ಮುಸ್ಲಿಮರ ಪವಿತ್ರ ಹಜ್ ಯಾತ್ರೆ

PTI
ಮುಸ್ಲಿಮರ ಪವಿತ್ರ ಸ್ಥಳ ಮೆಕ್ಕಾದಲ್ಲಿ ಐದು ದಿನಗಳ ಕಾಲ ನಡೆಯುವ ಹಜ್ ಯಾತ್ರೆಯು ಮೂರನೇ ದಿನವನ್ನು ಮುಟ್ಟಿದೆ. ಮೆಕ್ಕಾದ ಮೀನಾದಲ್ಲಿ ವಾರ್ಷಿಕ ಹಜ್ ಯಾತ್ರೆ ಸಲುವಾಗಿ ಸುಮಾರು 150 ರಾಷ್ಟ್ರಗಳಿಗೆ ಸೇರಿದ ಲಕ್ಷಾಂತರ ಜನರು ಸೇರಿದ್ದರು. ಜೀವಮಾನದಲ್ಲಿ ಒಮ್ಮೆಯಾದರೂ ಮೆಕ್ಕಾ ಯಾತ್ರೆಗೆ ಹೋಗುವುದು ಮುಸ್ಲಿಮರ ಹೆಬ್ಬಯಕೆ. ಹಜ್ ಯಾತ್ರೆಯಲ್ಲಿ ಪ್ರಮುಖಭಾಗವಾದ ಮೀನಾದಿಂದ ಅರಾಫತ್‌ಗೆ ಯಾತ್ರಿಗಳು ಪ್ರವೇಶ ಮಾಡಿದರು.

ಅಹರಾಮ್ ಎಂದು ಕರೆಯುವ ಎರಡು ತುಂಡು ಬಟ್ಟೆಗಳನ್ನು ತೊಟ್ಟ ಯಾತ್ರಿಗಳು ಪ್ರವಾದಿ ಮೊಹಮದ್ ಹಿಂದೊಮ್ಮೆ ಪ್ರಾರ್ಥನೆ ಮಾಡಿದ ಸ್ಥಳವಾದ ಮಸ್ಜೀದ್-ಎ-ನಮೀರಾದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಅರಾಫತ್‌ನಲ್ಲಿ ಮುಸ್ಲಿಮರು ತಮ್ಮದೇ ಭಾಷೆಯಲ್ಲಿ ತಮ್ಮ ಪಾಪಗಳಿಗೆ ಕ್ಷಮೆ ಕೋರಿ ಹೃದಯಪೂರ್ವಕವಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ.

ಈ ಬಾರಿ ಹಜ್ ಯಾತ್ರೆಗೆ ಭೇಟಿ ಕೊಟ್ಟ ಪ್ರಮುಖರಲ್ಲಿ ಇರಾನಿನ ಅಧ್ಯಕ್ಷ ಮೊಹಮದ್ ಅಹ್ಮದಿ ನೆಜಾದ್ ಕೂಡ ಸೇರಿದ್ದಾರೆ. ಆದಾಗ್ಯೂ, ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಒಂದುಗೂಡುವಂತೆ ಕರೆ ನೀಡಲು ನೂರಾರು ಮುಸ್ಲಿಮರು ಸೇರಿದ್ದ ಸಂಕ್ಷಿಪ್ತ ರಾಲಿಯಲ್ಲಿ ಅವರು ಭಾಗವಹಿಸಲಿಲ್ಲ. ಸುಮಾರು 3 ದಶಲಕ್ಷ ಮುಸ್ಲಿಮರು ವಿಶ್ವಾದ್ಯಂತ ಈ ವರ್ಷದ ಹಜ್ ಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ.

