ಸೌಂದರ್ಯ ಕೇವಲ ಮುಖದಲ್ಲಿ ಮಾತ್ರ ಅಡಗಿದೆಯೇ? ಖಂಡಿತಾ ಅಲ್ಲ. ಬಾಹ್ಯ ಸೌಂದರ್ಯದಲ್ಲಿ ಬಹುಮುಖ್ಯ ಪಾತ್ರ ವಹಿಸುವುದು ದೇಹದ ಆಕಾರ. ದಪ್ಪ ಶರೀರ ಸೌಂದರ್ಯವನ್ನು ಹಾಳು ಮಾಡುತ್ತದಷ್ಟೇ ಅಲ್ಲ, ಆರೋಗ್ಯವನ್ನೂ ಕೂಡಾ. ಹಾಗಾಗಿ ತೆಳ್ಳಗಾಗಲು ಮೊದಲು ಸಿದ್ಧರಾಗಿ.
ತೆಳ್ಳಗಾಗೋದು ಎಂದರೆ ಏನನ್ನೂ ತಿನ್ನದೆ ಉಪವಾಸ ಮಾಡುವುದಂತೂ ಖಂಡಿತ ಅಲ್ಲ. ದೇಹಕ್ಕೆ ಹಿತಮಿತವಾಗಿ ಕೊಬ್ಬೂ ಸೇರಿದಂತೆ ವಿಟಮಿನ್, ಕಾರ್ಬೋಹೈಡ್ರೇಟ್ ಎಲ್ಲವೂ ಬೇಕು. ಆದರೆ ಒಂದು ಮಿತಿಯನ್ನು ಇವು ದಾಟಿದರೆ ಬೊಜ್ಜು ಬರಲು ಶುರುವಾಗುತ್ತದೆ. ಆರೋಗ್ಯ, ಸೌಂದರ್ಯ, ನೆಮ್ಮದಿ ಎಲ್ಲವೂ ಹಾಳು. ದುಡ್ಡೂ ದಂಡ.
ಹಾಗಾದರೆ ತೆಳ್ಳಗಾಗಬೇಕೆಂದರೆ ಏನು ಮಾಡಬೇಕು? ಈ ಪ್ರಶ್ನೆ ಎಲ್ಲರಲ್ಲೂ ಇದ್ದೇ ಇದೆ. ಆಯುರ್ವೇದದಲ್ಲಿ ತೆಳ್ಳಗಾಗಲು ಸಾಕಷ್ಟು ಸಿದ್ಧ ಸೂತ್ರಗಳಿವೆ. ಚರಕ ಸಂಹಿತ, ದೇಹದಲ್ಲಿ ಬೊಜ್ಜು ಇದ್ದರೆ ಅದೊಂದು ರೋಗ ಎಂದೇ ವಿವರಿಸಿದೆ. ಜತೆಜತೆಗೇ ಬೊಜ್ಜು ಕರಗಿಸಲು ತಕ್ಕನಾದ ಸೂತ್ರಗಳನ್ನೂ ಹೇಳಿದೆ. ಹೆಚ್ಚಿನ ಬೊಜ್ಜಿನಿಂದ ಹೃದಯ, ಕಿಡ್ನಿ, ಲಿವರ್ ಮತ್ತಿತರ ಭಾಗಗಳಿಗೆ ಒತ್ತಡ ನೀಡುವುದಷ್ಟೇ ಅಲ್ಲ. ಸೊಂಟ, ಮೊಣಕಾಲು, ಕಾಲಿನ ಬುಡದ ಗಂಟಗಳಿಗೂ ಒತ್ತಡ ಹೆಚ್ಚಾಗುತ್ತದೆ. ಪರಿಣಾಮ ಹಲವು ರೋಗಗಳೂ ಆವರಿಸುತ್ತದೆ. ಅಧಿಕ ರಕ್ತದೊತ್ತಡ, ಕೀಲುನೋವು, ಹೃದಯದ ತೊಂದರೆ ಹೀಗೆ ಹತ್ತು ಹಲವು ರೋಗಗಳಿಗೂ ಮೂಲ ಕಾರಣ ಬೊಜ್ಜೇ ಆಗಿರುತ್ತದೆ.
