ಬೆಂಗಳೂರು: ನಮ್ಮ ದೈನಂದಿನ ಬದುಕಿನಲ್ಲಿ ನಾವು ಅನೇಕ ತಪ್ಪುಗಳನ್ನು ನಮಗೆ ಅರಿವಿದ್ದೋ ಅರಿವಿಲ್ಲದೆಯೋ ಮಾಡುತ್ತೇವೆ. ಕೆಲವೊಂದು ಪಾಪ ಕೃತ್ಯಗಳು ನಮ್ಮಿಂದ ನಡೆದುಹೋಗಬಹುದು. ಇಂತಹ ಸಂದರ್ಭದಲ್ಲಿ ನಮ್ಮ ಪಾಪ ಕಳೆಯಲು ಯಾವ ಸ್ತೋತ್ರ ಪಠಿಸಬೇಕು ನೋಡೋಣ.
ಮನುಷ್ಯ ತನ್ನ ಜೀವಿತಾವಧಿಯಲ್ಲಿ ಮಾಡುವ ತಪ್ಪುಗಳಿಗೆ ಆಯಾ ಸಂದರ್ಭದಲ್ಲಿಯೇ ಆದಷ್ಟು ಪರಿಹಾರ ಮಾಡಿಕೊಂಡಲ್ಲಿ ಮೋಕ್ಷ ಸಿಗಬಹುದು. ಇಲ್ಲದೇ ಹೋದರೆ ಆ ಪಾಪ ಕರ್ಮಗಳು ನಮ್ಮನ್ನೇ ಸುಡಬಹುದು. ಹೀಗಾಗಿ ನಮ್ಮ ತಪ್ಪು-ಒಪ್ಪುಗಳನ್ನು ಸರಿಪಡಿಸಿ ಸರಿದಾರಿಯಲ್ಲಿ ನಡೆಸಲು ದೇವರಿಗೆ ಮೊರೆ ಇಡಬೇಕು.
ಇದಕ್ಕೆ ಪ್ರತಿನಿತ್ಯ ಶಂಕರಾಚಾರ್ಯ ವಿರಚಿತ ದೇವಿ ಕ್ಷಮಾಪಣಾ ಸ್ತೋತ್ರವನ್ನು ಪ್ರತಿನಿತ್ಯ ಪಠಿಸುತ್ತಿರಿ. ನ ಮಂತ್ರ ನೋ ಯಂತ್ರಂ ಎಂದು ಪ್ರಾರಂಭವಾಗುವ ಈ ಸ್ತೋತ್ರದಲ್ಲಿ ನಮ್ಮ ತಪ್ಪುಗಳನ್ನು ಮನ್ನಿಸಿ ಸರಿದಾರಿಯಲ್ಲಿ ನಡೆಸು ತಾಯಿ ಎಂದು ಕೇಳಿಕೊಳ‍್ಳಲಾಗುತ್ತದೆ. ಶಂಕರಾಚಾರ್ಯ ವಿರಚಿತ ಈ ಸ್ತೋತ್ರ ದುರ್ಗಾದೇವಿಗೆ ಸಂಬಂಧಿಸಿದ್ದಾಗಿದೆ.
ಈ ಸ್ತೋತ್ರವನ್ನು ಪಠಿಸುವಾಗ ಒಂದು ನೆನಪಿನಲ್ಲಿರಲಿ. ಯಾವುದೇ ಅಕ್ಷರವೂ ತಪ್ಪಾಗದಂತೆ ಸ್ಪಷ್ಟವಾಗಿ ಉಚ್ಚರಿಸಬೇಕು. ದೇವಿ ಎಂದರೆ ಅಮ್ಮನ ಸಮಾನ. ನಮ್ಮ ಅಮ್ಮ ಹೇಗೆ ನಮ್ಮೆಲ್ಲಾ ತಪ್ಪುಗಳನ್ನು ಮನ್ನಿಸಿ ನಮ್ಮನ್ನು ಸರಿದಾರಿಯಲ್ಲಿ ನಡೆಸುತ್ತಾಳೋ ಅದೇ ರೀತಿ ದೇವಿಯೂ ಅಮ್ಮನಂತೆ ನಮ್ಮ ತಪ್ಪುಗಳನ್ನು ಕ್ಷಮಿಸಿ ಮುಂದೆ ಪ್ರಮಾದಗಳಾಗದಂತೆ ನಮ್ಮನ್ನು ಕಾಪಾಡಲಿ ಎಂದು ಬೇಡಿಕೊಳ್ಳುವ ಸ್ತೋತ್ರ ಇದಾಗಿದೆ.