ಕಾಫಿ ಕುಡಿದು ಸ್ಲಿಮ್ ಆಗಿ!

ND
ಬೆಳಗ್ಗೆ ಏಳುವ ಮೊದಲೇ ಕುಡಿಯುವ ಕಾಫಿಗೆ ಬೆಡ್ ಕಾಫಿ ಎಂಬ ಆಪ್ಯಾಯಮಾನ ಹೆಸರಿನೊಂದಿಗೆ, ಕಾಫಿ ಎಂಬುದು ಜನ ಜೀವನದಲ್ಲಿ ಹಾಸುಹೊಕ್ಕಾಗಿದೆ ಎಂಬುದು ವೇದ್ಯವಾಗುತ್ತದೆ. ಬೆಳಗ್ಗೆ ಅಥವಾ ಸಂಜೆಯ ಉಪಾಹಾರ ಸೇವನೆಗೆ ಹೋಗಬೇಕಿದ್ದರೆ, "ಕಾಫಿಗೆ ಹೋಗೋಣ" ಅಂತಲೇ ಹೇಳುವ ಪರಿಪಾಠವೂ ಇದೆ.

ನಮ್ಮನ್ನು ಹಾಸಿಗೆಯಿಂದ ಎಬ್ಬಿಸುವ ಈ ಕಾಫಿಯು ಕ್ಯಾನ್ಸರ್ ಸಾಧ್ಯತೆಯ ಪ್ರಮಾಣವನ್ನು ತಗ್ಗಿಸುತ್ತದೆ ಎಂಬ ಬಗ್ಗೆ ಈಗಾಗಲೇ ವೈದ್ಯಕೀಯ ಜಗತ್ತಿನ ಸಂಶೋಧನೆಯೊಂದು ವರದಿ ಮಾಡಿದೆ. ಇದೇ ರೀತಿ ಆರೋಗ್ಯದ ಮೇಲೆ ಕಾಫಿಯ ಪೂರಕತೆ ಮತ್ತು ಮಾರಕತೆ ಕುರಿತು ಚರ್ಚೆಗಳು ನಡೆಯುತ್ತಿರುವಂತೆಯೇ, ಕಾಫಿ ಸೇವನೆಯು ನಿಮ್ಮನ್ನು ಸ್ಲಿಮ್ ಆಗಿಸಲು ಕೂಡ ಸಹಕಾರಿಯಾಗುತ್ತದೆ ಎಂದು ವರದಿಯೊಂದು ತಿಳಿಸುತ್ತದೆ.

ಅಥೆನ್ಸ್‌ನ ಜಾರ್ಜಿಯಾ ವಿಶ್ವವಿದ್ಯಾನಿಲಯದ ಸಂಶೋಧಕರು ತಮ್ಮ ಪ್ರಯೋಗಗಳ ಮೂಲಕ ಇದನ್ನು ಕಂಡುಕೊಂಡಿದ್ದು, ದೈನಂದಿನ ವ್ಯಾಯಾಮ ಮಾಡುವ ವೇಳೆ ಎರಡು ಕಪ್ ಕಾಫಿ ಸೇವಿಸಿದಲ್ಲಿ, ಅದು ವ್ಯಾಯಾಮದಿಂದ ಉಂಟಾಗುವ ಸ್ನಾಯು ನೋವನ್ನು ಅರ್ಧಕ್ಕರ್ಧ ಕಡಿಮೆಗೊಳಿಸುತ್ತದೆ ಎಂದಿದ್ದಾರೆ. ಇದಕ್ಕೆ ಕಾರಣ, ಕಾಫಿಯಲ್ಲಿರುವ ಕೆಫಿನ್ ಅಂಶ.

