ಒಳಗಿಂದ ಫೀಲ್ ಮಾಡಿದಾಗಲೇ ಹೊಸಲೋಕ – ಕ್ರೇಜಿಸ್ಟಾರ್

ಗುರುವಾರ, 29 ಜುಲೈ 2021 (19:52 IST)
ಕ್ರೇಜಿಸ್ಟಾರ್ ರವಿಚಂದ್ರನ್ ಎಂದೊಡನೆ ಕಣ್ಮುಂದೆ ಒಂದು ಮೋಹಕ ಪ್ರಪಂಚ ತೆರೆದುಕೊಳ್ಳುತ್ತದೆ. ಅದು ಅವರು ತಮ್ಮ ಇಮೇಜ್ ಮೂಲಕ ಸೃಷ್ಟಿಸಿರುವ ಪ್ರೇಮಲೋಕ. ಅದರೊಳಗೆ ಹೊಕ್ಕಾಗ ಸಿಕ್ಕ ಹೊಸ ರೀತಿಯ ಮಾತಿನ ರಸಪಾಕ ಇದು.

ರವಿಚಂದ್ರನ್ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುವುದು ತೀರ ಅಪರೂಪ. ಆದರೆ ಇತ್ತೀಚೆಗೆ ಯೂಟ್ಯೂಬ್, ಫೇಸ್ಬುಕ್ ಮೂಲಕ ಗುರುತಿಸಿಕೊಂಡಿದ್ದರು. ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಹೆಸರು ಮಾಡುತ್ತಿರುವುದು ಎಂದರೆ ಕ್ಲಬ್ ಹೌಸ್. ತಕ್ಷಣ ಗುರುತಿಸಲಾಗದ ಹೆಸರಿನ ಮೂಲಕ ಅಲ್ಲಿಯೂ ಸಕ್ರಿಯರಾಗಿರುವ ರವಿಚಂದ್ರನ್ ಅವರು ಕ್ಲಬ್ ಹೌಸ್ ಸೇರಿದಂತೆ ಮತ್ತಿತರ ವಿಶೇಷಗಳ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಮ್ ಜೊತೆಗೆ ಹಂಚಿಕೊಂಡ ಅಪರೂಪದ ಮಾಹಿತಿಗಳು ಇಲ್ಲಿವೆ.

ನೀವು ಕ್ಲಬ್ ಹೌಸ್ ಆಪ್ನಲ್ಲಿರುವುದು ಯಾಕೆ ಸುದ್ದಿಯೇ ಆಗಿಲ್ಲ?
ನಾನು ಆ ಆಪ್ಗೆ ಸೇರಿಕೊಂಡು ತಿಂಗಳಾಗಿದೆ. ಆದರೆ ನಾನು ಕೇಳುಗನಾಗಿ ಮಾತ್ರ ಇದ್ದೆ. ಅಷ್ಟೇ ಅಲ್ಲ ಡಿಪಿ ಹಾಕದೇ ಇರೋದ್ರಿಂದ ಯಾರಿಗೂ ನನ್ನ ಬಗ್ಗೆ ಗೊತ್ತಾಗಿರಲಿಲ್ಲ. ಹಾಗೆ ಗೊತ್ತಿಲ್ಲದೆ “ಕ್ಲಬ್ ಹೌಸ್ ಆಪ್ ಗೆ ಬನ್ನಿ” ಎಂದು ಒಂದಷ್ಟು ಮಂದಿ ನನ್ನನ್ನು ಗೆಸ್ಟಾಗಿಯೂ ಕರೆದರು. ಆದರೆ ನಾನೇ ಒಪ್ಕೊಂಡಿಲ್ಲ. ಅಲ್ಲಿಏನು ನಡೀತ ಇದೆ ಎನ್ನುವುದನ್ನು ನಾನು ನೋಡಬೇಕಿತ್ತು. ಹಿಂದೆ ನಾನು ಸಿನಿಮಾ ಮಾಡಿದಾಗಲೆಲ್ಲ ಮಂಕಿ ಕ್ಯಾಪ್ ಹಾಕಿಕೊಂಡು ಚಿತ್ರ ನೋಡಲು ಹೋಗಿದ್ದೇನೆ. ಚಿತ್ರದ ಬಗ್ಗೆ ಜನರ ನಿಜವಾದ ಅಭಿಪ್ರಾಯ ಏನು ಅಂತ ತಿಳಿಯೋ ಅಗತ್ಯ ನನಗಿತ್ತು. ಅದೇ ರೀತಿ ಇಲ್ಲಿಯೂ ನನ್ನ ಇರುವಿಕೆಯನ್ನು ತೋರಿಸದೇ ಅಡ್ಡಾಡಿದ್ದೇನೆ.
