ಆಯಾ ರಾಶಿಗನುಗುಣವಾಗಿ ಈ ವರ್ಷ ನಿಮ್ಮ ಉದ್ಯೋಗ ಭವಿಷ್ಯ ಹೇಗಿದೆ? ಉದ್ಯೋಗ ಭವಿಷ್ಯಕ್ಕಾಗಿ ಇಲ್ಲಿ ನೋಡಿ
ಶನಿವಾರ, 29 ಡಿಸೆಂಬರ್ 2018 (09:21 IST)
ಬೆಂಗಳೂರು: ಈ ವರ್ಷ ನಿಮ್ಮ ಉದ್ಯೋಗ ಭವಿಷ್ಯ ಹೇಗಿದೆ? ಯಾವ ಉದ್ಯೋಗ ನಿಮಗೆ ಲಾಭ ಕೊಡುವುದು, ನಷ್ಟ ಉಂಟುಮಾಡುವುದು ಎಂಬ ರಾಶಿ ಫಲ ಇಲ್ಲಿದೆ ನೋಡಿ.
ಮೇಷ: ಉದ್ಯೋಗದಲ್ಲಿ ನಿಮಗೆ ಈ ವರ್ಷ ಮಿಶ್ರ ಫಲ ದೊರೆಯಲಿದೆ. ನಿಮ್ಮ ಪ್ರಯತ್ನಕ್ಕೆ ತಕ್ಕ ಫಲ ದೊರೆಯಲಿದೆ. ಅದೃಷ್ಟ ಕೈ ಹಿಡಿದರೆ ಈ ವರ್ಷ ಬಡ್ತಿ ಯೋಗವೂ ಇದೆ. ಫಲಾಪೇಕ್ಷೆಯಿಲ್ಲದೇ ದುಡಿದರೆ ಯಶಸ್ಸು ಸಿಗುವುದು. ಸ್ವಂತ ಉದ್ದಿಮೆ ಮಾಡುತ್ತಿದ್ದರೆ ಉತ್ತಮ ಫಲಕ್ಕಾಗಿ ವರ್ಷದ ಮಧ್ಯಾವಧಿವರೆಗೆ ಕಾಯಿರಿ.
ವೃಷಭ: ವರ್ಷಾರಂಭದಲ್ಲಿ ಉದ್ಯೋಗದಲ್ಲಿ ಕೊಂಚ ಕಿರಿ ಕಿರಿ, ಅಡೆತಡೆಗಳು ಎದುರಾಗುವುದು. ಆರಂಭದಲ್ಲಿ ಅಡ್ಡಿ ಆತಂಕಗಳು ಎದುರಾದರೂ ಪ್ರಯತ್ನ ಬಲದಿಂದ ವರ್ಷದ ಕೊನೆಯಲ್ಲಿ ಉತ್ತಮ ಫಲ ಪಡೆಯುವಿರಿ. ನಿಮ್ಮ ಉದ್ಯೋಗದ ಬಗ್ಗೆ ಗಂಭೀರ ಚಿಂತನೆ ನಡೆಸುವಿರಿ. ಧನಲಾಭಕ್ಕೆ ಕೆಲವು ಹೊಸ ದಾರಿಗಳನ್ನು ಕಂಡುಕೊಳ್ಳುವಿರಿ.
ಮಿಥುನ: ನಿಮಗೆ ಈ ವರ್ಷ ವೃತ್ತಿ ರಂಗದಲ್ಲಿ ಸಮಾಧಾನಕರ ಫಲ ಸಿಗಲಿದೆ. ಆದರೆ ಕಠಿಣ ಪರಿಶ್ರಮದಿಂದ ಮತ್ತಷ್ಟು ಉತ್ತಮ ಫಲ ಪಡೆಯಬಹುದು. ಯಾವುದೇ ಉದ್ಯೋಗವಾದರೂ, ಅದರಲ್ಲಿ ಗಮನಕೇಂದ್ರೀಕರಿಸಿ ಮಾಡಿದರೆ ಮತ್ತಷ್ಟು ಲಾಭ ಪಡೆಯುವಿರಿ. ಹೊಸ ಹೊಸ ಯೋಜನೆಗಳನ್ನು ರೂಪಿಸುವಿರಿ, ಹೊಸ ದಾರಿಗಳನ್ನು ಕಂಡುಕೊಳ್ಳುವಿರಿ.
