ಸೌಂದರ್ಯದಿಂದ ಕಂಗೊಳಿಸಲು ಚರ್ಮದ ರಕ್ಷಣೆಗೆ - ಒಂದಷ್ಟು ಸಲಹೆಗಳು

ಗುರುವಾರ, 12 ಡಿಸೆಂಬರ್ 2013 (17:22 IST)
PR
ಸೌಂದರ್ಯ ಎಂಬುದು ಚರ್ಮದಲ್ಲಿ ಅಡಗಿದೆ ಎಂಬ ಮಾತು ಜೀವನವನ್ನು ತಾತ್ವಿಕತೆಯೊಂದಿಗೆ ಥಳುಕು ಹಾಕಲು ಹಲವಾರು ಸಂದರ್ಭಗಳಲ್ಲಿ ಬಳಕೆಯಾಗುತ್ತದೆ. ಆದರೆ ಸೌಂದರ್ಯ ಮತ್ತು ದೇಹದ ಆರೈಕೆಯ ಸಂಪೂರ್ಣ ವ್ಯವಹಾರವು ಇದರ ಹಿಂದಿದೆ ಎಂಬುದು ಸತ್ಯ.

ದೇಹದ ಅತ್ಯಂತ ಹೊರಭಾಗದ ಪದರವಾಗಿರುವ ಚರ್ಮವು ತನ್ನ ಬಣ್ಣ, ವಿನ್ಯಾಸ, ಮೃದುತ್ವ ಮತ್ತು ಒಟ್ಟಾರೆ ರೂಪದ ಮೂಲಕವಾಗಿ ಸೌಂದರ್ಯವನ್ನು ಬಿಂಬಿಸುತ್ತದೆ. ಆಹಾರ ಸೇವನೆಯ ಮೂಲಕ ನಾವು ದೇಹವನ್ನು ಪೋಷಿಸುವ ವಿಧಾನವು ಚರ್ಮದ ಮೇಲೆ ನೇರ ಪರಿಣಾಮ ಬೀರುತ್ತದೆ. ಅಧಿಕ ತಾಪಮಾನ, ಬೆಳಕು ಮತ್ತು ಥಂಡಿ ಇತ್ಯಾದಿಗಳಿಗೆ ಚರ್ಮವು ಸುಲಭವಾಗಿ ತನ್ನ ಸೌಂದರ್ಯ ಕಳೆದುಕೊಳ್ಳಬಹುದು. ಹೆಚ್ಚಾಗಿ ಕಣ್ಣುಗಳ ಸುತ್ತ, ಬಾಯಿಯ ಸುತ್ತ... ಇತ್ಯಾದಿ ಅತಿ ಸೂಕ್ಷ್ಮ ಭಾಗಗಳಲ್ಲಿ ಗೆರೆಗಳು, ಸುಕ್ಕುಗಟ್ಟುವಿಕೆಯ ಮೂಲಕ ಅದು ಈ ಪ್ರಭಾವವನ್ನು ತೋರ್ಪಡಿಸುತ್ತದೆ.

