ಇಲ್ಲಿ ತುಪ್ಪದ ಕಾಲುವೆಯೇ ಹರಿಯುತ್ತದೆ...!

WD
ನೀವು ಎಂದಾದರೂ ತುಪ್ಪ ಹೊಳೆಯಾಗಿ ಹರಿಯುವುದನ್ನು ಕೇಳಿದ್ದೀರಾ? ನಿಮ್ಮ ಉತ್ತರ ಖಂಡಿತವಾಗಿ ಇಲ್ಲ ಎಂದು ಬರುತ್ತದೆ ಎಂಬುದು ಗೊತ್ತು. ನಮ್ಮ ಹಿರಿಯರು ಹೇಳುತ್ತಿದ್ದರು ಒಂದು ಕಾಲದಲ್ಲಿ ಹಾಲು ತುಪ್ಪದ ಹೊಳೆ ಹರಿಯುತ್ತಿತ್ತು ಅಂತ... ಅದನ್ನು ಕೇಳಿದ್ದಿದೆ.

ಗುಜರಾತ್‌ನ ರೂಪಾಲ್ ಪಲ್ಲಿ ಎಂಬ ಕುಗ್ರಾಮದಲ್ಲಿ ಪ್ರತಿವರ್ಷ ನವರಾತ್ರಿಯ ಕೊನೆಯ ದಿನದಂದು ತುಪ್ಪದ ಹೊಳೆ ಇಂದಿಗೂ ಹರಿಯುತ್ತಿದೆ. ಈ ವರ್ಷದ ನವರಾತ್ರಿಯ ಕೊನೆಯ ದಿನದಂದು ಆರು ಲಕ್ಷ ಕಿಲೋ ತುಪ್ಪ ನದಿ ರೂಪದಲ್ಲಿ ಹರಿದಿದೆ.

WD
ನವರಾತ್ರಿಯ ಕೊನೆಯ ದಿನದಂದು ನಡೆಯುವ ರೂಪಾಲ್ ಗ್ರಾಮದೇವತೆ ಮಾತಾ ವರದಾಯಿನಿಯ ಮೆರವಣಿಗೆಯಲ್ಲಿ ಈ ಬಾರಿ ಹತ್ತು ಕೋಟಿ ರೂ ಮೌಲ್ಯದ ತುಪ್ಪವನ್ನು ಅಭಿಷೇಕದ ಹೆಸರಿನಲ್ಲಿ ರಸ್ತೆ ರಸ್ತೆಗಳಲ್ಲಿ ಚೆಲ್ಲಲಾಯಿತು. ಹೀಗೆ ಚೆಲ್ಲಿದ ತುಪ್ಪ ಕಾಲುವೆ ರೂಪದಿಂದ ಪ್ರಾರಂಭವಾಗಿ ನದಿಯ ರೂಪ ಪಡೆದದ್ದು ನಮಗೆ ಆಘಾತ ತಂದಿದ್ದು ವಿಪರ್ಯಾಸ ವಿಚಿತ್ರ ಎನ್ನುವಂತೆ ಕಂಡಿತು. ಇಂತಹ ಸಂಪ್ರದಾಯ ನಮ್ಮ ದೇಶದಲ್ಲಿದೆ ಎಂದರೆ ಯಾರಾದರೂ ನಂಬುತ್ತೀರಾ? ನಂಬಲೇ ಬೇಕು. ಈ ಬಾರಿ ನಾವು ನಿಮ್ಮೆದುರು ಅದನ್ನೇ ಪ್ರಸ್ತುತ ಪಡಿಸುತ್ತಿದ್ದೇವೆ.

ಪಾಲಿ ಮಹೋತ್ಸವ ಎಂದು ಕರೆಯಲಾಗುವ ಈ ಮೆರವಣಿಗೆ ಈ ಬಾರಿ ಮಧ್ಯ ರಾತ್ರಿ 12ಕ್ಕೆ ಪ್ರಾರಂಭವಾಗದೇ ಬರೋಬ್ಬರಿ ಬ್ರಾಹ್ಮೀ ಮುಹೂರ್ತದಲ್ಲಿ ಪ್ರಾರಂಭವಾಯಿತು. ತಡವಾಗಲು ಕಾರಣ ದೇವಿಯ ಪ್ರಸಾದ ಖಿಚ್ರಾ ತಯಾರಿಯಲ್ಲಿ ಆದ ವಿಳಂಬ.

