ಮುಂಬೈ: ವಿವಾದಗಳಿಂದಲೇ ಸುದ್ದಿಯಾಗುತ್ತಿದೆ ಹಿಂದಿಯ ಬಿಗ್ ಬಾಸ್ ರಿಯಾಲಿಟಿ ಶೋ. ಅದೇ ರೀತಿ ಸೀಸನ್ 11 ಶುರುವಾದಾಗಿನಿಂದ ಸಾಕಷ್ಟು ಕುತೂಹಲಕಾರಿ ಟ್ವಿಸ್ಟ್ ಮತ್ತು ಟರ್ನ್ ಪಡೆದುಕೊಳ್ಳುತ್ತಿದೆ.
ಸದ್ಯ ಎವಿಕ್ಟ್ ಆಗಿದ್ದ ಸ್ಪರ್ಧಿ ಜುಬೇರ್ ಖಾನ್, ಬಿಗ್ ಬಾಸ್ ಸೀಸನ್ 11 ಹೋಸ್ಟ್ ಸಲ್ಮಾನ್ ಖಾನ್ ವಿರುದ್ಧ ಲೋನವಾಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬಿಗ್ ಬಾಸ್ ನ ಮೊದಲ ವಾರದ `ವೀಕೆಂಡ್ ಕಾ ವಾರ್’ನಲ್ಲಿ ಸಲ್ಮಾನ್ ಖಾನ್ ತಮಗೆ ಬೆದರಿಕೆ ಹಾಕಿದ್ದಾರೆ. “I will make you my dog. Will see you after you leave the home” ಎಂದು ಹೇಳಿದ್ದಾರೆಂದು ಜುಬೇರ್ ಖಾನ್ ಆರೋಪಿಸಿದ್ದಾರೆ.
ಶೋನಲ್ಲಿ ಜುಬೇರ್, ಮಹಿಳಾ ಸ್ಪರ್ಧಿಗಳು ಮತ್ತು ಸಹ ಸ್ಪರ್ಧಿಗಳ ಬಗ್ಗೆ ಅನುಚಿತವಾಗಿ ವರ್ತಿಸಿದ್ದಲ್ಲದೆ, ಕೆಟ್ಟ ಪದ ಬಳಸಿದ್ದರು. ಇದರಿಂದ ತಮ್ಮ ತಾಳ್ಮೆ ಕಳೆದುಕೊಂಡಿದ್ದ ಸಲ್ಮಾನ್, ಜುಬೇರ್ ಗೆ ತರಾಟೆ ತೆಗೆದುಕೊಂಡಿದ್ದರು.
ಜುಬೇರ್ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಂಬಂಧಿ ಎಂದು ಹೇಳಲಾಗಿದೆ. ಭಾನುವಾರ ಬೆಳಗ್ಗೆ ಅನಾರೋಗ್ಯ ಕಾರಣದಿಂದ ಕನ್ಫೆಷನ್ ರೂಮಿಗೆ ಕರೆಯಿಸಿ ನಂತರ ವೈದ್ಯರ ಬಳಿ ಕಳುಹಿಸಲಾಗಿತ್ತು. ಎಪಿಸೋಡ್ ಕೊನೆಯಲ್ಲಿ ಜುಬೇರ್ ಚೇತರಿಸಿಕೊಂಡಿದ್ದು, ಕಡಿಮೆ ವೋಟ್ ಗಳಿಸಿರುವ ಹಿನ್ನೆಲೆಯಲ್ಲಿ ಅವರನ್ನು ಎವಿಕ್ಟ್ ಮಾಡಲಾಗಿದೆ ಎಂದು ಸಲ್ಮಾನ್ ಖಾನ್ ಅನೌನ್ಸ್ ಮಾಡಿದ್ದರು.