ಚರ್ಮದ ಆರೈಕೆಯ ನಿಟ್ಟಿನಲ್ಲಿ ಅಗತ್ಯವಿರುವ ಪೋಷಕಾಂಶಗಳೆಂದರೆ ವಿಟಮಿನ್ ಇ ಮತ್ತು ವಿಟಮಿನ್ ಡಿ. ಇವೆರಡರಿಂದ ಚರ್ಮದ ವಿನ್ಯಾಸ ಮತ್ತು ಕಾಂತಿ ವರ್ಧಿಸುತ್ತದೆ. ಹೆಚ್ಚು ನೀರು ಕುಡಿದರೆ ದೇಹದ ಒಳಗಿನ ಭಾಗಗಳೆಲ್ಲಾ ಕ್ಲೀನ್ ಆಗುತ್ತವೆ ಎಂಬ ಮಾತಿನಲ್ಲಿ ಖಂಡಿತವಾಗಿಯೂ ಸತ್ಯಾಂಶವಿದೆ. ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ದೇಹದ ಆಂತರಿಕ ಭಾಗಗಳು ಎಷ್ಟು ಸ್ವಚ್ಛವಾಗಿವೆ ಎಂಬುದನ್ನು ತಿಳಿಯಬೇಕಿದ್ದರೆ ನೀವು ಚರ್ಮವನ್ನು ನೋಡಿ ತಿಳಿದುಕೊಳ್ಳಬಹುದು. ಅದೇ ರೀತಿ, ನಿಮಗೆ ಕಳೆದ ರಾತ್ರಿ ನಿದ್ದೆ ಇಲ್ಲದಿದ್ದರೆ, ಅಥವಾ ಮಾನಸಿಕ ಒತ್ತಡಕ್ಕೀಡಾಗಿದ್ದರೆ, ನಿಮ್ಮ ಬಗ್ಗೆ ಕಾಳಜಿ ವಹಿಸಿಕೊಳ್ಳಬೇಕು ಎಂದು ನಿಮಗೆ ಮೊದಲಾಗಿ ಸಂಕೇತ ನೀಡುವುದು ನಿಮ್ಮ ಚರ್ಮ. ಅದೇ ರೀತಿ, ಚರ್ಮವನ್ನು ತಪಾಸಣೆ ಮಾಡಿಯೇ ಹಲವು ವೈದ್ಯರು ಗಂಭೀರ ಕಾಯಿಲೆಗಳನ್ನೂ ಗುರುತಿಸಬಲ್ಲರು ಮತ್ತು ಅದರ ಅನುಸಾರವಾಗಿ ಸೂಕ್ತ ಚಿಕಿತ್ಸೆ, ಔಷಧಿ ನೀಡಬಲ್ಲರು.

PR
ಹೀಗಿರುವಾಗ ಈ ಚರ್ಮವನ್ನು ಅತ್ಯಂತ ಕಾಳಜಿಯಿಂದ ಹೇಗೆ ನೋಡಿಕೊಳ್ಳಬಹುದು?

1. ನಾವು ನಿದ್ರೆಯಿಂದ ಎದ್ದ ಬಳಿಕ ಮತ್ತು ಸ್ನಾನದ ಮಾಡಿದ ಸಂದರ್ಭ ಚರ್ಮವು ಅತ್ಯಂತ ಮೃದುವಾಗಿರುತ್ತದೆ. ಹಾಗಾಗಿ ಚರ್ಮವನ್ನು ಯಾವತ್ತೂ ಒರಟಾಗಿ ಉಜ್ಜಬಾರದು. ಸ್ನಾನದ ಬಳಿಕ ಇರುವ ನೀರನ್ನು ಮಿದುವಾದ ಬಟ್ಟೆಯಿಂದ ಮೆಲ್ಲನೆ ಒರೆಸಿ ಒಣಗಲು ಬಿಡಬೇಕು.

2. ವಾತಾವರಣ ಯಾವ ರೀತಿಯಲ್ಲೇ ಇರಲಿ, ಸ್ನಾನ ಮಾಡಿದ ಬಳಿಕ ಯಾವತ್ತೂ ಲೈಟ್ ಆಗಿರುವ ಮಾಯಿಶ್ಚರೈಸಿಂಗ್ ಕ್ರೀಮ್ ಹಚ್ಚಿಕೊಳ್ಳುವುದು ಒಳ್ಳೆಯದು. ಬೇರೆ ಬೇರೆ ಚರ್ಮದ ವಿಧಗಳಿಗೆ ವಿಭಿನ್ನ ಕ್ರೀಮ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿರುತ್ತವೆ.

3. ಕಠಿಣವಾದ ವಾತಾವರಣಕ್ಕೆ ಪ್ರವೇಶಿಸುವಂತಹ ಸಂದರ್ಭ ಬಂದಾಗ, ನಾವು ಬೇಸಿಗೆ ಕಾಲಕ್ಕಾದರೆ ಸನ್ ಸ್ಕ್ರೀನ್ ಲೋಶನ್, ಕೊಡೆ ಮುಂತಾದವುಗಳೊಂದಿಗೆ ಸಾಕಷ್ಟು ಪೂರ್ವತಯಾರಿ ಮಾಡಿಕೊಂಡಿರಬೇಕು. ಇದರಿಂದ ಉಷ್ಣಾಘಾತ (ಹೀಟ್ ಸ್ಟ್ರೋಕ್)ನಿಂದ ಬಚಾವಾಗಬಹುದು. ಮತ್ತು ಚಳಿಗಾಲದಲ್ಲಾದರೆ ತಲೆಯಿಂದ ಪಾದದ ತನಕ ಮುಚ್ಚುವ ಉಡುಗೆ ಧರಿಸಿದರೆ ಶೀತ ಆಘಾತದಿಂದ ಚರ್ಮಕ್ಕೆ ರಕ್ಷಣೆ ಪಡೆಯಬಹುದು.

