಳ ವಿಶ್ವರೂಪ ದರ್ಶನ. ನಿರಕ್ಷರಿಗಳೇ ಹೆಚ್ಚಾದ ಕಡೆ, ಇನ್ನೊಬ್ಬರ ಏಳಿಗೆಯನ್ನು ಅವರು ಸಹಿಸಿಕೊಳ್ಳುವುದಾದರೂ ಹೇಗೆ? ಒಣ ಪ್ರತಿಷ್ಠೆ, ಹೆಮ್ಮೆ, ಮತ್ಸರಗಳೇ ಅವರ ಬಂಡವಾಳದ ಮೂಲಧನ- ಕ್ಷೇಮನಿಧಿ ಎಲ್ಲಾ. ವಿಮರ್ಶಾದೃಷ್ಟಿಯ ಬಡ್ಡಿ ಅವರಲ್ಲಿ ಹುಟ್ಟಲಾರದು. ಯೋಗ್ಯತೆಯನ್ನು ಮೆಚ್ಚುವ ಸಹೋದ್ಯೋಗಿಗಳು ಪ್ರೀತಿಯ ಮಳೆಗರೆದರೂ, ಸ್ನೇಹಿತರಾಗುವ ಯಜಮಾನರು ಅಕ್ಕರೆಯಿಂದ ಕಂಡರೂ- ಮತ್ಸರದ ಬೆಂಕಿ ಹುಟ್ಟಿಕೊಂಡರೆ, ಅವೆಲ್ಲ ಹನಿಯುಡುಗಿ ಹೋಗುತ್ತದೆ.

ಎತ್ತಿನ ಗಾಡಿಗಳಲ್ಲಿ ಮೈ ಕುಲುಕಿಸಿಕೊಂಡು ನಿದ್ದೆಗಣ್ಣಿನ ಪ್ರಯಾಣ ಸಾಗಿಸಿದರೂ, ಉರಿಗಣ್ಣಿನಲ್ಲೇ ಹತ್ತಿಪ್ಪತ್ತು ಮೈಲಿ ಕಾಲ್ನಡಿಗೆಯ ಪ್ರಯಾಣ ಮಾಡಿದರೂ, ಅನಂತರವಾದರೂ ವಿರಾಮ ಸಿಗುವುದೆ? ಅಲ್ಲೂ ಆಯಾಸಕ್ಕೆ ದಾರಿ. ಕಲಾವಿದರ ಪಾತ್ರಗಳಲ್ಲಿ ಕೊರತೆಗಳು ಕಂಡು ಬಂದರೆ, ಅವುಗಳನ್ನು ಯಾರೂ ಹೇಳದಿದ್ದರೆ, ಅವುಗಳನ್ನು ಹಾಗೆಯೇ ಉಳಿಯಗೊಡಲಾಗುವುದೆ? ಹಾಗೇನಾದರೂ ಹೇಳಿದರೆ ಕಲಾವಿದರು ಎನಿಸಿದವರಿಗೆ ಅಸಮಾಧಾನವೇ ಹೆಚ್ಚಾಗುವುದಲ್ಲದೆ, ಬೇರೇನೂ ಆಗುವುದಿಲ್ಲವಲ್ಲ? ಹಳೆಯ ಹುಲಿಗಳ ಪಾಡು ಹಾಗೆ.

ಕಲೆಯ ಹುಚ್ಚಿನಲ್ಲಿ, ಕರೆದಲ್ಲಿಗೆ ಹೋಗುವ ನನ್ನ ಪಾಡೇ ಹೀಗಾದರೆ, ನನ್ನಷ್ಟೂ ಸ್ವಾತಂತ್ರ್ಯ ಸಿಗದ ಇತರರ ಸ್ಥಿತಿ ಯಾವುದಾಗಬಹುದು? ಆಸಕ್ತಿ ಇದ್ದರೂ, ಕಲಿತು ತಮ್ಮನ್ನು ತಾವೇ ಉತ್ತಮಪಡಿಸಿಕೊಳ್ಳುವ ಮನಸ್ಸು ಇದ್ದರೂ, ಅಂತಹ ಹೊಸಬರು ಯಾವ ದಾರಿ ಹಿಡಿಯಬೇಕಾಗಬಹುದು?