ಕಟಕ: ಈ ವರ್ಷ ಉದ್ಯೋಗ ಮಾಡುವವರಿಗೆ ಹೇಳಿ ಮಾಡಿಸಿದ ವರ್ಷವಾಗಲಿದೆ. ತಮ್ಮ ಉದ್ಯೋಗದಲ್ಲಿ ಬಡ್ತಿ, ಉನ್ನತ ಸ್ಥಾನಮಾನಗಳು ದೊರಕಲಿವೆ. ವರ್ಷದ ಆರಂಭ ಮತ್ತು ಅಂತ್ಯದಲ್ಲಿ ಉತ್ತಮ ಫಲ ಕಾಣುವಿರಿ. ಸ್ವಂತ ಉದ್ದಿಮೆ ಮಾಡುವುದಿದ್ದರೂ ಲಾಭ ಗಳಿಸಬಹುದು.
ಸಿಂಹ: ಈ ವರ್ಷ ಉದ್ಯೋಗದಲ್ಲಿ ಬಡ್ತಿ ಸಿಗಬೇಕಾದರೆ ಕಠಿಣ ಪರಿಶ್ರಮಪಡಲೇಬೇಕು. ಕಚೇರಿಯಲ್ಲಿ ಗಮನವಿಟ್ಟು ಕೆಲಸ ಮಾಡಿದರೆ ನಿಮ್ಮನ್ನು ಗುರುತಿಸುವರು. ವರ್ಷದ ಆರಂಭದಲ್ಲಿ ಉತ್ತಮ ಫಲ ಪಡೆಯುವಿರಿ. ಅಂತ್ಯದಲ್ಲಿ ಕೊಂಚ ಕಿರಿ ಕಿರಿ ಅನುಭವಿಸಬೇಕಾದೀತು.
ಕನ್ಯಾ: ಕೆಲವೊಮ್ಮೆ ನಿಮ್ಮ ಪರಿಶ್ರಮಕ್ಕೆ ತಕ್ಕ ಸನ್ಮಾನ ದೊರಕದೇ ಬೇಸರಕ್ಕೊಳಗಾಗುವಿರಿ. ಆದರೆ ಅವಕಾಶಗಳಿಗೆ ಏನೂ ಕೊರತೆಯಾಗದು. ಹೊಸ ಉದ್ಯೋಗದ ಅವಕಾಶಗಳು ಅರಸಿ ಬರಬಹುದು. ನಿಮ್ಮ ಸಂವಹನ ಶಕ್ತಿಯಿಂದಲೇ ಬೇಕಾದ ಉದ್ಯೋಗ ಗಿಟ್ಟಿಸಿಕೊಳ್ಳುವಿರಿ.
ತುಲಾ: ಉದ್ಯೋಗದಲ್ಲಿ ಉತ್ತಮ, ನೀವು ಬಯಸಿದ ಫಲ ಕಾಣುವಿರಿ. ನಿಮ್ಮ ಕ್ರಿಯಾತ್ಮಕ ಆಲೋಚನೆಗಳು, ಯೋಜನೆಗಳು ಉದ್ಯೋಗದಲ್ಲಿ ಮುನ್ನಡೆಗೆ ಕಾರಣವಾಗುವುದು. ಸಹೋದ್ಯೋಗಿಗಳಿಂದ ಸಹಕಾರ ಸಿಕ್ಕುವುದು. ಹಾಗಿದ್ದರೂ ಹಿತಶತ್ರುಗಳ ಬಗ್ಗೆ ಎಚ್ಚರ ಅಗತ್ಯ.