ಹಾಗಾದರೆ ಈ ಬೊಜ್ಜು ಎಲ್ಲಿಂದ ಬಂತು ಎಂದು ಪ್ರಶ್ನೆ ಹಾಕಿದರೆ ಉತ್ತರ ಇಲ್ಲೇ ಇದೆ. ಹೆಚ್ಚು ತಿನ್ನುವುದು, ಸರಿಯಾದ ಸಮಯಕ್ಕೆ ತಿನ್ನದಿರುವುದು, ಜಂಕ್ ಫುಡ್‌ಗಳಿಗೇ ಮೊರೆಹೋಗುವುದು ಇವೆಲ್ಲ ಬೊಜ್ಜು ಬರಲು ಕಾರಣ. ಆದರೆ, ಬೊಜ್ಜು ಇಳಿಸಲು ತಲೆಕೆಡಿಸಿಕೊಂಡು ಮಾನಸಿಕ ಆರೋಗ್ಯವನ್ನೂ ಹಾಳು ಮಾಡಬೇಕಿಲ್ಲ. ಜಾಹಿರಾತುಗಳಲ್ಲಿ ಕಾಣಿಸುವ ಮಾತ್ರೆಗಳನ್ನೋ, ಬೆಲ್ಟ್‌ಗಳನ್ನೋ ಕೊಂಡುಕೊಳ್ಳಬೇಕಿಲ್ಲ. ತುಂಬ ಸುರಕ್ಷಿತವಾದ, ಯಾವುದೇ ಅಪಾಯವಿಲ್ಲದ ಮನೆಮದ್ದಿನಲ್ಲೇ ನಾವು ನಮ್ಮ ತೂಕ ಇಳಿಸಿಕೊಳ್ಳಬಹುದು.
IFM
1. ಬೆಳಿಗ್ಗೆ ಎದ್ದ ತಕ್ಷಣ ಅರ್ಧ ನಿಂಬೆಯನ್ನು ಒಂದು ಲೋಟ ಬಿಸಿ ನೀರಿಗೆ ಹಿಂಡಿ ಅದಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ಕುಡಿಯಿರಿ. ಇದು ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
2. ಬೆಳಗ್ಗಿನ ತಿಂಡಿ ಸಮಯದಲ್ಲಿ ಕಾಫಿ, ಟೀ ಕುಡಿಯುವ ಬದಲು ಹಾಲು ಕುಡಿಯಿರಿ. ಗೋಧಿಯ ತಿಂಡಿ ತಿಂದರೆ ಉತ್ತಮ. ಒಣ ಚಪಾತಿ ಒಳ್ಳೆಯದು.
3. ಮಧ್ಯಾಹ್ನದ ಊಟಕ್ಕೂ ಮೊದಲು ಹಸಿವಾದರೆ ಕಿತ್ತಳೆ, ಅನನಾಸು ಅಥವಾ ಕ್ಯಾರೆಟ್ಟಿನ ಜ್ಯೂಸ್ ಕುಡಿಯಿರಿ. ಸಕ್ಕರೆ ಹಾಕದಿದ್ದರೆ ಉತ್ತಮ. ಕೇವಲ ಹಣ್ಣಿನ ರಸ ತೆಗೆದು ಕುಡಿಯಿರಿ.
4. ಮಧ್ಯಾಹ್ನ ಊಟಕ್ಕೆ ಹಸಿ ತರಕಾರಿಗಳ ಸಲಾಡ್ ತಿನ್ನಿ. ಕ್ಯಾರೆಟ್, ಸೌತೆಕಾಯಿ, ಕ್ಯಾಬೇಜ್, ಟೋಮೇಟೋಗಳನ್ನು ಹಸಿಯಾಗಿ ಬಳಸಬಹುದು. ಅನ್ನ ಉಣ್ಣಬೇಡಿ. ಒಣ ಚಪಾತಿ ಒಳ್ಳೆಯದು. ಮಸಾಲೆ ಪದಾರ್ಥಗಳನ್ನು ಚಪಾತಿ ಜತೆಗೆ ತಿನ್ನಬೇಡಿ. ಸಲಾಡ್‌ಗಳೋ, ದಾಲ್‌ಗಳನ್ನೋ ಬಳಸಬಹುದು.
5. ಮಧ್ಯಾಹ್ನ ಊಟವಾದ ನಂತರ ಮಜ್ಜಿಗೆ ನೀರಿಗೆ ಕೊತ್ತಂಬರಿ ಸೊಪ್ಪು, ಸ್ವಲ್ಪ ಉಪ್ಪು ಹಾಕಿ ಕುಡಿಯಿರಿ. ಅದಕ್ಕೆ ಸ್ವಲ್ಪ ಶುಂಠಿಯನ್ನೂ ಸೇರಿಸಬಹುದು.
6. ನಡು ಮಧ್ಯಾಹ್ನ ಅಥವಾ ಸಂಜೆಯಾಗುತ್ತಾ ಬಂದಾಗ ಎಳೆನೀರು ಉತ್ತಮ. ಇಲ್ಲವಾದರೆ ಲೆಮೆನ್ ಟೀ ಕುಡಿಯಿರಿ. ಅಥವಾ ತಾಜಾ ತರಕಾರಿ ಸೂಪ್ ಕೂಡಾ ಕುಡಿಯಬಹುದು.
