ಚಳಿಗಾಲದಲ್ಲಿನ ಶೈತ್ಯ ಮಾರುತದಿಂದಾಗಿ ಮುಖದ ಸೌಂದರ್ಯವು ಬೇಗನೆ ಅಂದಗೆಡುತ್ತದೆ. ಮುಖವು ಹೆಚ್ಚಾಗಿ ಶೀತಗಾಳಿಯನ್ನು ಅಭಿಮುಖೀಕರಿಸುವುದರಿಂದ ಮುಖದ ಚರ್ಮವು ಬೇಗನೆ ಶುಷ್ಕವಾಗಿತ್ತದೆ. ಇದರಿಂದಾಗಿ ಅಲ್ಲಲ್ಲಿ ಬಳಿ ಕಲೆಗಳು ಮೂಡಿ ಮುಖವು ಸೌಂದರ್ಯ ಹೀನವಾಗುತ್ತದೆ. ಇಂತಹ ಸಮಸ್ಯೆಯಿಂದ ಮುಕ್ತಿ ಹೊಂದ ಬೇಕಾದರೆ, ಮುಖ ತೊಳೆಯಲು ಸಾಬೂನು ಬಳಸುವುದನ್ನು ನಿಲ್ಲಿಸಿ. ಇದರ ಬದಲಾಗಿ ಕಡಲೆ ಹುಡಿಯನ್ನು ಬಳಸಿ ಮುಖ ತೊಳೆಯುತ್ತಿದ್ದರೆ ಚರ್ಮವು ಶುಷ್ಕವಾಗುವುದಿಲ್ಲ.
ಮುಖದ ಚರ್ಮಕ್ಕೆ ಹೊಳಪು ನೀಡಲು ಕ್ಯಾರೆಟ್, ಆರೆಂಜ್ ಮತ್ತು ಸೌತೆಕಾಯಿ ರಸವನ್ನು ಲೇಪಿಸುವುದು ಒಳ್ಳೆಯದು. ಹೊರಗೆ ಸುತ್ತಾಡಿ ಬಂದ ನಂತರ ಅರ್ಧ ಟೊಮೇಟೋದಿಂದ ವರ್ತುಲಾಕಾರದಲ್ಲಿ ಮಸಾಜ್ ಮಾಡಿ ತಂದನಂತರ ತಣ್ಣೀರಿನಿಂದ ತೊಳೆದರೆ ಮುಖದಲ್ಲಿ ಅಂಟಿದ್ದ ಧೂಳು ಹೊರಹೋಗಿ ತ್ವಚೆಯ ರಂಧ್ರಗಳು ಶುಚಿಯಾಗುತ್ತವೆ.
ಮನೆಯಿಂದ ಹೊರಗಿಳಿಯುವಾಗ ಮುಖಕ್ಕೆ ಮತ್ತು ಕತ್ತಿಗೆ ಮಾಯಿಶ್ಚುರೈಸರ್ ಲೇಪನ ಮಾಡಿಕೊಂಡರೆ ಉತ್ತಮ. ಮೇಕಪ್ ಧರಿಸುತ್ತಿದ್ದರೆ ಅದು ಹಿತಮಿತವಾಗಿರಲಿ. ಮುಖದಲ್ಲಿ ಒಣಗಿದ ಚರ್ಮವಿದ್ದರೆ ವಾರಕ್ಕೆರಡು ಬಾರಿ ಫೇಶಿಯಲ್ ಸ್ಕ್ರಬ್ ಉಪಯೋಗಿಸಿ ಅನುಪಯುಕ್ತ ಚರ್ಮವನ್ನು ತೆಗೆದು ಹಾಕಿ.
ಮುಖಕ್ಕೆ ಶುದ್ಧ ಜೇನನ್ನು ಲೇಪಿಸಿ ಹತ್ತು ನಿಮಿಷ ಕಳೆದು ತಣ್ಣೀರಿನಲ್ಲಿ ತೊಳೆಯುವುದರಿಂದ ಮುಖ ಕಾಂತಿಯುಕ್ತವಾಗುವುದು. ಬೆಳಗ್ಗೆದ್ದ ಕೂಡಲೇ ಬರಿ ಹೊಟ್ಟೆಯಲ್ಲಿ ಕುದಿಸಿ ತಣಿಸಿದ ನೀರನ್ನು ಸೇವಿಸುವುದರಿಂದ ವಾಯುದೋಷ ನಿವಾರಣೆಯಾಗುವುದರೊಂದಿಗೆ ಮುಖದಲ್ಲಿ ಮೊಡವೆಗಳು ಮೂಡುವುದನ್ನೂ ನಿಯಂತ್ರಣಕ್ಕೆ ತರಬಹುದು.
ಚಳಿಗಾಲದಲ್ಲಿ ಅತೀ ತಣ್ಣಗಿನ ನೀರಿನಲ್ಲಿ ಮುಖ ತೊಳೆಯುವುದರಿಂದಾಗಿ ಚರ್ಮವು ಇನ್ನಷ್ಟು ಶುಷ್ಕಗೊಳ್ಳುತ್ತದೆ. ಆದುದರಿಂದ ಉಗುರು ಬಿಸಿ ನೀರಿನಿಂದ ಮುಖ ತೊಳೆಯುವುದು ಉತ್ತಮ. ದಿನಾ ಅರಶಿಣವನ್ನು ಹಾಲಿನ ಕೆನೆಯೊಂದಿಗೆ ಮುಖಕ್ಕೆ ಹಚ್ಚುತ್ತಿದ್ದರೆ ಚರ್ಮವು ಕಾಂತಿಯುತವಾಗಿ ಮುಖ ಹೊಳೆಯುತ್ತದೆ. ಮುಖದ ಸೌಂದರ್ಯ ವರ್ಧಿಸಲು ರಾಸಾಯನಿಕಯುಕ್ತ ಪ್ರಸಾದನ ಲೇಪನಗಳ ಹಿಂದೆ ಬಿದ್ದು ಆರೋಗ್ಯ ಕೆಡಿಸುವುದರಿಂದ ಆಹಾರದಲ್ಲಿ ಹೆಚ್ಚು ಪೋಷಕಾಂಶಗಳನ್ನು ಬಳಸಿ. ಮುಖವು ಒಣಗಿ ವಯಸ್ಸಾದಂತೆ ತೋರುತ್ತಿದ್ದರೆ ಅಲೋವಿರಾ ರಸವನ್ನು ಲೇಪಿಸಿ ಹತ್ತು ನಿಮಿಷಗಳ ನಂತರ ತಣ್ಣೀರಿನಿಂದ ತೊಳೆದರೆ ಸುಂದರ ವದನ ನಿಮ್ಮದಾಗುವುದು.