ನಿಮ್ಮ ಪಾದ ಹಾಗೂ ಕೈಗಳಲ್ಲೂ ಇದೆ ಸೌಂದರ್ಯ

IFM
ಬಹುತೇಕ ಮಂದಿ ತಮ್ಮ ಮುಖದ ಸೌಂದರ್ಯಕ್ಕೆ ಮಹತ್ವ ಕೊಡುತ್ತಾರೆಯೋ ಹೊರತು, ಕೈ, ಕಾಲು, ಪಾದ... ಹೀಗೆ ಯಾವುದರ ಸೌಂದರ್ಯಕ್ಕೂ ಅಷ್ಟಾಗಿ ಮಹತ್ವ ಕೊಡುವುದಿಲ್ಲ. ಆದರೆ, ನಿಜವಾಗಿ ನಿಮ್ಮ ಕೈ ಕಾಲುಗಳಲ್ಲೂ ಸೌಂದರ್ಯ ಅಡಗಿದೆ ಎಂಬುದು ನಿಮಗೆ ಗೊತ್ತಾ?

ಬಿರುಕು ಬಿಟ್ಟ ಪಾದಗಳು, ರಕ್ತ ಸುರಿಯುವಂತೆ ಗಾಯಗಳಾದ ಪಾದಗಳು ನಿಮ್ಮಲ್ಲಿ ಆತ್ಮವಿಶ್ವಾಸ ಕಡಿಮೆ ಮಾಡಬಹುದು. ಅಥವಾ ನಿಮ್ಮನ್ನು ಕೆಲವೊಮ್ಮೆ ಮುಜುಗರಕ್ಕೊಳಗಾಗಿಸಬಹುದು. ನಿರ್ಮಲ, ಸ್ವಚ್ಛ, ಆರೋಗ್ಯಕರ ಪಾದ, ಕೈ ಕಾಲುಗಳು ನಿಮ್ಮಲ್ಲಿ ದೃಢತೆಯನ್ನು ಹೆಚ್ಚಿಸುವುದರಲ್ಲಿ ಎರಡು ಮಾತೇ ಇಲ್ಲ. ಹಾಗಾದರೆ ಸುಂದರ, ಮೃದು, ಸುಕೋಮಲ ಪಾದ, ಕೈಕಾಲುಗಳನ್ನು ಪಡೆಯಲು ಏನು ಮಾಡಬೇಕು? ಈ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ.

ನಿಮ್ಮ ದಿನನಿತ್ಯದ ಸಮಯದ ಜಂಜಾಟಗಳಲ್ಲೂ ನಿಮ್ಮ ಪಾದ, ಕೈಕಾಲುಗಳಿಗೆ ಸ್ವಲ್ಪ ಸಮಯ ನೀಡಿ. ಅವುಗಳ ಕಾಳಜಿಗೂ ಸ್ವಲ್ಪ ಸಮಯವನ್ನು ಪ್ರತಿದಿನವೂ ಮೀಸಲಿಡಿ. ಇದು ಅರ್ಧಗಂಟೆಯಾದರೂ ಸಾಕು. ಈ ಅರ್ಧ ಗಂಟೆ ನಿಮ್ಮ ಕೈಕಾಲುಗಳನ್ನು ತುಂಬ ಆರೋಗ್ಯಕರವಾಗಿಸುತ್ತದೆ. ವರ್ಷವಿಡೀ ನಿಮ್ಮ ಕೈಕಾಲುಗಳು ತುಂಬ ಕೋಮಲವಾಗಿ ಆರೋಗ್ಯಕರವಾಗುತ್ತದೆ. ಇದು ಶೇ.100ರಷ್ಟು ಸತ್ಯ.

