ಮುಂಬೈ: ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಪ್ರೆಗ್ನೆನ್ಸಿ ರೂಮರ್ ಕೊನೆಗೂ ನಿಜವಾಗಿದೆ. ದೀಪಿಕಾ ಈಗ ಎರಡು ತಿಂಗಳ ಗರ್ಭಿಣಿ. ಪತಿ ರಣವೀರ್ ಸಿಂಗ್ ಈ ಸಿಹಿ ಸುದ್ದಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಮಗುವಿನ ಅಂಗಿ, ಶೂ ಇರುವ ಫೋಟೋ ಜೊತೆಗೆ ಸೆಪ್ಟೆಂಬರ್ 2024 ರಲ್ಲಿ ಸಿಹಿ ಸುದ್ದಿ ಎಂದು ರಣವೀರ್ ಸಿಂಗ್ ಪೋಸ್ಟ್ ಮಾಡಿದ್ದಾರೆ. ಅವರ ಈ ಪೋಸ್ಟ್ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಜೊತೆಗೆ ದಂಪತಿಗೆ ಸೆಲೆಬ್ರಿಟಿಗಳು, ಫ್ಯಾನ್ಸ್ ಶುಭಾಶಯಗಳ ಸುರಿಮಳೆಗೈಯುತ್ತಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ದೀಪಿಕಾ ಗರ್ಭಿಣಿ ಎನ್ನುವ ಸುದ್ದಿ ಜೋರಾಗಿ ಕೇಳಿಬಂದಿತ್ತು. ಆದರೆ ಈ ಸುದ್ದಿಯನ್ನು ದಂಪತಿ ಅಲ್ಲಗಳೆದಿರಲಿಲ್ಲ. ಜೊತೆಗೆ ದೀಪಿಕಾ ಇತ್ತೀಚೆಗೆ ಸಾರ್ವಜನಿಕವಾಗಿಯೂ ಅಷ್ಟೊಂದು ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಅವರು ಗರ್ಭಿಣಿ ಇರಬಹುದು ಎಂಬ ಊಹಾಪೋಹಗಳಿತ್ತು. ಅದೀಗ ನಿಜವಾಗಿದೆ.
ಮೂಲತಃ ಕನ್ನಡಿಗರಾದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ 2018 ರಲ್ಲಿ ಮದುವೆಯಾಗಿದ್ದರು. ಇತ್ತೀಚೆಗೆ ದೀಪಿಕಾ ಸಂದರ್ಶನವೊಂದರಲ್ಲಿ ತನಗೆ ಮಗು ಮಾಡಿಕೊಳ್ಳುವ ಯೋಜನೆಯಿದೆ ಎಂದಿದ್ದರು. ಅದರಂತೆ ಇದೀಗ ಮದುವೆಯಾಗಿ ಆರು ವರ್ಷಗಳ ಬಳಿಕ ಮಗು ಬರಮಾಡಿಕೊಳ್ಳುತ್ತಿದ್ದಾರೆ. ಇದೀಗ ದೀಪಿಕಾ ಮತ್ತು ರಣಬೀರ್ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.