ರಾಮನಿಗಾಗಿ ಮಿಡಿಯಿತೇ ಶಿವಲಿಂಗ ?

WD
ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಲಖ್ನೋದಲ್ಲಿನ ಶಿವಲಿಂಗವೊಂದು ರಾಮ ಕಟ್ಟಿದ ಸೇತುವೆಗೆ ಧಕ್ಕೆ ಬರುವ ಸೂಚನೆ ಬರುತ್ತಲೇ ತನ್ನ ಬಣ್ಣ ಬದಲಾಯಿಸಿದೆ. ಹಾಗಂತ ಜನಾ ಹೇಳತೊಡಗಿದ್ದಾರೆ. ಲಖ್ನೋದಲ್ಲಿನ ಶಿವಲಿಂಗ ಬಣ್ಣ ಬದಲಾಯಿಸುವ ಮೊದಲು ವಾರಾಣಸಿಯಲ್ಲಿನ ಶಿವಲಿಂಗಗಳು ತಮ್ಮ ಬಣ್ಣ ಬದಲಾಯಿಸಿದ್ದವು. ಒಂದೇ ದಿನದಲ್ಲಿ ಎಲ್ಲ ಲಿಂಗಗಳ ಬಣ್ಣ ಬದಲಾಗಿದ್ದು, ಎಲ್ಲರ ಹುಬ್ಬುಗಳು ಮೇಲೇರುವಂತೆ ಮಾಡಿವೆ.

ಕೆಲ ವರ್ಷಗಳ ಇಂತಹುದೇ ಒಂದೆರಡು ಘಟನೆಗಳು ನಡೆದಿದ್ದವು. ಮೊದಲು ಗಣಪತಿ ಹಾಲು ಕುಡಿದಿದ್ದು, ನಂತರ ಮುಂಬೈನಲ್ಲಿ ಸಮುದ್ರದ ನೀರು ಸಿಹಿಯಾಗಿದ್ದು, ವಿಚಿತ್ರ ಘಟನೆಗಳು.

WD
ಲಖ್ನೋದ ಚೋರಧಾಮ್ ಶಿವಾಲಯದಲ್ಲಿನ ಲಿಂಗ ತನ್ನ ಬಣ್ಣ ಬದಲಾಯಿಸುತ್ತಿದೆ, ಬದಲಾಯಿಸಿದ ಸುದ್ದಿ ಹರಡುತ್ತಲೇ ಸಾವಿರಾರು ಜನರು ಲಿಂಗ ದರ್ಶನಕ್ಕೆ ಮುಗಿಬಿದ್ದು ನೋಡಿದ್ದಾರೆ.

ಈ ಘಟನೆ ನಡೆದದ್ದು ಬರೋಬ್ಬರಿ ಮಧ್ಯಾಹ್ನ. ಕಪ್ಪನೆಯ ಶಿವಲಿಂಗ ಬಿಳಿಬಣ್ಣಕ್ಕೆ ತಿರುಗುತ್ತಿದ್ದಂತೆ ಎಲ್ಲರಲ್ಲಿ ಅಚ್ಚರಿಯನ್ನು ಹುಟ್ಟು ಹಾಕಿತು. ಉತ್ತರ ಪ್ರದೇಶದ ರಾಜಧಾನಿಯಲ್ಲಿ ಇರುವ ಅತುಲ್ ಅಗರವಾಲ್ ಚಿನ್ನದ ವ್ಯಾಪಾರಸ್ಥ. ಅಲ್ಲದೇ ಈ ದೇವಾಲಯದ ಟ್ರಸ್ಟಿ ಕೂಡ. ಅವರೇ ಇಂತಹದೊಂದು ವಿಸ್ಮಯ ಘಟನೆಗೆ ಸಾಕ್ಷಿಯಾಗಿದ್ದಾರೆ.

WD
ಚೋರಧಾಮ್ ಶಿವಮಂದಿರದ ಅರ್ಚಕ ಸಿಯಾ ರಾಮ್ ಅವಸ್ಥಿ ಹೇಳುವ ಪ್ರಕಾರ, ಇಲ್ಲಿನ ಶಿವಲಿಂಗ ಮತ್ತು ರಾಮೇಶ್ವರದ ಲಿಂಗಗಳು ಒಂದೇ ತೆರನಾಗಿದ್ದು, ಈ ದೇವಾಲಯದ ಪ್ರಾಂಗಣದಲ್ಲಿ ರಾಮ ಸೇತುವಿನ ಮಾದರಿಯನ್ನು ಇಡಲಾಗಿದೆ. ಅಲ್ಲದೇ ಇದೇ ದೇವಾಲಯದಲ್ಲಿ ರಾವಣನ ಅರಮನೆಯ ದರ್ಬಾರು ಕೂಡ ಇದೆ. ಅಚ್ಚರಿಯ ಸಂಗತಿ ಎಂದರೆ ಸಾಕಷ್ಟು ದೂರದಲ್ಲಿ ಇರುವ ರಾಮೇಶ್ವರ ಮತ್ತು ಲಖ್ನೋದಲ್ಲಿನ ಶಿವಲಿಂಗಗಳು ಒಂದೇ ಕಾಲಕ್ಕೆ ಬಣ್ಣ ಬದಲಾಯಿಸಿವೆ.

