ಬಿಸಿಲಿನ ಝಳ: ಚರ್ಮ ರಕ್ಷಣೆಗೆ ಟೊಮೆಟೋ ಪೂರಕ

ಬಿಸಿಲಿನ ಬೇಗೆಗೆ ದೇಹ ಬಳಲಿ ಬೆಂಡಾಗಿದೆಯೇ? ಟೊಮೆಟೋ ಹಣ್ಣು ಹೆಚ್ಚು ಹೆಚ್ಚು ಸೇವಿಸಿ ಎನ್ನುತ್ತದೆ ಅಧ್ಯಯನ ವರದಿಯೊಂದು.

ಹೌದು. ಟೊಮೆಟೋ ಹಣ್ಣುಗಳನ್ನು ಹೆಚ್ಚು ಸೇವಿಸುವುದರಿಂದ ಸೂರ್ಯನ ಪ್ರಖರತೆಯಿಂದ ನಿಮಗೆ ಪರಿಪೂರ್ಣ ರಕ್ಷಣೆ ದೊರೆಯದಿರಬಹುದು. ಆದರೆ ಇದೊಂದು ಧಗೆಯಿಂದ ರಕ್ಷಿಸಿಕೊಳ್ಳುವ ವಿಧಾನಗಳ ಪಟ್ಟಿಯಲ್ಲಿ ಹೊಸದೊಂದು ಅಮೂಲ್ಯ ಬತ್ತಳಿಕೆಯಾಗಬಲ್ಲುದು.

ನ್ಯೂಕ್ಯಾಸಲ್ ವಿಶ್ವವಿದ್ಯಾನಿಲಯ ಮತ್ತು ಮ್ಯಾಂಚೆಸ್ಟರ್ ವಿಶ್ವವಿದ್ಯಾನಿಲಯದ ಸಂಶೋಧಕರು ನಡೆಸಿದ ಹೊಸ ಅಧ್ಯಯನವೊಂದು ಇದರ ಮೇಲೆ ಬೆಳಕು ಚೆಲ್ಲಿದ್ದು, ಪ್ರತಿದಿನ ಐದು ಟೊಮೆಟೋಗಳನ್ನು ತಿಂದರೆ ಅದು ಬಿಸಿಲಾಘಾತದಿಂದ ಮತ್ತು ಅವಧಿಪೂರ್ವ ವಯಸ್ಸಾಗುವಿಕೆಯಿಂದ ರಕ್ಷಣೆ ನೀಡಬಹುದು ಎಂದು ಹೇಳಿದೆ.

ಸಂಶೋಧಕರ ಪ್ರಕಾರ, ನೀಲಾತೀತ ಕಿರಣಗಳು 'ರಿಯಾಕ್ಟಿವ್ ಆಕ್ಸಿಜನ್ ಸ್ಪೀಷೀಸ್' ಎನ್ನುವ ಹಾನಿಕಾರಕ ಕಣಗಳ ಉತ್ಪಾದನೆಯನ್ನು ಹೆಚ್ಚಿಸುತ್ತವೆ. ಇದು ಚರ್ಮಕ್ಕೆ ತೀವ್ರ ಹಾನಿಯುಂಟುಮಾಡಬಲ್ಲುದು. ಟೊಮೆಟೋ ಹಣ್ಣಿನಲ್ಲಿರುವ ಲೈಕೋಪೀನ್ ಎಂಬ ಆಂಟಿಆಕ್ಸಿಡೆಂಟ್ ವಸ್ತುವು ಈ ಕಣಗಳನ್ನು ತಟಸ್ಠವಾಗಿಸುವ ಮೂಲಕ ಚರ್ಮಕ್ಕೆ ರಕ್ಷಣೆ ನೀಡುತ್ತದೆ.

ಹೆಚ್ಚಾಗಿ ಟೊಮೆಟೋ ಹಣ್ಣಿನ ಅಂಶವಿರುವ ಡಯಟ್ ಅಥವಾ ಪಿಜ್ಜಾ, ಸ್ಪಗೆಟಿ ಮುಂತಾದವುಗಳನ್ನು ಸೇವಿಸುವವರು ಮತ್ತಷ್ಟು ಟೊಮೆಟೋ ತಿನ್ನುವ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ.

ಆದರೆ ಬರೇ ಟೊಮೆಟೊ ಹಣ್ಣು ತಿಂದುಂಡು, ಸೂರ್ಯನ ಪ್ರಖರತೆಯಿಂದ ರಕ್ಷಣೆ ದೊರೆಯಿತು ಅಂತ ಸುಮ್ಮನೆ ಕೂರುವಂತೆಯೂ ಇಲ್ಲ. ಇದು ಬಿಸಿಲ ಬೇಗೆಯಿಂದ ಚರ್ಮವನ್ನು ರಕ್ಷಿಸಲು ನೆರವಾಗುತ್ತದೆ ಅಷ್ಟೆ. ಆದರೆ ಮಾಮೂಲಿಯಾಗಿ ಚರ್ಮ ರಕ್ಷಣೆಗೆ ಬಳಸುವ ಸನ್‌ಸ್ಕ್ರೀನ್, ಶೇಡ್ ಮತ್ತು ಹತ್ತಿ ಬಟ್ಟೆ ಧರಿಸುವುದು ಮುಂತಾದವನ್ನು ಅನುಸರಿಸುವುದು ಒಳಿತು ಎಂದಿದ್ದಾರೆ ಸಂಶೋಧಕರು.

ವೆಬ್ದುನಿಯಾವನ್ನು ಓದಿ