ಮುಸ್ಲಿಮರು ಹೃದಯಪೂರ್ವಕ ಪ್ರಾರ್ಥನೆ ಸಲ್ಲಿಸಲು ಮೆಕ್ಕಾಗೆ ಪ್ರಯಾಣಿಸುವ ಹಜ್ ಯಾತ್ರೆ ಜಗತ್ತಿನಲ್ಲಿ ಪ್ರತಿವರ್ಷ ನಡೆಯುವ ಮಹಾನ್ ಯಾತ್ರೆ. ಪ್ರತಿಯೊಬ್ಬ ಸಂಪ್ರದಾಯವಾದಿ ಮುಸ್ಲಿಮರು ಹಜ್ ಯಾತ್ರೆಯನ್ನು ಜೀವಮಾನದಲ್ಲಿ ಒಮ್ಮೆಯಾದರೂ ಕೈಗೊಳ್ಳಬೇಕಾದ ಕರ್ತವ್ಯವಾಗಿದೆ. ಮುಸ್ಲಿಂ ಜನರ ಒಗ್ಗಟ್ಟಿನ ಸಂಕೇತ ಮತ್ತು ಅಲ್ಲಾಗೆ ಅವರ ಅರ್ಪಣೆ ಹಜ್ ಯಾತ್ರೆಯಾಗಿದೆ. 2007ರ ಹಜ್ ಯಾತ್ರೆಯು ಡಿಸೆಂಬರ್ 17ರಿಂದ ಪ್ರಾರಂಭವಾಗಿ 21ರವರೆಗೆ ನೆರವೇರುತ್ತದೆ.

ಹಜ್ ಆಚರಣೆ

ಹಜ್ ಯಾತ್ರೆಯು ಪ್ರವಾದಿ ಮೊಹಮ್ಮದರ ಜೀವನಕ್ಕೆ ಸಂಬಂಧಿಸಿದೆ. ಆದರೆ ಮೆಕ್ಕಾ ಯಾತ್ರೆಯ ಆಚರಣೆ ಕ್ರೈಸ್ತಪೂರ್ವ 2000ರ ಅಬ್ರಹಾಂ ಕಾಲದಲ್ಲಿತ್ತೆಂದು ಅನೇಕ ಮುಸ್ಲಿಮರ ನಂಬಿಕೆ. ಈ ಯಾತ್ರೆಗಾಗಿ ಮೆಕ್ಕಾದಲ್ಲಿ ಸೇರುವ ಸಾವಿರಾರು ಮುಸ್ಲಿಮರು ಅನೇಕ ತರದ ಆಚರಣೆಗಳಲ್ಲಿ ಪಾಲ್ಗೊಳ್ಳುವರು.

ಪ್ರತಿಯೊಬ್ಬ ಯಾತ್ರಿಯು ಗಡಿಯಾರದ ವಿರುದ್ಧ ದಿಕ್ಕಿನಲ್ಲಿ ಕಾಬಾದ ಸುತ್ತಬರುತ್ತಾರೆ. ಮೂಲೆಯಲ್ಲಿರುವ ಕಪ್ಪು ಕಲ್ಲಿಗೆ ಮುತ್ತಿಕ್ಕಿ ಅಲ್ ಸಾಫಾ ಮತ್ತು ಅಲ್ ಮಾರ್ವಾ ಬೆಟ್ಟಗಳ ನಡುವೆ ಹಿಂದಕ್ಕೆ, ಮುಂದಕ್ಕೆ ಚಲಿಸುವರು. ಝಾಮ್‌ಜಾಮ್ ಕೊಳದ ಪವಿತ್ರ ನೀರನ್ನು ಕುಡಿದು ಮೌಂಟ್ ಅರಾಫತ್‌ಗೆ ತೆರಳಿ ಪ್ರಾರ್ಥನೆ ಸಲ್ಲಿಸುತ್ತಾರೆ. ಬಳಿಕ ಮುಜ್ಡಾಲಿಫಾಗೆ ಕಲ್ಲುಗಳನ್ನು ಸಂಗ್ರಹಿಸಲು ತೆರಳುತ್ತಾರೆ.

ಸೈತಾನನಿಗೆ ಕಲ್ಲುವ ತೂರುವ ಆಚರಣೆಯಲ್ಲಿ ಮಿನಾದ ಬೆಟ್ಟದಲ್ಲಿರುವ ಕಲ್ಲಿನ ಬಂಡೆಗೆ ಕಲ್ಲುಗಳನ್ನು ತೂರುವರು. ಬಳಿಕ ಯಾತ್ರಿಗಳು ಕೇಶಮುಂಡನ ಮಾಡಿ, ಪ್ರಾಣಿ ಬಲಿ ನೀಡಿ ಈದ್ ಉಲ್ ಅದಾ ಹಬ್ಬವನ್ನು ಆಚರಿಸುವರು. 2007ರಲ್ಲಿ ಸುಮಾರು 20 ಲಕ್ಷ ಯಾತ್ರಿಗಳು ಮೆಕ್ಕಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