IFM
ಪ್ರತಿ ದಿನವೂ ಪಾದಗಳ ಸ್ಕ್ರಬ್ ಬಳಸಿ. ಕಾಲಿಗೆ ಸ್ಕ್ರಬ್ ಹಚ್ಚಿ, ಚೆನ್ನಾಗಿ ವರ್ತುಲಾಕಾರದಲ್ಲಿ ಸ್ವಲ್ಪ ಮಸಾಜ್ ಮಾಡಿ ಹಾಗೇ ಬಿಟ್ಟು ಐದು ನಿಮಿಷದ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ನಂತರ ಮಾಯ್‌ಶ್ಚರೈಸರ್ ಹಚ್ಚಿ ಬೆರಳುಗಳಿಂದ ವರ್ತುಲಾಕಾರದ್ಲಲಿ ಮಸಾಜ್ ಮಾಡಿ. ಇದು ಕೆಲಸವೆಲ್ಲ ಪೂರ್ಣಗೊಂಡು ಮಲಗುವ ಮುನ್ನ ಮಾಡಿದರೆ ಉತ್ತಮ. ದಿನವೂ ಬಳಸಲು ಸ್ಕ್ರಬ್ ದುಬಾರಿ ಅಂತನಿಸಿದರೆ, ನೀವೇ ಮನೆಯಲ್ಲಿ ಸ್ಕ್ರಬ್ ಮಾಡಿಕೊಳ್ಳಬಹುದು. ಮೂರು ನಿಂಬೆಹಣ್ಣು, ಎರಡು ಚಮಚ ಸಕ್ಕರೆ, ಒಂದು ಚಮಚ ಸಿಹಿ ಅಲ್ಮಂಡ್ ಆಯಿಲ್, ಚೆನ್ನಾಗಿ ಕತ್ತರಿಸಿದ 15 ಪುದಿನ ಎಲೆ, ಐದು ಬಿಂದು ಲೈಮ್ ಆಯಿಲ್‌ಗಳನ್ನು ತೆಗೆದಿಟ್ಟುಕೊಳ್ಳಿ. ಮೊದಲು ನಿಂಬೆಹಣ್ಣನ್ನು ಸಣ್ಣಗೆ ಕತ್ತರಿಸಿ. ಅದನ್ನು ಮಿಕ್ಸಿಗೆ ಹಾಕಿ ಚೆನ್ನಾಗಿ ರುಬ್ಬಿ. ಈ ರುಬ್ಬಿದ ನಿಂಬೆಗೆ ಅಲ್ಮಂಡ್ ಆಯಿಲ್, ಪುದಿನ ಸೊಪ್ಪು, ನಿಂಬೆ ಎಣ್ಣೆ ಸೇರಿಸಿ. ಇದನ್ನು ಫೂಟ್ ಸ್ಕ್ರಬ್ ಆಗಿ ಬಳಸಬಹುದು. ಅಥವಾ ಇದಕ್ಕೆಲ್ಲ ಸಮಯವಿಲ್ಲವಾದರೆ, ಎಸೆನ್ಶಿಯಲ್ ಆಯಿಲ್ ಇರುವ ಫೂಟ್ ಸ್ಕ್ರಬ್ ಒಂದನ್ನು ಖರೀದಿ ಮಾಡಿ.

ಕೆಲಸ ಮಾಡಿ ಕಾಲು ಸೋತು ಹೋದಂತೆ ಅನಿಸಿದರೆ, ಕಾಲು ನೋಯುತ್ತಿದ್ದರೆ, ಆಲಿವ್ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ನಿಮ್ಮ ಪಾದವೂ ಸೇರಿದಂತೆ ಕಾಲಿಗೆ ಹಚ್ಚಿ ಕಾಟನ್ ಸಾಕ್ಸ್ ಧರಿಸಿ ಸುಮ್ಮನೆ ಮಲಗಿಬಿಡಿ. ಅಥವಾ ಬರಿಗಾಲಿನಲ್ಲಿ ಪೆಬಲ್ಸ್ ಮೇಲೆ ನಡೆದಾಡಿ. ಇದು ನಿಮ್ಮ ಪಾದದ ಆಕ್ಯುಪ್ರೆಶರ್ ಪಾಯಿಂಟ್‌ಗಳಿಗೆ ಒತ್ತಿದಂತಾಗಿ ನಿಮಗೆ ಕಾಲುನೋವನ್ನು ಕಡಿಮೆ ಮಾಡುತ್ತದೆ. ಇದು ಆರೋಗ್ಯ ದೃಷ್ಟಿಯಿಂದಲೂ ಒಳ್ಳೆಯದು.

