ನವದೆಹಲಿ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ರಾಜ್ ಕುಂದ್ರಾಗೆ ಇಡಿ ಸಂಕಷ್ಟ ಎದುರಾಗಿದೆ. ಸೆಲೆಬ್ರಿಟಿ ದಂಪತಿಗಳಿಗೆ ಸೇರಿದ 97 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಇಡಿ ವಶಪಡಿಸಿಕೊಂಡಿದೆ.
ಪಿಎಂಎಲ್ಎ, 2002 ರ ನಿಬಂಧನೆಗಳ ಅಡಿಯಲ್ಲಿ ರಾಜ್ ಕುಂದ್ರಾಗೆ ಸೇರಿದ 97.79 ಕೋಟಿ ರೂ. ಮೌಲ್ಯದ ಸ್ಥಿರ ಮತ್ತು ಚರಾಸ್ತಿಗಳನ್ನು ಇಡಿ ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ. ಈ ಬಗ್ಗೆ ಇಡಿ ಇಲಾಖೆ ಸೋಷಿಯಲ್ ಮೀಡಿಯಾ ಎಕ್ಸ್ ನಲ್ಲಿ ಮಾಹಿತಿ ನೀಡಿದೆ.
ಜುಹುವಿನಲ್ಲಿರುವ ವಸತಿ ಫ್ಲ್ಯಾಟ್, ಪುಣೆಯಲ್ಲಿರುವ ಬಂಗಲೆ ಶಿಲ್ಪಾ ಶೆಟ್ಟಿ ಹೆಸರಿನಲ್ಲಿದ್ದು ಇದನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಇದರ ಜೊತೆಗೆ ರಾಜ್ ಕುಂದ್ರಾ ಹೆಸರಿನಲ್ಲಿರುವ ಈಕ್ವಿಟಿ ಷೇರುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ತಿಳಿಸಿದೆ.
ಕೆಲವು ಸಮಯದ ಹಿಂದೆ ರಾಜ್ ಕುಂದ್ರಾ ಬ್ಲೂ ಫಿಲಂ ದಂಧೆ ಆರೋಪದಲ್ಲಿ ಬಂಧಿತರಾಗಿದ್ದರು. ಕೆಲವು ದಿನ ಜೈಲು ವಾಸ ಅನುಭವಿಸಿದ್ದ ರಾಜ್ ಕುಂದ್ರಾ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಇದೀಗ ಇಡಿ ಕೇಸ್ ಬಗ್ಗೆ ಅವರ ಪರ ವಕೀಲರು ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಹಣ ವರ್ಗಾವಣೆ ನಿಯಮದಡಿ ನನ್ನ ಕಕ್ಷಿದಾರರಿಗೆ ಯಾವುದೇ ತೊಂದರೆಯಾಗದಂತೆ ಕಾನೂನಿನ ಪ್ರಕಾರ ಅವರನ್ನು ರಕ್ಷಿಸಲು ಏನೆಲ್ಲಾ ಸಾಧ‍್ಯವೋ ಅದೆಲ್ಲವನ್ನೂ ಮಾಡಲಿದ್ದೇವೆ. ಈ ಕುರಿತಂತೆ ನಿಷ್ಪಕ್ಷಪಾತ ತನಿಖೆಯಾಗಲಿದೆ ಎಂದು ನನ್ನ ಕಕ್ಷಿದಾರರು ನಂಬಿರುತ್ತಾರೆ ಎಂದಿದ್ದಾರೆ.