ಸಿಂಹ ರಾಶಿಯವರು ಹೀಗಿರ್ತಾರೆ!

ಗುರುವಾರ, 19 ಸೆಪ್ಟಂಬರ್ 2013 (14:12 IST)
PR
ಮಕ್ಕಳು: ಸಿಂಹ ರಾಶಿಯ ಮಕ್ಕಳು ಯಾವಾಗಲೂ ಗುಂಪಿನಲ್ಲಿ ನಾಯಕರಾಗಿರುತ್ತಾರೆ. ಅದು ಆಟದ ಮೈದಾನದಲ್ಲಿರಬಹುದು, ಅಥವಾ ತರಗತಿಯಲ್ಲಿರಬಹುದು. ಎಲ್ಲಿದ್ದರೂ ತಂಡಕ್ಕೆ ಸಿಂಹ ರಾಶಿಯ ಮಗುವೇ ಪುಟಾಣಿ ಹೀರೋ/ ಹೀರೋಯಿನ್. ಈ ರಾಶಿಯ ಮಕ್ಕಳು ತುಂಬ ಬುದ್ಧಿವಂತರಾಗಿರುತ್ತಾರೆ. ಖುಷಿಯಿಂದಿರುತ್ತಾರೆ. ಜಗಳದಲ್ಲೂ ಅಷ್ಟೆ, ಸಿಟ್ಟಿಗೆದ್ದ ಸಿಂಹದಂತೆಯೇ ಸಿಂಹ ರಾಶಿಯ ಮಕ್ಕಳು ಕಾದಾಡುತ್ತಾರೆ. ಹಾಗಾಗಿ ಜಗಳಕ್ಕೆ ಇವರನ್ನು ಉತ್ತೇಜಿಸುವುದು ಬೇಡ.

ಈ ಮಕ್ಕಳನ್ನು ತುಂಬ ಕೀಳಾಗಿ ಕಾಣಬೇಡಿ. ಇದರಿಂದ ಅವರಿಗೆ ಮಾನಸಿಕವಾಗಿ ಆಘಾತವಾಗುತ್ತದೆ. ಮಕ್ಕಳ ಗುಂಪಿನಲ್ಲಿ ಬಾಸ್ ಆಗಿ ಬೀಗಿದರೆ ಅದು ಅವರ ಹುಟ್ಟುಗುಣ. ಅದನ್ನು ಏನು ಮಾಡಿದರೂ ಹೋಗಲಾಡಿಸಲು ಸಾಧ್ಯವಾಗೋದಿಲ್ಲ. ಅಗತ್ಯ ಬಂದರೆ, ಬೈಯ್ಯದೆ, ಹೊಡೆಯದೆ, ಹಾಗೆಲ್ಲಾ ಬಾಸ್ ಥರ ಆಡಬಾರದು ಪುಟ್ಟಾ, ಇನ್ನೊಬ್ಬರ ಮೇಲೆ ಡಾಮಿನೇಟ್ ಮಾಡಬಾರದೆಂದು ತಿಳಿಸಿ ಹೇಳಿ.

ಸ್ವಲ್ಪ ತೋರಿಕೆಯ ಸ್ವಭಾವ ಇವರಲ್ಲಿ ಜಾಸ್ತಿ. ಎಡವಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ಜಾಯಮಾನ ಇವರದ್ದು. ಇನ್ನೊಬ್ಬರ ಗಮನ ಸೆಳೆಯುವುದು ಇವರಿಗಿಷ್ಟ. ಅಷ್ಟೇ ಅಲ್ಲ, ಮನೆಯಲ್ಲಿ ಶುದ್ಧ ಸೋಮಾರಿಗಳಿವರು. ಒಂದು ವಸ್ತುವನ್ನು ಕೂಡಾ ಆಚೀಚೆ ಇಡಲಾರರು. ಇಂಥ ಸಂದರ್ಭ ಅವರಿಗೆ, ಅವರವರ ಕೆಲಸ ಅವರವರೇ ಮಾಡಬೇಕೆಂಬುದನ್ನು ಸೂಚ್ಯವಾಗಿ ಹೇಳುತ್ತಾ ಬನ್ನಿ. ಗಿಡವಿರುವಾಗಲೇ ಬಗ್ಗಿಸದಿದ್ದರೆ ಮರವಾದ ಮೇಲೆ ಬಗ್ಗಿಸೋದು ಕಷ್ಟ.

