ಅಂದದ ತುಟಿ ಯಾರು ತಾನೇ ಬಯಸಲ್ಲ ಹೇಳಿ. ಗುಲಾಬಿಯ ಪಕಳೆಯಂತೆ ಪಿಂಕ್ ಆಗಿ ಕಾಣಿಸಿಕೊಳ್ಳಬೇಕೆಂಬ ಬಯಕೆ ಸಾಮಾನ್ಯ. ಚಳಿಗಾಲದಲ್ಲಂತೂ, ತುಟಿ ಒಣಗಿ, ಒಡೆದು ರಕ್ತ ಸೋರುತ್ತಿದ್ದರೆ, ಮುಖ ತೋರಿಸಲು ನಾಚಿಕೆಯಾಗುವ ಅನುಭವ ಎಲ್ಲರಿಗೂ ಇದೆ. ಆದರೆ ಇದಕ್ಕಾಗಿ ಏನೆಲ್ಲಾ ಕಸರತ್ತು ಮಾಡಿದರೂ ಕೆಲವೊಮ್ಮೆ ಸಾಕಾಗುವುದಿಲ್ಲ. ಹಾಗಾಗಿ ನೈಸರ್ಗಿಕವಾಗಿಯೂ ನಿಮ್ಮ ತುಟಿಯನ್ನು ತಾಜಾ ಆಗಿ ಗುಲಾಬಿ ದಳದಂತೆ ಸುಂದರವಾಗಿ ಕಾಣಲು ನೀವು ಮನೆಯಲ್ಲೇ ಕೆಲವು ಉಪಾಯಗಳನ್ನು ಮಾಡಬಹುದು. ಅವುಗಳ ಒಂದು ಝಲಕ್ ಇಲ್ಲಿದೆ.
ತುಟಿ ನಯವಾಗಿ ಕಾಣಬೇಕಿದ್ದರೆ, ನೀವು ಹಲ್ಲುಜ್ಜುವ ಬ್ರಷ್ನಿಂದ ಮೆದುವಾಗಿ ವೃತ್ತಾಕಾರವಾಗಿ ನಿಮ್ ತುಟಿಯ ಮೇಲೆ ಉಜ್ಜಿ. ಇದರಿಂದ ತುಟಿಯ ಮೇಲ್ಮೈಯಲ್ಲಿನ ಒಣಗಿದ ಸತ್ತ ಚರ್ಮ ಮಾಯವಾಗುತ್ತದೆ. ನಂತರ ತುಟಿಯನ್ನು ತೊಳೆದು ಮಾಯ್ಶ್ಚರೈಸರ್ ತುಟಿಗೆ ಹಚ್ಚಿ. ತುಟಿ ನಯವಾಗಿ ಹೊಳೆಯುತ್ತದೆ.
ಪ್ರತಿ ರಾತ್ರಿಯೂ ಮಲಗುವ ಮುನ್ನ ತುಟಿಗೆ ಮಾಯ್ಶ್ಚರೈಸರ್ ಹಚ್ಚಿ ಮಲಗಿ. ಮೃದುವಾದ ನುಣುಪಾದ ತುಟಿಗಳು ನಿಮ್ಮದಾಗುತ್ತದೆ.
ರೋಸ್ ವಾಟರ್ ಹಾಗೂ ಸಕ್ಕರೆ ಸೇರಿಸಿ ತುಟಿಗೆ ಪ್ರತಿದಿನವೂ ಮಸಾಜ್ ಮಾಡಿ. ಇದು ನಿಮ್ಮ ತುಟಿಯನ್ನು ಗುಲಾಬಿ ದಳದಷ್ಟೇ ಮೃದು, ನಯ ಹಾಗೂ ಹೊಳೆಯುವಂತೆ ಮಾಡುತ್ತದೆ.
