ಬೆಂಗ್ಳೂರಿಗೂ ಬರ್ತಿದೆ ಡಬಲ್ ಡೆಕರ್ ಬಸ್ ರೆಸ್ಟಾರೆಂಟ್!

WD

ಅವಿನಾಶ್ ಬಿ.
ಉತ್ತರದ ಅಹಮದಾಬಾದ್, ಸೂರತ್ ಬಳಿಕ ಇದೀಗ ದಕ್ಷಿಣ ಭಾರತದಲ್ಲೇ ಮೊದಲ ಬಾರಿ ಡಬಲ್ ಡೆಕರ್, ಗಾಲಿಗಳ ಮೇಲಿನ ಸಂಚಾರಿ ರೆಸ್ಟೋರೆಂಟ್ ಚೆನ್ನೈಗೆ ಬಂದಿದ್ದು, ಕೆಲವೇ ತಿಂಗಳಲ್ಲಿ ಬೆಂಗಳೂರಿಗರನ್ನೂ ಹೈಜಾಕ್ ಮಾಡಲಿದೆ!

ಹೌದು, ಈ ಸಂಚಾರಿ ಡಬಲ್ ಡೆಕರ್ ಬಸ್ ಹೆಸರೇ 'ಹೈಜಾಕ್'. ನೀವು ಯಾರಿಗಾದರೂ ನಿಮ್ಮ ಬರ್ತ್‌ಡೇ ಪಾರ್ಟಿ ಕೊಡಿಸಬೇಕೆಂದಿದ್ದರೆ, ಮರೆತುಹೋದ ಬಾಕಿ ಪಾರ್ಟಿಗಳನ್ನೆಲ್ಲಾ ನೀಡಬೇಕೆಂದಿದ್ದರೆ, ಅವರೆಲ್ಲರನ್ನೂ ಒಂದು ಬಸ್ ಹತ್ತಿಸಿ, ಊರು ಸುತ್ತಲೆಂದು ಕರೆದುಕೊಂಡು ಹೋಗಿ ಹೊಟ್ಟೆಯನ್ನೂ ತುಂಬಿಸಿಬಿಡಬಹುದು! ಕಾರ್ಪೊರೇಟ್ ಕಂಪನಿಗಳೂ ಈ ಮಾದರಿಯ ಪಾರ್ಟಿಗಳನ್ನು ನೀಡಿ, ತಮ್ಮ ಉದ್ಯೋಗಿಗಳನ್ನು ತೃಪ್ತಿಪಡಿಸಬಹುದಾಗಿದೆ.

ಇದು ಹೇಗೆ ಕೆಲಸ ಮಾಡುತ್ತದೆ... ಮುಂದಿನ ಪುಟಕ್ಕೆ ಕ್ಲಿಕ್ ಮಾಡಿ.


WD
ಇದು ಹೇಗೆ ಕೆಲಸ ಮಾಡುತ್ತದೆ...
ಸದ್ಯಕ್ಕೆ ಅಹಮದಾಬಾದ್ ಮತ್ತು ವಜ್ರದ ನಗರಿ ಸೂರತ್‌ನಲ್ಲಿ ಇದು ಯಶಸ್ವಿಯಾಗಿ ಓಡಾಡುತ್ತಿದೆ. ಇದು ಮಾಮೂಲಿ ಹೋಟೆಲ್ ಇದ್ದಂತೆಯೇ. ಆದರೆ ಒಂದು ನಿಗದಿತ ಸ್ಥಳದಿಂದ ಇನ್ನೊಂದಕ್ಕೆ ಹೋಗಿ ಬರುತ್ತಿರುತ್ತದೆ. ಮಧ್ಯೆ ಮಧ್ಯೆ ನಿಗದಿತ ಮೆನು ಪ್ರಕಾರ ನಿಮಗೆ ಊಟೋಪಚಾರ ಸಾಗುತ್ತಿರುತ್ತದೆ. ಇದು ಅನ್‌ಲಿಮಿಟೆಡ್. ಪ್ಯೂರ್ ವೆಜಿಟೇರಿಯನ್ನು 9 ಬಗೆಯ ಖಾದ್ಯಗಳು. ನಾನು(ನ್) ವೆಜಿಟೇರಿಯನ್ನು ಅಂದ್ರಾ??!

