2017 ರಲ್ಲಿ ಟೀಂ ಇಂಡಿಯಾ ಸೋಲರಿಯದ ಅಶ್ವಮೇಧ!

ಶುಕ್ರವಾರ, 22 ಡಿಸೆಂಬರ್ 2017 (09:36 IST)
ಬೆಂಗಳೂರು: 2017 ಭಾರತೀಯ ಕ್ರಿಕೆಟ್ ಪಾಲಿಗೆ ಸುವರ್ಣ ಕಾಲ ಎಂದೇ ಹೇಳಬಹುದು. ವಿರಾಟ್ ಕೊಹ್ಲಿ ಈ ವರ್ಷದ ಆರಂಭದಲ್ಲಿ ಟೀಂ ಇಂಡಿಯಾದ ಸಂಪೂರ್ಣ ನೇತೃತ್ವ ವಹಿಸಿದರು.
 

ಧೋನಿ ಏಕದಿನ ಕ್ರಿಕೆಟ್ ನಾಯಕತ್ವಕ್ಕೆ ಈ ವರ್ಷದ ಆರಂಭದಲ್ಲಿಯೇ ರಾಜೀನಾಮೆ ನೀಡಿ ಅಭಿಮಾನಿಗಳಿಗೆ ಶಾಕ್ ನೀಡುವ ಮೂಲಕ ಟೀಂ ಇಂಡಿಯಾದ ವರ್ಷದ ಆರಂಭವಾಗಿತ್ತು. ಕೊಹ್ಲಿ ಮದುವೆ ಬಗ್ಗೆ ಸುಳ್ಳು ಸುದ್ದಿಯಿಂದ ಶುರುವಾದ ವರ್ಷ ಕೊನೆಗೆ ನಿಜವಾಗಿಯೂ ಮದುವೆಯಾಗುವುದರೊಂದಿಗೆ ವರ್ಷ ಮುಕ್ತಾಯ ಕಂಡಿದೆ.

ಭಾರತ-ಬಾಂಗ್ಲಾದೇಶ ಸರಣಿ: ಟೀಂ ಇಂಡಿಯಾಕ್ಕೆ ವರ್ಷಾರಂಭದಲ್ಲಿ ಮೊದಲು ಎದುರಾಗಿದ್ದು ಬಾಂಗ್ಲಾದೇಶ ಟೆಸ್ಟ್ ಸರಣಿ. ಭಾರತದಲ್ಲಿ ನಡೆದ ಎರಡು ಟೆಸ್ಟ್ ಪಂದ್ಯಗಳ ಈ ಸರಣಿಯನ್ನು ಭಾರತ ಕ್ಲೀನ್ ಸ್ವೀಪ್ ಮಾಡಿಕೊಂಡಿತ್ತು.

ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿ: ಈ ಸರಣಿಯನ್ನು ಯಾರು ತಾನೇ ಮರೆಯಲು ಸಾಧ್ಯ? ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯವನ್ನು ಭಾರತ ಸೋತರೂ ನಂತರ ಮೂರು ಟೆಸ್ಟ್ ಪಂದ್ಯಗಳ ಪೈಕಿ ಒಂದನ್ನು ಡ್ರಾ ಮಾಡಿಕೊಂಡು ಇನ್ನೆರಡನ್ನು ಗೆದ್ದು ಸರಣಿ ತನ್ನದಾಗಿಸಿಕೊಂಡಿತ್ತು. ಬೆಂಗಳೂರಿನಲ್ಲಿ ಎರಡನೇ ಟೆಸ್ಟ್ ಪಂದ್ಯದಲ್ಲಿ ಡಿಆರ್ ಎಸ್ ವಿವಾದ ಮೆತ್ತಿಕೊಂಡಿತ್ತು. ಸ್ಟೀವ್ ಸ್ಮಿತ್ ಮತ್ತು ಕೊಹ್ಲಿ ನಡುವೆ ಜಗಳವೇ ನಡೆದಿತ್ತು.

ಐಪಿಎಲ್ ಧಮಾಕಾ: ಇದಾದ ಬಳಿಕ ನಡೆದಿದ್ದು ಐಪಿಎಲ್. ಈ ಬಾರಿಯ ಐಪಿಎಲ್ ಫೈನಲ್ ಪುಣೆ ಮತ್ತು ಮುಂಬೈ ನಡುವೆ ನಡೆದಿತ್ತು. ಅಂತಿಮವಾಗಿ ಮುಂಬೈ ಚಾಂಪಿಯನ್ ಆಯಿತು.