ಹೆಚ್ಚು ಕಾಫಿ, ಟೀ ಕುಡಿಯುವುದರಿಂದ ಹಾಗೂ ಸಿಗರೇಟು ಸೇದುವುದರಿಂದ ತುಟಿಗಳು ಕಪ್ಪಾಗುತ್ತದೆ. ಹಾಗಾಗಿ ಯಾವತ್ತೂ ಧೂಮಪಾನ ಮಾಡಬೇಡಿ. ಧೂಮಪಾನ ನಿಮ್ಮ ತುಟಿಯನ್ನು ಕಪ್ಪಾಗಿಸುವ ಜೊತೆಗೆ, ಹೀಗಾಗಿ ತುಟಿ ಒಣಗಿದಂತೆ ಕಳಾಹೀನವಾಗಿ ಕಾಣುತ್ತದೆ. ಅಷ್ಟೇ ಅಲ್ಲದೆ ಇಂಥ ತುಟಿಯನ್ನು ಸೂರ್ಯದ ಕಿರಣಗಳು ಬಹುಬೇಗನೆ ಘಾಸಿ ಮಾಡುತ್ತದೆ. ಹೀಗಾಗಿ ಧೂಮಪಾನಿಗಳು ನೀವಾಗಿದ್ದರೆ ಹೊರಗೆ ಸಂಚರಿಸುವಾಗ ನಿಮ್ಮ ತುಟಿಗೆ ಸನ್ಸ್ಕ್ರೀನ್ ಲೋಶನ್ ಹಚ್ಚಿ.
PR
ಅಂದದ ತುಟಿಗೆ ನೈಸರ್ಗಿಕ ಉಪಾಯ: ನೈಸರ್ಗಿಕವಾಗಿ ನಿಮ್ಮ ತುಟಿಯನ್ನು ತಾಜಾ, ಪಿಂಕ್ ಹಾಗೂ ಆರೋಗ್ಯಕರವಾಗಿ ಕಾಣಿಸಲು ನಿಮ್ಮ ಅಡುಗೆ ಮನೆಯಲ್ಲೇ ಹಲವು ಉಪಾಯಗಳಿವೆ. ಅದಕ್ಕಾಗಿ ನೀವು ಮೊದಲು ತುಂಬ ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ತುಟಿಯನ್ನು ಒಡೆಯಲು, ರಕ್ತ ಸೋರಲು ಅಥವಾ ಒಣಗಲು ಬಿಡಬೇಡಿ. ಮಾಯ್ಶ್ಚರೈಸರ್ ಸದಾ ಬಳಸುತ್ತಿದ್ದರೆ ತುಟಿ ಹೀಗಾಗುವುದನ್ನು ತಪ್ಪಿಸಬಹುದು.
ಹೆಚ್ಚು ಹೆಚ್ಚು ಹಸಿರು ತರಕಾರಿ, ಹಣ್ಣು ಹಂಪಲು ತಿನ್ನಿ. ಸಲಾಡ್, ಹಣ್ಣುಗಳ ಜ್ಯೂಸ್ ಸೇವಿಸುತ್ತಾ ಇರಿ. ಇದು ನಿಮ್ಮ ತುಟಿಯನ್ನು ತಾಜಾ ಆಗಿರಿಸುತ್ತದೆ. ಅಲ್ಲದೆ, ನಯವಾಗಿ ಹೊಳೆಯುವ ಆರೋಗ್ಯಭರಿತ ತುಟಿ ಕಂಗೊಳಿಸುವಂತೆಯೂ ಮಾಡುತ್ತದೆ.
ಹೆಚ್ಚು ಕ್ಯಾರೆಟ್ ಹಾಗೂ ಹಸಿ ಸೌತೆಕಾಯಿ ತಿನ್ನಿ. ಇದು ನಿಮ್ಮ ತುಟಿಗಳನ್ನು ಯಾವಾಗಲೂ ತಾಜಾತನದಿಂದ ಹೊಳೆಯವಂತೆ ಮಾಡುತ್ತದೆ.
ಗುಲಾಬಿ ದಳಗಳನ್ನು ಚೆನ್ನಾಗಿ ಅರೆದು ತುಟಿಗಳಿಗೆ ಲೇಪಿಸಿದರೆ ತುಟಿಗಳು ಪಿಂಕ್ ಆಗಿ ಉಳಿಯುತ್ತದೆ. ನಿಂಬೆಹಣ್ಣಿನ ರಸದಿಂದ ತುಟಿಗಳನ್ನು ಮಸಾಜ್ ಮಾಡುತ್ತಿದ್ದರೆ, ತುಟಿಗಳು ಕಪ್ಪಾಗುವುದನ್ನು ತಡೆಯಬಹುದು.
ನೈಸರ್ಗಿಕವಾಗಿ ಪಿಂಕ್ ಆಗಿರುವ ತುಟಿಯನ್ನು ಪಡೆಯಲು ರಾತ್ರಿ ಮಲಗುವ ಮುನ್ನ ಬೀಟ್ರೂಟ್ನ್ನು ಲೇಪಿಸಿ ಮಲಗಿ.
