ಜೀವ ಬಲಿ ತೆಗೆದುಕೊಂಡ ಕುರುಡು ನಂಬಿಕೆ

WDWD
ನಂಬಿಕೆ ಅಪನಂಬಿಕೆಗಳೇ ಮನುಷ್ಯನ ಜೀವಾಳ. ಎಂಥಾ ವಿಚಿತ್ರ ನೋಡಿ, ನಂಬುವುದಕ್ಕೂ ಒಂದು ಮಿತಿ ಬೇಡವೆ?

ನಂಬಿಕೆ, ಅಪನಂಬಿಕೆಗಳ ಕಥಾ ಪಯಣದಲ್ಲಿ ಈಗಾಗಲೇ ನಾವು ಸಾಕಷ್ಟು ದೂರ ಸಾಗಿದ್ದೇವೆ. ನಮ್ಮೊಂದಿಗಿನ ಸಮಾಜದ ಮೂಢ ನಂಬಿಕೆಗಳನ್ನು ತೆರೆದಿಟ್ಟು ನಿರ್ಣಯ ನಿಮ್ಮದು ಎಂದು ಹೇಳಿದ್ದೇವೆ. ಮಾಧ್ಯಮ ಎಂದೂ ನಿರ್ಣಯ ನೀಡಬಾರದು, ನೀಡದು. ನಮ್ಮದು ಅಂತ ಏನಿದ್ದರೂ ಸವಾಲು, ಅದೊಂದನ್ನು ಚಾಚೂ ತಪ್ಪದೇ ಮಾಡುತ್ತಾ ಬಂದಿದ್ದೇವೆ.

ಓದುಗರೆ, ಕೂದಲೆಳೆಯ ಅಂತರ ಸತ್ಯ ಮತ್ತು ಅಸತ್ಯಗಳ ನಡುವೆ ಇದೆ. ಅದು ಯಾವುದು ಅಂತ ತಿಳಿದ್ಕೊಳ್ಳೋದು ನಿಮಗೆ ಬಿಟ್ಟದ್ದು.

ಪೋಟೋ ಗ್ಯಾಲರಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇಲ್ಲಿದೆ ನೋಡಿ. ನಂಬಿ ಬಂದವರಲ್ಲಿ ಅನಾಮತ್ತು 11 ಜನರನ್ನು ಸಾವಿನ ದವಡೆಗೆ ನೂಕಿ ನಿರುಮ್ಮಳವಾಗಿ ಕುಳಿತ ಸರೌತಾ ಬಾಬಾನ ಕಥೆ. (ಸರೌತಾ ಅಂದರೆ ಕಾಯಿ ಕತ್ತರಿಸಲು ಉಪಯೋಗಿಸುವ ಒಂದು ಸಾಧನ) ಮಧ್ಯಪ್ರದೇಶದ ಜಬಲ್ಪುರ್ ಸಮೀಪದಲ್ಲಿದ್ದ ಈತ ಜನರಿಗೆ ಹೇಳಿದ್ದು ಏನು ಗೊತ್ತೇ ?

WDWD
ಸರೌತಾದಿಂದ ನಿಮ್ಮ ಕಣ್ಣುಗಳ ರೋಗ ಕಡಿಮೆ ಮಾಡುತ್ತೇನೆ, ಏಡ್ಸ್, ಕ್ಯಾನ್ಸರ್‌ನಂತಹಾ ರೋಗಗಳನ್ನೂ ಇನ್ನಿಲ್ಲದಂತೆ ಮಾಡುತ್ತೇನೆ ಎಂದು. ಜನಾ ಎಂತವರು ನೋಡಿ, ಅಂವ ಹೇಳಿದ ಇವರು ಕೇಳಿದರು. ಸರೌತಾ ಬಾಬಾನ ಅಸಲಿ ಹೆಸರು ಈಶ್ವರ್ ಸಿಂಗ್ ರಜಪೂತ್. ಇವನ ವಿಚಿತ್ರ ಚಿಕಿತ್ಸಾ ಪದ್ಧತಿ ಆತನನ್ನು ಸರೌತಾವಾಲೇ ಬಾಬಾ, ಸರ್ಜನ್ ಬಾಬಾ ಎಂದು ಮಾಡಿಬಿಟ್ಟಿತು.

ಈ ಬಾಬಾನ ಚಿಕಿತ್ಸೆ ವಿಚಿತ್ರ. ಬಂದ ರೋಗಿಯನ್ನು ಅಡ್ಡ ಮಲಗಿಸಿ ಮುಖದ ಮೇಲೊಂದು ಬಟ್ಟೆಹಾಕಿ ಬಟ್ಟೆಯೊಳಗಿನಿಂದ ಸರೌತಾವನ್ನು ರೋಗಿಯ ಕಣ್ಣಿನಲ್ಲಿ ಇರಿಸುತ್ತಿದ್ದ. ಇವನ ದಾವಾ ಕೂಡ ಹಾಗೆ ಇತ್ತು. ಈ ಮೊದಲು ಡಾಕ್ಟರ್‌ಗಳ ಹತ್ತಿರ ಚಿಕಿತ್ಸೆ ಪಡೆದಿದ್ದರೆ, ರೋಗ ಗುಣವಾಗುವುದು ಗ್ಯಾರಂಟಿ ಇಲ್ಲ. ನೇರವಾಗಿ ನನ್ನ ಬಳಿ ಬಂದಿದ್ದರೆ ರೋಗ ಗುಣವಾಗುವುದು ಪಕ್ಕಾ ಎಂದೇ ಹೇಳುತ್ತಿದ್ದ.