ಇಲ್ಲಿ, ಸೂಪ್, ಸ್ಟಾರ್ಟರ್‌ಗಳು, ಸಲಾಡ್, ಮುಖ್ಯ ಖಾದ್ಯ, ಡೆಝರ್ಟ್ ಮತ್ತು ರೀಫ್ರೆಶ್‌ಮೆಂಟ್ - ಈ ವಿಭಾಗಗಳಡಿ 9 ಖಾದ್ಯಗಳು ನಿಮಗೆ ಲಭ್ಯ. ಆದರೆ ಐಷಾರಾಮಿ ಹೋಟೆಲುಗಳಲ್ಲಿರುವಂತೆ ಮದ್ಯ ಸರಬರಾಜು ಇಲ್ಲವೇ ಇಲ್ಲ. ಯಾಕೆಂದರೆ ಬಸ್ಸುಗಳಲ್ಲಿ ಕುಡಿಯುವುದು ಅಪರಾಧವಲ್ಲವೇ?

ಬಸ್‌ನೊಳಗಿರುವ ಮೆನು ಪ್ರತೀ 15 ದಿನಗಳಿಗೊಮ್ಮೆ ಬದಲಾಗುತ್ತಿರುತ್ತದೆ. ಯಾಕೆಂದರೆ ಒಮ್ಮೆ ಬಂದವರು ಮತ್ತೊಮ್ಮೆ ಬರಬೇಕಿದ್ದರೆ ಬದಲಾವಣೆ ಬಯಸುತ್ತಾರಲ್ಲವೇ? ಪ್ರತಿ ಸಂಜೆ ಎರಡು ಬಾರಿ (7 ಗಂಟೆ ಮತ್ತು 8.45ಕ್ಕೆ ) ಸುಮಾರು 25-30 ಕಿ.ಮೀ. ಪ್ರಯಾಣಿಸುವ ಈ ಬಸ್ಸು ಮರಳಿ ಬರುವ ಹೊತ್ತಿಗೆ ನಿಮ್ಮ ಊಟವೂ ಮುಗಿದಿರುತ್ತದೆ. ಹಾಗಿದ್ದರೆ, ಅಲುಗಾಟ-ಕುಲುಕಾಟ ಇದ್ದರೆ ನೀರೆಲ್ಲಾ ಚೆಲ್ಲಬಹುದೇ? ಅದಕ್ಕೂ ತಕ್ಕ ವ್ಯವಸ್ಥೆ ಇದೆ. ಇದು ಕೇವಲ ಗಂಟೆಗೆ 40 ಕಿ.ಮೀ. ವೇಗದಲ್ಲಿ ಚಲಿಸುತ್ತದೆ ಎಂಬುದು ಒಂದು ಸಂಗತಿಯಾದರೆ, ಹೊಂಡ-ಕುಳಿಗಳಿಲ್ಲದ, ರಸ್ತೆ ಉಬ್ಬುಗಳಿಲ್ಲದ ರಸ್ತೆಗಳನ್ನೇ ಈ ಪ್ರಯಾಣಕ್ಕೆ ಆರಿಸಿಕೊಳ್ಳಲಾಗುತ್ತದೆ. ನೈಸಾಗಿ ಇರುವ ನೈಸ್ ರಸ್ತೆ ನೆನಪಿಸಿಕೊಳ್ಳಿ!

