ಮುಂಬೈ: ಗರ್ಭಕಂಠದ ಕ್ಯಾನ್ಸರ್ ನಿಂದಾಗಿ ಸಾವನ್ನಪ್ಪಿರುವುದಾಗಿ ತಮ್ಮ ಬಗ್ಗೆ ತಾವೇ ಸುಳ್ಳು ಸುದ್ದಿ ಹಬ್ಬಿಸಿದ ನಟಿ ಪೂನಂ ಪಾಂಡೆ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಅಖಿಲ ಭಾರತ ಸಿನಿ ಕಾರ್ಮಿಕರ ಸಂಘ ಆಗ್ರಹಿಸಿದೆ.
ಸಾಮಾನ್ಯವಾಗಿ ನಟಿಯರು ತಮ್ಮ ಸಿನಿಮಾ ಅಥವಾ ಇನ್ಯಾವುದೇ ಪ್ರಚಾರಕ್ಕಾಗಿ ಪಬ್ಲಿಸಿಟಿ ಗಿಮಿಕ್ ಮಾಡುವುದು ಸಹಜ. ಆದರೆ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ತಾವೇ ಸಾವನ್ನಪ್ಪಿರುವುದಾಗಿ ಪಿಆರ್ ಮೂಲಕ ತಮ್ಮದೇ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಮಾಹಿತಿ ಹರಿಯಬಿಟ್ಟು ಎಲ್ಲರಿಗೂ ಶಾಕ್ ನೀಡಿದ್ದ ಪೂನಂ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಪೂನಂ ಸಾವಿನ ಬಗ್ಗೆ ಪಿಆರ್ ಹೇಳಿದ್ದೇನು?
ಮೊನ್ನೆ ಬೆಳ್ಳಂ ಬೆಳಿಗ್ಗೆ ನಟಿ ಪೂನಂ ಪಾಂಡೆ ಇನ್ ಸ್ಟಾಗ್ರಾಂ ಪುಟದಲ್ಲಿ ಅವರ ಮ್ಯಾನೇಜರ್ ಗರ್ಭಕಂಠದ ಕ್ಯಾನ್ಸರ್ ನಿಂದಾಗಿ ಪೂನಂ ನಮ್ಮನ್ನಗಲಿರುವುದಾಗಿ ಸಂದೇಶ ಪ್ರಕಟಿಸಿದ್ದರು. ಈ ಸಾವಿನ ಸುದ್ದಿ ತಿಳಿದು ಅನೇಕರು ನಿಜಕ್ಕೂ ಅಚ್ಚರಿಗೊಳಗಾಗಿದ್ದರು. ಎರಡು ದಿನದ ಹಿಂದಷ್ಟೇ ಆರಾಮವಾಗಿ ಓಡಾಡಿಕೊಂಡಿದ್ದ ಪೂನಂ ಕ್ಯಾನ್ಸರ್ ನಿಂದಾಗಿ ಸಾವನ್ನಪ್ಪಿದರು ಎಂದರೆ ಯಾರೂ ನಂಬುವ ಸ್ಥಿತಿಯಲ್ಲಿರಲಿಲ್ಲ. ಬಳಿಕ ಅವರು ಅತಿಯಾದ ಮಾದಕ ವಸ್ತು ಸೇವನೆಯಿಂದ ಮೃತಪಟ್ಟಿರಬಹುದು ಎಂಬ ಶಂಕೆಯೂ ಹರಿದಾಡಿತ್ತು.
ವಿಡಿಯೋ ಮೂಲಕ ಪ್ರತ್ಯಕ್ಷರಾದ ಪೂನಂ
ಸಾವಿನ ಸುದ್ದಿ ಎಲ್ಲೆಡೆ ವೈರಲ್ ಆಗಿ ಒಂದು ದಿನದ ಬಳಿಕ ವಿಡಿಯೋ ಸಂದೇಶ ಮೂಲಕ ಪ್ರತ್ಯಕ್ಷರಾದ ಪೂನಂ, ನಿಮಗೆಲ್ಲಾ ತೊಂದರೆ ಕೊಟ್ಟಿದ್ದಕ್ಕೆ ಕ್ಷಮೆಯಿರಲಿ. ನಾನು ಜೀವಂತವಾಗಿಯೇ ಇದ್ದೇನೆ. ಆದರೆ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಇಂತಹದ್ದೊಂದು ಸುದ್ದಿ ಹರಡಿರುವುದಾಗಿ ಹೇಳಿಕೆ ನೀಡಿದ್ದರು. ವಿಡಿಯೋ ಪ್ರಕಟವಾಗುತ್ತಿದ್ದಂತೇ ಸಾರ್ವಜನಿಕರು ಪೂನಂಗೆ ಉಗಿದು ಉಪ್ಪಿನಕಾಯಿ ಹಾಕಿದ್ದಾರೆ. ಪಬ್ಲಿಸಿಟಿಗಾಗಿ ತಮ್ಮದೇ ಪ್ರಾಣ ಹೋಗಿದೆಯೆಂದು ಸುಳ್ಳು ಸುದ್ದಿ ಹರಡಿದ್ದಕ್ಕೆ ಛೀಮಾರಿ ಹಾಕಿದ್ದಾರೆ.
ಎಫ್ ಐಆರ್ ದಾಖಲಿಸಲು ಆಗ್ರಹಿಸಿದ ಸಿನಿ ಕಾರ್ಮಿಕರ ಸಂಘ
ಪೂನಂ ಪಬ್ಲಿಸಿಟಿಗಾಗಿ ತಮ್ಮ ಸಾವಿನ ಸುಳ್ಳು ಸುದ್ದಿ ಹರಡಿರುವುದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಸಿನಿ ಕಾರ್ಮಿಕರ ಸಂಘ ಅವರ ವಿರುದ್ಧ ಎಫ್ ಐಆರ್ ದಾಖಲಿಸಬೇಕೆಂದು ಒತ್ತಾಯಿಸಿದೆ. ಪಬ್ಲಿಸಿಟಿ ಸ್ಟಂಟ್ ಗಾಗಿ ಯಾರೂ ಇಷ್ಟು ಕೀಳುಮಟ್ಟಕ್ಕಿಳಿಯಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದೆ. ಹೀಗೇ ಆದರೆ ಮುಂದಿನ ದಿನಗಳಲ್ಲಿ ಜನ ಸಿನಿಮಾ ಮಂದಿಯ ಸಾವಿನ ಸುದ್ದಿಯನ್ನು ನಂಬದ ಸ್ಥಿತಿಗೆ ಬರುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.