ಅಂಚೆ ವೀರ ಸಾಂತಾ ಕ್ಲಾಸ್!

PTI
ಪ್ರತಿವರ್ಷವೂ 60 ಲಕ್ಷಕ್ಕೂ ಹೆಚ್ಚು ಖಾಸಗಿ ಅಂಚೆ ಪತ್ರಗಳನ್ನು ಪಡೆಯುವ ವ್ಯಕ್ತಿ ಯಾರು? ಕ್ರಿಸ್ಮಸ್ ಸಡಗರದ ದಿನಗಳ ನಡುವೆ ಈ ಪ್ರಶ್ನೆ ಕೇಳಿದ್ದರಿಂದಾಗಿ ಹೆಚ್ಚಿನವರಿಗೆ ಈ ಉತ್ತರ ಗೊತ್ತಿರಬಹುದು. ಬೇರಾರೂ ಅಲ್ಲ- ಸಾಂತಾ ಕ್ಲಾಸ್.

ಫಾದರ್ ಕ್ರಿಸ್ಮಸ್, ಸಂತ ನಿಕೊಲಸ್ ಮತ್ತು ರಷ್ಯಾದಲ್ಲಿ ಡೇಡ್ ಮೊರೋಜ್ ಎಂದು ಕರೆಸಿಕೊಳ್ಳುವ ಸಾಂತಾ ಕ್ಲಾಸ್ ಈ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ ಎನ್ನುತ್ತದೆ ವಿಶ್ವಸಂಸ್ಥೆಯ ಜಾಗತಿಕ ಅಂಚೆ ಒಕ್ಕೂಟ (ಯುಪಿಯು).

ಟು ಸಾಂತಾ, ನಾರ್ತ್ ಪೋಲ್ (ಸಾಂತಾನಿಗೆ, ಉತ್ತರ ಧ್ರುವ) ಎಂದಷ್ಟೇ ವಿಳಾಸವಿರುವ ಪತ್ರಗಳನ್ನು ಕಳುಹಿಸಲು ಮತ್ತು ಅದಕ್ಕೆ ದೊರೆಯವ ಉತ್ತರಗಳ ಬಟವಾಡೆಗಾಗಿಯೇ ಕನಿಷ್ಠ 20 ರಾಷ್ಟ್ರಗಳ ಅಂಚೆ ಇಲಾಖೆ ವಿಶೇಷ ಕಾರ್ಯಾಚರಣೆಯನ್ನೇ ಮಾಡಬೇಕಾಗುತ್ತಿದೆ. ಈ ಪತ್ರಗಳ ಧಾವಂತವು ಡಿಸೆಂಬರ್ ತಿಂಗಳಲ್ಲಂತೂ ಮೇರೆ ಮೀರುತ್ತದೆ.

ಕೆನಡಾ ಪೋಸ್ಟ್ ಇಂಥ ಪತ್ರಗಳಿಗೆ 26 ಭಾಷೆಗಳಲ್ಲಿ ಉತ್ತರಗಳನ್ನು ನೀಡುತ್ತಿದ್ದರೆ, ಜರ್ಮನಿಯ ಡಚ್ ಪೋಸ್ಟ್, 16 ಭಾಷೆಗಳಲ್ಲಿ ಉತ್ತರ ಸಂದೇಶಗಳನ್ನು ರವಾನಿಸುತ್ತದೆ. ಕೆಲವು ದೇಶಗಳಲ್ಲಂತೂ ಸಾಂತಾ ತನ್ನದೇ ಇ-ಮೇಲ್‌ಗಳಿಗೆ ಉತ್ತರಿಸುತ್ತಿರುತ್ತಾನೆ.

ಇತ್ತೀಚಿನ ವರ್ಷಗಳಲ್ಲಿ ಇ-ಮೇಲ್, ಎಸ್ಎಂಎಸ್ ಮತ್ತಿತರ ಎಲೆಕ್ಟ್ರಾನಿಕ್ ಸಂವಹನ ಸಾಧ್ಯತೆಗಳು ಅದ್ಭುತ ರೀತಿಯಲ್ಲಿ ಬೆಳವಣಿಗೆ ಸಾಧಿಸಿದ್ದರೂ ಈ ಅಂಚೆ ಪತ್ರಗಳ ಸಂಖ್ಯೆ ಏರುತ್ತಲೇ ಇದೆ ಎನ್ನುತ್ತಾರೆ ಯುಪಿಯು ಸದಸ್ಯರು.

ಕೆನಡ ಮತ್ತು ಫ್ರೆಂಚ್ ಅಂಚೆ ಇಲಾಖೆ ಅತ್ಯಂತ ಬ್ಯುಸಿಯಾಗಿರುವ ಬಟವಾಡೆದಾರರು. ಈ ದೇಶಗಳಲ್ಲಿ ಪ್ರತಿವರ್ಷ ಹತ್ತು ಲಕ್ಷ ಮಕ್ಕಳೇ ಈ ರೀತಿಯ ಪತ್ರಗಳನ್ನು ರವಾನಿಸುತ್ತಿರುತ್ತಾರೆ.

ಸಾಂತಾ ಕ್ಲಾಸ್ ಎಲ್ಲಿ ಇರುತ್ತಾನೆ ಎಂಬುದು ಖಚಿತವಾಗಿಲ್ಲ ಎನ್ನುತ್ತದೆ ಯುಪಿಯು ವರದಿ. ಕಳೆದ ವರ್ಷ ಕಳುಹಿಸಲಾದ ಒಟ್ಟು ಪತ್ರಗಳಲ್ಲಿ ಶೇ.90 ಭಾಗವೂ ಫಿನ್ಲೆಂಡ್‌ಗೆ ಕಳುಹಿಸಿರುವಂಥದ್ದು. ಆದರೆ, ಇತರ ದೇಶಗಳಿಂದ ಬಂದಿರುವ ಸಾವಿರಾರು ಪತ್ರಗಳನ್ನು ಫ್ರಾನ್ಸ್, ಜರ್ಮನಿ ಮತ್ತು ಸ್ಲೊವೇಕಿಯಾಕ್ಕೂ ರವಾನಿಸಲಾಗಿದೆ.

ವೆಬ್ದುನಿಯಾವನ್ನು ಓದಿ