ಸಾಕಷ್ಟು ಪ್ರಮಾಣದಲ್ಲಿ ನೀರು ಸೇವಿಸಿದಲ್ಲಿ ಚರ್ಮವು ಕಾಂತಿಯುಕ್ತವಾಗಿ, ಚರ್ಮದ ಸಂರಕ್ಷಣೆಯೂ ಆಗುತ್ತದೆ. ಇದರಿಂದ ದೇಹ ಸೌಂದರ್ಯ ಹೆಚ್ಚುವುದಲ್ಲದೆ, ಹೆಚ್ಚಿನ ಪ್ರಮಾಣದ ನೀರು ಸೇವನೆಯು ಪಚನ ಕ್ರಿಯೆಯನ್ನೂ ಉತ್ತೇಜಿಸುತ್ತದೆ. ಅತ್ಯಂತ ಸುಲಭವಾದ ಡಯಟ್ ಇದಾಗಿರುವುದರಿಂದ ದೇಹ ತೂಕದ ಬಗ್ಗೆ ಕಾಳಜಿ ವಹಿಸುವವರಿಗೆ ಇದೊಂದು ವರದಾನ ಇದ್ದಂತೆ.
ನೀರು ದೇಹದೊಳಗೆ ಸೇರಿರುವ ವಿಷಾಂಶವನ್ನು ಹೊರಹಾಕಲು ಸಹಾಯಕಾರಿ. ವೈದ್ಯಕೀಯ ವರದಿಗಳ ಪ್ರಕಾರ, ಹೆಚ್ಚು ಹೆಚ್ಚು ನೀರು ಸೇವನೆಯು ಕರುಳು ಕ್ಯಾನ್ಸರ್ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
ರಾಸಾಯನಿಕಯುಕ್ತ ತಂಪು ಪಾನೀಯಗಳನ್ನು ಕುಡಿಯಲು ನಿಮ್ಮ ಮನಸ್ಸು ಹಾತೊರೆಯುತ್ತಿದ್ದರೆ, ಮನಸ್ಸಿನ ಚಂಚಲತೆಗೆ ಕಡಿವಾಣ ಹಾಕಿ, ತಂಪುಪಾನೀಯದ ಬದಲಿಗೆ ನೀರು ಕುಡಿಯುವ ಕಠಿಣ ನಿರ್ಧಾರವನ್ನು ಕೈಗೊಳ್ಳಿ.
ಒಂದುವೇಳೆ ನಿಮಗೆ ನೀರು ಕುಡಿಯಲು ಇಷ್ಟವಾಗದಿದ್ದಲ್ಲಿ, ನೀರಿನ ಬದಲಿಗೆ ಮಜ್ಜಿಗೆ ಸೇವಿಸಿ. ಹೊಟ್ಟೆ ಹಸಿದಿರುವ ಸಮಯದಲ್ಲಿ ಒಂದು ಲೋಟ ಮಜ್ಜಿಗೆ ಕುಡಿದಲ್ಲಿ ತಾತ್ಕಾಲಿಕ ಶಮನ ನೀಡುವುದರೊಂದಿಗೆ ದೇಹಕ್ಕೆ ಉತ್ತಮ ಪೋಷಕಾಂಶವನ್ನೂ ನೀಡುತ್ತದೆ.