ಇದಲ್ಲದೆ, ಕೆಲವೊಮ್ಮೆ ಕಾಲಿನಲ್ಲಿ ಆಣಿಯಂತಹ ಗಟ್ಟಿ ರಚನೆಗಳೂ ತೊಂದರೆ ಕೊಡುತ್ತದೆ. ಇಂತಹ ತೊಂದರೆ ಇದ್ದರೆ ಬಿಸಿ ನೀರಿಗೆ ಸ್ವಲ್ಪ ಉಪ್ಪು ಹಾಕಿ. ನೀರಿನಲ್ಲಿ ಕಾಲನ್ನು ಮುಳುಗಿಸಿ. ನಂತರ ಆಣಿಯಿರುವ ಜಾಗಕ್ಕೆ ಒಂದು ತುಂಡು ಅನನಾಸನ್ನು ರುಬ್ಬಿ ಅದನ್ನು ಹಚ್ಚಿ 5ರಿಂದ 10 ನಿಮಿಷ ಹಾಗೇ ಬಿಡಿ. ಇದರಿಂದ ಆಣಿ ಕಡಿಮೆಯಾಗುತ್ತದೆ.

IFM
ದಿನವಿಡೀ ಮನೆಕೆಲಸದಲ್ಲಿ ನೀರು, ಸೋಪು, ಡಿಟರ್ಜೆಂಟ್, ಕೊಳೆ, ಕೆಮಿಕಲ್ಗಳಿಗೆ ಒಡ್ಡುತ್ತಲೇ ಇದ್ದರೆ ಕೈಯ ಚರ್ಮ ಶುಷ್ಕವಾಗುತ್ತಾ ಹೋಗುತ್ತದೆ. ಒರಟಾಗುತ್ತದೆ ಅಲ್ಲದೆ ನೆರಿಗೆಗಳು ಬೀಳುತ್ತವೆ. ಅದಕ್ಕಾಗಿ ಕೈಯ ಚರ್ಮವನ್ನೂ ಕಾಳಜಿ ವಹಿಸುವುದು ಅಗತ್ಯ. ನಿಜವಾಗಿ ಹೇಳುವುದಾದರೆ ದಿನಕ್ಕೆ ಕನಿಷ್ಟ ನಾಲ್ಕು ಬಾರಿ ಮಾಯ್‌ಶ್ಚರೈಸರ್ ಹಚ್ಚಿಕೊಳ್ಳಬೇಕು. ಪ್ರಮುಖವಾಗಿ ಕೈ ತೊಳೆದ ಮೇಲೆ ಮಾಯ್‌ಶ್ಚರೈಸರ್ ತುಂಬಾ ಅಗತ್ಯ. ಇದಕ್ಕೆ ನಿಮಗೆ ಸಮಯವಿಲ್ಲ ಎಂದಾದರೆ, ನೀವು ಮಲಗುವ ವೇಳೆಯಾದರೂ ಕೈಗಳಿಗೆ ಮಾಯ್‌ಶ್ಚರೈಸರ್ ಹಚ್ಚಿಕೊಳ್ಳಿ. ಇದು ನೀವು ನಿಮ್ಮ ಹಲ್ಲನ್ನು ಪ್ರತಿದಿನ ಉಜ್ಜುವಷ್ಟೇ ಮುಖ್ಯ ಕೂಡಾ.