ಇನ್ನು ಸಿಂಹ ರಾಶಿಯ ಮಕ್ಕಳ ಹೆತ್ತವರು ಮೊದಲು ಮಾಡಬೇಕಾದ ಕೆಲಸ ತಮ್ಮ ಮಗುವಿಗೆ ಇನ್ನೊಬ್ಬರ ಮನೋಭಾವಕ್ಕೂ ಗೌರವ ನೀಡಬೇಕೆಂಬುದನ್ನು. ಇನ್ನೊಬ್ಬರನ್ನು ಹಗುರವಾಗಿ ಕಾಣದಂತೆ ಅವರಿಗೆ ತಿಳಿ ಹೇಳಬೇಕು. ಸಿಂಹ ರಾಶಿಯ ಮಕ್ಕಳು ತುಂಬ ನಾಚಿಕೆಯ ಸ್ವಭಾವವಿರೋದು ಕಡಿಮೆ. ಹಾಗಿದ್ದರೂ, ಅವರಿಗೆ ತುಂಬ ಪ್ರೇತ್ಸಾಹ ನೀಡಿ ಮಕ್ಕಳಾಗಿದ್ದಾಗಲೇ ಅವರನ್ನು ತೆರೆದುಕೊಳ್ಳಲು ಹೇಳಿಕೊಡಿ.

ಸಿಂಹ ರಾಶಿಯ ಮಕ್ಕಳಲ್ಲಿ ಹುಡುಗರು ತುಂಬ ಗಟ್ಟಿಮುಟ್ಟಾದ ಶರೀರ ಹೊಂದಿರುತ್ತಾರೆ. ಹುಡುಗಿಯರು ಚೆಂದದ ಶರೀರ, ಮುಖ ಹೊಂದಿರುತ್ತಾರೆ. ತುಂಬ ಬೇಗ ಯಾವುದನ್ನೂ ಕಲಿತುಕೊಳ್ಳಬಲ್ಲ ಬುದ್ಧಿಮತ್ತೆ ಇವರಿಗಿರುತ್ತದೆ. ಆದರೆ ತಮಗಿಷ್ಟವಾದರೆ ಮಾತ್ರ ಕಲಿಯುತ್ತಾರೆ. ಇಲ್ಲವಾದರೆ ಒತ್ತಾಯಿಸಿದರೂ ಇವರು ಕಲಿಯುವುದಿಲ್ಲ. ಆದರೆ ಇವರು ಕಲಿತಾಗ ಇವರಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿ. ಆಗ ಅವರ ಉತ್ಸಾಹ ಇಮ್ಮಡಿಗೊಳ್ಳುತ್ತದೆ. ತಮ್ಮ ಗೆಳೆಯರಿಗೆ, ಗೆಳತಿಯರಿಗೆ ಹಣವನ್ನು ಸಾಲವಾಗಿಯೂ ಇವರು ಕೆಲವೊಮ್ಮೆ ನೀಡುತ್ತಾರೆ. ಆದರೆ, ಅದನ್ನು ವಾಪಸ್ ಪಡೆಯಲು ಮರೆತೇ ಹೋಗುತ್ತದೆ. ಪಾರ್ಟಿಗೆ ಹೋಗುವುದು, ಮಜಾ ಮಾಡೋದು ಎಲ್ಲ ಇವರಿಗಿಷ್ಟ. ಇಂಥ ಮಕ್ಕಳನ್ನು ತುಂಬ ಪ್ರೀತಿಯಿಂದ, ಸ್ವಲ್ಪ ಸ್ಟ್ರಿಕ್ಟ್ ಆಗಿ ಬೆಳೆಸಬೇಕು. ಹಾಗಾದರೆ ಇವರು ಸರಿಯಾಗಿ ಮುಂದೆ ಸಾಗಬಲ್ಲರು.

