ನಂಬಿಕೆಗಾಗಿ ನಾಲಿಗೆಯನ್ನೇ ಕೊಯ್ದುಕೊಳ್ಳುವವರು!

WD
ನಂಬಿಕೆಯ ಹೆಸರಿನಲ್ಲಿ ಮತ್ತದರ ಉನ್ಮತ್ತತೆಯಲ್ಲಿ ಇವರು ತಮಗೆ ತಾವೇ ಮಾಡಿಕೊಳ್ಳುವ ಹಿಂಸೆಗೆ ಲೆಕ್ಕ ಇಲ್ಲ. ನಂಬಿದರೆ ನಂಬಿ ಬಿಟ್ಟರೆ ಬಿಡಿ, ನಾವು ಹೇಳುವ ಇಂದಿನ ಕಥೆಯಲ್ಲಿ ದೇವರಿಗೆ ಅರ್ಪಿಸುವ ಹೆಸರಿನಲ್ಲಿ ನಾಲಿಗೆಯನ್ನೇ ಕೊಯ್ದುಕೊಳ್ಳುತ್ತಾರೆ ಎಂದರೆ ನಂಬುತ್ತಿರಾ? ಇಂತಹದೊಂದು ವಿಚಿತ್ರ ನಂಬಿಕೆ ಮಧ್ಯಪ್ರದೇಶದ ಮಂಡ್ಸೌರ್ ಗ್ರಾಮದಲ್ಲಿದೆ.

ಸಾಮಾನ್ಯವಾಗಿ ಶಕ್ತಿದೇವತೆಯ ಆರಾಧನೆಯ ಸಮಯದಲ್ಲಿ ಇಂತಹ ಭಕ್ತಿಯ ಪರಾಕಾಷ್ಠೆಯಲ್ಲಿ ದೇವಿಯ ಪೂಜಾರಿಯ ಮುಂದಾಳುತ್ವದಲ್ಲಿ ದೇಹಕ್ಕೆ ಮಾಡಿಕೊಳ್ಳುವ ಹಿಂಸೆಯ ಪರಿ ಇದೆಯಲ್ಲ, ಅದು ಮನಸ್ಸಿಗೆ ಮಂಕು ಹಿಡಿಸುವುದು ಖಂಡಿತ.

WD
ನವರಾತ್ರಿ ಶಕ್ತಿ ಮಾತೆಯ ಆರಾಧನೆಗೆ ಪ್ರಶಸ್ತವಾದ ದಿನಗಳು ಎನ್ನುವುದು ವಾಡಿಕೆ. ಈ ನವರಾತ್ರಿಯ ಕೊನೆಯ ದಿನದಂದು ನಡೆಯುವ ಪೂಜೆಯ ಸಮಯದಲ್ಲಿ ಮಂಡ್ಸೌರ್ ಗ್ರಾಮದ ಈ ದೇವಸ್ಥಾನದಲ್ಲಿ ಕೈಯಲ್ಲಿ ಖಡ್ಗ ಮತ್ತು ನಾಲಿಗೆಯಲ್ಲಿ ಉರಿಯುವ ಕರ್ಪೂರವನ್ನು ಇಟ್ಟುಕೊಂಡು ದೇವಿಯ ಗರ್ಭಗೃಹವನ್ನು ಆವೇಶದಿಂದ ಪ್ರವೇಶಿಸುತ್ತಾರೆ. ಈ ರೀತಿ ದುರ್ಗೆಯ ಪೂಜೆ ಮಾಡುವವರಲ್ಲಿ ಸರಕಾರಿ ನೌಕರರು ಮತ್ತು ವ್ಯಾಪಾರಸ್ಥರು ಇರುವುದು ಸೋಜಿಗದ ಸಂಗತಿ.

ಒಂದು ದಿನ ತಾನು ಓಂಕಾರೇಶ್ವರನೊಂದಿಗೆ ಮಾತನಾಡುತ್ತಿರುವ ಸಮಯದಲ್ಲಿ ದುರ್ಗೆಯು ತನ್ನ ದೇಹವನ್ನು ಪ್ರವೇಶಿಸಿದಳು ಎಂದು ಅಲ್ಲಿನ ಪೂಜಾರಿ ಸುರೇಶ ಬಾಬಾ ಹೇಳುತ್ತಾನೆ. ಇಲ್ಲಿ ಬರುವ ಭಕ್ತರ ಎಲ್ಲ ಬಯಕೆಗಳು ಈಡೇರುತ್ತವೆ ಎನ್ನುವುದು ಅವನ ವಾದ.