ನಿಮ್ಮ ಈ ಒಳನೋಟದಿಂದ ನಿಮಗೆ ಸಿಕ್ಕ ಅನುಭವ ಏನು?
ನಾನಿರುವುದನ್ನು ಗೊತ್ತಿಲ್ಲದೆ ನನ್ನ ಬಗ್ಗೆ ಹಲವಾರು ಗ್ರೂಪ್ಗಳಲ್ಲಿ ಒಳ್ಳೆಯದು ಮಾತನಾಡೋದನ್ನು ಕೇಳಿಸಿಕೊಂಡೆ. ಎಲ್ಲಕ್ಕಿಂತ ಮುಖ್ಯವಾಗಿ  ಯಾರೇ ಆಗಲಿ ಯಾವಾಗಲು ಟಿ.ವಿ ನೋಡೋದು, ಹರಟೆ ಹೊಡೆಯುವುದು ಅಂದರೆ ಟೈಮ್ ವೇಸ್ಟ್ ಮಾಡಿದ ಹಾಗೆ. ಅಂಥದ್ದರಲ್ಲಿ ಕ್ಲಬ್ ಹೌಸ್ನ ಕೆಲವು ಕಡೆಗಳಲ್ಲಿ ಹೊಸ ಪ್ರತಿಭೆಗಳ ಬೆನ್ನುತಟ್ಟುವ ಪ್ರಯತ್ನ ನಡೆಯುತ್ತಿರುವುದನ್ನು ನೋಡಿದೆ. ಯಂಗ್ಸ್ಟರ್ಸ್ ಸಕಾರಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಂಡಿರುವುದು ಕಂಡಾಗ ಖುಷಿ ಆಯಿತು. ಪ್ರತಿಭಾವಂತರು ತುಂಬ ಜನ ಇದ್ದಾರೆ. ಆದರೆ ಅದನ್ನು ಗುರುತಿಸುವವರು ಅಷ್ಟೇ ಮುಖ್ಯವಾಗ್ತಾರೆ. ಯಾಕೆಂದರೆ ಪ್ರತಿಭೆ ಇದ್ದೂ ಯಾರಿಂದಲೂ ಗುರುತಿಸಲ್ಪಡದ ವ್ಯಕ್ತಿ ಅನುಭವಿಸೋ ನೋವು ತುಂಬ ದೊಡ್ಡದು. ಅವರನ್ನು ಸಮಾಧಾನಿಸುವ ಹೊಸ ಸಾಧ್ಯತೆ ನೀಡಿದ ಈ ಕ್ಲಬ್ ಹೌಸಲ್ಲಿ ಇಡೀ ಪ್ರಪಂಚ ಒಂದು ಕಡೆ ಸೇರಬಹುದು ಎನ್ನುವುದು ಮತ್ತೊಂದು ಖುಷಿಯ ವಿಷಯ.
 ಇಂದಿಗೂ ನಿಮ್ಮನ್ನು ಜನಪ್ರಿಯ ತಾರೆಯಾಗಿಸಿರುವ ಅಂಶಗಳೇನಿರಬಹುದು?
ಜನರಿಗೆ ಪ್ರೀತಿ ಇದೆ ಅದೇ ಕಾರಣ. ಇನ್ನು ಪ್ರೀತಿಗೆ ಕಾರಣ ಹುಡುಕಬಾರದು. ಜನರ ಪ್ರೀತಿ ಪಡೆಯೋದು ಹೇಗೆ ಎಂದು ಪ್ಲ್ಯಾನ್ ಮಾಡೋಕೆ ಆಗಲ್ಲ. ಯಾಕೆಂದರೆ ನಾವು ಯೋಜನೆ ಹಾಕಿದಾಗ ಏನೂ ನಡೆಯುವುದಿಲ್ಲ. ನಮ್ಮ ಕೆಲಸವನ್ನು ನಾವು ಪ್ರಾಮಾಣಿಕವಾಗಿ ಮಾಡುತ್ತಾ ಹೋಗಬೇಕು ಅಷ್ಟೇ. ನಾನು ಸಕ್ಸಸ್ ನ ತಲೆಗೆ ಹಾಕಿಕೊಳ್ಳುವುದಿಲ್ಲ. ಫೆಯಿಲ್ಯೂರ್ಗಳನ್ನು ಮನಸಿಗೆ ಹಚ್ಚಿಕೊಂಡಿಲ್ಲ.  