PR
4. ಸೌಂದರ್ಯ ಚಿಕಿತ್ಸೆ ಸಂದರ್ಭ ತೀಕ್ಷ್ಣ ರಾಸಾಯನಿಕಗಳು, ಬ್ಲೀಚ್ ಬಳಕೆ ಸಲ್ಲದು. ಅವುಗಳು ತತ್ ಕ್ಷಣಕ್ಕೆ ಮುಖಕ್ಕೆ ಕಾಂತಿಯನ್ನು ನೀಡುತ್ತವೆಯಾದರೂ, ಕೆಲವು ವರ್ಷಗಳ ಬಳಿಕ ಮುಖದ ಚರ್ಮದ ವಿನ್ಯಾಸವು ಕಪ್ಪುಕಟ್ಟಬಹುದು ಮತ್ತು ಚರ್ಮ ಸುಕ್ಕುಗಟ್ಟಬಹುದು. ಯಾವತ್ತೂ ಗಿಡಮೂಲಿಕೆಗಳ ಸೌಂದರ್ಯ ಚಿಕಿತ್ಸೆ ಅಥವಾ ಗೃಹೋತ್ಪನ್ನಗಳಿಗೆ ಮೊರೆ ಹೋಗುವುದು ಯಾವತ್ತೂ ಒಳಿತು.

5. ಅದೇ ರೀತಿ, ಚರ್ಮವನ್ನು ಯಾವತ್ತೂ ಕೂಡ ಕೆಳಮುಖವಾಗಿ ಒರೆಸಬಾರದು. ಉದಾಹರಣೆಗೆ, ನೀವು ಮುಖಕ್ಕೆ ಪೌಡರ್ ಅಥವಾ ಕ್ರೀಮ್ ಹಚ್ಚುವಾಗಲೂ ಕೂಡ ಕೈಗಳ ಚಲನೆಯು ಮೇಲ್ಮುಖವಾಗಿರಬೇಕೇ ಹೊರತು ಯಾವತ್ತೂ ಕೆಳಮುಖವಾಗಿರಬಾರದು. ನಾವು ಚರ್ಮವನ್ನು ಎಳೆದರೆ, ಅದು ಕೆಳ ಸಮಯದ ನಂತರ ಇಳಿಬಿದ್ದಂತೆ ಆಗುತ್ತದೆ.

6. ಆಧುನಿಕ ಕಾಲದಲ್ಲಿ ಹಿಂದಿನ ಕಾಲದಿಂದಲೂ ಎಣ್ಣೆ ಹಚ್ಚಿ ಸ್ನಾನ ಮಾಡುವ ಹಿಂದಿನ ಕಾಲದ ಸಂಪ್ರದಾಯವನ್ನು ನಾವು ಕಡೆಗಣಿಸುತ್ತಿದ್ದರೂ, ಒಟ್ಟಾರೆ ಆರೋಗ್ಯದಲ್ಲಿ ಅದು ಮಹತ್ವದ ಪಾತ್ರ ವಹಿಸುತ್ತದೆ ಎಂಬುದು ಶ್ರುತಪಟ್ಟಿರುವುದರಿಂದ ಈ ಬಗ್ಗೆ ಗಮನ ಹರಿಸುವುದು ಒಳ್ಳೆಯದು.