PR
ಪುರುಷ: ಸಿಂಹ ರಾಶಿಯ ಪುರುಷ ಯಾವತ್ತೂ ಏಕಾಂಗಿಯಾಗಿ ಕೂತಿರುವುದು ಕಾಣಸಿಗುವುದಿಲ್ಲ. ಹೆಚ್ಚಿನ ಸಮಯವನ್ನೆಲ್ಲ ಗುಂಪಿನ ಜತೆಗೇ ಇರುತ್ತಾನೆ. ಅಷ್ಟೇ ಅಲ್ಲ, ಆ ಗುಂಪಿನಲ್ಲಿ ಆತ ಎದ್ದು ಕಾಣುವ ವ್ಯಕ್ತಿತ್ವ ಹೊಂದಿರುತ್ತಾನೆ. ಸಿಂಹ ರಾಶಿಯ ಪುರುಷ ಗುಂಪಿಗೆ ನಾಯಕನಂತಿರುತ್ತಾನಲ್ಲದೆ, ಆತನ ಮಾತನ್ನು ಕೇಳುವವರ ಇರುತ್ತಾರೆ. ಯಾರೇ ಆದರೂ ಸಿಂಹ ರಾಶಿಯ ಪುರುಷನನ್ನು ಗೆಳೆಯನಾಗಿ ಪಡೆದರೆ, ಆತನ ಪ್ರೇಕ್ಷಕನಾಗಿ ಬಿಡಬೇಕಾಗುತ್ತದೆ. ಅಂದರೆ ಸಿಂಹ ರಾಶಿಯ ಪುರುಷ ಹೆಚ್ಚು ಹೇಳುತ್ತಾನೆ. ಗೆಳೆಯ ಕೇಳುತ್ತಾನೆ. ಆತನನ್ನು ಸ್ವಲ್ಪ ಡಾಮಿನೇಟ್ ಮಾಡಲು ನೋಡಿದರೂ ತೊಂದರೆಗೆ ಒಳಗಾಗುವುದು ಗೆಳೆಯನೇ. ಸಿಂಹ ರಾಶಿಯ ಪುರುಷರು ಯಾವತ್ತೂ ತಮ್ಮನ್ನು ಇನ್ನೊಬ್ಬರು ಡಾಮಿನೇಟ್ ಮಾಡುವುದನ್ನು (ನಿಯಂತ್ರಿಸುವುದನ್ನು) ಸಹಿಸುವುದಿಲ್ಲ.

ಸಿಂಹ ರಾಶಿಯ ಹುಡುಗರು ಪ್ರೀತಿಯಲ್ಲಿ ಬೀಳಲು ಅವರಿಗೆ ಕಾರಣ ಬೇಕಿಲ್ಲ. ಅವರನ್ನು ತಮ್ಮ ಪ್ರೀತಿಯಲ್ಲಿ ಕೆಡವಿಕೊಳ್ಳಲು ಹುಡುಗಿಯರು ಏನೆಲ್ಲಾ ಕಸರತ್ತು ನಡೆಸಬೇಕಿಲ್ಲ. ಕೆಲವೊಂದು ಆತ್ಮೀಯ ಮಾತುಕತೆ, ಭಾವುಕ ಘಳಿಗೆ, ಜತೆಗೇ ಕೂತಾಗ ಒಂದು ಇಂಪಾದ ಸಂಗೀತ, ಹಿಡಿಯಷ್ಟು ಪ್ರೀತಿ ಇವಿಷ್ಟಿದ್ದರೆ ಸಿಂಹರಾಶಿಯ ಪುರುಷರಿಗೆ ಸ್ವರ್ಗವೇ ತೆರೆದಂತೆ. ಆದರೆ ರೊಮ್ಯಾನ್ಸ್ ವಿಷಯದಲ್ಲಿ ಸಿಂಹ ರಾಶಿಯ ಪುರುಷರು ಎತ್ತಿದ ಕೈ. ರೊಮ್ಯಾನ್ಸ್ ಇಲ್ಲದೆ ತುಂಬ ಸಮಯ ಖಾಲಿಯಾಗಿ ಕೂರಲು ಅವರಿಗೆ ಆಗುವುದೇ ಇಲ್ಲ. ಅಲ್ಲದೆ ತಮ್ಮ ಪ್ರೇಮಿಯಿಂದ ಯಾವಾಗಲೂ ಬೊಗಸೆ ತುಂಬ ಪ್ರೀತಿ ಹಾಗೂ ಕಾಳಜಿ ಬಯಸುವವರು ಇವರು.