ತಾರಸಿ ಹೇಗಿದೆ... ಮುಂದಿನ ಪುಟಕ್ಕೆ ಇಲ್ಲಿ ಕ್ಲಿಕ್ ಮಾಡಿ


WD
ಸೆಖೆ ಜಾಸ್ತಿ ಅನ್ನಿಸಿದವರಿಗೆ ವಾತಾನುಕೂಲ (ಎಸಿ) ವ್ಯವಸ್ಥೆಯು ಎರಡು ಮಹಡಿ ಬಸ್ಸಿನ ಕೆಳ ಮಹಡಿಯಲ್ಲಿರುತ್ತದೆ. ಬೇಡ, ಆರಾಮವಾಗಿ ಮನೆಯ ಛಾವಣಿ-ರಹಿತ ತಾರಸಿ ಮೇಲೆ, ಬೆಳದಿಂಗಳೂಟ ಮಾಡಿದಂತೆ ಡಿನ್ನರ್ ಸೇವಿಸುತ್ತಾ, ಜತೆ ಜತೆಗೇ ಊರಿನ ಸೌಂದರ್ಯವನ್ನೂ ಸವಿಯಬೇಕೆನಿಸಿದರೆ, ಬಸ್ಸಿನ ಮೇಲ್ಮಹಡಿಗೆ ಹೋಗಿ ಕುಳಿತರಾಯಿತು. ತಲೆಯ ಮೇಲೆ ಸೂರು ಇರುವುದಿಲ್ಲ. ಅಂದರೆ ಮೇಲಿನ ಮಹಡಿಯಲ್ಲಿ ಟಾಪ್ ಇರುವುದಿಲ್ಲ. ಜಗಮಗಿಸುವ ನಗರವನ್ನು ಮೇಲಿನಿಂದ ನೋಡುತ್ತಾ, ಬೆಳದಿಂಗಳೂಟದ ಸವಿಯನ್ನೊಮ್ಮೆ ಕಲ್ಪಿಸಿಕೊಳ್ಳಿ.

ಹಾಗಿದ್ದರೆ ಮಳೆ ಬಂದರೇನು ಮಾಡುತ್ತೀರಿ ಎಂದು ಕೇಳಿದಿರಾ? ಅದಕ್ಕೂ ವ್ಯವಸ್ಥೆಯಿದೆ. ಪ್ಯಾರಾಚೂಟ್‌ನಲ್ಲಿರುವಂಥದ್ದೇ ಗಟ್ಟಿಯಾದ ಬಟ್ಟೆಯಿದೆ. ಮಳೆ ಬಂದರೆ ಅದನ್ನು ಎಳೆದುಕೊಂಡರೆ ಆಯಿತು. ದಿಢೀರ್ ಛಾವಣಿ ಸಿದ್ಧ! ಹೆಚ್ಚಾಗಿ ಇದು ಸಾಯಂಕಾಲದ ನಂತರವೇ ಓಡಾಟ ನಡೆಸುವುದರಿಂದ, ಬಿಸಿಲಿನ ಭಯವಿಲ್ಲ. ಕೆಳಗಿನ ಡೆಕ್‌ನಲ್ಲಿ ಅದ್ಭುತವಾದ ವಿದ್ಯುದ್ದೀಪಾಲಂಕಾರವಿದ್ದು ಮೆತ್ತನೆಯ ಆಸನಗಳೊಂದಿಗೆ, ನೋಡಲು, ಕುಳಿತುಕೊಳ್ಳಲು ಯಾವುದೇ ಐಷಾರಾಮಿ ಹೋಟೆಲ್‌ಗಿಂತ ಭಿನ್ನವಾಗಿರುವುದಿಲ್ಲ. ಎರಡೂ ಡೆಕ್‌ಗಳಲ್ಲಿ ಲಘು ಸಂಗೀತ ಕೇಳಿಸುತ್ತಿರುತ್ತದೆ. ಇದು ಒಂದರಿಂದ ಒಂದೂವರೆ ಗಂಟೆ ಕಾಲದ ಡೈನಿಂಗ್ ಮತ್ತು ಎಂಟರ್‌ಟೈನಿಂಗ್ ಅನುಭವ! ಕೆಲವೊಮ್ಮೆ ನಿಮಗೆ ಅದೃಷ್ಟವಿದ್ದರೆ ಲೈವ್ ಸಂಗೀತವೂ ಇರಬಹುದಾಗಿದೆ.

