ಬಾಲಿವುಡ್ನ ಗ್ರೀಕ್ ಗಾಡ್ ಎಂದೇ ಹೆಸರಾಗಿರುವ ಹೃತಿಕ್ ರೋಷನ್, ನಟಿ ಯಾಮಿ ಗೌತಮ್ ಜತೆಯಾಗಿ ಅಭಿನಯಿಸಿರುವ ಕಾಬಿಲ್ ಚಿತ್ರ ಬಾಕ್ಸಾಫೀಸಲ್ಲಿ ಗೆದ್ದಿದೆ. ಇದರಲ್ಲಿ ಹೃತಿಕ್, ಯಾಮಿ ಕುರುಡರಾಗಿ ಕಾಣಿಸಿಕೊಂಡಿದ್ದಾರೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಈ ಚಿತ್ರಕ್ಕೆ ಕಣ್ಣುಗಳೇ ಪ್ರಾಣ.
ಕುರುಡನಾಗಿ ಅಭಿನಯಿಸುವುದಕ್ಕೂ ಮುನ್ನ ಹೃತಿಕ್ ಸಾಕಷ್ಟು ತಯಾರಿ ಮಾಡಿಕೊಂಡಿದ್ದರು. ಇದಕ್ಕಾಗಿ ಸಾಕಷ್ಟು ಬೆವರೂ ಹರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನೇತ್ರದಾನದ ಮಹತ್ವವನ್ನು ಎಲ್ಲರಿಗೂ ತಿಳಿಸುತ್ತಾ, ತನ್ನ ಕಣ್ಣುಗಳನ್ನು ದಾನ ಮಾಡುವುದಾಗಿ ಹೃತಿಕ್ ಪ್ರಕಟಿಸಿದ್ದಾರೆ.
ಜ.10ರಂದು ಹೃತಿಕ್ ತನ್ನ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅದೇ ದಿನ ನೇತ್ರದಾನದ ಪತ್ರಗಳಿಗೆ ಸಹಿ ಹಾಕುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಆದಿತ್ಯ ಜ್ಯೋತಿ ಕಣ್ಣಾಸ್ಪತ್ರೆ ನಿರ್ದೇಶಕ, ಅಧ್ಯಕ್ಷ ಡಾ.ಎಸ್.ನಟರಾಜನ್ ಮಾತನಾಡುತ್ತಾ, ಕಾಬಿಲ್ ಚಿತ್ರ ನೋಡಿದ ಮೇಲೆ ರಾಕೇಶ್ ರೋಷನ್ ಅವರೊಂದಿಗೆ ಫೋನ್ನಲ್ಲಿ ಮಾತನಾಡಿದೆ. ಹೃತಿಕ್ ತನ್ನ ಕಣ್ಣುಗಳನ್ನು ದಾನ ಮಾಡುತ್ತಾರಾ ಎಂದು ಕೇಳಿದೆ. ಆಗ ಅವರ ತಂದೆ ಹೌದು ಎಂದಾಗ ತುಂಬಾ ಸಂತೋಷವಾಯಿತು ಎಂದಿದ್ದಾರೆ.
ಆಗ ಹೃತಿಕ್ ಬಳಿ ಸಹ ಮಾತನಾಡಿದೆ, ತನ್ನ ಹುಟ್ಟುಹಬ್ಬದ ದಿನ ನೇತ್ರದಾನ ಪತ್ರಗಳಿಗೆ ಸಹಿ ಹಾಕಿ ಆಚರಿಸಿಕೊಳ್ಳಬೇಕೆಂದಿರುವುದಾಗಿ ತಿಳಿಸಿದರು. ಈ ವಿಷಯವನ್ನು ಹೊರಜಗತ್ತಿಗೆ ತಿಳಿಸಬೇಡಿ ಎಂದು ಹೇಳಿದ್ದರು. ಆದರೆ ಬೇರೆಯವರಿಗೂ ಸ್ಫೂರ್ತಿಯಾಗಲಿ ಎಂದು ಈ ವಿಷಯವನ್ನು ತಿಳಿಸುತ್ತಿದ್ದೇನೆ ಎಂದಿದ್ದಾರೆ ವೈದ್ಯರು.