ರಣಜಿ ಟ್ರೋಫಿ ಕ್ರಿಕೆಟ್: ಮತ್ತೆ ಸೆಮಿಫೈನಲ್ ಥ್ರಿಲ್ಲರ್ ಸೋತ ಕರ್ನಾಟಕ ಹುಡುಗರು

ಗುರುವಾರ, 21 ಡಿಸೆಂಬರ್ 2017 (10:33 IST)
ಕೋಲ್ಕೊತ್ತಾ: ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯವನ್ನು ದಿಡೀರ್ ಕುಸಿತದಿಂದಾಗಿ ಆತಂಕದ ಸುಳಿಗೆ ಸಿಲುಕಿದ್ದ ಕರ್ನಾಟಕ ರಣಜಿ ತಂಡ ಕೊನೆಗೂ ಕಳೆದ ವರ್ಷದ ಸೆಮಿಫೈನಲ್ ನಲ್ಲಿ ಮಾಡಿದಂತೆ ಸೋತು ನಿರಾಸೆ ಅನುಭವಿಸಿದೆ.
 

ವಿದರ್ಭ ತಂಡದ ಎದುರು ಕೇವಲ 5 ರನ್ ಗಳಿಂದ ಸೋತು ಆರು ಬಾರಿಯ ಚಾಂಪಿಯನ್ ಕರ್ನಾಟಕ ಇದೀಗ ಏಳನೇ ಬಾರಿಗೆ ರಣಜಿ ಸುಲ್ತಾನನಾಗುವ ಕನಸಿಗೆ ತಣ್ಣೀರು ಹಾಕಿಕೊಂಡಿದೆ. ಈ ಋತುವಿನಾದ್ಯಂತ ಅತ್ಯುತ್ತಮ ಪ್ರದರ್ಶನ ನೀಡಿದ್ದ ಕರ್ನಾಟಕ ಹುಡುಗರು ಸೆಮಿಫೈನಲ್ ನಲ್ಲಿ ಎಡವಿದರು. ವಿಶೇಷವೆಂದರೆ ವಿದರ್ಭಕ್ಕೆ ಇದು ಚೊಚ್ಚಲ ರಣಜಿ ಫೈನಲ್.

ಇದರಿಂದಾಗಿ ಗೆಲುವಿಗೆ 198 ರನ್ ಗಳ ಗುರಿ ಪಡೆದ ಕರ್ನಾಟಕ ಒಂದು ಹಂತದಲ್ಲಿ ಹೀನಾಯ ಸೋಲಿನ ಭೀತಿಗೆ ಸಿಲುಕಿತ್ತು. ಪ್ರಮುಖ ಬ್ಯಾಟ್ಸ್ ಮನ್ ಗಳು ಕನಿಷ್ಠ ಮೊತ್ತಕ್ಕೆ ಔಟಾಗಿ ಪೆವಿಲಿಯನ್ ಸೇರಿಕೊಂಡಿದ್ದರು. ಆದರೆ ಕೊನೆಯಲ್ಲಿ ನಾಯಕ 36 ರನ್ ಗಳಿಸಿ ತಂಡಕ್ಕೆ ಆಧಾರವಾದರು.

ಆದರೆ ಕೊನೆಯ ಕ್ರಮಾಂಕದಲ್ಲಿ ಬಂದ ಅಭಿಮನ್ಯು ಮಿಥುನ್ ಮತ್ತು ಶ್ರೇಯಸ್ ಗೋಪಾಲ್ ಅತ್ಯುತ್ತಮ ಬ್ಯಾಟಿಂಗ್ ಮಾಡಿ ಗೆಲುವಿನ ಆಸೆ ಚಿಗುರಿಸಿದರು. ಆದರೆ ಕೊನೆಯ ಕ್ಷಣದಲ್ಲಿ ಎಡವಿದ ಮಿಥುನ್ ರಾಜನೀಶ್ ಗುರ್ಬಾನಿ ಅವರ 6 ನೇ ಬಲಿಯಾದರು.  ಮಿಥುನ್ 26 ಎಸೆತಗಳಲ್ಲಿ 33 ರನ್ ಗಳಿಸಿ ಔಟಾದರು. ಆಗ ಕರ್ನಾಟಕಕ್ಕೆ ಗೆಲುವಿಗೆ 9 ರನ್ ಬೇಕಾಗಿತ್ತು. ವಿದರ್ಭಕ್ಕೆ ಚೊಚ್ಚಲ ರಣಜಿ ಫೈನಲ್ ಗೇರಲು 1 ವಿಕೆಟ್ ಸಾಕಿತ್ತು.

ಈ ಸಂದರ್ಭದಲ್ಲಿ ಶ್ರೀನಾಥ್ ಅರವಿಂದ್ ಗೆಲುವಿಗೆ 6 ರನ್ ಬೇಕಿದ್ದಾಗ ರಜನೀಶ್ ಗೆ 7 ನೆಯವರಾಗಿ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ವಿದರ್ಭ ಆಟಗಾರರ ಸಂಭ್ರಮ ಮುಗಿಲು ಮುಟ್ಟಿತು. ಕರ್ನಾಟಕ ಹುಡುಗರು ಕೈಗೆ ಬಂದ ತುತ್ತು ಬಾಯಿಗೆ ಬಾರದ ನಿರಾಸೆಯಲ್ಲಿ ಮುಳುಗಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