ಆಹಾರ ಎಲ್ಲಿಂದ, ರೇಟೆಷ್ಟು? ಮುಂದಿನ ಪುಟಕ್ಕೆ ಕ್ಲಿಕ್ ಮಾಡಿ...


WD

ಆಹಾರ ಎಲ್ಲಿಂದ?
ಗುಜರಾತಿನ ಸೂರತ್ ಮತ್ತು ಅಹಮದಾಬಾದ್‌ಗಳಲ್ಲಿ 9 ತಿಂಗಳ ಹಿಂದೆ ಇಂತಹಾ ಒಂದು ಬಸ್ ಆರಂಭವಾಗಿ, ಪ್ರತಿದಿನ ಮೂರು ಟ್ರಿಪ್ ನಡೆಸುತ್ತಿದೆ. ಒಂದು ಟ್ರಿಪ್‌ನಲ್ಲಿ 42 ಮಂದಿ ಊಟ ಮಾಡಬಹುದಾಗಿದೆ. ಅಂದರೆ ಮೇಲೆ 21 ಮಂದಿ, ಕೆಳಗೆ 21 ಮಂದಿ. ಇದರಲ್ಲಿ ಸರಬರಾದು ಮಾಡುವ ಆಹಾರವನ್ನು ತಯಾರಿಸುವ ಅವರದೇ ಆದ ತಂಡವಿದೆ. ಸದ್ಯಕ್ಕೆ ಚೆನ್ನೈಯಲ್ಲಿ ಪ್ರಾರಂಭವಾಗಿರುವ ಈ ಬಸ್‌ನಲ್ಲಿ ಉತ್ತಮ ಗುಣಮಟ್ಟದ ಆಹಾರವನ್ನು ಹೊರಗಿನ ದೊಡ್ಡ ಹೋಟೆಲ್‌ನಿಂದ ಖರೀದಿಸಲಾಗುತ್ತದೆ. ಯಾಕೆಂದರೆ, ಚೆನ್ನೈ ಮಂದಿಯ ಬಾಯಿ ರುಚಿಯೇ ಬೇರೆ!

ಹಾಗಿದ್ದರೆ, ರೇಟೆಷ್ಟು?
ಇದು ಮೂಲಭೂತ ಪ್ರಶ್ನೆ. ಆವಾಗಿನಿಂದ ನಮ್ಮ ನಿಮ್ಮೆಲ್ಲರ ಮನಸ್ಸನ್ನು ಕಾಡುತ್ತಲೇ ಇದ್ದ ಪ್ರಶ್ನೆಯಲ್ಲವೇ. ಕೇಳಿ. ಚೆನ್ನೈಯಲ್ಲಿ ರೇಟು ಒಂದು ತಲೆಗೆ 565 ರೂಪಾಯಿ. ಜಾಸ್ತಿಯಾಯಿತೇ? ಇದನ್ನು ನಾವು ಆಯೋಜಕರಲ್ಲಿ ಕೇಳಿದಾಗ ಅವರಿಂದ ಬಂದ ಉತ್ತರ, ಐಷಾರಾಮಿ ಹೋಟೆಲ್ ದರ ಮತ್ತು ಪ್ರಯಾಣದ ಅನುಭವ ಎಂಬುದು ನಮ್ಮ ಹೆಚ್ಚುಗಾರಿಕೆ. ಮತ್ತು ಪ್ರದೇಶಕ್ಕೆ ತಕ್ಕಂತೆ ಚೆನ್ನೈಯಲ್ಲಿ ಆಹಾರ ವಸ್ತುಗಳು ಒಂದಿಷ್ಟು ಕಾಸ್ಟ್ಲೀ. ಹೀಗಾಗಿ ಈ ರೇಟು. ಆದರೆ ಅಹಮದಾಬಾದಿನಲ್ಲಿ ಊಟದ ಬೆಲೆ 365 ರೂಪಾಯಿ ಇದ್ದರೆ, ಸೂರತ್‌ನಲ್ಲಿ ಇದರ ಬೆಲೆ 475 ರೂಪಾಯಿ. ಬೆಂಗಳೂರಿನಲ್ಲಿ ಎಷ್ಟಿರಬಹುದು? ಕಾದು ನೋಡಿ!

