ಇಸ್ಲಾಂ ಧರ್ಮದ ಐದು ಆಧಾರ ಸ್ತಂಭಗಳು

PTI
ಇಸ್ಲಾಂ ಧರ್ಮದ ಐದು ಪ್ರಮುಖ ಆಚಾರ ವಿಧಾನಗಳನ್ನು ಖುರಾನ್‌ ಬೋಧಿಸುತ್ತದೆ. ಓರ್ವ ಮುಸ್ಲಿಂ, ಈ ಐದು ಪ್ರಮುಖ ವಿಧಾನಗಳನ್ನು ಅನುಸರಿಸುವ ಮೂಲಕ ತನ್ನನ್ನು ತಾನು ಅಲ್ಲಾಹ್‌ಗೆ ಸಮರ್ಪಿಸಿಕೊಳ್ಳುತ್ತಾನೆ.

ಶಹದ್, ಸಲಾತ್, ಝಕತ್, ರಮದಾನ್(ಸವುಮ್) ಹಾಗೂ ಹಜ್ ಇವುಗಳು ಇಸ್ಲಾಂ ಧರ್ಮದ ಅನುಯಾಯಿಗಳು ಅನುಸರಿಸಬೇಕಿರುವ ಐದು ಅವಶ್ಯಕ ಅಂಶಗಳು.

ಶಹದ್ ಅಂದರೆ ಏಕದೇವರ ಪ್ರತಿಪಾದನೆ. ದೇವರು ಒಬ್ಬನೆ ಹಾಗೂ ಅವನೇ ಅಲ್ಲಾ ಮತ್ತು ಮುಹ್ಮದ್ ಅವರ ಪ್ರವಾದಿ ಎಂಬುದಾಗಿ ಇಸ್ಲಾಂ ಧರ್ಮ ಹೇಳುತ್ತದೆ.

ಸಲತ್ ಅಂದರೆ, ಪ್ರಾರ್ಥನೆಯ ದೈಹಿಕ ಕ್ರಿಯೆ. ದಿನಕ್ಕೆ ಐದು ಬಾರಿ ಮುಸ್ಲಿಮರು ಮೆಕ್ಕಾದತ್ತ ಮುಖಮಾಡಿ ಅಲ್ಲಾಹನಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ನಸುಕಿನಲ್ಲಿ, ಮಧ್ಯಾಹ್ನ, ಅಪರಾಹ್ನ, ಸೂರ್ಯಾಸ್ತ ಹಾಗೂ ಮುಸ್ಸಂಜೆಯ ವೇಳೆಗೆ ಇಸ್ಲಾಂ ಧರ್ಮದ ಅನುಯಾಯಿಗಳು ನಮಾಜ್ ಮೂಲಕ ಪ್ರಾರ್ಥನೆ ಸಲ್ಲಿಸುತ್ತಾರೆ.

ಝಕತ್ ಅಂದರೆ ದಾನ. ಮುಸ್ಲಿಂ ಧರ್ಮದ ಪ್ರಕಾರ ತಾವೇನು ಹೊಂದಿದ್ದೇವೆಯೋ ಅದರ ಶೇ. ಎರಡೂವರೆ ಭಾಗವನ್ನು ಉಳ್ಳವರು ಇಲ್ಲದವರಿಗೆ ದಾನ ಮಾಡಬೇಕು.

ಇಸ್ಲಾಂ ಕ್ಯಾಲೆಂಡರಿನ ರಮದಾನ್ ಪವಿತ್ರ ತಿಂಗಳಿನಲ್ಲಿ ಆರೋಗ್ಯವಂತ ಮುಸ್ಲಿಮರು ತಿಂಗಳು ಪೂರ್ಣ ನಸುಕಿನಿಂದ ಸೂರ್ಯಾಸ್ತದ ತನಕ ಉಪವಾಸ ಆಚರಿಸುವುದನ್ನು ಸವುಮ್ ಎಂದು ಕರೆಯಲಾಗುತ್ತದೆ. ಈ ವೇಳೆ ಊಟ, ತಿಂಡಿ, ಪಾನೀಯ, ಧೂಮಪಾನ ಹಾಗೂ ಲೈಂಗಿಕ ಚಟುವಟಿಕೆಗಳಿಂದ ದೂರ ಉಳಿಯಬೇಕು. ಸ್ವಯಂ ಶಿಸ್ತಿನ ಅಳವಡಿಕೆ ಹಾಗೂ ದೇವರ ಮೇಲಿನ ಅವಲಂಬನೆ ಹಾಗೂ ಹಸಿದವರ ಮೇಲಿನ ಅನುಕಂಪಕ ಪವಿತ್ರ ತಿಂಗಳಿನ ಉಪವಾಸದ ಮೂಲಮರ್ಮ ಎಂಬುದಾಗಿ ಧರ್ಮ ಹೇಳುತ್ತದೆ.

ಇಸ್ಲಾಂ ಧರ್ಮದ ಐದು ಪವಿತ್ರ ಆಚರಣೆಗಳಲ್ಲಿ ಹಜ್ ಯಾತ್ರೆ ಐದನೆಯ ಆಧಾರ ಸ್ತಂಭವಾಗಿದೆ. ಮುಸ್ಲಿಮರು ಜೀವಮಾನದಲ್ಲಿ ಒಮ್ಮೆಯಾದರೂ ಇಸ್ಲಾಂ ಕ್ಯಾಲೆಂಡರಿನ 12ನೆ ತಿಂಗಳಲ್ಲಿ ಮೆಕ್ಕಾ ಪ್ರವಾಸ ಮಾಡುವುದು ಶ್ರೇಷ್ಠವಾಗಿದ್ದು ಇದು ಶರಣಾಗತಿಯ ಅಂತಿಮ ಕ್ರಿಯೆ ಎಂದು ಧರ್ಮ ಹೇಳುತ್ತದೆ. ಹಜ್ ಯಾತ್ರೆಯು ವಿಶ್ವಾದ್ಯಂತದ ಅನೇಕ ರಾಷ್ಟ್ರಗಳ ಮುಸ್ಲಿಮರನ್ನು ಒಟ್ಟು ಸೇರಿಸುತ್ತದೆ. ಎಲ್ಲ ಪಂಥಗಳಿಗೂ ಅತೀತವಾದ ಸ್ವಾಮಿಭಕ್ತಿಯ ಪ್ರದರ್ಶನ ಹಜ್‌ ಯಾತ್ರೆಯಲ್ಲಾಗುತ್ತದೆ.

ವೆಬ್ದುನಿಯಾವನ್ನು ಓದಿ