WD
ಸರಿ, ಮೆರವಣಿಗೆ ಪ್ರಾರಂಭವಾಯಿತು. ಊರಿನ ನಾಲ್ಕು ರಸ್ತೆಗಳು ಕೂಡುವ ಸ್ಥಳದಲ್ಲಿ ತುಪ್ಪವನ್ನು ಟ್ರಾಲಿಗಳಲ್ಲಿ, ದೊಡ್ಡ ದೊಡ್ಡ ಬ್ಯಾರೆಲುಗಳಲ್ಲಿ ಸಂಗ್ರಹಿಸಿ ಇಡಲಾಗುತ್ತದೆ. ಇಲ್ಲಿಗೆ ವರದಾಯಿನಿ ಮೆರವಣಿಗೆ ಬರುತ್ತಲೇ ತುಪ್ಪದ ಅಭಿಷೇಕವನ್ನು ಮಾಡಲಾಗುತ್ತದೆ. ಈ ರೀತಿ ದೇವಿಗೆ ಅರ್ಪಣೆಯಾಗುವ ತುಪ್ಪ ಈ ಬಾರಿ ಆರು ಲಕ್ಷ ಕಿಲೋ ತಲುಪಿದೆ. ಕಳೆದ ಬಾರಿ ಅರ್ಪಿಸಿದ ತುಪ್ಪ ಬರೀ ನಾಲ್ಕೂವರೆ ಲಕ್ಷ ಕಿಲೋ ಮಾತ್ರ ಎಂದು ದೇವಿಯ ಭಕ್ತ ನಿತೀನ್ ಪಟೇಲ್ ಮಾಹಿತಿ ನೀಡುತ್ತಾರೆ.

ಈ ರೀತಿ ತುಪ್ಪ ಅರ್ಪಣೆಯಿಂದ ಮಕ್ಕಳಿಲ್ಲದವರು ಮಕ್ಕಳನ್ನು ಪಡೆಯುತ್ತಾರೆ ಎಂದು ನಂಬಿಕೆ ಇದೆ. ಇನ್ನೊಂದು ವಿಚಾರ ಎಂದರೆ ಈ ರೀತಿ ಅರ್ಪಣೆಗೊಂಡು ಬೀದಿಯಲ್ಲಿ ಹರಿಯುವ ತುಪ್ಪವನ್ನು ವಾಲ್ಮೀಕಿ ಸಮುದಾಯದವರ ಹೊರತಾಗಿ ಬೇರೆಯವರು ತೆಗೆದುಕೊಳ್ಳುವಂತಿಲ್ಲ.

WD
ಕೆಲವರು ಇದು ಸಂಪ್ರದಾಯ ಎಂದು ಹೇಳಿದರೆ ಇನ್ನೂ ಕೆಲವರು ಇದು ಮೂಢನಂಬಿಕೆ ಎಂದು ಹೇಳುತ್ತಾರೆ. ಪಲ್ಲಿ ಪರಿವರ್ತನ್ ಅಭಿಯಾನ್ ಸ್ಥಾಪಕ ಲೋಕೇಶ ಚಕ್ರವರ್ತಿ ಅವರು, ಈ ರೀತಿ ತುಪ್ಪವನ್ನು ಹಾಳು ಮಾಡುವುದಕ್ಕಿಂತ ಬಡವರಿಗೆ ಉಪಯೋಗವಾಗುವ ರೀತಿಯಲ್ಲಿ ಉಪಯೋಗಿಸಿದರೆ ಬಡಜನರ ಸ್ವಲ್ಪ ನೆರವಾದರೂ ಆದೀತು ಎಂದು ಹೇಳುತ್ತಾರೆ. ಆದರೆ ಇವರ ಮಾತು ಕೇಳುವವರು ಯಾರು? ಬಡವರಿಗೆ ಉಪಕಾರವಾಗಲಿ ಎಂದು ಹೇಳಿದ ಲೋಕೇಶ ಇಲ್ಲಿನವರ ಪಾಲಿಗೆ ರಾವಣನಂತೆ ಕಾಣುತ್ತಾನೆ.

ಲೋಕೇಶ ಮಾತುಗಳು ಒಂದು ರೀತಿಯಲ್ಲಿ ಒಪ್ಪತಕ್ಕದ್ದು. ನಂಬಿಕೆ ಮತ್ತು ಮೂಢನಂಬಿಕೆಗಳ ನಡುವೆ ಕೂದಲೆಳೆಯ ಅಂತರ ಇದೆ, ಅದನ್ನು ಸಹನೆಯಿಂದ ಗಮನಿಸಿ. ನಿಮ್ಮ ನಿರ್ಧಾರ ತೆಗೆದುಕೊಳ್ಳಿ ಅಷ್ಟೆ.

ಈ ಸಂಪ್ರದಾಯ ಪಾಂಡವರಿಂದ ಪ್ರಾರಂಭವಾಯಿತು ಎಂಬುದು ಪಲ್ಲಿ ಗ್ರಾಮಸ್ಥರ ವಾದ. ಅಜ್ಞಾತ ವಾಸಕ್ಕೆ ತೆರಳುವ ಪಾಂಡವರು, ವರದಾಯಿನಿ ಮಾತೆಯಲ್ಲಿ ಬೇಡಿಕೊಂಡರು ಎಂದೂ, ಅಜ್ಞಾತವಾಸ ಮುಗಿದು ಹಸ್ತಿನಾವತಿ ಅವರ ಕೈಗೆ ಬಂದ ಮೇಲೆ ವರದಾಯಿನಿಗೆ ತುಪ್ಪದ ಅಭಿಷೇಕ ಮಾಡಿಸಲು ಪ್ರಾರಂಭಿಸಿದರು ಎಂದೂ ಅವರು ಹೇಳುತ್ತ, ಇಂದಿಗೂ ಆ ಸಂಪ್ರದಾಯವನ್ನು ಮುಂದುವರಿಸುತ್ತಿದ್ದೇವೆ ಎನ್ನುತ್ತಾರೆ.