ಬುಕ್ ಮಾಡೋದು ಹೇಗೆ? ಮುಂದಿನ ಪುಟಕ್ಕೆ ಇಲ್ಲಿ ಕ್ಲಿಕ್ ಮಾಡಿ...


WD

ಬುಕ್ ಮಾಡೋದು ಹೇಗೆ?
ಈ ಬಸ್‌ನವರೇ ಒಂದು ಮೊಬೈಲ್ ನಂಬರ್ ಕೊಟ್ಟಿರ್ತಾರೆ. ಅದಕ್ಕೆ ಕರೆ ಮಾಡಿಯೋ ಅಥವಾ ವೆಬ್‌ಸೈಟ್ (hijackk ಡಾಟ್ ಕಾಂ) ಮೂಲಕ ನೀವು ನಿಮ್ಮ ಸೀಟನ್ನು ಕಾಯ್ದಿರಿಸಬಹುದು.

ಇದನ್ನು ಮಾಡ್ತಿರೋದು ಯಾರು?
ಈ ವಿಶಿಷ್ಟ ಬಸ್ ರೆಸ್ಟಾರೆಂಟ್ ಯೋಜನೆಯ ಹಿಂದಿರುವುದು ಮಾಯಿಸ್ಟ್‌ಕ್ಲೇ ಎಂಟರ್‌ಟೇನ್ಮೆಂಟ್ ಮತ್ತು ಮೀಡಿಯಾ ಪ್ರೈ. ಲಿಮಿಟೆಡ್ ಮತ್ತು ಅದರ ಫ್ರಾಂಚೈಸೀ ಪಾಲುದಾರ 'ಮೂವಿಂಗ್ ಕಾರ್ಟ್'. ಈ ಮೂವಿಂಗ್ ಕಾರ್ಟ್‌ನ ಸಿಇಒ ಹಾರ್ದಿಕ್ ಷಾ. ಅವರ ಪತ್ನಿ ಅಮಿ ಷಾ. ಈಕೆ ಈಗಾಗಲೇ ಚೆನ್ನೈಯಲ್ಲಿ ಚೆನ್ನೈಯ ಟಿ.ನಗರದಲ್ಲಿ ಮಕ್ಕಳಿಗಾಗಿ ವಿಶಿಷ್ಟವಾದ ಆಟಿಕೆ ವಸ್ತುಗಳ ಲೈಬ್ರರಿ 'ದಿ ಟಾಯ್ ಫಾರೆಸ್ಟ್' ಆರಂಭಿಸಿ ಹೆಸರು ಮಾಡಿದವರು.

ಬೆಂಗಳೂರಿಗೆ ಯಾವಾಗ? ಮುಂದಿನ ಪುಟಕ್ಕೆ ಕ್ಲಿಕ್ ಮಾಡಿ...