7. ರಾತ್ರಿ ಹೋಲ್ ವೀಟ್ ಬ್ರೆಡ್ ಅಥವಾ ಹೋಲ್ ಗ್ರೈನ್ ಬ್ರೆಡ್ ತಿನ್ನಿ. ಅಥವಾ ಚಪಾತಿಯೂ ತಿನ್ನಬಹುದು. ಜತೆಗೆ ಬಾಳೆಹಣ್ಣು ಹಾಗೂ ಆಪಲ್ ಹೊರತುಪಡಿಸಿ ಉಳಿದೆಲ್ಲಾ ಹಣ್ಣುಗಳನ್ನು ತಿನ್ನಬಹುದು. ಬಾಳೆಹಣ್ಣು ತೂಕ ನೀಡುತ್ತದೆ.
ಈ ಆಹಾರ ಪದ್ಧತಿಯನ್ನು ತಿಂಗಳುಗಳ ಕಾಲ ಮಾಡಿದರೆ ಖಂಡಿತಾ ತೂಕ ಇಳಿಯುತ್ತದೆ. ಆದರೆ, ಇಂಥ ಸಿದ್ಧ ಮಾದರಿಯ ಶಿಸ್ತಾದ ಆಹಾರಕ್ರಮ ಸಾಧ್ಯವಾಗದಿದ್ದರೆ ನಮ್ಮ ದಿನನಿತ್ಯದ ಆಹಾರ ಪದ್ಧತಿಯಲ್ಲೇ ಕೊಂಚ ಮಾರ್ಪಾಟು ಮಾಡಿಕೊಂಡರೂ ತೂಕ ಇಳಿಕೆ ಸಾಧ್ಯ. ಈ ಕ್ರಮವೂ ಅನುಸರಿಸಬಹುದು.
1. ತಿನ್ನುವುದನ್ನು ಸ್ವಲ್ಪ ಕಡಿಮೆ ಮಾಡಿ. ಬೇಕಾದಷ್ಟೇ ತಿನ್ನಿ. ಅಗತ್ಯಕ್ಕಿಂತ ಹೆಚ್ಚು ಬಾಯಿಗೆ ತುರುಕಬೇಡಿ. ಎಸೆಯಬೇಕಾಗುತ್ತದಲ್ಲ ಅಥವಾ ವೇಸ್ಟ್ ಆಗುತ್ತೆ ಅಂತ ಮುಗಿಸುವುದಕ್ಕೋಸ್ಕರ ಹೊಟ್ಟೆಗೆ ತಳ್ಳಬೇಡಿ. ಹೊಟ್ಟೆ ಡಸ್ಟ್ ಬಿನ್ ಖಂಡಿತಾ ಅಲ್ಲ.
IFM
2. ದಿನವೂ ಚುರುಕಿನಿಂದಿರಿ. ಊಟ ಮಾಡಿದ ತಕ್ಷಣ ಹಾಸಿಗೆಯಲ್ಲಿ ಗಡದ್ದಾಗಿ ಮಲಗಬೇಡಿ. ಸ್ವಲ್ಪ ಹೊತ್ತು ಏನಾದರೂ ಕೆಲಸ ಮಾಡುತ್ತಿರಿ. ಊಟ ಹಾಗೂ ನಿದ್ರೆಯ ಮಧ್ಯೆ ಒಂದೆರಡು ಗಂಟೆ ಸಮಯದ ಅಂತರವಿರಲಿ.
3. ಹಸಿ, ತಾಜಾ ಹಣ್ಣು ತರಕಾರಿಗಳನ್ನು ಚೆನ್ನಾಗಿ ತಿನ್ನಿ. ಹೆಚ್ಚು ಕ್ಯಾಲೊರಿಯಿರುವ ಆಹಾರವನ್ನು ಕಡಿಮೆ ಮಾಡಿ.
4. ಆಹಾರದಲ್ಲಿ ಉಪ್ಪನ್ನು ಕಡಿಮೆ ಮಾಡಿ. ಉಪ್ಪು ದೇಹತೂಕವನ್ನು ಹೆಚ್ಚು ಮಾಡುತ್ತದೆ.
5. ಹಾಲಿನ ಉತ್ಪನ್ನಗಳಾದ ಚೀಸ್, ಬೆಣ್ಣೆ ತಿನ್ನಬೇಡಿ. ಮಾಂಸಾಹಾರವೂ ಬೇಡ. ಇವೆಲ್ಲವುಗಳಲ್ಲಿ ಹೆಚ್ಚು ಕೊಬ್ಬು ಇರುತ್ತದೆ.
6. ಪುದಿನ ಸೊಪ್ಪು ತೂಕ ಇಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಊಟದೊಂದಿಗೆ ತಾಜಾ ಪುದಿನ ಸೊಪ್ಪಿನ ಚಟ್ನಿ ಮಾಡಿ. ಅಥವಾ ಪುದಿನ ಜ್ಯೂಸ್ ಕುಡಿಯಿರಿ.