WD
ವಾದ ಏನೇ ಇರಲಿ ಈಗ ನಮ್ಮದು ಹಳ್ಳಿಯತ್ತ ಪಯಣ ಸಾಗಲಿ. ಧಾರ್- ಇಂದೋರ್ ರಸ್ತೆಗೆ ಹೊಂದಿಕೊಂಡಂತೆ ಇರುವ ಈ ಗ್ರಾಮದ ಕೆಲ ಮಹಿಳೆಯರು ತಮ್ಮ ನಾಲಿಗೆಗಳನ್ನು ಕತ್ತಿಯಿಂದ ಕುಯ್ದುಕೊಳ್ಳುತ್ತಿರುವುದು ನೋಡಿ, ಅಲ್ಲಾ...ಇದೇನು ಮಾಡುತ್ತಿದ್ದೀರಿ ಎಂದು ಕೇಳುವ ಉತ್ಸಾಹ ಮನದಲ್ಲಿ ಬಂದಿತಾದರೂ ಹ್ಯಾಗೋ ತಡೆದುಕೊಂಡು ಕುಳಿತೆವು.

ನಾವಂತೂ ಅವರ ಆಟಗಳನ್ನು ನೋಡುತ್ತಾ ಕುಳಿತಿದ್ದೆವು. ನಾಲಿಗೆ ಕತ್ತರಿಸಿಕೊಂಡಾಯಿತು. ಈಗ ರಕ್ತತರ್ಪಣ....! ಅಯ್ಯಯ್ಯೋ ದೇವರನ್ನು ಸಂತುಷ್ಟಗೊಳಿಸಲು ಇದೆಲ್ಲ ಬೇಕಾ ? ನಿರ್ಮಲ ಭಕ್ತಿಯೊಂದಿದ್ದರೆ ಸಾಲದೆ?

WD
ಇದು ಮನೋಹರ್ ಸ್ವರೂಪ್ ಎನ್ನುವ ಭಕ್ತನ ಕಥಾ ವೃತ್ತಾಂತ. ಮದುವೆಯಾಗಿ 12 ವರ್ಷವಾದರೂ ಮಕ್ಕಳು ಆಗಲಿಲ್ಲವಂತೆ. ಒಂದು ದಿನ ಈ ಮಹಾಶಯ ನಿಮಾಚ್‌ (ಇದು ಮಧ್ಯಪ್ರದೇಶದಲ್ಲಿದೆ.)ನ ಅಂತರಿ ಮಾತೆಯ ಮಂದಿರಕ್ಕೆ ಹೋಗಿ "ತಾಯಿ ನನಗೆ ಮಕ್ಕಳನ್ನು ನೀಡಿದರೆ ನಿನಗೆ ನನ್ನ ನಾಲಿಗೆಯನ್ನು ಅರ್ಪಿಸುತ್ತೇನೆ" ಎಂದು ಬೇಡಿಕೊಂಡಿದ್ದನಂತೆ. ಹಾಗಾಗಿ ನಾಲಿಗೆಯ ಹರಕೆ ತೀರಿಸಲು ಬಂದಿದ್ದಾನೆ.

ಇದೆಲ್ಲ ನೋಡಿದ ಮೇಲೆ ಅನ್ನಿಸಿದ್ದು ಒಂದಾ ಎರಡಾ, ಸಾವಿರಾನಾ ? ಎಲ್ಲ ರೀತಿಯಲ್ಲಿ ನಮ್ಮ ತಲೆಗೆ ಪ್ರಶ್ನೆಗಳ ದಾಳಿ ಪ್ರಾರಂಭವಾಯಿತು. ಉತ್ತರ ಮಾತ್ರ ಇಲ್ಲ. ದೇವರು ಕರುಣಾಮಯಿ ಅಂತ ಹೇಳ್ತಾರೆ. ಹಾಗಾದರೆ ಇದು ಏನು ? ಈ ರೀತಿ ನಾಲಿಗೆ ಕತ್ತರಿಸಿಕೊಳ್ಳಲು ಇವರಿಗೇನಾಗಿದೆ? ಇದು ನಂಬಿಕೆಯೋ ಅಲ್ಲಾ ಮೂಢನಂಬಿಕೆಯೋ? ನಿಮಗೇನನಿಸುತ್ತದೆ? ನಮಗೆ ಬರೆದು ತಿಳಿಸಿ.