ಆರು ಗಂಟೆಗೆ ಎದ್ದು ಮಿನಿಮಮ್ ರಾತ್ರಿ ಹನ್ನೆರಡು ಗಂಟೆಯವರೆಗೆ ಸಿನಿಮಾ ಕೆಲಸಗಳಲ್ಲಿರುತ್ತೇನೆ. ನನ್ನ ಆಸಕ್ತಿಗೆ  ತಂದೆ ನೀಡಿದ ನಂಬಿಕೆ, ಕುಟುಂಬದ ಪ್ರೀತಿ ಮತ್ತು ಅದೃಷ್ಟ ಜೊತೆಯಾದಾಗ ನನಗೆ ಸಿಕ್ಕಿರುವ ಬದುಕು ಇದು ಹೊರತು ಬೇರೇನೂ ಇಲ್ಲ. ನನ್ನ ತಂದೆ ಪ್ರೇಮಲೋಕ ಮಾಡಬೇಡ ಎಂದು ಅಂದಿದ್ದರೆ ಆ ಚಿತ್ರವೇ ಆಗುತ್ತಿರಲಿಲ್ಲ. ಒಂದು ಚಿತ್ರವಾಗಲು ಸಾವಿರ ಕಾರಣಗಳಿರುತ್ತವೆ. ಚಿತ್ರ ಜನರಿಗೆ ಇಷ್ಟವಾಗುವ ತನಕ ಜನಪ್ರಿಯತೆಯೂ ಮುಂದುವರಿಯುತ್ತದೆ.
ನಿಮ್ಮ ಸಿನಿಮಾ ಹಾಡುಗಳಲ್ಲಿ ನಾಯಕಿಯ ಸೌಂದರ್ಯ ಮತ್ತು ನೀವು ಚಿತ್ರೀಕರಿಸುವ ರೀತಿ ಸದಾ ಆಕರ್ಷಕವೆನಿಸಲು ಕಾರಣವೇನಿರಬಹುದು? 
ದೇವರ ಸೃಷ್ಟಿಯಲ್ಲಿ ತುಂಬ ಸುಂದರವಾಗಿರುವುದು ಎಂದರೆ ಅದು ಹೆಣ್ಣು ಎನ್ನುವುದು ನನ್ನ ಭಾವನೆ. ಅವರ ಚೆಲುವು ನಿಮ್ಮನ್ನು ಎಲ್ಲಿಗೆ ಬೇಕಾದರೂ ಕರೆದೊಯ್ಯಬಲ್ಲದು. ಅವರ ಕಣ್ಣು ಈ ಜಗತ್ತನ್ನೇ ಮರೆಯುವಂತೆ ಮಾಡಬಹುದು. ಇನ್ನು ನನ್ನ ಚಿತ್ರಗಳಲ್ಲಿನ ನಾಯಕಿಯರ ಬಗ್ಗೆ ಹೇಳುವುದಾದರೆ ಅವರು ಕೂಡ ಸುಂದರಿಯದ್ದರು. ಹಾಗಾಗಿ ಪರದೆಯಲ್ಲಿ ನಿಮಗೂ ಸುಂದರವಾಗಿ ಕಂಡರು. ಹಾಡಿನಲ್ಲಿ ವಿಶುವಲ್ಸ್ ಮತ್ತು ಸೌಂಡ್ ಯಾವಾಗಲೂ ಜೊತೆಯಾಗಿರಬೇಕು ಎನ್ನುವುದು ನನ್ನ ಮೊದಲ ಥಿಯರಿ. ಸಣ್ಣ ಬೆಲ್ ಶಬ್ದ ಇದ್ದರೂ ಅದಕ್ಕೊಂದು ದೃಶ್ಯ ಇರಬೇಕು. ಹಾಡಿನ ಟೆಂಪೊಗೆ ತಕ್ಕ ಹಾಗೆ ಕ್ಯಾಮೆರಾ ಮೂವ್ ಆಗಬೇಕು, ಪ್ಯಾನ್ ಮಾಡಬೇಕು ಇವೆಲ್ಲ ನನ್ನ ಲೆಕ್ಕಾಚಾರ. ಕಣ್ಣಲ್ಲಿ ನೋಡೋದು ಮುಖ್ಯವಲ್ಲ. ಒಳಗಿಂದ ಫೀಲ್ ಮಾಡಿ ನೋಡಬೇಕು. ಪ್ರತಿಯೊಂದು ಪ್ರಾಪರ್ಟಿಗೂ ಜೀವ ಇದೆ ಎಂದು ಅಂದುಕೊಂಡರೆ ನಿಮಗೆ ಬೇರೇನೇ ಪ್ರಪಂಚ  ಕಾಣಿಸೋಕೆ ಶುರುವಾಗುತ್ತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