ಈಗಾತ ತನ್ನ ಸರೌತಾದಿಂದಲೇ ಕತ್ತರಿಸಲಾದ ಕೆಲವೊಂದು ಮರದ ತುಂಡುಗಳನ್ನು ಅವರಿಗೆಲ್ಲಾ ವಿತರಿಸುತ್ತಾನೆ. ಎಲ್ಲಾ ಬಗೆಯ ರೋಗಗಳನ್ನು ಈ ಮರದ ತುಂಡುಗಳು ಜನರಿಂದ ದೂರವಿಡುತ್ತದೆ ಎನ್ನುತ್ತಾನೆ ಆತ.

ಸರಕಾರಗಳು ಸೂಕ್ತ ವೈದ್ಯಕೀಯ ಸೌಲಭ್ಯ ಒದಗಿಸಿಕೊಟ್ಟಲ್ಲಿ ಜನರು ಈ ರೀತಿ ಕುರುಡು ನಂಬಿಕೆಗೆ ವಾಲುವುದನ್ನು ತಡೆಯಬಹುದೇ? ಈ ಕುರಿತು ನಿಮಗೇನನ್ನಿಸುತ್ತದೆ? ಇಲ್ಲಿ ಚರ್ಚಿಸಿ.

WDWD
ಆ ನೀರು:

ನಾಗ ದೇವತೆಗಳನ್ನು ಭರ್ತಿ ಒಂದೂವರೆ ಗಂಟೆಕಾಲ ಪೂಜೆ ಮಾಡುತ್ತಿದ್ದ ಆತ. ಪೂಜೆಯಲ್ಲಿ ನೀರು ಹೆಚ್ಚು ಉಪಯೋಗಿಸಿದಷ್ಟು ಪರಿಣಾಮ ಚೆನ್ನಾಗಿರುತ್ತದೆ ಎಂದು ಆತ ಹೇಳುತ್ತಿದ್ದ. ಪ್ರತಿ ಗುರುವಾರ ಅವನು ಪೂಜೆ ಮಾಡಿದ ನೀರು ಪಡೆಯಲು ಸಾವಿರಾರು ಜನರು ಬರಲಾರಂಭಿಸಿದರು.

ಸಣ್ಣ ಊರಿನಲ್ಲಿ ಪ್ರತಿ ಗುರುವಾರ ಸಾವಿರಗಟ್ಟಲೆ ಜನರು ಬಂದರೆ ಹೇಗಾಗಬೇಡ ? ಊರಿನವರು ಬೇಸತ್ತು, ಬಾಬಾ ನೀನು ಇಲ್ಲಿರಬೇಡ ಎಂದು ಹೇಳಿದರು. ಅದು 11 ಜನರ ಸಾವಿಗೆ ಮುನ್ನುಡಿ ಬರೆದು ಬಿಟ್ಟಿತು.

ಸರ್ಜನ್ ಬಾಬಾ ಕುರಿತ ಫೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.

ಇಲ್ಲ, ಇನ್ನು ಮುಂದೆ ಈ ಊರು ಬಿಡುತ್ತೇನೆ, ಜೊತೆಗೆ ಮುಂದಿನ ಗುರುವಾರ ಚಿಕಿತ್ಸೆ ನೀಡುವುದು ನನ್ನ ಕೊನೆಯ ಚಿಕಿತ್ಸೆ ಎಂದು ಹೇಳಿಬಿಟ್ಟ. ಸುತ್ತಲಿನ ಊರುಗಳಲ್ಲಿ ಬಾಬಾ ಕೊನೆಯ ಬಾರಿ ಚಿಕಿತ್ಸೆ ನೀಡುತ್ತಿದ್ದಾನೆ ಎಂಬ ಸುದ್ದಿ ಆತನ ಬೆಂಬಲಿಗರ ಮೂಲಕ ಬಾಯಿಂದ ಬಾಯಿಗೆ ಕಾಳ್ಗಿಚ್ಚಿನಂತೆ ಹರಡಿಬಿಟ್ಟಿತು. ಬಂದೇ ಬಿಟ್ಟಿತು ಆ ಗುರುವಾರ.