PR
ಲಿಪ್ಸ್ಟಿಕ್ ಟಿಪ್ಸ್: ಲಿಪ್ಸ್ಟಿಕ್ ದಿನವೂ ಬಳಸುವುದು ಒಳ್ಳೆಯದಲ್ಲ. ದಿನವೂ ಬಳಸಿದರೆ, ತುಟಿ ತನ್ನ ಎಂದಿನ ಕಳೆಯನ್ನು ಕಳೆದುಕೊಳ್ಳುತ್ತದೆ. ಆದರೂ ಹಲವರಿಗೆ ದಿನವೂ ಬಳಸುವುದು ಅನಿವಾರ್ಯವಾಗಿರುತ್ತದೆ. ಅದಕ್ಕಾಗಿ, ಪ್ರತಿಬಾರಿಯೂ ನೀವು ನೇರವಾಗಿ ತುಟಿಯ ಮೇಲೆ ಲಿಪ್ಸ್ಟಿಕ್ ಹಚ್ಚಬೇಡಿ. ಇದು ನಿಮ್ಮ ತುಟಿಯ ಚರ್ಮವನ್ನು ಹಾಳು ಮಾಡುತ್ತದೆ. ಹಾಗಾಗಿ ಮೊದಲು ತುಟಿಯ ಮೇಲೆ ಲಿಪ್ ಬಾಮ್ ಅನ್ನು ಹಚ್ಚಿ, ನಂತರ ಅದರ ಮೇಲೆ ಲಿಪ್ಸ್ಟಿಕ್ ಹಚ್ಚಿ. ಹೀಗೆ ಮಾಡುವುದರಿಂದ ನಿಮ್ಮ ಲಿಪ್ಸ್ಟಿಕ್ ದಿನವಿಡೀ ಫ್ರೆಶ್ ಆಗಿ ಕಾಣಿಸುತ್ತದೆ. ಜೊತೆಗೆ ತುಟಿಗೆ ನೇರ ಹಾನಿಯೂಗುವುದೂ ತಪ್ಪುತ್ತದೆ.
ಇನ್ನೂ ಕೆಲವರು ಲಿಪ್ಸ್ಟಿಕ್ ಬಳಸಿದರೂ ಬಳಸಲು ಸರಿಯಾದ ಕ್ರಮ ತಿಳಿದಿರುವುದಿಲ್ಲ. ಹಾಗಾಗಿ, ಅಂಥವರು ಮೊದಲು ಲಿಪ್ ಬಾಮ್ ಬಳಸಿ ಅದರ ಮೇಲೆ ಮೃದುವಾಗಿ ತೆಳುವಾಗಿ ಲಿಪ್ಸ್ಟಿ ಹಚ್ಚಿ. ನಂತರ ಲಿಪ್ ಲೈನರ್ ತೆಗೆದುಕೊಂಡು ತುಟಿಯ ಔಟ್ಲೈನ್ಗೆ ಪೂರ್ತಿಯಾಗಿ ಗೆರೆ ಎಳೆಯಿರಿ. ಈಗ ನಿಮ್ಮ ತುಟಿ ಸಂಪೂರ್ಣವಾಗಿ ಕಾಣುತ್ತದೆ. ಈ ಕ್ರಮ ಅನುಸರಿಸುವ ಮೊದಲು ಇನ್ನೊಂದು ಕ್ರಮವನ್ನೂ ಅನುಸರಿಸಬಹುದು. ಅದು, ಲಿಪ್ ಬಾಮ್ ಹಚ್ಚಿದ ಮೇಲೆ ಲಿಪ್ ಲೈನರ್ನಿಂದ ನಿಮ್ಮ ತುಟಿಯ ಔಟ್ಲೈನ್ಗೆ ಸರಿಯಾಗಿ ಗೆರೆ ಎಳೆದು ಆಮೇಲೆ ಲಿಪ್ಸ್ಟಿಕ್ ಹಚ್ಚಿ. ಈ ಕ್ರಮದಿಂದ ನಿಮ್ಮ ಲಿಪ್ಸ್ಟಿಕ್ ಹೆಚ್ಚು ಕಾಲ ಉಳಿಯುತ್ತದೆ,
ಕೆಲವರಿಗೆ ಕಡು (ಡಾರ್ಕ್) ಬಣ್ಣಗಳ ಲಿಪ್ಸ್ಟಿಕ್ ಇಷ್ಟವಿರುದಿಲ್ಲ ಹಾಗೂ ಲಿಪ್ಸ್ಟಿಕ್ ಹೆಚ್ಚು ಢಾಳಾಗಿ ಕಾಣಿಸಲು ಇಷ್ಟಪಡುವುದಿಲ್ಲ. ಅಂಥವರು ಮೊದಲು ಲಿಪ್ಲೈನರ್ ಬಳಸಿ ನಂತರ ಲಿಪ್ಸ್ಟಿಕ್ ಹಚ್ಚುವುದು ಒಳ್ಳೆಯದು. ಇದು ತುಟಿಯಲ್ಲಿ ಅಷ್ಟಾಗಿ ಎದ್ದು ಕಾಣುವುದಿಲ್ಲ.
