ಹುಡುಗ-ಹುಡುಗಿ ಒಂದೇ ನಕ್ಷತ್ರದವರಾದರೆ ಮದುವೆ ಆಗಬಹುದಾ. ಈ ಗೊಂದಲಕ್ಕೆ ಇಲ್ಲಿದೆ ಉತ್ತರ

ಗುರುವಾರ, 19 ಜುಲೈ 2018 (13:35 IST)
ಬೆಂಗಳೂರು : ಹಿಂದೂ ಸಂಪ್ರದಾಯದಲ್ಲಿ ಮದುವೆಗೆ ಶುಭ ಮುಹೂರ್ತ ನೋಡುವುದರ ಜೊತೆಗೆ ಹುಡುಗ-ಹುಡುಗಿಯ ಜಾತಕ ಹೊಂದಾಣಿಕೆ ಆಗುತ್ತದೆಯೇ, ಇಲ್ಲವೇ ಎಂಬುದನ್ನು ನೋಡುತ್ತಾರೆ. ಕಾರಣ ಜಾತಕ ಹೊಂದಾಣೆಕೆ ಆದರೆ ಮಾತ್ರ ಸತಿ-ಪತಿ ಅನೋನ್ಯವಾಗಿರುತ್ತಾರೆ ಎಂಬುದು ನಮ್ಮ ಹಿರಿಯರ ನಂಬಿಕೆ.


ಆದರೆ ಹುಡುಗ-ಹುಡುಗಿ ಒಂದೇ ನಕ್ಷತ್ರದವರಾದರೆ ಮದುವೆ ಆಗಬಹುದಾ, ಬೇಡವೇ ಎಂಬ ಪ್ರಶ್ನೆ ಆಗಾಗ ಕೇಳಿಬರುತ್ತದೆ. ಆ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.


ರೋಹಿಣಿ, ಆರಿದ್ರಾ, ಪುಷ್ಯಾ, ಮಖಾ, ವಿಶಾಖಾ, ಶ್ರವಣ, ಉತ್ತರಾಭಾದ್ರ ಹಾಗೂ ರೇವತಿ ಈ ಪೈಕಿ ಯಾವುದಾದರೂ ಒಂದಾಗಿದ್ದು, ಮದುವೆ ಆಗುವ ಹುಡುಗ ಹಾಗೂ ಹುಡುಗಿ ಇಬ್ಬರದೂ ಒಂದೇ ನಕ್ಷತ್ರವಾದರೆ ಶುಭವಂತೆ.


ಇನ್ನು ಅಶ್ವಿನಿ, ಕೃತ್ತಿಕಾ, ಮೃಗಶಿರಾ, ಪುನರ್ವಸು, ಚಿತ್ತಾ, ಅನೂರಾಧಾ ಹಾಗೂ ಪುರ್ವಾಭಾದ್ರಾವಾದರೆ ಮಧ್ಯಮ. ಉಳಿದ ನಕ್ಷತ್ರಗಳ ಪೈಕಿ ಯಾವುದಾದರೂ ಒಂದಾಗಿ, ಹುಡುಗ- ಹುಡುಗಿಯದು ಇಬ್ಬರದೂ ಒಂದೇ ನಕ್ಷತ್ರವಾದರೆ ವಿವಾಹ ಅಶುಭ. ಅಂದರೆ ಮದುವೆ ಮಾಡಬಾರದಂತೆ.


ಇನ್ನು ವಧು- ವರರ ನಕ್ಷತ್ರವು ಒಂದೇ ಆಗಿ, ಪಾದವು ಬೇರೆ ಬೇರೆಯಾಗಿ, ಹುಡುಗನ ನಕ್ಷತ್ರದ ಪಾದವು ಹುಡುಗಿಯದ್ದಕ್ಕಿಂತ ಮುಂದಿನದ್ದಾಗಿದ್ದರೆ (ಉದಾಹರಣೆಗೆ ಹುಡುಗನದು ಅಶ್ವಿನಿ ನಕ್ಷತ್ರ ಎರಡನೇ ಪಾದ, ಹುಡುಗಿಯದು ಅಶ್ವಿನಿ ನಕ್ಷತ್ರ ಮೂರನೇ ಪಾದ) ಮದುವೆ ಮಾಡಬಹುದಂತೆ. ಆದರೆ, ಹುಡುಗಿಯ ನಕ್ಷತ್ರದ ಹಿಂದೆಯೇ ಹುಡುಗನ ನಕ್ಷತ್ರ ಬಂದರೆ ಮದುವೆ ಅಶುಭ. ಇದನ್ನು ಸ್ತ್ರೀಪೂರ್ವ ನಕ್ಷತ್ರ ಅಂತ ಕರೆಯಲಾಗುತ್ತದೆ. (ಉದಾಹರಣೆಗೆ: ಹುಡುಗಿಯ ನಕ್ಷತ್ರವು ಅನೂರಾಧಾವಾಗಿ ಹುಡುಗನದು ಜ್ಯೇಷ್ಠಾ ನಕ್ಷತ್ರವಾದರೆ) ಆಗ ಮದುವೆ ಮಾಡಬಾರದಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