ಜೈನ ಧರ್ಮದ ಕೊಡುಗೆಗಳು

ಜೈನ ಧರ್ಮವು ಒತ್ತುಕೊಟ್ಟು ಬೋಧಿಸಿದ ಅಹಿಂಸಾ ತತ್ವವು ಭಾರತೀಯ ಸಂಸ್ಕ್ಕತಿಯ ಮೂಲಭೂತ ಸಿದ್ದಾಂತವಾಗಿ ಇಂದಿಗೂ ಉಳಿದುಕೊಂಡಿದೆ. ಅಹಿಂಸೆ ಎಂಬ ಸಿದ್ದಾಂತದಿಂದಾಗಿ ಯಜ್ಞಯಾಗಾದಿಗಳಲ್ಲಿ ನಡೆಯುತ್ತಿದ್ದ ಪ್ರಾಣಿ ಬಲಿ ನಿಂತಿತು.

ಜಾತಿ ವ್ಯವಸ್ಥೆಯನ್ನು ವಿರೋಧಿಸಿದ್ದರಿಂದಾಗಿ ವಿವಿಧ ಕೆಳವರ್ಗದ ಜನರು ಜೈನ ಧರ್ಮದಲ್ಲಿ ಸಮಾನತೆ ಕಂಡುಕೊಂಡರು. ಇದರಿಂದಾಗಿ ವೈದಿಕ ಧರ್ಮದಲ್ಲೂ ಸುಧಾರಣಾ ಪ್ರಕ್ರಿಯೆಗಳುಂಟಾಗಿ ಹಿಂದೂ ಧರ್ಮವು ಶುದ್ದಿಗೊಂಡಿತು. ಈ ಧರ್ಮದ ತತ್ವವಾದ ಸಂಪತ್ತನ್ನು ಸಂಗ್ರಹಿಸಬಾರದೆಂಬ ಅಂಶವು ಜನರಲ್ಲಿ ಮಾನವ ಜನಾಂಗಕ್ಕೆ ಕಲ್ಯಾಣಕಾರಕವಾದ ಕಾರ್ಯಗಳಿಗೆ ದಾನ ಮಾಡಬೇಕೆಂಬ ಮನೋಭಾವನೆಯನ್ನು ಬೆಳೆಸಿತು.

ವಾಸ್ತುಶಿಲ್ಪ, ಶಿಲ್ಪಕಲೆ ಮತ್ತು ಚಿತ್ರಕಲೆಗಳಲ್ಲಿ ಜೈನ ಧರ್ಮದ ಕೊಡುಗೆಯನ್ನು ನೋಡಬಹುದು. ಜೈನ ಭಿಕ್ಷುಗಳಿಗಾಗಿ ನಿರ್ಮಿಸಿದ ಅನೇಕ ಭಿಕ್ಷುಗೃಹಗಳು ದೇಶದ ಅನೇಕ ಭಾಗಗಳಲ್ಲಿ ಇನ್ನೂ ಉಳಿದಿವೆ. ಜೈನ ದೇವಾಲಯಗಳನ್ನು ವಸತಿ ಅಥವಾ ಬಸದಿ ಎಂದು ಕರೆಯುತ್ತಾರೆ.

ಬಸದಿಗಳು ಕರ್ನಾಟಕದಲ್ಲಿ ಹೇರಳವಾಗಿ ಕಂಡು ಬರುತ್ತವೆ. ಈ ಬಸದಿಗಳಲ್ಲಿ ವಾಸ್ತು ಶಿಲ್ಪಗಳು ಊರ್ಜಿತವಾದವು. ಇಂಥ ವಿಗ್ರಹಗಳಲ್ಲಿ ಜಗದ್ವಿಖ್ಯಾತವಾದ ಶ್ರವಣಬೆಳಗೊಳದ ಬಾಹುಬಲಿಯ 58 ಅಡಿ ಎತ್ತರದ ಶಿಲಾ ವಿಗ್ರಹವೂ ಒಂದು. ಇದನ್ನು ಗಂಗರಾಜರ ಮಂತ್ರಿಯಾಗಿದ್ದ ಚಾವುಂಡರಾಯನು ಕೆತ್ತಿಸಿದನು.

ಉದಯಗಿರಿಯ ಹುಲಿಗುಹೆ, ಎಲ್ಲೌರಾದ ಇಂದ್ರಸಭೆ ಗುಹೆ, ಪುಲಿತಾನ, ಮೌಂಟ್ ಅಬು ಪರ್ವತ, ಬುಂದೇಲ್ ಬಂಡದ ಖಜುರಾಹೊ, ಚಿತ್ತೂರಿನ ಬಳಿಯಿರುವ ಆದಿನಾಥ ದೇಗುಲ, ಒರಿಸ್ಸಾದ ಹಾಧಿಕುಂಫಾ ಗುಹಾಂತರ ದೇವಾಲಯ ಮುಂತಾದ ಕಡೆ ಜೈನರ ವಾಸ್ತುಶಿಲ್ಪದ ಅಮೋಘ ಕಾಣಿಕೆಗಳನ್ನುಕಾಣಬಹುದು.

ವೆಬ್ದುನಿಯಾವನ್ನು ಓದಿ