ತೆರೆಗೆ ಬರಲಿದೆ ರಾಜೀವ್-ಸೋನಿಯಾ ಲವ್‌ಸ್ಟೋರಿ

ಶನಿವಾರ, 18 ಫೆಬ್ರವರಿ 2017 (12:43 IST)
ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪ್ರೇಮಕಥೆಯನ್ನು ಬೆಳ್ಳಿತೆರೆಗೆ ತರಲಾಗುತ್ತಿದೆ. ಇದೊಂದು ಕಿರುಚಿತ್ರವಾಗಿದ್ದು, ರಾಜೀವ್ ಗಾಂಧಿಯಾಗಿ ಕಿರುತೆರೆ ನಟ ಕರಣ್ ವೀರ್ ಬೋರಾ, ಸೋನಿಯಾ ಗಾಂಧಿಯಾಗಿ ಪ್ರಿಯಾ ಬ್ಯಾನರ್ಜಿ ನಟಿಸಲಿದ್ದಾರೆ. ಈ ಚಿತ್ರಕ್ಕೆ ’ಇಜಾಜತ್’ ಎಂದು ಹೆಸರಿಡಲಾಗಿದೆ.
 
ಸೋನಿಯಾ, ರಾಜೀವ್ ಪ್ರೇಮಕಥೆ ಕೇವಲ ಒಂದು ಪ್ರೇಮಕಥೆಯಾಗಿ ಬರಲಿದೆ, ಇದರಲ್ಲಿ ಯಾವುದೇ ರಾಜಕೀಯ ವಿಷಯಗಳನ್ನು ಪ್ರಸ್ತಾಪ ಮಾಡುವುದಿಲ್ಲ ಎಂದು ಕರಣ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸಿನಿಮಾ ತಾರೆಗಳು, ಜೋಡಿಗಳ ಬಗ್ಗೆ ಸಾಕಷ್ಟು ಕಿರುಚಿತ್ರಗಳು ಬಂದಿವೆ. ಆದರೆ ರಾಜಕೀಯ ಹಿನ್ನೆಲೆಯುಳ್ಳವರ ಬಗ್ಗೆ ಹೆಚ್ಚಾಗಿ ಬರಲಿಲ್ಲ. ಕಾನ್ಸೆಪ್ಟ್ ಭಿನ್ನವಾಗಿದ್ದ ಕಾರಣ ನಟಿಸಲು ಒಪ್ಪಿಕೊಂಡೆ ಎನ್ನುತ್ತಾರೆ ಕರಣ್.
 
ಈ ಪ್ರೇಮಕಥೆಯಲ್ಲಿ ಅಭಿನಯಿಸಬೇಕು ಅನ್ನಿಸಿದ್ದು ಯಾಕೆ? ಎಂದು ಕೇಳಲಾಗಿ, "ಒಮ್ಮೆ ಪ್ರಮುಖ ನಟಿ, ನಿರೂಪಕಿ ಸಿಮಿ ಗರೇವಾಲ್ ಅವರು ರಾಜೀವ್ ಗಾಂಧಿ ಅವರನ್ನು ಸಂದರ್ಶಿಸುವುದನ್ನು ಮಾಧ್ಯಮಗಳಲ್ಲಿ ನೋಡಿದ್ದೆ. ಅದರಲ್ಲಿ ರಾಜೀವ್ ಗಾಂಧಿ ತುಂಬಾ ಅಂದವಾಗಿ, ಸರಳವಾಗಿ ಕಾಣಿಸುತ್ತಿದ್ದರು. ಅವರು ಸೋನಿಯಾರನ್ನು ಹೇಗೆ ಭೇಟಿಯಾದರು, ಆ ಬಳಿಕ ಮದುವೆಯಾಗಲು ತಾಯಿಯನ್ನು ಹೇಗೆ ಒಪ್ಪಿಸಿದರು ಎಂಬುದನ್ನೆಲ್ಲಾ ತಿಳಿಸಿದ್ದರು...
 
ಅದೊಂದು ಆಪ್ಯಾಯಮಾನವಾಗಿದ್ದ ಕಾರ್ಯಕ್ರಮ. ಈಗ ಅದೇ ಕಥೆಯನ್ನು ಕಿರುಚಿತ್ರದಲ್ಲಿ ತೋರಿಸಲಿದ್ದೇವೆ. ಈ ಚಿತ್ರವನ್ನು ರಾಜೀವ್ ಗಾಂಧಿ ಅವರಿಗೆ ಅರ್ಪಿಸಲಿದ್ದೇವೆ" ಎಂದಿದ್ದಾರೆ ಕರಣ್. ಈ ಕಿರುಚಿತ್ರ ಇಂಗ್ಲಿಷ್ ಮತ್ತು ಇಟಾಲಿಯನ್ ಭಾಷೆಗಳಲ್ಲಿ ಬರಲಿದೆ. ಮಾರ್ಚ್‍ನಲ್ಲಿ ಚಿತ್ರೀಕರಣ ಆರಂಭವಾಗಲಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