ತಮ್ಮ ಸಂಗಾತಿಗೂ ಅಷ್ಟೆ. ಧಾರಾಳವಾಗಿ ಪ್ರೀತಿಯ ಮಳೆ ಸುರಿಸುತ್ತಾರೆ ಇವರು. ಆಗಾಗ ಹೂವು, ಗಿಫ್ಟ್‌ಗಳನ್ನು ಸರ್‌ಪ್ರೈಸ್ ಆಗಿ ಕೊಟ್ಟು ತಾವೂ ಕೂಡಾ ಖುಷಿಪಟ್ಟು ಸಂಗಾತಿಯನ್ನೂ ಖುಷಿಯಾಗಿ ಇಟ್ಟುಕೊಳ್ಳುತ್ತಾರೆ. ಆಗಾಗ ಪ್ರೇಮ ಪತ್ರ ನೀಡುವುದರಲ್ಲೂ ಇವರು ಸಿದ್ಧ ಹಸ್ತರು. ಇವರು ಯಾವಾಗಲೂ ಉತ್ತಮ ಹೊಟೇಲಿನ ಊಟವನ್ನೇ ಬಯಸುತ್ತಾರೆ. ಸಾದಾ ಕ್ಯಾಂಟೀನ್‌ಗಳು ಇವರಿಗೆ ಇಷ್ಟವಾಗುವುದಿಲ್ಲ. ಇಷ್ಟೆಲ್ಲಾ ಸರ್ವ ಗುಣ ಸಂಪನ್ನರಾಗಿರುವ ಸಿಂಹ ರಾಶಿಯ ಪುರುಷ ತನಗೆ ಸಂಗಾತಿಯಾಗಿ ಸಿಕ್ಕನಲ್ಲ ಎಂದು ಹುಡುಗಿಯರು ಖುಲ್ಲಂಖುಲ್ಲಾ ಆಗಿ ಖುಷಿಯ ಹವಾದಲ್ಲಿ ಮೀಯಬೇಡಿ. ಒಮ್ಮೆ ಇಂಥ ಪುರುಷರ ಹೃದಯಕ್ಕೆ ನೀವು ಲಗ್ಗೆಯಿಟ್ಟಿರೆಂದರೆ ಮತ್ತೆ ಎಂದೆಂದಿಗೂ ನೀವು ಅವರ ಹೃದಯೊಳಗಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಅರ್ಥಾತ್ ಸಿಕ್ಕಾಪಟ್ಟೆ ಪೊಸೆಸಿವ್ ಆಗಿರುತ್ತಾರೆ ಸಿಂಹ ರಾಶಿಯ ಪುರುಷರು. ನೀವೇ ಹೊರಹೋಗುತ್ತೇವೆಂದು ಹೊರಟರೂ, ಅವರು ಅಷ್ಟು ಸುಲಭವಾಗಿ ನಿಮ್ಮನ್ನು ಹೊರ ಹೋಗಲು ಬಿಡೋದಿಲ್ಲ.