ಕಾಲೇಜು ತರುಣಿಯರ ಮೇಲೆ ಈ ಪ್ರಯೋಗ ಮಾಡಲಾಗಿತ್ತು. ಬಿರುಸಿನ ವ್ಯಾಯಾಮ ಮಾಡಿದ 24 ಮತ್ತು 48 ಗಂಟೆಗಳ ಅವಧಿಯಲ್ಲಿ ಅವರಿಗೆ ಕೆಫಿನ್ ನೀಡಲಾಯಿತು. ತೊಡೆಯ ಸ್ನಾಯುವಿನ ಮೇಲೆ ಬಲ ಬೀಳುವಂತಹ ವ್ಯಾಯಾಮವನ್ನೇ ಆರಿಸಲಾಗಿತ್ತು. ಈ ತರುಣಿಯರು ಹೆಚ್ಚು ಹೆಚ್ಚು ಶ್ರಮ ವಹಿಸಿ ಈ ವ್ಯಾಯಾಮ ಮಾಡಿದಷ್ಟೂ, ಕೆಫಿನ್‌ನಿಂದ ಸ್ನಾಯು ನೋವು ತಗ್ಗಿಸುವ ಪ್ರಮಾಣವು ಹೆಚ್ಚಾಗುತ್ತಲೇ ಇತ್ತು! ಕಠಿಣ ವ್ಯಾಯಾಮ ಮಾಡುವುದಕ್ಕಿಂತ ಒಂದು ಗಂಟೆ ಮೊದಲು ಕೆಫಿನ್ ಸೇವಿಸಿದವರಲ್ಲಿ ನೋವಿನ ಪ್ರಮಾಣವು ಬೇರೆಯವರಿಗೆ ಹೋಲಿಸಿದಲ್ಲಿ ಶೇ.48ರಷ್ಟು ಕಡಿಮೆ ಇತ್ತು. ಅಂತೆಯೇ ಕಡಿಮೆ ಪರಿಶ್ರಮವುಳ್ಳ ವ್ಯಾಯಾಮ ಮಾಡಿದ ತರುಣಿಯರಲ್ಲಿ ನೋವಿನ ಪ್ರಮಾಣವು ಇತರರಿಗೆ ಹೋಲಿಸಿದಲ್ಲಿ ಶೇ.26ರಷ್ಟು ಕಡಿಮೆ ಇತ್ತು.

ಒಟ್ಟಿನಲ್ಲಿ ಕಠಿಣ ವ್ಯಾಯಾಮ ಮಾಡುವವರ ದೇಹದಲ್ಲಿ ಈ ಕೆಫಿನ್ ಹೆಚ್ಚು ಕೆಲಸ ಮಾಡಿ, ನೋವನ್ನು ಸಾಕಷ್ಟು ಕಡಿಮೆ ಮಾಡುತ್ತದೆ. ಸಾಧಾರಣ ಶ್ರಮವುಳ್ಳ ವ್ಯಾಯಾಮ ಮಾಡಿದವರ ದೇಹದಲ್ಲಿ ಕೆಫಿನ್ ಕೆಲಸ ಮಾಡುವುದು ಕೂಡ ಅಷ್ಟಕ್ಕಷ್ಟೆ.

ಸಂಶೋಧನಾ ತಂಡದ ಡಾ.ವಿಕ್ಟರ್ ಮೆರಿಡಾಕಿಸ್ ಹೇಳುವಂತೆ, "ನೋವು ತಗ್ಗಿಸಲು ನೀವು ಕೆಫಿನ್ ಅನ್ನು ಬಳಸಬಹುದಾದರೆ, ಮೊದಲಿಗಿಂತ ಹೆಚ್ಚು ಕಠಿಣವಾದ ವ್ಯಾಯಾಮ ಮಾಡಲು ಮತ್ತು ಆ ಮೂಲಕ ದೇಹ ತೂಕ ತಗ್ಗಿಸಲು ಸಹಕಾರಿಯಾಗಬಹುದು".

ಹಾಗಿದ್ದರೆ ಸ್ಲಿಮ್ ಆಗಲೆಂದು ಹೆಚ್ಚು ವ್ಯಾಯಾಮ ಮಾಡುವವರು ಜೊತೆಗೇ ಹೆಚ್ಚು ಕಾಫಿ ಸೇವಿಸಬಹುದು.! ಆದರೆ ಮಿತಿ ಮೀರದಂತೆ ಬಳಸುವುದು ಅವರವರ ವಿವೇಚನೆಗೆ ಬಿಟ್ಟ ಸಂಗತಿ.

ವೆಬ್ದುನಿಯಾವನ್ನು ಓದಿ