ಸಿಯಾರಾಮ್ ಹೇಳುವುದು ಏನೆಂದರೆ ಭಾರತೀಯ ಪುರಾತತ್ವ ಇಲಾಖೆ ರಾಮ ಸೇತು ಕುರಿತು ತಪ್ಪು ವರದಿ ನೀಡಿದ್ದು ಮತ್ತು ಮುಖ್ಯಮಂತ್ರಿಯೋರ್ವರು ಆಕ್ಷೇಪಣೀಯ ಹೇಳಿಕೆ ನೀಡಿದ್ದು ಕಾರಣ ಎಂಬ ಅಭಿಪ್ರಾಯ ಹೊರಹಾಕುತ್ತಾರೆ.

WD
ಚೋರಧಾಮ್ ಶಿವಲಿಂಗದ ಜೊತೆಗೆ ರಾಣಿ ಕುತ್ರಾ ಪ್ರದೇಶದಲ್ಲಿ ಇರುವ ಶ್ವೇತ ವರ್ಣದ ಶಿವಲಿಂಗಕ್ಕೆ ಮೊದಲು ಕೆಂಬಣ್ಣದ ಪಟ್ಟಿಗಳು ಬಂದಿದ್ದು ಬರುವ ಭಕ್ತರಲ್ಲಿ ಅಚ್ಚರಿಯನ್ನು ಹುಟ್ಟು ಹಾಕಿತು. ಈ ಶಿವಾಲಯದ ಪೂಜಾರಿ ಚಂದ್ರಶೇಖರ್ ತಿವಾರಿ 20 ವರ್ಷಗಳಿಂದ ಈ ದೇವಸ್ಥಾನದಲ್ಲಿ ಲಿಂಗದ ಪೂಜೆ ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಇಂತಹ ಘಟನೆಯನ್ನು ಅವರು ನೋಡಿಲ್ಲ. ದೈವೀಶಕ್ತಿಯ ಎದುರು ನಾವು ಸಾಮಾನ್ಯರು ಎಂಬುದು ಅವರ ನಂಬಿಕೆ. ನಂಬಿಕೆ ಇದ್ದಲ್ಲಿ ಇಂತಹ ಘಟನೆ ಸಾಧ್ಯ ಎನ್ನುತ್ತಾರೆ ಅವರು.

ಪುರಾತತ್ವ ಇಲಾಖೆಯ ಸಹಾಯಕ ನಿರ್ದೇಶಕರ ಪ್ರಕಾರ ಇಂತಹ ಘಟನೆಗಳ ಹಿಂದೆ ವೈಜ್ಞಾನಿಕ ಕಾರಣ ಇದೆ. ಆದರೆ ಸಾವಿರಾರು ವರ್ಷಗಳ ಪುರಾತನ ಮೂರ್ತಿಗಳು ಮಾತ್ರ ಬಣ್ಣ ಬದಲಾಯಿಸಿರುವುದನ್ನು ನೋಡಿಲ್ಲ. ಈ ಘಟನೆ ಪುರಾತತ್ವ ಇಲಾಖೆಗೆ ಸಂಬಂಧಪಟ್ಟದ್ದಲ್ಲ ಎಂದು ಮಾತಿನಿಂದ ಜಾರಿಕೊಳ್ಳುವ ಪ್ರಯತ್ನ ಮಾಡಿದರು. ಐಆರ್‌ಟಿಸಿಯ ನಿವೃತ್ತ ನಿರ್ದೇಶಕ ಮತ್ತು ಬಯೋಟೆಕ್ ಪಾರ್ಕಿನ ಮುಖ್ಯಾಧಿಕಾರಿ ಡಾ ಪಿ.ಕೆ ಸೇಠ್ ಅವರು ನಾವು ಕೇಳಿದ ಯಾವುದೇ ಪ್ರಶ್ನೆಗೆ ಉತ್ತರ ನೀಡಲು ಸಿದ್ದರಿರಲಿಲ್ಲ.