ಸಿಂಹ ರಾಶಿಯ ಪುರುಷರಿಗೆ ಸ್ವಲ್ಪ ಅಸೂಯೆ ಜಾಸ್ತಿ. ತಮ್ಮ ಹೆಂಡತಿ ಇನ್ನೊಬ್ಬನನ್ನು ತಮಾಷೆಯಾಗಿ ನೋಡಿದರೂ ಇವರಿಗೆ ಅಸೂಯೆಯಾಗುತ್ತದೆ. ಎರಡು ಗಂಟೆಯೊಳಗೆ ಗೆಳತಿಯ ಮನೆಗೆ ಹೋಗಿ ವಾಪಸ್ ಬರುತ್ತೇನೆ ಎಂದು ಹೊರಹೋದರೆ ಒಂದು ಗಂಟೆ 59 ನಿಮಿಷದೊಳಗೆ ನೀವು ಮನೆಯೊಳಗೆ ಬಂದಿರಬೇಕು. ಇಲ್ಲವಾದರೆ ಸಿಂಹ ರಾಶಿಯ ಪುರುಷ ಗಂಡನಿಗೆ ಚಡಪಡಿಕೆ ಶುರುವಾಗುತ್ತದೆ.

PR
ಬಹಳಷ್ಟು ಸಿಂಹ ರಾಶಿಯ ಪುರುಷರು ಮದುವೆಯ ನಂತರ ತಮ್ಮ ಹೆಂಡತಿಯರು ಕೆಲಸಕ್ಕೆ ಹೋಗೋದನ್ನು ಸಹಿಸುವುದಿಲ್ಲ. ಇದು ಯಾಕೆಂದರೆ, ಅವರಿಗೆ ಯಾವತ್ತೂ ತಮ್ಮ ಹೆಂಡತಿ ತಮ್ಮ ಬಿಡುವಿನ ವೇಳೆಯಲ್ಲಿ ತಮ್ಮ ಜತೆಗೇ ಇರಬೇಕೆಂಬ ಆಸೆ. ಹೆಂಡತಿ ಕೆಲಸಕ್ಕೆ ಹೋದರೆ ಆಕೆಯ ಗಮನ ಆಕೆಯ ಕೆಲಸದ ಮೇಲೂ ಹೋಗುವುದರಿಂದ ತಮಗೆ ಆಕೆಯ ಜತೆಗಿರಲು ಸಮಯ ಸಿಗೋದಿಲ್ಲ ಎಂಬ ಹಪಹಪಿತನವೂ ಇದು. ತಮ್ಮ ಹೆಂಡತಿ ಹೊರಜಗತ್ತಿಗೆ ಸುಂದರವಾಗಿ, ಆಕರ್ಷಿತಳಾಗಿ ಕಾಣಿಸಿಕೊಳ್ಳಬೇಕೆಂದು ಅವರು ಬಯಸುತ್ತಾರೆ. ಹಾಗಾಗಿ ಸಿಂಹ ರಾಶಿಯ ಪುರುಷನ ಕೆಲವೇ ಕೆಲವು ದೌರ್ಬಲ್ಯಗಳನ್ನು ಬಿಟ್ಟುಹಾಕಿ ನೋಡಿದರೆ ಆತನೊಬ್ಬ ಅತ್ಯಂತ ಪ್ರೀತಿಸುವ ಗಂಡನಾಗಿರುತ್ತಾನೆ ಎಂಬುದಂತೂ ಸತ್ಯ.

