ಈ ದೇವಸ್ಥಾನಕ್ಕೆ ಬಂದು ಗಂಟೆ ಕಟ್ಟಿದರೆ ಇಷ್ಟಾರ್ಥ ನೆರವೇರುತ್ತದೆ

Krishnaveni K

ಸೋಮವಾರ, 8 ಏಪ್ರಿಲ್ 2024 (15:34 IST)
ಬೆಂಗಳೂರು: ಧರ್ಮಸ್ಥಳ ಕ್ಷೇತ್ರ ಸಂದರ್ಶನಕ್ಕೆ ಬರುವವರು ಅದರ ಪಕ್ಕದಲ್ಲೇ ಇರುವ ಸೌತಡ್ಕ ಮಹಾಗಣಪತಿ ದೇವಾಲಯಕ್ಕೆ ಬರದೇ ಇರುವುದಿಲ್ಲ. ಈ ದೇವಾಲಯಕ್ಕೆ ಅದರದ್ದೇ ಆದ ವಿಶೇಷತೆಗಳಿವೆ.

ಸೌತಡ್ಕ ದೇವಾಲಯದ ಪ್ರಮುಖ ವಿಶೇಷತೆಯೆಂದರೆ ಬಯಲಿನಲ್ಲಿರುವ ಗಣೇಶನ ಮೂರ್ತಿ. ಸಾಮಾನ್ಯವಾಗಿ ದೇವಾಲಯವೆಂದರೆ ಗರ್ಭಗುಡಿಗೆ ವಿಶೇಷ ಕೊಠಡಿಯಿರುತ್ತದೆ. ಬಾಗಿಲುಗಳಿರುತ್ತವೆ. ದೇವಾಲಯದ ಬಾಗಿಲು ಎಲ್ಲಾ ಹೊತ್ತಿನಲ್ಲಿ ತೆರೆದಿರುವುದಿಲ್ಲ.

ಆದರೆ ಸೌತಡ್ಕ ದೇವಸ್ಥಾನ ಇದೆಲ್ಲದಕ್ಕೂ ವ್ಯತಿರಿಕ್ತ. ಇಲ್ಲಿ ದೇವರು ಬಯಲಿನಲ್ಲಿ ಎಲ್ಲರಿಗೂ ಕಾಣುವಂತಿರುತ್ತಾನೆ. ಗರ್ಭಗುಡಿಯೇ ಇಲ್ಲದ ಬಯಲಿನ ದೇವಸ್ಥಾನ. ಯಾರೇ ಬಂದರೂ ದೇವರ ಮೂರ್ತಿಯ ಪಕ್ಕ ಬಂದು ಪ್ರಾರ್ಥನೆ ಸಲ್ಲಿಸಬಹುದಾಗಿದೆ. ಇದು ಅಪರೂಪದ ದೇವಸ್ಥಾನಗಳಲ್ಲಿ ಒಂದು.

ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯದಿಂದ ಸುಮಾರು 20 ಕಿ.ಮೀ. ದೂರದಲ್ಲಿ ಈ ದೇವಸ್ಥಾನವಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕೊಕ್ಕಡದಿಂದ ಸುಮಾರ 2 ಕಿ.ಮೀ. ದೂರದಲ್ಲಿದೆ. ಈ ಜಾಗಕ್ಕೆ ಸೆಲೆಬ್ರಿಟಿಗಳೂ, ರಾಜಕಾರಣಿಗಳೂ ಆಗಾಗ್ಗೆ ಬಂದು ಪೂಜೆ ಸಲ್ಲಿಸುತ್ತಾರೆ. ಕೆಲವು ಸಮಯದ ಹಿಂದೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಮುನ್ನ ಕ್ರಿಕೆಟಿಗ ಕೆಎಲ್ ರಾಹುಲ್ ಇಲ್ಲಿಗೆ ಬಂದು ಪ್ರಾರ್ಥನೆ ಮಾಡಿಕೊಂಡು ಹೋಗಿದ್ದರು.

ಈ ದೇವಾಲಯದಲ್ಲಿ ಗಂಟೆ ಹರಕೆ ವಿಶೇಷ. ವಿದ್ಯೆ, ಹಣಕಾಸಿನ ಸಮಸ್ಯೆ, ಮಕ್ಕಳ ಭಾಗ್ಯ, ವಿವಾಹಾದಿ ಅಪೇಕ್ಷಗಳನ್ನಿಟ್ಟುಕೊಂಡು ಇಲ್ಲಿ ಹರಕೆ ಸೇವೆ ಮಾಡುತ್ತಾರೆ. ದೇವಾಲಯಕ್ಕೆ ಬಂದು ಗಂಟೆ ಕಟ್ಟುವುದಾಗಿ ಹರಕೆ ಹೇಳುತ್ತಾರೆ. ಹರಕೆ ಹೇಳಿ 6 ತಿಂಗಳೊಳಗಾಗಿ ನೆರವೇರುತ್ತದೆ ಎಂಬ ನಂಬಿಕೆಯಿದೆ. ಆ ರೀತಿ ಹರಕೆ ಪೂರ್ತಿಯಾದ ಮೇಲೆ ಇಲ್ಲಿಗೆ ಬಂದು ಗಂಟೆ ಕಟ್ಟಿ ಹೋಗುತ್ತಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