WD

ಬೆಂಗಳೂರಿಗೆ ಯಾವಾಗ ಬರುತ್ತೀರಿ?
ಈ ಪ್ರಶ್ನೆಯನ್ನು ನಾವು ನೇರವಾಗಿ ಅಹಮದಾಬಾದ್ ಮೂಲದ 'ಮಾಯಿಸ್ಟ್‌ಕ್ಲೇ' ನಿರ್ದೇಶಕ ಅನಿರ್ವನ್ ದಾಮ್ ಬಳಿ ಕೇಳಿದಾಗ ಅವರು ಹೇಳಿದ್ದೆಂದರೆ, ದಕ್ಷಿಣ ಭಾರತದಲ್ಲಿ ಮೊದಲು ಬೆಂಗಳೂರಿಗೇ ಬರಬೇಕೆಂದಿದ್ದೆವು. ಆದರೆ, ಸಂಸ್ಥೆಯ ಸಿಇಒ ಹಾರ್ದಿಕ್ ಷಾ ಅವರ ಪತ್ನಿ ಮೂಲತಃ ಚೆನ್ನೈಯವರಾಗಿರುವುದರಿಂದ ಮತ್ತು ಅವರಿಗೆ ಚೆನ್ನೈ ಜನರ ಟೇಸ್ಟ್, ಇಲ್ಲಿನ ವಾತಾವರಣ ಎಲ್ಲದರ ಮಾಹಿತಿ ಇರುವುದರಿಂದ ಇಲ್ಲಿಂದಲೇ ಆರಂಭಿಸೋಣ ಎಂದುಕೊಂಡೆವು. ಇನ್ನು 3-4 ತಿಂಗಳಲ್ಲಿ ಬೆಂಗಳೂರಿನಲ್ಲಿ, ನಂತರ ಜನರ ಪ್ರತಿಕ್ರಿಯೆ ಹೇಗಿದೆ ಎಂಬುದನ್ನು ಅರಿತುಕೊಂಡ ಬಳಿಕ, ಹೈದರಾಬಾದ್ ಮತ್ತಿತರ ಕೇಂದ್ರಗಳಿಗೂ ವಿಸ್ತರಣೆ ಮಾಡ್ತೀವಿ ಎಂದಿದ್ದಾರವರು.

ಚೆನ್ನೈಯಲ್ಲಿ...
ಚೆನ್ನೈಯಲ್ಲಿ ಹೆಸರಾಗಿರುವ, ರಾತ್ರಿ ವೇಳೆ ಇನ್ನಷ್ಟು ಸುಂದರವಾಗಿ ಕಾಣಿಸುವ, ಸಮುದ್ರ ತೀರದಲ್ಲೇ ಹಾದು ಹೋಗುವ ಇಸಿಆರ್ (ಈಸ್ಟ್ ಕೋಸ್ಟ್ ರೋಡ್)ನಲ್ಲಿ ಈ ಬಸ್ಸು ಸಾಗುತ್ತದೆ. ಅದು ಈಗಿನ ವ್ಯವಸ್ಥೆ. ಅಂದರೆ ಬ್ಲೂ ಲಗೂನ್‌ನಿಂದ ಎಂಜಿಎರಾ ರೆಸಾರ್ಟ್‌ವರೆಗೆ ಮತ್ತು ಮರಳಿ ಹಿಂದಕ್ಕೆ ಹೋಗಿ ಬರುವುದು ಎರಡು ಟ್ರಿಪ್‌ಗಳಲ್ಲಿ. ಸಾಯಂಕಾಲ 7 ಗಂಟೆಗೆ ಮೊದಲನೇ ಟ್ರಿಪ್, 8.45ಕ್ಕೆ ಎರಡನೇ ಟ್ರಿಪ್ ಸಾಗುತ್ತದೆ.

ಹಾಗಿದ್ದರೆ ಬೆಂಗಳೂರಿಗರೂ ಈ ಬಸ್‌ನಿಂದ ಹೈಜಾಕ್ ಆಗಲು ಸಿದ್ಧರಾಗಿದ್ದೀರಾ? ಕಾಯುತ್ತಿರಿ.

ವೆಬ್ದುನಿಯಾವನ್ನು ಓದಿ