ಮತ್ತೆ ಜೈಲು ಸೇರುತ್ತಾರಾ ಸಲ್ಮಾನ್ ಖಾನ್‌?

ಬುಧವಾರ, 18 ಜನವರಿ 2017 (09:39 IST)
ಸಲ್ಮಾನ್ ಖಾನ್ ಎದುರಿಸುತ್ತಿರುವ ಅಕ್ರಮ ಶಸ್ತ್ರಾಸ್ತ್ರ ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ  ರಾಜಸ್ಥಾನದ  ಜೋಧ್‌ಪುರ ನ್ಯಾಯಾಲಯ ಇಂದು ಅಂತಿಮ ತೀರ್ಪು ಪ್ರಕಟಿಸಲಿದ್ದು ಬಾಲಿವುಡ್ ಚಿತ್ತ ನ್ಯಾಯಾಲಯದತ್ತ ನೆಟ್ಟಿದೆ. 

 
1998ರಲ್ಲಿ ಹಮ್ ಸಾಥ್ ಸಾಥ್ ಹೈ ಸಿನಿಮಾ ಶೂಟಿಂಗ್ ನಡೆಯುವಾಗ ಸಲ್ಮಾನ್ ಜೋಧ್ಪುರದ ಬಳಿ ಇರುವ ರಕ್ಷಿತಾರಣ್ಯದಲ್ಲಿ ಕೃಷ್ಣಮೃಗವನ್ನು ಬೇಟೆಯಾಡಿದ್ದರು. ಅವರ ವಿರುದ್ಧ ಕೃಷ್ಣಮೃಗ ಬೇಟೆ, ಪರವಾನಿಗೆ ಮುಗಿದ ಬಳಿಕವೂ ಶಸ್ತ್ರಾಸ್ತ್ರ ಹೊಂದಿರುವ ಆರೋಪ ಸೇರಿದಂತೆ ಮೂರು ಪ್ರಕರಣ ದಾಖಲಾಗಿತ್ತು .
 
ಕೃಷ್ಣಮೃಗ ಹತ್ಯೆ ಆರೋಪಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಈಗಾಗಲೇ ಖುಲಾಸೆಯಾಗಿದ್ದು ಪ್ರಕರಣವೀಗ ಸುಪ್ರೀಂಕೋರ್ಟ್‌ನಲ್ಲಿದೆ. ಆದರೆ ಪರವಾನಿಗೆ ಅವಧಿ ಮುಗಿದ ಬಳಿಕವೂ ಅಕ್ರಮವಾಗಿ ಶಸ್ತ್ರಾಸ್ತ್ರ ಇಟ್ಟುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ 18 ವರ್ಷಗಳ ದೀರ್ಘಕಾಲ ವಿಚಾರಣೆ ನಡೆಸಿದ ಕೋರ್ಟ್ ಕಳೆದ 9ನೇ ತಾರೀಖಿನಿಂದ ವಿಚಾರಣೆಯನ್ನು ಮುಗಿಸಿತ್ತು. 
 
ಮತ್ತಿಂದು ಈ ಕುರಿತು ಅಂತಿಮ ತೀರ್ಪು ಪ್ರಕಟವಾಗಲಿದ್ದು ಖುದ್ದು ಹಾಜರಾಗುವಂತೆ ಸಲ್ಮಾನ್ ಮತ್ತು ಕೃತ್ಯ ನಡೆದಾಗ ಅವರ ಜತೆಗಿದ್ದಸೈಫ್ ಅಲಿ ಖಾನ್, ನೀಲಂ, ಟಬು, ಸೋನಾಲಿ ಬೇಂದ್ರೆಗೆ ಸೂಚನೆ ನೀಡಿದೆ. 
 
ನ್ಯಾಯಾಲಯದ ಸೂಚನೆಯಂತೆ ಸಲ್ಮಾನ್ ಕುಟುಂಬದ ಸದಸ್ಯರ ಜತೆ ಈಗಾಗಲೇ ಜೋಧ್‌ಪುರ ತಲುಪಿದ್ದಾರೆ.
 
ಆರೋಪ ಸಾಬೀತಾದರೆ ಸಲ್ಮಾನ್ ಅವರಿಗೆ ಗರಿಷ್ಠ ಏಳುವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆಗಳಿವೆ. ಹೀಗಾಗಿ ಸಲ್ಮಾನ್ ಪರ ವಕೀಲರು ರಾಜಸ್ಥಾನ ಹೈಕೋರ್ಟ್ ಮೆಟ್ಟಿಲೇರಲು ಜಾಮೀನು ಅರ್ಜಿಯನ್ನು ಸಿದ್ಧವಾಗಿಟ್ಟುಕೊಂಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