PR
ಲಿಪ್ ಸ್ಟಿಕ್ ಹಚ್ಚಿದ ಮೇಲೆ ಟಿಶ್ಯೂ ಪೇಪರನ್ನು ಮೆದುವಾಗಿ ತುಟಿಯಿಂದ ಪ್ರೆಸ್ ಮಾಡಿ. ಆಗ ಹೆಚ್ಚುವರಿ ಲಿಪ್ಸ್ಟಿಕ್ ಪೇಪರಿಗೆ ಅಂಟಿಕೊಳ್ಳುತ್ತದೆ.
ಇನ್ನು ಲಿಪ್ ಸ್ಟಿಕ್ ಆಯ್ಕೆಯ ಗೊಂದಲ ಹಲವರಲ್ಲಿರುತ್ತದೆ. ಹಾಗಾಗಿ ತಮಗೆ ಹೊಂದದ ಲಿಪ್ಸ್ಟಿಕ್ ಕೊಂಡು ಆಮೇಲೆ ಪೇಚಾಟ ಅನುಭವಿಸುವವರು ಹೆಚ್ಚು. ತೆಳು ಪಿಂಕ್ ಬಣ್ಣದ ಮುಖ ನಿಮ್ಮದಾಗಿದ್ದರೆ ಅಂಥವರು ಚೆರ್ರಿ ರೆಡ್ ಬಣ್ಣದ ಲಿಪ್ಸ್ಟಿಕ್ ಆರಿಸಬಹುದು. ಬೆಳ್ಳಗಿನ ಮೈಬಣ್ಣ ನಿಮ್ಮದಾಗಿದ್ದರೆ, ನೀವು ತೆಳು ಪಿಂಕ್, ತೆಳು ಹವಳದ ಬಣ್ಣ ಅಥವಾ ಆಪ್ರಿಕಾಟ್ ಬಣ್ಣದ ಲಿಪ್ಸ್ಟಿಕ್ ಆರಿಸಿ. ಗೋಧಿ ಬಣ್ಣದವರು ನೀವಾಗಿದ್ದರೆ ಸ್ವಲ್ಪ ಡಾರ್ಕ್ ಕಲರ್ಗಳ ಮೊರೆ ಹೋಗಬೇಕು. ನಿಮಗೆ, ಎಂಜಿನ್ ರೆಡ್ ಬಣ್ಣದ ಲಿಪ್ಸ್ಟಿಕ್ ಅಥವಾ, ರೋಸ್ ರೆಡ್, ಬೆರ್ರಿ ಕಲರ್ಗಳನ್ನು ಆರಿಸಬಹುದು. ಕಪ್ಪು ಬಣ್ಣದ ಚರ್ಮ ನಿಮ್ಮದಾಗಿದ್ದರೆ ಅಂಥವರು ಡೀಪ್ ರೆಡ್ ಬಣ್ಣದ ಅಥವಾ ಚಾಕೋಲೇಟ್ ಬಣ್ಣ, ಕಂದು ಕೆಂಪು ಬಣ್ಣವಿರುವ ಲಿಪ್ ಸ್ಟಿಕ್ ಆರಿಸಿ. ಕಪ್ಪು ಮೈಬಣ್ಣ ನಿಮ್ಮದಾಗಿದ್ದರೆ, ನೀವು ನಿಮ್ಮ ಅಂಗಿಯ ಬಣ್ಣಕ್ಕೆ ಲಿಪ್ಸ್ಟಿಕ್ ಮ್ಯಾಚ್ ಮಾಡುವ ಸಾಹಸಕ್ಕೆ ಕೈ ಹಾಕಬೇಡಿ.