ಮೂರನೇ ದಿನಕ್ಕೆ ಕಾಲಿಟ್ಟ ರೈತ ಪ್ರತಿಭಟನೆ

Krishnaveni K

ಗುರುವಾರ, 15 ಫೆಬ್ರವರಿ 2024 (10:03 IST)
ನವದೆಹಲಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ಸಮರ ಸಾರಿರುವ ರೈತ ಸಂಘಟನೆಗಳ ಪ್ರತಿಭಟನೆ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದೆ.

ಇಂದು ಪಂಜಾಬ್ ನಲ್ಲಿ ರೈಲು ತಡೆದು ಪ್ರತಿಭಟನೆ ನಡೆಸಲಿದ್ದಾರೆ. ಮೊದಲ ದಿನ ರೈತರು ದೆಹಲಿಗೆ ಮುತ್ತಿಗೆ ಹಾಕಲು ತಯಾರಿ ನಡೆಸಿದ್ದರು. ಈ ವೇಳೆ ಪೊಲೀಸರು ಮತ್ತು ರೈತರ ನಡುವೆ ಘರ್ಷಣೆಯಾಗಿದೆ.  ರೈತರು ದೆಹಲಿ ಪ್ರವೇಶಿಸದಂತೆ ಪೊಲೀಸರು ಬ್ಯಾರಿಕೇಡ್, ಮುಳ್ಳಿನ ತಂತಿ,  ಜಲಫಿರಂಗಿ, ಅಶ್ರವಾಯು ಜೊತೆಗೆ ಶಬ್ದಾಸ್ತ್ರವನ್ನೂ ಬಳಸಿದ್ದಾರೆ. ಒಂದೆಡೆ ಪೊಲೀಸರು ಡ್ರೋಣ್ ಮೂಲಕ ಅಶ್ರವಾಯು ಸಿಡಿಸಿದರೆ ರೈತರು ಅದನ್ನು ತಡೆಯಲು ಗಾಳಿಪಟದ ನೆರವು ಪಡೆದಿದ್ದಾರೆ.

ರೈತ ಪ್ರತಿಭಟನೆಯಿಂದಾಗಿ ಪಂಜಾಬ್, ಹರ್ಯಾಣ, ದೆಹಲಿಯಲ್ಲಿ ತೀವ್ರ ಟ್ರಾಫಿಕ್ ಜಾಮ್ ಉಂಟಾಗಿದೆ.  ದೆಹಲಿಗೆ ಬರುವ ಗಡಿ ಮಾರ್ಗಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಇದರಿಂದಾಗಿ ರೈತರಿಗೆ ಟ್ರ್ಯಾಕ್ಟರ್ ನುಗ್ಗಿಸಲು ಸಾಧ‍್ಯವಾಗಿಲ್ಲ. ರೈತರನ್ನು ತಡೆಯಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಕನಿಷ್ಠ ಬೆಂಬಲ ಬೆಲೆಗೆ ಕಾನೂನು ರೂಪಿಸಬೇಕು ಎಂಬುದು ರೈತರ ಮುಖ್ಯ ಬೇಡಿಕೆಯಾಗಿದೆ. ಇದರ ಜೊತೆಗೆ ಸ್ವಾಮಿನಾಥನ್ ಆಯೋಗದ ಶಿಫಾರಸ್ಸು ಅನುಷ್ಠಾನಗೊಳಿಸಬೇಕು, ಲಖಿಂಪುರ ಖೇರಿ ಹಿಂಸಾಚಾರದಲ್ಲಿ ಸಂತ್ರಸ್ತರಾದವರಿಗೆ ನೆರವಾಗಬೇಕು ಎಂಬಿತ್ಯಾದಿ ಬೇಡಿಕೆಗಳನ್ನಿಟ್ಟುಕೊಂಡು ರೈತರು ಹೋರಾಟ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