ಬೆಂಗಳೂರು: ಪ್ರತಿನಿತ್ಯ ಸಂಧ್ಯಾವಂದನೆ ಯಾಕೆ ಮಾಡಬೇಕು, ಯಾವ ಹೊತ್ತಿನಲ್ಲಿ ಮಾಡಬೇಕು ಮತ್ತು ಇದನ್ನು ಯಾರು ಮಾಡಬಹುದು ಎಂಬ ಮಾಹಿತಿ ತಿಳಿದುಕೊಳ್ಳಿ.
ಸಂಧ್ಯಾವಂದನೆಯ ಸಂಕಲ್ಪ ಎಂದರೆ ನನ್ನ ದುರಿತಗಳನ್ನೆಲ್ಲ ಕಳೆದು ಪರಮೇಶ್ವರನ ಪ್ರೀತ್ಯರ್ಥವಾಗಿ ಸಂದ್ಯಾವಂದನೆ ಮಾಡುತ್ತಿದ್ದೇನೆ ಎಂಬುದಾಗಿದೆ. ನಾವು ಮಾಡುವ ನಿತ್ಯ ಕರ್ಮಗಳಲ್ಲಿ ಸಂಧ್ಯಾ ವಂದನೆಯೂ ಒಂದಾಗಿದೆ. ಬ್ರಹ್ಮೋಪದೇಶವಾದ ವಟು ಗಾಯತ್ರಿ ಮಂತ್ರ ಸಹಿತವಾಗಿ ಸಂಧ್ಯಾವಂದನೆ ಮಾಡುತ್ತಾರೆ. ಸಕಲ ಜೀವರಾಶಿಗಳಿಗೆ ಶಕ್ತಿ ನೀಡುವ ಪ್ರಕೃತಿ ಮತ್ತು ಸೂರ್ಯನಿಗೆ ಧನ್ಯವಾದ ಸಲ್ಲಿಸುವ ಮತ್ತು ನಮ್ಮೆಲ್ಲರಿಗೂ ಇನ್ನಷ್ಟು ಶಕ್ತಿ ಕೊಡಲು ಪ್ರಾರ್ಥನೆ ಮಾಡುವ ಕ್ರಮವೇ ಸಂಧ್ಯಾವಂದನೆಯಾಗಿದೆ.
ಇದನ್ನು ಒಬ್ಬೊಬ್ಬರು ಬೇರೆ ಬೇರೆ ರೂಪದಲ್ಲಿ ಮಾಡಬಹುದು. ಮಂತ್ರಗಳ ಉಚ್ಚಾರಣೆಯೊಂದಿಗೆ ಮಾಡುವುದೊಂದೇ ಸಂಧ್ಯಾವಂದನೆಯಲ್ಲ. ಸಂಜೆ ಹೊತ್ತು ಅಥವಾ ಬೆಳಗಿನ ಹೊತ್ತು ದೀಪ ಬೆಳಗುವುದೂ ಕೂಡಾ ಸಂಧ್ಯಾವಂದನೆಯ ಒಂದು ಭಾಗವಾಗಿದೆ.
ಒಂದು ನಿಮಿತ್ತವಾಗಿ ಮಾಡುವ ಕಾರ್ಯಕ್ಕೆ ನೈಮಿತ್ಯಿಕಾ ಎಂದು ಹೇಳುತ್ತೇವೆ. ಇದು ಯಾವುದೋ ಒಂದು ಉದ್ದೇಶವಿಟ್ಟುಕೊಂಡು ಸಂಕಲ್ಪದೊಂದಿಗೆ ಮಾಡುವ ಪೂಜೆಯಾಗಿರುತ್ತದೆ. ಉದಾಹರಣೆ ರಾಮನವಮಿ, ಕೃಷ್ಣ ಜನ್ಮಾಷ್ಠಮಿ ಇದೆಲ್ಲಾ ನಿಮಿತ್ತವಾಗಿ ಮಾಡುವ ಪೂಜಾ ಕ್ರಿಯಾವಿಧಿಯಾಗಿದೆ.
ಆದರೆ ಸಂಧ್ಯಾವಂದನೆ ನಮ್ಮ ನಿತ್ಯಕರ್ಮವಾಗಿ ನಾವು ಮಾಡಲೇಬೇಕಾದ ಕರ್ಮವಾಗಿದೆ. ನಾವು ಪ್ರತಿನಿತ್ಯ ಮಾಡುವ ಸ್ನಾನ ಇತ್ಯಾದಿ ಕಾರ್ಯಗಳಂತೆ ಇದೂ ನಿತ್ಯ ಕರ್ಮವಾಗಿದೆ. ಸೂರ್ಯನಿಲ್ಲದೇ ನಮಗೆ ಏನೂ ಮಾಡಲು ಸಾಧ್ಯವಿಲ. ಬುದ್ಧಿ, ಆರೋಗ್ಯ, ಶಕ್ತಿ, ಆರೋಗ್ಯಕ್ಕಾಗಿ ಸೂರ್ಯನ ಅನುಗ್ರಹ ಬೇಕೇ ಬೇಕು. ಬೆಳಿಗ್ಗೆ ಅರುಣೋದಯಕ್ಕೆ ಮೊದಲು ಅಥವಾ ಸಂಜೆ ಸೂರ್ಯ ಮುಳುಗುವ ಮತ್ತು ನಕ್ಷತ್ರ ಮೂಡುವ ಮೊದಲು ತ್ರಿಸಂಧ್ಯಾಕಾಲದಲ್ಲಿ ಮಾಡುವ ಪ್ರಾರ್ಥನೆಯೇ ಸಂಧ್ಯಾವಂದನೆಯಾಗಿದೆ. ಸಂಧ್ಯಾವಂದನೆ ಎನ್ನುವುದು ಕೇವಲ ನನ್ನೊಬ್ಬನಿಗೇ ಒಳಿತು ಮಾಡು ಎಂದು ಮಾಡುವ ಪ್ರಾರ್ಥನೆ ಅಲ್ಲ. ಕೊನೆಯಲ್ಲಿ ಲೋಕಾ ಸಮಸ್ತಾ ಸುಖಿನೋ ಭವಂತು ಎಂದು ಬೇಡಿಕೊಳ್ಳುತ್ತೇವೆ. ಅಂದರೆ ಲೋಕದಲ್ಲಿ ಎಲ್ಲರಿಗೂ ಒಳ್ಳೆಯದನ್ನು ಮಾಡು ಎಂದು ಸೂರ್ಯನನ್ನು ಬೇಡಿಕೊಳ್ಳುತ್ತೇವೆ. ಹೀಗಾಗಿ ಸ್ವಾರ್ಥಕ್ಕಾಗಿ ಮಾಡುವ ಪ್ರಾರ್ಥನೆಯಲ್ಲ. ಲೋಕ ಕಲ್ಯಾಣಕ್ಕಾಗಿ ಮಾಡುವ ಪ್ರಾರ್ಥನೆಯಾಗಿದೆ. ಹೀಗಾಗಿ ಸಂಧ್ಯಾವಂದನೆ ಅತ್ಯಂತ ಶ್ರೇಷ್ಠ ಕ್ರಿಯಾವಿಧಿಯಾಗಿದೆ.