ಬೆಕ್ಕಿಗೊಂದು ಅಂತ್ಯಸಂಸ್ಕಾರ

ಈ ಬಾರಿಯ ನೀವು ನಂಬುವಿರಾ ಮಾಲಿಕೆಯ ಕಥಾನಕ ತೀರಾ ಅಪರೂಪದ್ದು. ಇದುವರೆಗೆ ಚಿತ್ರ-ವಿಚಿತ್ರ ಸಂಗತಿಗಳನ್ನು ನಾವು ಹೇಳಿದ್ದರೆ, ಈ ಬಾರಿ ನೀವು ತಿಳಿಯಲಿರುವುದು ವಿಶಿಷ್ಟವಾದ ಪ್ರಾಣಿ-ಪ್ರೀತಿಯ ಬಗ್ಗೆ.

ಜನರಿಗೆ ತಮ್ಮ ಸಾಕುಪ್ರಾಣಿಗಳ ಮೇಲೆ ಅತೀವ ಪ್ರೀತಿ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಮಾನವ ಮತ್ತು ಪ್ರಾಣಿಗಳು ಸಾವಿರಾರು ವರ್ಷಗಳಿಂದ ಸಹಜೀವನ ನಡೆಸುತ್ತಿದ್ದವರು. ಆದರೆ, ಕೆಲವೊಮ್ಮೆ ಈ ಪ್ರೀತಿಯು ಉಚ್ಛ್ರಾಯ ಸ್ಥಿತಿ ತಲುಪಿದಾಗ, ಅವುಗಳನ್ನು ಪ್ರದರ್ಶಿಸಲು ಜನರು ವಿಚಿತ್ರ ಚಟುವಟಿಕೆಯಲ್ಲಿ ತೊಡಗುತ್ತಾರೆ ಮತ್ತು ಈ ಇಡೀ ಪ್ರೀತಿಯೆಂಬುದು ಕೇವಲ ಪ್ರಹಸನವಾಗಿಬಿಡುತ್ತದೆ.
WDWD


ನಾಯಿ ಮತ್ತು ಬೆಕ್ಕುಗಳು ಆಜನ್ಮ ವೈರಿಗಳೆಂದು ನಿಮಗೆಲ್ಲರಿಗೂ ಗೊತ್ತು. ಆದರೆ ಇಲ್ಲೊಂದು ನಾಯಿಯಿದೆ. ಬಿಲ್ಲು ಎಂಬುದು ಅದರ ಹೆಸರು. ನ್ಯಾನ್ಸಿ ಹೆಸರಿನ ಬೆಕ್ಕನ್ನು ಅದು ತನ್ನದೇ ಮರಿಯಂತೆ ಸಾಕಿ ಸಲಹಿದೆ. ಮಧ್ಯಪ್ರದೇಶದ ಇಂದೋರ್‌ನ ಮನೆಯವರಿಗೆ ಒಂದು ದಿನ ತಮ್ಮ ನಾಯಿ ಬಿಲ್ಲುವಿನಂತೆಯೇ ಕಾಣುತ್ತಿದ್ದ ಬೆಕ್ಕಿನ ಮರಿಯೊಂದು ದೊರೆತಿತ್ತು. ಅದನ್ನವರು ಮನೆಗೆ ತಂದು ಸಲಹತೊಡಗಿದರು. ಆದರೆ ಬಿಲ್ಲು ಏನು ಮಾಡುತ್ತದೋ ಎಂಬ ಭಯ ಇದ್ದೇ ಇತ್ತು.

ಆದರೆ ನ್ಯಾನ್ಸಿಯನ್ನು ಬಿಲ್ಲು ನೋಡಿ ಬಾಲ ಅಲ್ಲಾಡಿಸಲಾರಂಭಿಸಿದಾಗ ಮನೆಯವರು ನಿಟ್ಟುಸಿರುಬಿಟ್ಟರು. ಅದು ನ್ಯಾನ್ಸಿಯನ್ನು ತನ್ನದೇ ಮರಿಯಂತೆ ಭಾವಿಸಿ ಹಾಲುಣಿಸಿ ಸಲಹತೊಡಗಿತು. ಈ ಬಗ್ಗೆ ಪಶುವೈದ್ಯರಲ್ಲಿ ಮನೆಯವರು ವಿಚಾರಿಸಿದಾಗ, ಈ ಪ್ರಾಣಿಗಳ ನಡುವೆ ಏರ್ಪಟ್ಟ ಮಾನಸಿಕ ಬಂಧದಿಂದ ಇದು ಸಾಧ್ಯ ಎಂಬ ಭರವಸೆ ದೊರೆತಿತ್ತು.

WDWD
ಆದರೆ ಈ ಪ್ರಾಣಿಗಳ ವಾತ್ಸಲ್ಯ ಬಹುಕಾಲ ಉಳಿಯಲಿಲ್ಲ. ಹತ್ತು ತಿಂಗಳ ಬಳಿಕ ಈ ಬೆಕ್ಕು ಸತ್ತು ಹೋಯಿತು. ಇಡೀ ಕುಟುಂಬವೇ ದುಃಖದಲ್ಲಿ ಮುಳುಗಿತು. ವಿಷಯ ಇಷ್ಟೇ ಆದರೆ ಪರವಾಗಿರಲಿಲ್ಲ. ಆದರೆ, ಬಳಿಕ ಮತ್ತೊಂದು ಪ್ರಹಸನ ಆರಂಭವಾಯಿತು. ಕುಟುಂಬ ಸದಸ್ಯರು ಒಂದು ಉತ್ತರ ಕ್ರಿಯೆ ಕಾರ್ಯಕ್ರಮವನ್ನೂ ಹಮ್ಮಿಕೊಂಡರು. ಬೆಕ್ಕಿನ ಅಂತಿಮ ಯಾತ್ರೆಗಾಗಿ ಅವರು ಬ್ಯಾಂಡು ಸೆಟ್ ತರಿಸಿದರು. ಮನುಷ್ಯರಿಗೆ ಮಾಡುವ ಮಾದರಿಯಲ್ಲೇ ಉತ್ತರ ಕ್ರಿಯಾದಿಗಳನ್ನೂ ನಡೆಸಿದರು.

ಪ್ರಾಣಿಗಳ ಬಗ್ಗೆ ಕರುಣೆ, ಪ್ರೀತಿ ತೋರುವುದು ನಿಜಕ್ಕೂ ಮಾನವೀಯ ಗುಣ. ಆದರೆ ಪ್ರಾಣಿಗಳ ಮೇಲೆ ಈ ಮಟ್ಟಿನ ಪ್ರೀತಿ ತೋರಿಸುವುದು ತರವೇ? ಇದು ಪ್ರಚಾರ ಪಡೆಯುವ ತಂತ್ರವಿರಬಹುದೇ? ಈ ಬಗ್ಗೆ ನೀವೇನಂತೀರಿ? ನಮಗೆ ಬರೆದು ತಿಳಿಸಿ.