ಚಾಂಪಿಯನ್ಸ್ ಟ್ರೋಫಿ: ಚಾಂಪಿಯನ್ಸ್ ಟ್ರೋಫಿ ನಡೆದಿದ್ದು ಇಂಗ್ಲೆಂಡ್ ನಲ್ಲಿ. ಭಾರತ ಮತ್ತು ಪಾಕಿಸ್ತಾನ ನಡುವೆ ಫೈನಲ್ ಪಂದ್ಯ ನಡೆದಿತ್ತು. ದಾಖಲೆಯ ವೀಕ್ಷಕರು ಈ ಪಂದ್ಯವನ್ನು ವೀಕ್ಷಿಸಿದ್ದರು. ಆದರೆ ಭಾರತ ಹೀನಾಯವಾಗಿ ಫೈನಲ್ ಸೋತಿತ್ತು.

ವೆಸ್ಟ್ ಇಂಡೀಸ್-ಭಾರತ ಸರಣಿ: ಚಾಂಪಿಯನ್ಸ್ ಟ್ರೋಫಿ ಬಳಿಕ ಕೆರೆಬಿಯನ್ ನಾಡಿಗೆ ಬಂದಿಳಿದ ಭಾರತ ಇಲ್ಲಿ ಟೆಸ್ಟ್, ಏಕದಿನ, ಟಿ20 ಆಡಿ ಎಲ್ಲದರಲ್ಲೂ ಸರಣಿ ಗೆಲುವು ಸಾಧಿಸಿತ್ತು.

ಭಾರತ-ಶ್ರೀಲಂಕಾ ಶಕೆ ಶುರು: ವಿಂಡೀಸ್ ದಿಗ್ವಿಜಯದ ಬಳಿಕ ಟೀಂ ಇಂಡಿಯಾ ನೇರವಾಗಿ ಶ್ರೀಲಂಕಾಗೆ ಬಂದಿಳಿದಿತ್ತು. ಇಲ್ಲಿಯೂ ಮೂರೂ ಮಾದರಿಯ ಕ್ರಿಕೆಟ್ ಆಡಿ ಎಲ್ಲವನ್ನೂ ಕ್ಲೀನ್ ಸ್ವೀಪ್ ಮಾಡಿತ್ತು.

ಭಾರತ-ಆಸ್ಟ್ರೇಲಿಯಾ ಏಕದಿನ ಸರಣಿ: ಏಕದಿನ ಸರಣಿ ಆಡಲು ಮತ್ತೊಮ್ಮೆ ಭಾರತಕ್ಕೆ ಬಂದಿಳಿದ ಸ್ಟೀವ್ ಸ್ಮಿತ್ ಪಡೆ ಭಾರತದ ವಿರುದ್ಧ ಮತ್ತೊಮ್ಮೆ ಮುಖಭಂಗ ಅನುಭವಿಸಿತು. ಏಕದಿನ ಸರಣಿಯನ್ನು 4-1 ಅಂತರದಿಂದ ಗೆದ್ದ ಭಾರತ ಟಿ20 ಸರಣಿಯಲ್ಲಿ ಸಮಬಲ ಸಾಧಿಸಿತು.

ಮತ್ತೊಮ್ಮೆ ಲಂಕಾ ಎದುರಾಳಿ: ಆಸ್ಟ್ರೇಲಿಯಾ ಸರಣಿ ಮುಗಿದ ಕೆಲವೇ ದಿನಗಳಲ್ಲಿ ಭಾರತ-ಶ್ರೀಲಂಕಾ ಸರಣಿ ಆರಂಭವಾಗಿತ್ತು. ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಗೆದ್ದ ಕೊಹ್ಲಿ ಪಡೆ ಏಕದಿನ ಸರಣಿಯನ್ನೂ ಗೆದ್ದಿದೆ. ಇನ್ನು ಟಿ20 ಪಂದ್ಯವನ್ನೂ ತನ್ನದಾಗಿಸಿಕೊಳ್ಳಲು ಹೊರಟಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