ಆ ಕರಾಳ ಗುರುವಾರ:

ಇನ್ನಲ್ಲಿ ಬಾಬಾ ಇರುವುದಿಲ್ಲ, ಅವಕಾಶ ತಪ್ಪಿಸಿಕೊಂಡರೆ ಈ ಜನುಮದಲ್ಲಿ ರೋಗ ಗುಣವಾಗುವುದಿಲ್ಲ ಎಂದು ಸಾವಿರಾರು ಜನರು ಅಂದು ಬಂದು ಬಿಟ್ಟರು. ಸಾವಿರ ಲೆಕ್ಕದಲ್ಲಿದ್ದ ಜನರನ್ನು ಸಂಭಾಳಿಸುವುದು ಹೇಗೆ ಎಂದು ತಿಳಿಯದ ಬಾಬಾ ಪಟಾಲಂ ಕಕ್ಕಾಬಿಕ್ಕಿಯಾಯಿತು.

WDWD
ಕೊನೆಗೆ ಸಹನೆ ಕಳೆದುಕೊಂಡು ಪೂಜೆ ಮಾಡಿ ಇಟ್ಕೊಂಡಿದ್ದನಲ್ಲ ಆ ನೀರನ್ನು ಬಂದಿದ್ದವರ ಮೇಲೆ ಉಗ್ಗಲು ಶುರುಮಾಡಿದ. ಮುಗಿಯಿತು. ಅಲ್ಲಿಗೆ ಜನ ಹುಚ್ಚರಂತಾಗಿ ನಾಮುಂದು ತಾಮುಂದು ಎಂದು ಮುಂದಿದ್ದವರನ್ನು ತುಳಿದು, ಬಾಬಾನತ್ತ ನುಗ್ಗಿದರು ಈ ನುಗ್ಗಾಟದಲ್ಲಿ 11 ಜನ ಸತ್ತರು. ನೂರಾರು ಜನರ ಕೈ ಕಾಲು ಮುರಿದುಕೊಂಡರು.

ಆ ಮೇಲೆ ಏನಾಯಿತು ? ಬಾಬಾನನ್ನು ಪೊಲೀಸರು ಬಂಧಿಸಿದರು. ಪೊಲೀಸರ ಕೈಗೆ ಸಿಕ್ಕ ಬಾಬಾ, ನನಗೆ ಸರೌತಾನೂ ಗೊತ್ತಿಲ್ಲ, ಮಂತ್ರಜಲವೂ ಗೊತ್ತಿಲ್ಲ, ಏಡ್ಸೂ ಗೊತ್ತಿಲ್ಲ ಎಂದು ತಾರಮ್ಮಯ್ಯ ಮಾಡಿದ. ಪೊಲೀಸರು ನಂಬಿದರು. ನ್ಯಾಯಾಲಯ ಜಾಮೀನು ನೀಡಿತು.

WDWD
ಇಂತಾ ಒಂದು ದುರ್ಘಟನೆ ನಡೆದ ಮೇಲೆ ನಾವು ಅಲ್ಲಿಗೆ ಹೋಗಿದ್ದು. ಜನರನ್ನು ವಿಚಾರಿಸಿದೆವು. ನಯಾ ಪೈಸೆ ಮುಟ್ಟುತ್ತಿರಲಿಲ್ಲ ಆತ. ಅದಕ್ಕೂ ಒಂದು ಉಪಾಯ ಮಾಡಿದ್ದ. ಆಶ್ರಮದ ಪಕ್ಕದಲ್ಲಿ ತನ್ನ ಅನುಯಾಯಿಗಳು ಅಂಗಡಿ ಇಟ್ಕೊಂಡಿದ್ದರು.

ಪೂಜೆಗೆ ಬೇಕಾಗಿದ್ದ ಸಾಮಾನುಗಳು ಅಲ್ಲಿ ಸಿಗುತ್ತಿದ್ದವು. ಅಂಗಡಿಯವರು ಹೇಳಿದ್ದೇ ರೇಟು. ನಂಬಿಕೆಯಿಂದ ಬಂದವರು ಹಾಗೇ ಹೋಗುತ್ತಾರಾ? ಕೇಳಿದಷ್ಟು ಕಕ್ಕಿ ಪೂಜೆ ಮಾಡಿಸ್ಕಂಡು ಹೋಗುತ್ತಿದ್ದರು.

ಓದುಗರೇ, ಇಂತಹವರನ್ನು ನಂಬುವುದು ನಂಬಿ ಕೆಡುವುದು ಅವರವರಿಗೆ ಬಿಟ್ಟ ವಿಚಾರ. ಇಂತಹ ಇನ್ನಷ್ಟು ಕಥೆಗಳನ್ನು ವೆಬ್‌ದುನಿಯಾ ತಂಡ ನಿಮಗಾಗಿ ತರುತ್ತಿದೆ ನಿರೀಕ್ಷಿಸಿ.

ಸರಕಾರಗಳು ಸೂಕ್ತ ವೈದ್ಯಕೀಯ ಸೌಲಭ್ಯ ಒದಗಿಸಿಕೊಟ್ಟಲ್ಲಿ ಜನರು ಈ ರೀತಿ ಕುರುಡು ನಂಬಿಕೆಗೆ ವಾಲುವುದನ್ನು ತಡೆಯಬಹುದೇ? ಈ ಕುರಿತು ನಿಮಗೇನನ್ನಿಸುತ್ತದೆ? ಇಲ್ಲಿ ಚರ್ಚಿಸಿ.