ನವದೆಹಲಿ: ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ಫೆಬ್ರವರಿ 21 ರಂದು ಜಾಕಿ ಭಗ್ನಾನಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರ ಮದುವೆಗೆ ಶುಭ ಕೋರಿದ್ದಕ್ಕೆ ಇದೀಗ ಪ್ರಧಾನಿ ಮೋದಿ ಟೀಕೆಗೊಳಗಾಗಿದ್ದಾರೆ.
ರಕುಲ್ ಪ್ರೀತ್ ಸಿಂಗ್ ಮತ್ತು ಜಾಕಿ ಭಗ್ನಾನಿ ತಮ್ಮ ಮದುವೆಗೆ ಪ್ರಧಾನಿ ಮೋದಿಗೆ ಆಹ್ವಾನವಿತ್ತಿದ್ದರು. ಆದರೆ ಮೋದಿ ವಿವಾಹಕ್ಕೆ ಬರಲಾಗಲಿಲ್ಲ. ಬದಲಾಗಿ ಅವರಿಗೆ ಪತ್ರ ಬರೆದು ಶುಭ ಕೋರಿದ್ದರು. ಈ ಪತ್ರವನ್ನು ರಕುಲ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿ ಖುಷಿ ಹಂಚಿಕೊಂಡಿದ್ದರು. ಆದರೆ ಮೋದಿ ಬರೆದ ಪತ್ರ ನೋಡಿ ಕೆಲವರು ಟೀಕೆ ಮಾಡಿದ್ದಾರೆ.
ಜಾಕಿ ಮತ್ತು ರಕುಲ್ ಜೀವನ ಪರ್ಯಂತ ಪ್ರೀತಿ, ವಿಶ್ವಾಸದಿಂದಿರುವ ಪ್ರಮಾಣ ಮಾಡಿದ್ದಾರೆ. ಇವರಿಬ್ಬರ ಮದುವೆಗೆ ಶುಭ ಹಾರೈಕೆಗಳು. ಮದುವೆ ಎನ್ನುವುದು ಒಬ್ಬರೊನ್ನಬ್ಬರು ಅರ್ಥ ಮಾಡಿಕೊಳ್ಳಲು ಇಬ್ಬರಿಗೆ ಸಿಕ್ಕ ಅವಕಾಶವಾಗಿದೆ. ದಂಪತಿ ಕೆಲಸ, ಕಾರ್ಯಗಳು, ದಾರಿ ಎಲ್ಲವೂ ಒಂದೇ ಆಗಿರಲಿ. ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳುವ ಹಾದಿಯಲ್ಲಿ ಇಬ್ಬರೂ ಜೊತೆಯಾಗಿ ನಡೆಯಲಿ. ಇಬ್ಬರ ಕುಂದುಕೊರತೆಗಳನ್ನು ಸ್ವೀಕರಿಸಿ, ಒಪ್ಪಿಕೊಂಡು ಜೊತೆಯಾಗಿ ಬಾಳಲಿ ಎಂದು ಮೋದಿ ಶುಭಾಶಯ ಪತ್ರದಲ್ಲಿ ಬರೆದಿದ್ದರು.
ಇದನ್ನು ನೋಡಿ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದು, ಮೋದಿಗೆ ನಟರ ಮದುವೆಗೆ ಶುಭ ಕೋರಲು ಪುರುಸೊತ್ತಿದೆ. ರೈತರ ಪ್ರತಿಭಟನೆ ಬಗ್ಗೆ ತಲೆಕೆಡಿಸಿಕೊಳ್ಳಲು ಪುರುಸೊತ್ತಿಲ್ಲ ಎಂದು ಟೀಕಿಸಿದ್ದಾರೆ.