ಜೀವನಕ್ಕೆ ಸುಗಮ ಮಾರ್ಗವಾಗುವುದಿಲ್ಲ. ಆರ್ಥಿಕ ದೃಷ್ಟಿಯಲ್ಲಿ ತೃಪ್ತಿ ಕೊಡುವುದಿಲ್ಲ. ಆರೋಗ್ಯಕ್ಕೆ ಧಕ್ಕೆ ತರುತ್ತದೆ. ಆದರೂ, ಆಕರ್ಷಣೆಯ ಬಲೆಯನ್ನು ಎಲ್ಲ ಕಡೆಗಳಲ್ಲೂ ಬೀಸಿ, ನೋಡಿದವರನ್ನು, ಆಡಿದವರನ್ನು ಸೆರೆಹಿಡಿಯುವ ಶಕ್ತಿಯಾದರೂ ಈ ಯಕ್ಷಗಾನದಲ್ಲಿ ಯಾವುದಿದೆ?

ನನ್ನೊಬ್ಬನ ಮಟ್ಟಿಗೆ, ನಾನು ಬಯಸಿದ ಸ್ವಾತಂತ್ರ್ಯ ಸಿಕ್ಕಿತು. ಬೇಕಾದ ತಿದ್ದುಪಾಟುಗಳನ್ನು ಮಾಡಲಾಯಿತು. ಇತರರ ಗತಿಯೇನು? ಅವರೆಲ್ಲರಿಗೂ ಸ್ವಾತಂತ್ರ್ಯ ಸಿಗಬಹುದೆ? ಅಥವಾ, ಸರಿಯಾದ ರೀತಿಯಲ್ಲೇ ತಿದ್ದಿ ಸಾಗುವ ಸಾಮರ್ಥ್ಯವಿರಬಹುದೆ?

ನನಗೆ ಆದರ ಸಿಗುತ್ತಿರಬಹುದು; ಮನ್ನಣೆಯೂ ದೊರಕಬಹುದು. ಆದರೆ ಸಮಗ್ರ ಕಲೆಗೆ? ಇರುವ ಕಲಾವಿದರಿಗೆ?

ಯಕ್ಷಗಾನ ಅಷ್ಟೊಂದು ನಿಕೃಷ್ಟ ರಂಗವೆಂದಾದರೂ ಯಾಕಾಯಿತು? ಪರಿಸ್ಥಿತಿ ಬದಲಾಗಿಲ್ಲವೆ? ಒಬ್ಬಿಬ್ಬರಾದೂ ದಕ್ಷ ಆಡಳಿತಗಾರರು ವ್ಯವಸ್ಥಿತವಾಗಿ ಮೇಳಗಳನ್ನು ನಡೆಸಿಕೊಂಡು ಹೋಗುತ್ತಿಲ್ಲವೆ? ಕಲೆಯ ಅವಸ್ಥೆಗಳಲ್ಲಿ ಏರುಪೇರಾಗುವುದು ಸಹಜವಲ್ಲವೆ? ನಾಟ್ಯಾಚಾರ್ಯನೆ ಮಂಕಾಗಿ ಹೋಗಿದ್ದ ಸನ್ನಿವೇಶಗಳು ಎಷ್ಟೋ ಇಲ್ಲವೆ?

ಅಲ್ಲಿರುವ ಆಕರ್ಷಣೆಯನ್ನುಅನುಭವಿಸಿಯೇ ತೀರಬೇಕು ಹೊರತು, ಬಾಯಿಂದ ಹೇಳಿ ತಿಳಿಸಲು ಅಸಾಧ್ಯ.

ಹೌದು. ಯಕ್ಷಗಾನವೊಂದು ಮಹಾಸಾಗರ. ಕ್ರೂರಜೀವಿಗಳನ್ನು ಅದು ತನ್ನ ಗರ್ಭದಲ್ಲಿ ಅಡಗಿಸಿಕೊಂಡು ಇರುವ ಹಾಗೆಯೇ, ಸಾಧಕನಿಗೆ ಸಿಗಬಹುದಾದ ಅನರ್ಘ್ಯ ರತ್ನವನ್ನೂ ಇರಿಸಿಕೊಂಡಿದೆ. ಕಲಾಸೇವೆಯ ಪ್ರಬಲ ಆತ್ಮವಿಶ್ವಾಸದ ಕವಚವಿದ್ದರೆ, ಆ ರತ್ನವನ್ನು ಪಡೆಯುವುದೂ ಅಸದಳವಲ್ಲ. ಎದುರು ಬರುವ ಮುಳ್ಳು ಮೀನು- ಮರಿ ತಿಮಿಂಗಿಲಗಳಿಗೆ ಅಂಜಬೇಕಾಗಿಯೂ ಇಲ್ಲ.