ಹೆಂಡತಿ ತನಗೆ ಗೌರವ ಕೊಡಬೇಕೆಂದು ಬಯಸುವ ಸಿಂಹ ರಾಶಿಯ ಪುರುಷರು, ಹೆಂಡತಿಗೆ ಪ್ರೀತಿ, ಕಾಳಜಿ, ಹಣ, ಸಂಪತ್ತು ಅಥವಾ ಕೇಳಿದ್ದೆಲ್ಲವನ್ನೂ ಕೊಡುತ್ತಾರೆ. ಮದುವೆಯಾಗಿ ಒಂದು ವರ್ಷದವರೆಗೆ ಮಾತ್ರ ಪ್ರೀತಿ ತೋರಿ ಆಮೇಲೆ ನಿರ್ಲಕ್ಷ್ಯ ತಾಳುವ ಸಾಲಿನ ಗಂಡಸರಂತಲ್ಲ ಇವರು. ಪ್ರತಿ ವರ್ಷದ ಮದುವೆಯಾಗುವ ದಿನ ಬಂದರೂ ರೊಮ್ಯಾಂಟಿಕ್ ಆಗಿ ಐ ಲವ್ ಯೂ ಎಂದು ಹೇಳುವ ಉತ್ಸಾಹ ಹೊಂದಿರುತ್ತಾರೆ. ಜತೆಗೆ ಎಂದೆಂದಿಗೂ ಪ್ರೀತಿ, ಕಾಳಜಿಯ ಮಳೆ ಸುರಿಸುತ್ತಾರೆ. ಹಾದಿಯಲ್ಲಿ ಚಂದದ ಹುಡುಗಿಯರನ್ನು ಕಂಡರೆ ಸುಮ್ಮನೆ ಕಣ್ಣು ಹಾಯಿಸುವ ತುಂಟರು ಇವರಾದರೂ ತಮ್ಮ ಹುಡುಗಿಗೆ/ ಹೆಂಡತಿಗೆ ನಿಷ್ಟರಾಗಿರುತ್ತಾರೆ. ಸಿಂಹ ರಾಶಿಯ ಪುರುಷರನ್ನು ಪ್ರೀತಿಸಿ ಕೈಕೊಡುವುದು ಸುಲಭವಲ್ಲ. ಇದರಿಂದ ಅವರು ತುಂಬ ವೇದನೆಗೆ ಒಳಗಾಗುತ್ತಾರೆ. ಅಷ್ಟೇ ಅಲ್ಲ, ಮತ್ತೆ ತಮ್ಮ ಹುಡುಗಿಯನ್ನು ಪಡೆಯಲು ಏನು ಮಾಡಲೂ ಸಿದ್ಧರಾಗುತ್ತಾರೆ.

ಸಿಂಹ ರಾಶಿಯ ಪುರುಷರಲ್ಲಿ ಕೆಟ್ಟ ಸಿಟ್ಟೂ ಇದೆ. ತಮ್ಮನ್ನು ತಮ್ಮ ಹೆಂಡತಿ ಗೌರವಿಸಲ್ಲ ಎಂದು ತಿಳಿದರೆ ಇವರಿಗೆ ಸಿಕ್ಕಾಪಟ್ಟೆ ಸಿಟ್ಟು ಬರುತ್ತದೆ. ಇಲ್ಲವಾದರೆ ಕೂಲ್ ಆಗಿರುವ ಇವರು, ತಮ್ಮ ಮಕ್ಕಳಿಗೆ ಉತ್ತಮ ಅಪ್ಪನೂ ಆಗಿರುತ್ತಾರೆ. ಇಲ್ಲಿಯೂ ಸಹ ಮಕ್ಕಳಿಂದ ಗೌರವವನ್ನು ಬಯಸುತ್ತಾರೆ. ಅಷ್ಟೇ ಅಲ್ಲ, ಮನಸ್ಸಿನೊಳಗೆ ಸಿಂಹ ರಾಶಿಯ ಪುರುಷರು ಯಾವತ್ತೂ ತಮ್ಮ ಘನತೆಗೆ, ಗೌರವಕ್ಕೆ ಎಲ್ಲಿ ಕುಂದು ಬರುತ್ತೋ ಎಂಬ ಭಯವನ್ನು ಹೊಂದಿರುತ್ತಾರೆ. ಹಾಗಾಗ ಸಂಗಾತಿ ಸಿಂಹ ರಾಶಿಯ ಪುರುಷರಿಗೆ ಸಾಕಷ್ಟು ಪ್ರೀತಿ, ಕಾಳಜಿ ಗೌರವ ನೀಡುತ್ತಾ ಬಂದರೆ ಸಂತಸದಿಂದಿರುತ್ತಾರೆ.