ವೃಶ್ಚಿಕ: ಉದ್ಯೋಗದಲ್ಲಿ ಬಡ್ತಿ, ಮುನ್ನಡೆ ಸಿಗುವುದು. ಯಶಸ್ಸಿನ ಹಾದಿಯೆಡೆಗೆ ಸಾಗುವಾಗ ಸಾಕಷ್ಟು ಅವಕಾಶಗಳು ಎದುರಾಗುವುದು. ಅವನ್ನು ಗುರುತಿಸಿ ಬಳಸಿಕೊಳ್ಳುವುದರಲ್ಲಿ ನಿಮ್ಮ ಜಾಣ್ಮೆ ಪ್ರದರ್ಶಿಸಬೇಕು. ವಿದೇಶಕ್ಕೆ ತೆರಳುವ ಯೋಗವೂ ಇದೆ.
ಧನು: ವರ್ಷಾರಂಭದಲ್ಲಿ ಉದ್ಯೋಗದಲ್ಲಿ ಕೊಂಚ ಅಡೆತಡೆಗಳು ತೋರಿ ಬಂದಾವು. ಆದರೆ ಅವೆಲ್ಲವನ್ನೂ ಮೀರಿ ಕಠಿಣ ಪರಿಶ್ರಮ ಪಟ್ಟರೆ ಯಶಸ್ಸು ಸಿಗುವುದು. ಸ್ವಂತ ಉದ್ದಿಮೆ ನಡೆಸುವವರಿಗೆ ಲಾಭ ಗಳಿಸಲು ಅವಕಾಶವಿದೆ. ಉದ್ಯೋಗದಲ್ಲಿ ಬಡ್ತಿ, ವೇತನ ಹೆಚ್ಚಳವಾಗಬಹುದು.
ಮಕರ: ಈ ವರ್ಷ ಉದ್ಯೋಗ ಬದಲಾಯಿಸುವ ಸಾಧ್ಯತೆ ಕಡಿಮೆಯಾದರೂ, ಇರುವ ಕಚೇರಿಯಲ್ಲೇ ಉತ್ತಮವಾಗಿ ನಿರ್ವಹಣೆ ತೋರಿದರೆ ಬಡ್ತಿ, ವೇತನ ಹೆಚ್ಚಳವಾಗುವ ಸಾಧ್ಯತೆಯಿದೆ. ಉದ್ಯೋಗಕ್ಕೆ ಸಂಬಂಧಿಸಿದಂತೆ ನೆಮ್ಮದಿ ಕಾಣುವಿರಿ. ಸ್ವಂತ ಉದ್ದಿಮೆ ನಡೆಸುವವರೂ ಲಾಭ ಪಡೆಯುವರು.
ಕುಂಭ: ಈ ವರ್ಷ ನೀವು ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ. ಉದ್ಯೋಗದಲ್ಲಿ ನೀವು ಬಯಸಿದ್ದ, ಕಂಡಿದ್ದ ಕನಸು ನನಸಾಗಲಿದೆ. ಆದರೆ ಅವಕಾಶಗಳು ಬಂದಾಗ ಸರಿಯಾದ ರೀತಿಯಲ್ಲಿ ನಿರ್ಧಾರ ತೆಗೆದುಕೊಂಡರೆ ವೃತ್ತಿ ಬದುಕು ಬಂಗಾರ. ಇಲ್ಲದೇ ಹೋದರೆ ಪಶ್ಚಾತ್ತಾಪ ಪಡಬೇಕಾದೀತು.
ಮೀನ: ಉದ್ಯೋಗ ಸ್ಥಳದಲ್ಲಿ ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ದೊರೆಯಲಿದೆ. ನಿಮ್ಮ ಪರಿಶ್ರಮವನ್ನು ಗುರುತಿಸುವ ವ್ಯಕ್ತಿಗಳಿರುತ್ತಾರೆ. ಆದರೆ ನಿಮ್ಮ ಉದ್ಯೋಗದ ಬಗ್ಗೆ ಕುಟುಂಬದವರಲ್ಲಿ ಅಸಮಾಧಾನ ತೋರಿಬಂದೀತು. ಆದರೆ ನಿಮ್ಮ ಕಠಿಣ ಪರಿಶ್ರಮ, ವಿಧೇಯತೆಯಿಂದಲೇ ಮನೆಯವರನ್ನೂ ಸಮಾಧಾನಪಡಿಸಬೇಕಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.