ನಿರ್ಧಾರ
ಕೊನೆ ಮುಟ್ಟದ ಯೋಚನೆಯಲ್ಲೇ ಇರುವಾಗ ತನ್ನಿಂದ ತಾನೇ ಒಂದು ನಿರ್ಧಾರ ರೂಪುಗೊಂಡಿತ್ತು.

ಉತ್ಕೃಷ್ಟ ಕಲೆಯ ಪ್ರದರ್ಶನವನ್ನು ನಾನೇ ಸಾಧ್ಯವಾಗಿಸಬೇಕು. ನಾನೊಬ್ಬನೇ ಅಲ್ಲ, ತಂಡದ ಎಲ್ಲರೂ ಒಳ್ಳೆಯ 'ಮೇಳದವರಾಗಿ' ನಲಿಯಬೇಕು. ನನಗೆ ಬೇಕಾದಂತೆ ಅವರನ್ನು ತರಬೇತಿ ಮಾಡಲು ಸಾಧ್ಯವಾದರೆ, ನಾನು ಹೇಳಿದಂತೆ ಅವರನ್ನು ಕೇಳಿಸಬಲ್ಲೆನಾದರೆ ಅದೇಕೆ ಸಾಧ್ಯವಿಲ್ಲ?

ನಾನು ಹೇಳಿದಂತೆ ಅವರನ್ನು ಕೇಳಿಸಲು.....

ನಾನೇನು ಮೇಳದ ಯಜಮಾನನೆ?

ಹೌದು. ಮೇಳದ ಯಜಮಾನ ಯಾಕಾಗಬಾರದು? ಇರುವ ಮೇಳಗಳಲ್ಲಿ ಯಾವುದಾದರೂ ಒಂದರ ಯಾಜಮಾನ್ಯ ಸಿಗದು ಎಂದರೆ ಹೊಸದೊಂದು ಮೇಳವನ್ನು ಕಟ್ಟಿದರಾದರೂ ಆಗದೆ?

ಹುಚ್ಚು ಮನಸ್ಸು! ಮೇಳ ಕಟ್ಟುವುದೆಂದರೆ ಗೆಜ್ಜೆಯನ್ನು ಕಾಲಿಗೆ ಕಟ್ಟಿದಂತೇನು? ಅದು ಕೂಡಾ ಎಷ್ಟೋ ಬಾರಿ ಸುಲಭವಾಗಿರುವುದಿಲ್ಲ. ಸಾವಿರಾರು ರೂಪಾಯಿಗಳನ್ನು ಸುರಿದು ಮೇಳವನ್ನು ಹೊರಡಿಸುವ ಶಕ್ತಿ ನನಗಿದೆಯೆ?

ಯೋಚನೆಯ ಮತ್ತಿನಲ್ಲೇ ನಾಲ್ಕಾರು ದಿನಗಳು ಹೇಗೆ-ಹೇಗೋ ಕಳೆದುಹೋದವು.

ಅದೇ (ಎರಡನೆಯ) 'ಸ್ವಾತಂತ್ರ್ಯ'ದ ಮಳೆಗಾಲ. ಶ್ರೀ ಕೊರಗಪ್ಪ ಶೆಟ್ಟರು ಒಂದು ದಿನ ಇದ್ದಕ್ಕಿದ್ದಂತೆ ನಮ್ಮಲ್ಲಿಗೆ ಬಂದಿಳಿದರು.

ನನ್ನ ಯೋಚನೆಯ ಕುದುರೆಗೆ ಕಡಿವಾಣ ಹಾಕಿದರು. ಜೀನು- ಲಗಾಮುಗಳನ್ನು ಸಿದ್ಧಗೊಳಿಸಿಕೊಟ್ಟರು...

[ಮುಂದಿನ ವಾರಕ್ಕೆ]

ನಿರೂಪಣೆ: ಪದ್ಯಾಣ ಗೋಪಾಲಕೃಷ್ಣ ( ಪ.ಗೋ. 1928 -1997)

ವೆಬ್ದುನಿಯಾವನ್ನು ಓದಿ