7. ಮಸಾಲೆಗಳಾದ ಕಾಳುಮೆಣಸು, ಶುಂಠಿ, ಲವಂಗಗಳನ್ನು ಆಹಾರದಲ್ಲಿ ಬಳಸಬಹುದು. ಇವು ತೂಕ ಹೆಚ್ಚು ಮಾಡುವುದಿಲ್ಲ. ಕಡಿಮೆ ಮಾಡಲು ಸಹಕರಿಸುತ್ತವೆ.
8. ಕ್ಯಾರೆಟ್ ಜ್ಯೂಸ್ ಆಗಾಗ ಕುಡಿಯುತ್ತಿರುವುದರಿಂದ ತೂಕ ಕಡಿಮೆ ಮಾಡಬಹುದು.
9. ಅಕ್ಕಿ (ಅನ್ನ) ಹಾಗೂ ಆಲೂಗಡ್ಡೆಯನ್ನು ತುಂಬ ಕಡಿಮೆ ಮಾಡಿ. ಗೋಧಿ ತೂಕ ಇಳಿಸಲು ಒಳ್ಳೆಯದು.
10. ಹಾಗಲಕಾಯಿ, ಕಹಿ ನುಗ್ಗೇಕಾಯಿಯಂತಹ ಕಹಿ ರುಚಿಯ ತರಕಾರಿಗಳು ತೂಕ ಕಡಿಮೆ ಮಾಡುತ್ತವೆ.
11. ಜೇನುತುಪ್ಪ ಧಾರಾಳವಾಗಿ ಸೇವಿಸಬಹುದು. ಇದು ಕೊಬ್ಬನ್ನು ಕರಗಿಸಿ ತೂಕ ಇಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
12. ಯಾವಾಗಲಾದರೊಮ್ಮೆ ಜೇನುತುಪ್ಪದ ಉಪವಾಸ ಮಾಡಿದರೆ ಉತ್ತಮ. ಒಂದು ಚಮಚ ಜೇನುತುಪ್ಪವನ್ನು ಒಂದು ಲೋಟ ಹದ ಬಿಸಿನೀರಿಗೆ ಸೇರಿಸಿ ಅದ್ಕಕೆ ಅರ್ಧ ನಿಂಬೆಹಣ್ಣಿನ ರಸ ಸೇರಿಸಿ ದಿನವಿಡೀ ಆಗಾಗ ಕುಡಿಯಬಹುದು.
13. ಹಸಿ ಅಥವಾ ಬೇಯಿಸಿದ ಕ್ಯಾಬೇಜನ್ನು ತಿನ್ನುವುದರಿಂದಲೂ ತೂಕ ಕಡಿಮೆಮಾಡಬಹುದು.
14. ವ್ಯಾಯಾಮ ಕೂಡ ತೂಕ ಕರಗಿಸುವುದರಲ್ಲಿ ಮುಖ್ಯಪಾತ್ರ ವಹಿಸುತ್ತದೆ. ವಾಕಿಂಗ್ ಕೂಡಾ ತುಂಬ ಉತ್ತಮ. ವ್ಯಾಯಾಮ ಮಾಡಲು ಸಾಧ್ಯವಾಗದವರು ವಾಕಿಂಗ್‌ನಿಂದ ಶುರುಮಾಡಿ ನಿಧಾನವಾಗಿ ಓಡಲು ಅಭ್ಯಾಸ ಮಾಡಬಹುದು. ನಿಗದಿತ ವ್ಯಾಯಾಮದ ಜತೆಗೆ ವಾಕಿಂಗ್ ಕೂಡಾ ಉತ್ತಮ.
15. ಆಹಾರದ ಅಭ್ಯಾಸದಲ್ಲಿ ಬದಲಾವಣೆ ಮಾಡಿಕೊಂಡು ಬಹುತೇಕರು ತೂಕ ಇಳಿಸಿದ ನಂತರ ಮತ್ತೆ ಹಳೆಯ ಆಹಾರಪದ್ಧತಿಗೇ ಮರಳುತ್ತಾರೆ. ಇದರಿಂದ ಮತ್ತೆ ಶರೀರ ದಪ್ಪವಾಗುತ್ತದೆ. ಇದಕ್ಕಾಗಿ ನಿಗದಿತ ಯೋಗಾಭ್ಯಾಸ ರೂಢಿಯಲ್ಲಿಟ್ಟರೆ, ಜೀವನವಿಡೀ ಆರೋಗ್ಯಯುತ ಕಾಂತಿಯುತ ಶಿಸ್ತಿನ ಜೀವನ ನಿಮ್ಮದಾಗುತ್ತದೆ. ಅಷ್ಟೇ ಅಲ್ಲ ತೆಳು ಮೈಕಟ್ಟು ಕೂಡಾ.