ಪ್ರತಿದಿನವೂ ತುಂಬ ನೀರು ಕುಡಿಯಿರಿ. ಹೊಟ್ಟೆ ತುಂಬ ಊಟ ಮಾಡಬೇಡಿ. ಎಣ್ಣೆ ತಿಂಡಿಗಳನ್ನು ಕಡಿಮೆ ಮಾಡಿ. ಪ್ರತಿದಿನವೂ ವ್ಯಾಯಾಮ ಮಾಡಿ. ನೀವು ಆರೋಗ್ಯವಾಗಿದ್ದರೆ ನಿಮ್ಮ ಚರ್ಮವೂ ಆರೋಗ್ಯವಾಗಿರುತ್ತದೆ. ಹೊಳಪು ಮೂಡುತ್ತದೆ. ನಿಮ್ಮ ಕೈ ತುಂಬ ಒಣ ಚರ್ಮವಾಗಿದ್ದರೆ ಸ್ವಲ್ಪ ಪೆಟ್ರೋಲಿಯಂ ಜೆಲ್ಲಿಯನ್ನು ಮಲಗುವ ಮುನ್ನ ಹಚ್ಚಿ. ಮಲಗುವಾಗ ಕಾಟನ್ ಗ್ಲೋವ್ಸನ್ನು ಹಾಕಿ. ಬೆಳಿಗ್ಗೆ ನಿಮ್ಮ ಚರ್ಮ ನಯವಾಗಿ ಮೃದುವಾಗಿರುತ್ತದೆ.

ಇದಲ್ಲದೆ ನೀವು ಮನೆಯಲ್ಲೇ ಸ್ಕ್ರಬ್ ತಯಾರಿಸಿಕೊಳ್ಳಬಹುದು. ವೈಟ್ ಓಟ್ಸ್ ಒಂದು ಚಮಚವನ್ನು ಅರ್ಧಕಪ್ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ. ನೀರು ಆರಿದ ತಕ್ಷಣ ಅದನ್ನು ಒಂದು ಬೌಲ್‌ಗೆ ಹಾಕಿ ಅದಕ್ಕೆ ಫ್ರಿಡ್ಜ್‌ನಲ್ಲಿಟ್ಟ ಒಂದು ಚಮಚ ಹಾಲನ್ನು ಸೇರಿಸಿ. ಒಂದು ಚಮಚ ಜೇನುತುಪ್ಪವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಹ್ಯಾಂಡ್ ಸ್ಕ್ರಬ್ ಆಗಿ ಬಳಸಬಹುದು.

ಕೆಲಸವಾದ ನಂತರ, ಸೋಪಿನಿಂದ ಕೈಗಳನ್ನು ಚೆನ್ನಾಗಿ ತೊಳೆದು, ನಂತರ ಮೆದುವಾಗಿ ಟವೆಲ್‌ನಿಂದ ಒರೆಸಿ. ಹ್ಯಾಂಡ್‌ ಸ್ಕ್ರಬ್ ಅನ್ನು ಬೆರಳುಗಳೂ ಸೇರಿದಂತೆ ಇಡೀ ಕೈಗೆ ಹಚ್ಚಿ. ಹತ್ತು ನಿಮಿಷ ಹಾಗೇ ಬಿಡಿ. ಉಗುರು ಬೆಚ್ಚನೆ ನೀರಿನಿಂದ ತೊಳೆಯಿರಿ. ಒದ್ದೆಯನ್ನು ಮೆದುವಾಗಿ ಒತ್ತಿ ಒರೆಸಿ. ನಂತರ ಒಂದು ಬಾದಾಮಿ ಗಾತ್ರದಷ್ಟು ಮಾಶ್ಚರೈಸರನ್ನು ಕೈಯಲ್ಲ ತೆಗೆದು ಚೆನ್ನಾಗಿ ಬೆರಲೂ ಸೇರಿದಂತೆ ಕೈಗೆ ಹಚ್ಚಿ. ವರ್ತುಲಾಕಾರದಲ್ಲಿ ಬೆರಳುಗಳ ಸಹಾಯದಿಂದ ಮಸಾಜ್ ಮಾಡಿ. ವಾರಕ್ಕೆ ಎರಡು ಬಾರಿ ಹ್ಯಾಂಡ್ ಸ್ಕ್ರಬ್ ಹಚ್ಚಿದರೆ ಸಾಕು.