ಮಹಿಳೆ: ಸಿಂಹ ರಾಶಿಯ ಮಹಿಳೆ/ ಹುಡುಗಿಯರನ್ನು ಬುಟ್ಟಿಗೆ ಹಾಕುವುದು ಸುಲಭದ ವಿಚಾರವಲ್ಲ. ಅದೊಂದು ಸಾಹಸವೇ ಸರಿ. ಪುರುಷನೊಬ್ಬ ತಮ್ಮ ಮೇಲೆ ದೃಷ್ಟಿ ನೆಟ್ಟಿದ್ದಾನೆಂದು ತಿಳಿದರೆ, ಸಿಂಹ ರಾಶಿಯ ಮಹಿಳೆ ಸ್ಪರ್ಧೆಗೆ ಬೀಳುತ್ತಾಳೆ. ಯಾವಾಗಲೂ ಗುಂಪಿನಲ್ಲಿ ಎದ್ದು ಕಾಣುವ ವ್ಯಕ್ತಿತ್ವ ಹೊಂದಿರುವ ಇವರು ಗುಂಪಿನಲ್ಲಿ ನಾಯಕತ್ವವನ್ನೂ ಹೊಂದಿರುವವರಾಗಿರುತ್ತಾರೆ. ಪ್ರೀತಿ, ಕಾಳಜಿಯನ್ನೇ ತಮ್ಮ ಸಂಗಾತಿಗಳಿಗೆ ನೀಡಿದರೂ, ಗಂಡನನ್ನು ದೇವರೆಂದು ಇವರು ಪೂಜಿಸಲಾರರು.

ಇವರು ತಮ್ಮ ಸಂಗಾತಿಯನ್ನು ಡಾಮಿನೇಟ್ ಮಾಡುವುದಿಲ್ಲ. ಸಂಪೂರ್ಣ ಸ್ತ್ರೀತ್ವ ತುಂಬಿದವಳಾಗಿರುವ ಸಿಂಹ ರಾಶಿಯ ಮಹಿಳೆ ನಿರುಪದ್ರವಿ. ಆದರೆ ಇನ್ನೊಬ್ಬರಿಂದ ಬೇಗನೆ ಮೂರ್ಖಳೂ ಆಗಲಾರಳು. ಸರಿಯಾಗಿ ಡ್ರೆಸ್ ಮಾಡದೆ ಇರೋದನ್ನು ಸಹಿಸಲಾರರು ಇವರು. ಇವರನ್ನು ನಿಜವಾಗಿಯೂ ಇಂಪ್ರೆಸ್ ಮಾಡಬೇಕೆಂದರೆ ತುಂಬ ಡೀಸೆಂಟ್ ಆದ, ಪ್ರೀತಿಪೂರ್ವಕವಾದ ಪ್ರಾಮಾಣಿಕವಾದ ಉಡುಗೊರೆ ನೀಡಿ.

ಸಿಂಹ ರಾಶಿಯ ಮಹಿಳೆ ಯಾವಾಗಲೂ ಸ್ಟೈಲ್‌ಗೆ ಬೆಲೆ ನೀಡುತ್ತಾಳೆ. ರಸ್ತೆ ಬದಿಯಲ್ಲಿ ತಿನ್ನೋದು, ರಸ್ತೆ ಬದಿಯ ವಸ್ತುಗಳನ್ನು ಕೊಳ್ಳೋದು ಇವರಿಗೆ ಇಷ್ಟವಾಗಲ್ಲ. ಆಕೆಯ ಬಳಿ ಹಣವಿಲ್ಲದಿದ್ದರೂ, ಇಂಥ ರಸ್ತೆ ಬದಿಯ ವಾತಾವರಣ ಆಕೆಗೆ ಇಷ್ಟವಾಗಲ್ಲ. ದುಬಾರಿ ಗಿಫ್ಟ್‌ಗಳೆಂದರೆ ಈಕೆಗೆ ಇಷ್ಟ. ಕೆಲವೊಮ್ಮೆ ಹಠಮಾರಿಯೂ ಆಗುವ ಇವರು ಗರ್ವಿಷ್ಟರಾಗಿಯೂ ಕಾಣುತ್ತಾರೆ.