7. ಕಣ್ಣಿನ ಸುತ್ತಲಿನ ಚರ್ಮವನ್ನು ಯಾವತ್ತಿಗೂ ನಿರ್ಲಕ್ಷಿಸಬಾರದು ಮತ್ತು ಬೇಕಾಬಿಟ್ಟಿ ಉಜ್ಜಬಾರದು. ದೇಹದ ಇತರ ಭಾಗಗಳಿಗೆ ಹೋಲಿಸಿದರೆ ಅವು ಅತ್ಯಂತ ಸೂಕ್ಷ್ಮವಾಗಿದ್ದು, ಅದೇ ರೀತಿ ಪ್ರತಿಸ್ಪಂದನೆಯನ್ನೂ ನೀಡುತ್ತವೆ. ಕಣ್ಣಿನ ಪಾರ್ಶ್ವಗಳಲ್ಲಿ ಮೂಡುವ ನೆರಿಗೆಗಳು ಬಹುತೇಕವಾಗಿ ವಯಸ್ಸಿನೊಂದಿಗೆ ಸಂಬಂಧ ಹೊಂದಿರುತ್ತವೆ.

PR
8. ದೇಹದ ಇತರ ಭಾಗಗಳಿಗೆ ಹೋಲಿಸಿದರೆ ಪಾದದ ಚರ್ಮವು ಹೆಚ್ಚು ದಪ್ಪವಿರುತ್ತದೆ ಮತ್ತು ಬೇಗನೇ ಕಠಿಣವಾಗುತ್ತದೆ. ಕೆಲವು ಬಾರಿ ಅಸಮರ್ಪಕ ಪಾದರಕ್ಷೆ ಬಳಕೆಯಿಂದಲೂ ಚರ್ಮ ದಪ್ಪವಾಗಬಹುದು. ಜನ ತಮ್ಮ ಪಾದದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲ. ವಿಶೇಷವಾಗಿ ಸಿಹಿಮೂತ್ರ ರೋಗಿಗಳಲ್ಲಿ ಪಾದದಿಂದಲೇ ಸಮಸ್ಯೆ ಉಂಟಾಗುವುದರಿಂದ, ಯಾವತ್ತೂ ಪಾದಗಳ ರಕ್ಷಣೆ ಬಗೆಗೆ ಆದ್ಯ ಗಮನ ನೀಡುವುದು ಅಗತ್ಯ.

9. ಸ್ನಾನದ ತಕ್ಷಣವೇ ಪಾದವನ್ನು ಪ್ಯುಮೈಸ್ ಸ್ಟೋನ್‌ನಿಂದ ಉಜ್ಜಬೇಕು. ಇದರಿಂದ ನಿರ್ಜೀವ ಕೋಶಗಳು ನಿವಾರಣೆಯಾಗುತ್ತವೆ. ಸಾಧ್ಯವಾದಲ್ಲಿ, ವಾರಕ್ಕೊಂದು ಬಾರಿ ಪಾದಗಳನ್ನು ಸಾಕಷ್ಟು ಸ್ಥಳಾವಕಾಶವಿರುವ ಟಬ್ ಒಂದರಲ್ಲಿ ಒಂದಿಷ್ಟು ಉಪ್ಪು ಸಹಿತ ಉಗುರು ಬೆಚ್ಚಗಿನ ನೀರು ಇರಿಸಿ ಮುಳುಗಿಸುವುದು ಒಳಿತು. ಆ ಮೇಲೆ ಬೆರಳುಗಳೆಡೆಯಲ್ಲಿ ಫಂಗಸ್‌ಗೆ ಕಾರಣವಾಗುವ ತೇವಾಂಶ ತೊಲಗಿಸಲು ಪೂರ್ತಿಯಾಗಿ ಒಣಗಲು ಬಿಡಬೇಕು.

10. ಏನೇ ಹೇಳಿದರೂ, ನೀವೇನು ತಿನ್ನುತ್ತೀರಿ ಎಂಬುದು ಚರ್ಮದ ಮೇಲೆ ಪೂರ್ತಿಯಾಗಿ ಪರಿಣಾಮ ಬೀರುತ್ತದೆ. ಆದುದರಿಂದ ಆರೋಗ್ಯಕರ ಆಹಾರ ಸೇವಿಸಿದರೆ ಚರ್ಮವು ಹೊಳೆಯುತ್ತಿರುತ್ತದೆ.

ವೆಬ್ದುನಿಯಾವನ್ನು ಓದಿ