ಅಂಬರೀಷ್-ಸುಮಲತಾ ದಂಪತಿಯ ಪುತ್ರ ಅಭಿಷೇಕ್ ಗೌಡ ಮಾಡೆಲ್ ಕಮ್ ಫೆಮಿನಾ ಮಿಸ್ ಇಂಡಿಯಾ ನಿಕೋಲೆ ಫರಿಯಾರನ್ನು ಪ್ರೀತಿಸುತ್ತಿದ್ದಾರೆ. ಇಬ್ಬರ ನಡುವಿನ ಸಂಬಂಧ ಗಾಢವಾಗಿದೆ ಎಂದು ಇಂದ್ರಜಿತ್ ಲಂಕೇಶ್ ಸಂಪಾದಕತ್ವದ 'ಲಂಕೇಶ್ ಪತ್ರಿಕೆ' ವರದಿ ಮಾಡಿತ್ತು.
ಇದಕ್ಕೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿದ ಅಂಬಿ ಅಭಿಮಾನಿಗಳು, ಮೈಸೂರು ರಸ್ತೆಯಲ್ಲಿನ ರಾಜರಾಜೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಪತ್ರಿಕಾ ಕಚೇರಿಗೆ ದಾಳಿ ನಡೆಸಿದರು. ಏಕಾಏಕಿ ನುಗ್ಗಿ ಅಲ್ಲಿದ್ದ ವಾಚ್‌ಮನ್ ಮತ್ತು ಸಹಾಯಕನ ಮೇಲೆ ಹಲ್ಲೆ ನಡೆಸಿದರು. ಕಚೇರಿಯಲ್ಲಿದ್ದ ಪೀಠೋಪಕರಣಗಳು, ಕಂಪ್ಯೂಟರುಗಳನ್ನು ಧ್ವಂಸ ಮಾಡಿದರು.
ದಾಳಿ ನಡೆದ ಸಂದರ್ಭದಲ್ಲಿ ಸಂಪಾದಕ ಇಂದ್ರಜಿತ್ ಕಚೇರಿಯಲ್ಲಿರಲಿಲ್ಲ. ಆದರೂ ಸುದ್ದಿ ತಿಳಿದ ಪೊಲೀಸರು ತಕ್ಷಣವೇ ಸ್ಥಳಕ್ಕಾಗಮಿಸಿದ್ದರಿಂದ, ಹೆಚ್ಚಿನ ಅನಾಹುತ ನಡೆದಿಲ್ಲ ಎಂದು ವರದಿಗಳು ಹೇಳಿವೆ.
ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ಅಭಿಷೇಕ್ ಗೌಡ ವಿರುದ್ಧ ಅವಹೇಳನಕಾರಿ ಲೇಖನವನ್ನು ಪತ್ರಿಕೆಯಲ್ಲಿ ಬರೆಯಲಾಗಿದೆ. ಅಂಬರೀಷ್ ವಿರುದ್ಧವೂ ಗುರುತರ ಆರೋಪ ಮಾಡಲಾಗಿದೆ. ಅವರನ್ನು ಜರೆಯಲಾಗಿದೆ. ಕೀಳು ಭಾಷೆಯಲ್ಲಿ ತಮ್ಮ ಆರಾಧ್ಯ ದೇವತೆಯನ್ನು ಹೀಗೆಳೆಯಲಾಗಿದೆ ಎಂದು ಅಭಿಮಾನಿಗಳು ಆರೋಪಿಸಿದ್ದಾರೆ.
ಇಷ್ಟಾದರೂ, ಪ್ರಕರಣದ ಬಗ್ಗೆ ಅಂಬರೀಷ್ ಅಥವಾ ಸುಮಲತಾ ಯಾವುದೇ ಹೇಳಿಕೆ ನೀಡಿಲ್ಲ.