ತುಂಬ ದಯಾಳುವಾಗಿರುವ ಇವರು ತಮ್ಮ ಮಕ್ಕಳನ್ನು ತುಂಬ ಕಾಳಜಿಯಿಂದ ಬೆಳೆಸುತ್ತಾರೆ. ಬುದ್ಧಿವಂತಿಕೆ, ಪ್ರತಿಭೆ ಹಾಗೂ ಗಟ್ಟಿತನ ಇವೆಲ್ಲವೂ ಇವರಲ್ಲಿರುತ್ತದೆ. ಇವೆಲ್ಲವುಗಳ ಜತೆಗೇ ಇರುವ ಸ್ತ್ರೀತ್ವ ಕೂಡಾ ಈಕೆಯನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ಮದುವೆಯಾದ ಮೇಲೆ ಕೆಲಸಕ್ಕೆ ಹೋಗೋದು ಬೇಡ ಎಂದೆಲ್ಲ ಹೇಳಿದರೆ ಆಕೆ ಸಹಿಸುವುದಿಲ್ಲ. ಕೆಲಸವೆಂಬುದು ಆಕೆಯನ್ನು ಸದಾ ಜೀವಂತಿಕೆಯಲ್ಲಿರುವಂತೆ ಮಾಡುತ್ತದೆ. ಅತ್ಯುತ್ತಮ ಹೆಂಡತಿಯಾಗುವ ಅವರು, ಅತಿಥಿ ಸತ್ಕಾರದಲ್ಲೂ ಎತ್ತಿದ ಕೈ. ಆದರೆ ಹಣದ ಬಗ್ಗೆ ಅಂತಹ ಹಿಡಿತ ಇವರಲ್ಲಿರುವುದಿಲ್ಲ. ಇವರ ಅಭಿರುಚಿಗಳೆಲ್ಲ ದುಬಾರಿಯಾಗಿರುತ್ತದೆ. ಆದರೆ ಅವುಗಳು ನಿಜಕ್ಕೂ ಅದ್ಭುತವಾಗಿರುತ್ತದೆ.

ಮಕ್ಕಳನ್ನು ಮುದ್ದು ಮಾಡುತ್ತಾ ಅವರಿಗೆ ತುಂಬ ಪ್ರೋತ್ಸಾಹ ನೀಡುತ್ತಾಳೆ. ಆದರೆ ಅವರಿಂದ ಗೌರವವನ್ನೂ ಬಯಸುತ್ತಾಳಲ್ಲದೆ ಶಿಸ್ತನ್ನೂ ಕೂಡಾ. ಅವಳು ತನ್ನ ಸ್ವಾತಂತ್ರ್ಯ ಬಯಸುವ ಜತೆಗೆ ಮಕ್ಕಳಿಗೂ ಸಾಕಷ್ಟು ಸ್ವಾತಂತ್ರ್ಯ ನೀಡುತ್ತಾಳೆ. ಕೆಲವೊಮ್ಮೆ ಸ್ವಲ್ಪ ಅಸೂಯೆ ಪಡುವ ುಣವೂ ಇವರಲ್ಲಿದೆ. ಅಷ್ಟೇ ಅಲ್ಲ. ತುಂಬ ಪೊಸೆಸಿವ್ ಕೂಡಾ. ಆದರೆ ಆಕೆಯನ್ನು ಕಂಟ್ರೋಲ್ ಮಾಡಲು, ಅಥವಾ ಡಾಮಿನೇಟ್ ಮಾಡಲು ನೋಡಿದರೆ ಆಕೆ ಸಹಿಸುವುದಿಲ್ಲ. ಇವುಗಳಲ್ಲಿ ಬ್ಯಾಲೆನ್,್ ಆಗಿ ಸಂಬಂಧ ತೆಗೆದುಕೊಂಡು ಹೋಗಲು ಗಂಡ ತಯಾರಿದ್ದರೆ, ಸಿಂಹ ರಾಶಿಯ ಹೆಂಡತಿ ಖಂಡಿತವಾಗಿಯೂ ಪ್ರೀತಿಯ ಮಳೆಯೇ ಆಗುತ್ತಾಳೆ.

ವೆಬ್ದುನಿಯಾವನ್ನು ಓದಿ