ವಿನಾಶಕಾರಿ ಕಾಳ್ಗಿಚ್ಚಿನಲ್ಲಿ ಬದುಕುಳಿದದ್ದಕ್ಕೆ ದೇವರಿಗೆ ಋಣಿ: ಹೃದಯ ಚೂರಾಗಿದೆ ಎಂದ ಪ್ರೀತಿ ಜಿಂಟಾ

Sampriya

ಭಾನುವಾರ, 12 ಜನವರಿ 2025 (15:27 IST)
Photo Courtesy X
ಲಾಸ್‌ ಏಂಜಲೀಸ್‌: ಅಮೆರಿಕಾದ ಲಾಸ್‌ ಏಂಜಲೀಸ್‌ನಲ್ಲಿ ನೆಲೆಸಿರುವ ಬಾಲಿವುಡ್‌ ನಟಿ ಪ್ರೀತಿ ಜಿಂಟಾ ಅವರು ಅಲ್ಲಿನ ವಿನಾಶಕಾರಿ ಕಾಳ್ಗಿಚ್ಚಿನ ಬಗ್ಗೆ ಎಕ್ಸ್‌/ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

 ಕಾಳ್ಗಿಚ್ಚಿನ ಕುರಿತು ಆಘಾತ ವ್ಯಕ್ತಪಡಿಸಿರುವ ಅವರು, ತಾನು ಸುರಕ್ಷಿತವಾಗಿದ್ದೇನೆ. ಆದರೆ, ವಿನಾಶಕಾರಿ ಕಾಳ್ಗಿಚ್ಚನ್ನು ಕಂಡು ಹೃದಯ ಚೂರಾಗಿದೆ ಎಂದಿದ್ದಾರೆ.

ಕಾಳ್ಗಿಚ್ಚಿನಿಂದಾಗಿ ಈವರೆಗೆ 16 ಮಂದಿ ಮೃತಪಟ್ಟಿರುವುದಾಗಿ ಲಾಸ್‌ ಏಂಜಲೀಸ್‌ ಕೌಂಟಿ ವೈದ್ಯಾಧಿಕಾರಿಗಳು ಖಚಿತಪಡಿಸಿದ್ದಾರೆ. ಕಳೆದವಾರ ಕಾಣಿಸಿಕೊಂಡ ಕಾಳ್ಗಿಚ್ಚಿನಿಂದಾಗಿ, ಮನೆಗಳು, ವಸತಿ ಸಮುಚ್ಚಯಗಳು, ವಾಣಿಜ್ಯ ಕೇಂದ್ರಗಳು ಸೇರಿದಂತೆ ಈವರೆಗೆ 12,000 ಕ್ಕೂ ಹೆಚ್ಚು ಕಟ್ಟಡಗಳು ಸುಟ್ಟುಕರಕಲಾಗಿವೆ.

ಪ್ರೀತಿ ಜಿಂಟಾ ಅವರು ಹಣಕಾಸು ವಿಶ್ಲೇಷಕ ಆಗಿರುವ ಪತಿ ಜೆನ್‌ ಗುಡ್‌ನಫ್ ಹಾಗೂ ಅವಳಿ ಮಕ್ಕಳೊಂದಿಗೆ ಲಾಸ್‌ ಏಂಜಲೀಸ್‌ನಲ್ಲಿ ವಾಸವಾಗಿದ್ದಾರೆ. ಕಾಳ್ಗಿಚ್ಚಿನ ಭೀಕರತೆ ಬಗ್ಗೆಬರೆದುಕೊಂಡಿರುವ ಅವರು, ಇಂಥಹ ಭೀಕರ ದಿನಗಳನ್ನು ನೋಡುತ್ತೇನೆ ಎಂದುಕೊಂಡಿರಲಿಲ್ಲ ಎಂದಿದ್ದಾರೆ.

ನಮ್ಮ ಸುತ್ತಮುತ್ತಲಿನ ಪರಿಸರವನ್ನು ಅಗ್ನಿ ಆಹುತಿ ಪಡೆಯುತ್ತದೆ ಎಂದು ಊಹಿಸಿರಲಿಲ್ಲ. ಈ ವಿನಾಶದಿಂದಾಗಿ ಎದೆಗುಂದಿದ್ದೇನೆ. ಬದುಕುಳಿದದ್ದಕ್ಕೆ ದೇವರಿಗೆ ಕೃತಜ್ಞರಾಗಿರುತ್ತೇನೆ. ಎಲ್ಲವನ್ನೂ ಕಳೆದುಕೊಂಡು ಸ್ಥಳಾಂತರಗೊಂಡಿರುವವರಿಗಾಗಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